Tuesday, January 14, 2020

ಭಗವಂತನ ಸಾಕ್ಷಾತ್ಕಾರಕ್ಕಾಗಿ ತಪಸ್ಸಿರಲಿ (Bhagavanthana saakshathkarakkagi thapassirali)

ಲೇಖಕರು:  ವಿದ್ವಾನ್ ಶ್ರೀ ಬಿ.ಜಿ.ಅನಂತ
(ಪ್ರತಿಕ್ರಿಯಿಸಿರಿ lekhana@ayvm.in)



ತಪಸ್ಸು ಎಂದರೆ ಸುಡುವುದು ಎಂದರ್ಥ. ಯಾವುದನ್ನು ಸುಡುವುದು? ಎಂದರೆ, ಯಾವುದು ನಮಗೂ ಭಗವಂತನಿಗೂ ನಡುವೆ ಅಡ್ಡಿಯಾಗಿ ನಿಂತಿದೆಯೋ ಅಂತಹ ನಮ್ಮೊಳಗಿನ ಪಾಪವನ್ನು.  ಪ್ರಧಾನವಾಗಿ ಎರಡು ಉದ್ದೇಶಗಳಿಗಾಗಿ ತಪಸ್ಸನ್ನು ಆಚರಿಸುತ್ತಾರೆ. ಮೊದಲನೆಯದು ಕೇವಲ ಮೋಕ್ಷಕ್ಕಾಗಿ, ಭಗವಂತನ ಸನ್ನಿಧಿಯನ್ನು ಸವಿಯುವ ಆನಂದಕ್ಕಾಗಿ. ಹಾಗಲ್ಲದೆ ಐಹಿಕವಾದ ವಿವಿಧ ಕಾಮನೆಗಳನ್ನು ಪಡೆಯಲು ಆಚರಿಸುವುದು ಎರಡನೆಯ ಕಾರಣ. ಧರ್ಮಕ್ಕೆ ವಿರುದ್ಧವಲ್ಲದ ಕಾಮನೆಗಳು ತಪ್ಪಲ್ಲ. ಹಾಗಾಗಿ ಅವುಗಳನ್ನು ಈಡೇರಿಸಿಕೊಳ್ಳಲು ಆಚರಿಸುವ ತಪಸ್ಸು ಕೂಡ ತಪ್ಪಲ್ಲ. ಆದರೆ 'ಬೇಕಾದುದನ್ನು ಕೇಳಿಕೋ' ಎಂದು ದೈವವು ಎದುರಿಗೆ ನಿಂತಾಗ, ಏನನ್ನು ಕೇಳಬೇಕು ಎಂಬ ವಿವೇಕವು ಅತ್ಯಗತ್ಯ. ವರವನ್ನು ಕೇಳುವ ಸಮಯದಲ್ಲಿ ಮೈಮರೆತು ವಿನಾಶಕಾರಿಯಾದ ವರಗಳನ್ನು ಕೇಳಿ, ಅದರ ಫಲವಾಗಿ ಸ್ವತಃ ತಾವೇ ನಷ್ಟರಾಗಿಹೋದ ಕುಂಭಕರ್ಣ ಭಸ್ಮಾಸುರಾದಿಗಳ ಉದಾಹರಣೆಗಳು ಕಣ್ಣ ಮುಂದಿವೆ.

  ಹೀಗೆ ಸಮಯದಲ್ಲಿ ಮೈ ಮರೆಯುವಂತೆ ಮಾಡುವ ಶಕ್ತಿಗಳು ರಜಸ್ಸು ಮತ್ತು ತಮಸ್ಸು ಎಂಬುದಾಗಿ. ಇವು ಅಧಿಕವಾಗಿರುವ ದೇಹಪ್ರಕೃತಿಯನ್ನು ಹೊಂದಿರುವವರಿಗೆ ತಪಸ್ಸಿನ ಆಚರಣೆಯು ಅನುಕೂಲಕರವಲ್ಲ. ತಪಸ್ಸನ್ನು ಆಚರಿಸಿದ ಹೆಚ್ಚಿನ ದೈತ್ಯ-ದಾನವರು, ವರವಾಗಿ ಕೇಳಿಕೊಂಡದ್ದು ಅತೀಂದ್ರಿಯ ಶಕ್ತಿ ಸಾಮರ್ಥ್ಯಗಳನ್ನು. ಆದರೆ ಅವುಗಳನ್ನು ಬಳಸಿಕೊಂಡು, ಮಾಡಿದ್ದು ಮಾತ್ರ ಲೋಕ ವಿನಾಶಕರವಾದ ಕಾರ್ಯಗಳನ್ನು ತಾನೇ. 

ತನ್ನ  ತಲೆಗಳನ್ನೇ ಕಡಿದು ಅಗ್ನಿಗೆ ಅರ್ಪಿಸಿದ ರಾವಣನು ಸುದಾರುಣವಾದ ತಪಸ್ಸನ್ನೇ ಆಚರಿಸಿದನಷ್ಟೇ. ಆದರೆ ಸಾಂಬಶಿವನು ಎದುರಿಗೆ ಬಂದು ನಿಂತಾಗ ಕೇಳಿದ್ದು ಮಾತ್ರ 'ಪಾರ್ವತಿಯನ್ನು  ಕೊಡು'; ಎಂದು. ಎಂದರೆ ಜಗನ್ಮಾತೆಯನ್ನೇ ಕಾಮಿಸುವ ಹೊಲಸು ಕಾಮವು ಪ್ರಕೃತಿಯಲ್ಲಿ ತುಂಬಿಕೊಂಡಿದೆ. ಇದೇ ಹೆಜ್ಜೆಯ ಮುಂದುವರಿಕೆಯಾಗಿ ಮುಂದೆ ಅವನು ಸೀತಾಮಾತೆಯನ್ನು ಕೂಡ ಕಾಮಿಸಿದನು ಎಂದು ಶ್ರೀರಂಗ ಮಹಾಗುರುವು ಉಲ್ಲೇಖಿಸಿದ್ದರು.  

   ಹೀಗಿರುವುದರಿಂದಲೇ 'ತಪಸ್ಸು ಎಲ್ಲರಿಗೂ ಅಲ್ಲ; ಈ ಬಗ್ಗೆ ಎಚ್ಚರಿಕೆಯು ಅಗತ್ಯ' ಎಂಬ ಮಾತನ್ನು  ಶ್ರೀಗುರುವು, ಇದೇ ರಾವಣನ ಉದಾಹರಣೆಯನ್ನೇ ಕೊಟ್ಟು ಹೇಳಿರುವುದುಂಟು. ಅದರಿಂದ ತಪಸ್ಸು ಮುಖ್ಯವಾಗಿ ಭಗವಂತನ ಸಾಕ್ಷತ್ಕಾರಕ್ಕಾಗಿಯೇ ಇರಬೇಕೆಂಬುದು ಭಾರತೀಯ ಮಹರ್ಷಿಗಳ ನೋಟ .  

ಸೂಚನೆ 13/1/2020ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.