Sunday, January 19, 2020

ಭಾರತೀಯ ಸಂಸ್ಕೃತಿಯ ವೈಭವ (Bharatheeya samskruthiya vaibhava)

ಲೇಖಕರು:  ಶ್ರೀ. ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)



“ಸಂಸ್ಕೃತಿ”ಎಂಬ ಪದವನ್ನು ಇವೊತ್ತು ಅನ್ಯಾನ್ಯ ಸಂದರ್ಭಗಳಲ್ಲಿ ಬಳಸುವುದನ್ನು ಕಾಣುತ್ತೇವೆ. ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿ ”culture” ಎಂಬ ಪದವನ್ನು ಸಂಸ್ಕೃತಿ ಎಂಬ ಪದಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತದೆ. ಈ ಪದವೂ ಸಹ ಏನನ್ನಾದರೂ ಬೆಳೆಸುವುದು ಎಂಬ ಅರ್ಥವನ್ನೇ ಕೊಡುತ್ತದೆ. ಉದಾಹರಣೆಗೆ –Agriculture, Horticulture, sericulture ಇತ್ಯಾದಿ ವಿಶೇಷಣಯುಕ್ತ ಪದಗಳು ಆಯಾ ವಿಷಯಗಳನ್ನು ವ್ಯವಸಾಯ ಮಾಡಿ ಬೆಳೆಸುವ ನಿಟ್ಟಿನಲ್ಲೇ ಬಳಸಲಾಗಿದೆ. ಆದರೆ Culture ಎಂಬ ಪದವು ಈಗ ಅನ್ಯಾನ್ಯ ಅರ್ಥಗಳಲ್ಲಿ ಉಪಯೋಗವಾಗಿ ಇಂದು ಶಾಲೆಗಳಲ್ಲಿ ನಡೆಯುವ ಮನೋರಂಜನಾದಿ ಕಾರ್ಯಕ್ರಮಗಳನ್ನು Cultural Programme ಎಂದು ಕರೆಯುವವರೆಗೆ ಬಂದುಬಿಟ್ಟಿದೆ. ಅದನ್ನೇ ಕನ್ನಡದಲ್ಲಿ ಅನುವಾದಿಸಿ “ಸಾಂಸ್ಕೃತಿಕ ಕಾರ್ಯಕ್ರಮಗಳು” ಎಂದು ಕರೆಯುವ ರೂಢಿಯಾಗಿಬಿಟ್ಟಿದೆ.

ಪದದ ಮೌಲಿಕವಾದ ಅರ್ಥ:

ಇಷ್ಟರ ಮಧ್ಯೆ “ಸಂಸ್ಕೃತಿ” ಎಂಬ ಪದವನ್ನು ಮೊದಲಿಗೆ ತಂದ ಈ ದೇಶದ ಜ್ಞಾನಿಗಳ ಅಭಿಪ್ರಾಯವೇನಿತ್ತು ಎಂಬುದನ್ನು ವಿಚಾರಮಾಡುವುದೇ ಇಲ್ಲಿನ ವಿಷಯವಾಗುತ್ತದೆ. ಸಂಸ್ಕೃತಿ (ಸಮ್ಯಕ್-ಕೃತ-ಸಂಸ್ಕೃತ) ಎಂದರೆ ಚೆನ್ನಾಗಿ ಮಾಡಲ್ಪಟ್ಟದ್ದು, ಪರಿಷ್ಕರಿಸಲ್ಪಟ್ಟದ್ದು ಎಂದರ್ಥ. ಅಂದರೆ ಒಂದು ಬಟ್ಟೆಯನ್ನು ಚೆನ್ನಾಗಿ ಮಾಡುವುದು ಎಂದರೇನು? ಅದರಲ್ಲಿ ಸೇರಿದ ಕೊಳೆಯನ್ನೆಲ್ಲ ತೊಳೆದು ಅದು ಮೊದಲಿದ್ದಂತೆ ಮಾಡುವುದೇ ಆಗಿದೆ. ಹಾಗೆಯೇ ಪಾತ್ರೆಯನ್ನು ತೊಳೆದು ಅದು ಮೊದಲಿನ ಸ್ಥಿತಿಗೆ ತರುವುದು ಅದನ್ನು ಚೆನ್ನಾಗಿ ಮಾಡಿದಂತೆ. ಅಂದರೆ ಸೇರಿದ ಕೊಳೆಯನ್ನು ತೆಗೆದುಹಾಕಿ ವಸ್ತುಗಳ ಮೂಲಸ್ವರೂಪದಲ್ಲಿಡುವ ಕ್ರಿಯೆಯೆಲ್ಲವೂ ಒಂದು ದೃಷ್ಟಿಯಿಂದ ‘ಸಂಸ್ಕೃತಿ’ಯೇ ಆಗುತ್ತದೆ.

ಇಲ್ಲಿ ವಸ್ತುಗಳ, ವಿಷಯಗಳ ಸ್ವರೂಪಕ್ಕನುಗುಣವಾಗಿ ಅವುಗಳ ಕೊಳೆಯನ್ನು ತೆಗೆಯುವ ವಿಧಾನ, ಅದಕ್ಕಾಗಿ ಉಪಯೋಗಿಸಲ್ಪಡುವ ಪರಿಕರಗಳೆಲ್ಲವೂ ಬದಲಾವಣೆಯಾಗುತ್ತವೆ. ಬಟ್ಟೆಯ ಕೊಳೆ ತೆಗೆಯುವ ರೀತಿಯೇ ಬೇರೆ, ಪಾತ್ರೆಯ ಕೊಳೆ ತೆಗೆಯುವ ರೀತಿಯೇ ಬೇರೆ. ಉಪಯೋಗಿಸುವ Detergent ಸಹ ಬೇರೆ ಬೇರೆ. ಮಾತ್ರವಲ್ಲ, ಬಟ್ಟೆ ಪಾತ್ರೆಗಳ ವೈವಿಧ್ಯಗಳ ಮೇಲೆಯೂ ಅವನ್ನು ಮೂಲಸ್ಥಿತಿಗೆ ತರುವ ವಿಧಾನಗಳು ಅವಲಂಬಿತವಾಗುತ್ತವೆ. ಉದಾಹರಣೆಗೆ- ತಾಮ್ರದ ಪಾತ್ರೆಯಾದರೆ ಅದನ್ನು ತೊಳೆಯಲು ಹುಣಿಸೆ ಹಣ್ಣನ್ನು ಉಪಯೋಗಿಸುತ್ತಾರೆ. ಸ್ಟೀಲ್ ಆದರೆ  ಬೇರೆ ರೀತಿಯ ಪುಡಿಗಳನ್ನು ಉಪಯೋಗಿಸುತ್ತಾರೆ. ಆದರೆ ಅವುಗಳ ಮೂಲಸ್ವರೂಪಕ್ಕೆ ತರುವ ವಿಷಯಮಾತ್ರ ಎಲ್ಲಕ್ಕೂ ಸಾಮಾನ್ಯ.
ಇನ್ನು ಮೂಲಸ್ವರೂಪಕ್ಕೆ ತರುವ ಧ್ಯೇಯವಿರುವವರಿಗೆ ಆಯಾ ವಸ್ತುಗಳ ಸ್ವರೂಪಜ್ಞಾನವಿರುವುದು ಅವಶ್ಯಕ. ಹಾಗಿದ್ದಾಗ ಮಾತ್ರ ಅದರ ಮೂಲವೇನು? ಕೊಳೆಯ ಭಾಗ ಯಾವುದು ಹೇಗೆ ಕೊಳೆಯನ್ನು ತೆಗೆದು ಹಾಕುವುದು ಎಂಬುದರಕಡೆ ಚಿಂತನೆ ಹರಿಯುತ್ತದೆ.

ಬಟ್ಟೆ, ಪಾತ್ರೆ, ಮನೆಯ ಕೊಳೆ, ವಸ್ತುಗಳ ಮೇಲಿನ ಕೊಳೆ ಇವೆಲ್ಲವೂ ಎಲ್ಲರಿಗೂ ಗೊತ್ತಾಗುವ ವಿಷಯ. ಆದರೆ ನಮ್ಮ ಶರೀರದ ಒಂದು ಪ್ರಮುಖ ಅಂಗವಾದ ಮನಸ್ಸಿನ ಕೊಳೆ ಯಾವುದು? ಅದರ ಮೂಲರೂಪವೇನು? ಅದಕ್ಕೂ ಹಿಂದೆ ಇರುವ ಜೀವನದ ಮೂಲವೇನು? ಅಲ್ಲಿ ಸೇರಿದ ಕೊಳೆ ಯಾವುದು? ಎಂಬುದರ ವಿಚಾರವನ್ನು ಮುಂದಿನ ಲೇಖನದಲ್ಲಿ ವಿಮರ್ಶಿಸೋಣ.

ಸೂಚನೆ: 18/1/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.