Wednesday, February 13, 2019

ರಥಸಪ್ತಮೀ (Rathasapthami)

ಲೇಖಕರು: ವಿದ್ವಾನ್ ನರಸಿಂಹ ಭಟ್ ಬಡಗು
ಸಂಸ್ಕೃತ ಉಪನ್ಯಾಸಕರು

ಕಾಲವು ಪ್ರಕೃತಿಯ ಅಧೀನ:
ಪ್ರಕೃತಿಯು ಕಾಲಕಾಲಕ್ಕೆ ತನ್ನನ್ನು ಪರಿವರ್ತಿಸಿಕೊಳ್ಳುತ್ತದೆ. ಅದಕ್ಕೆ ಅನುಗುಣವಾಗಿ ಭಾರತೀಯರು ಕಾಲವನ್ನು ಲೆಕ್ಕಾಚಾರವಾಗಿ ಪರಿಗಣಿಸಿದ್ದಾರೆ. ಪ್ರಕೃತಿಯು ಒಂದುಕಾಲದಲ್ಲಿ ಹಳೆತನದಿಂದ ಹೊಸತನಕ್ಕೆ ಕಾಲಿಡುತ್ತದೆ. ಗಿಡಮರಗಳು ಹಳೆಯ ಎಲೆಗಳನ್ನು ಕೊಡವಿ, ಹೊಸಚಿಗುರನ್ನು ಗರಿಗೆದರಿಸಿಕೊಂಡು ಹೊಚ್ಚಹಸಿರಿನಿಂದ ನಳನಳಿಸುತ್ತದೆ. ಇದನ್ನು ಕಂಡ ಭಾರತೀಯರು ಈ ಎರಡು ತಿಂಗಳಿನ ಕಾಲದ ಅವಧಿಯನ್ನು ಗುರುತಿಸಿ ವಸಂತ ಋತು ಎಂಬುದಾಗಿ ಕರೆದರು. ಮತ್ತು ಈ ಋತುವಿನ ಆರಂಭಕಾಲವನ್ನು ಯುಗಾದಿ ಎಂದು ಕರೆಯಲಾಯಿತು. ಹೀಗೆಯೇ ಯಾವಾಗ ಮರಗಿಡಗಳು ತನ್ನಲ್ಲಿರುವ ಹಳತನ್ನು ಕಳಚಿಕೊಳ್ಳಲು ಆರಂಭ ಮಾಡುವುದೋ ಆ ಕಾಲವನ್ನು ಶಿಶಿರ ಎಂಬುದಾಗಿ ಗುರುತಿಸಲಾಯಿತು. ಅಂದರೆ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಯು ಕಾಲಕ್ಕೆ ಅಧೀನವೋ ಅಥವ ಕಾಲವು ಪ್ರಕೃತಿಯ ಪರಿವರ್ತನೆಯ ಸೂಚನೆಯೋ
ಹೇಗಾದರೂ ಹೇಳಬಹುದು. ಕಾಲವನ್ನು ಬಿಟ್ಟು ನಿಸರ್ಗವಿಲ್ಲ, ನಿಸರ್ಗ ಕಾಲವನ್ನು ಬಿಡದು. ಅವೆರಡಕ್ಕು ಅಷ್ಟೊಂದು ಅವಿನಾಭಾವಸಂಬಧವಿದೆ.
ಪರ್ವ-ಸಂಧಿ:
ಹೀಗೆ ನಿಸರ್ಗನಿಯಮವನ್ನು ಅನುಸರಿಸಿ ಕಾಲದಲ್ಲಿ ಪರಿವರ್ತನೆ ಉಂಟಾಗುವುದು. ಒಂದು ಘಟ್ಟದಿಂದ ಇನ್ನೊಂದು ಘಟ್ಟಕ್ಕೆ ಉಂಟಾಗುವ ಸಂಧಿಕಾಲವನ್ನು ‘ಪರ್ವ’ ಎಂದು ಕರೆದರು. ಭಾರತೀಯರು ಕಾಲವನ್ನು ಅತ್ಯಂತ ಸೂಕ್ಷ್ಮಾತಿಸೂಕ್ಷ್ಮದಿಂದ ಹಿಡಿದು ಒಂದು ಬ್ರಹ್ಮನ ಹಗಲಿನವರೆಗೆ ಲೆಕ್ಕಾಚಾರ ಮಾಡಿದ್ದಾರೆ. ನಾವು ಇವೆರಡರ ಮಧ್ಯಭಾಗವನ್ನು ಸೌಕರ್ಯಕ್ಕಾಗಿ ಪರಿಗಣಿಸುತ್ತೇವೆ. ಅಂದರೆ ಒಂದು ವರ್ಷ, ಹನ್ನೆರಡು ತಿಂಗಳು, ಎರಡು ಅಯನಗಳು, ಪಕ್ಷಗಳು, ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳು ಕಾಲವನ್ನು ಅಳೆಯಲು ಮಾನವಾಗಿವೆ. ಇವೆಲ್ಲವೂ ಪ್ರಕೃತಿಯಲ್ಲಿ ಉಂಟಾಗುವ ಪರಿವರ್ತನೆಯನ್ನು ಅವಲಂಬಿಸಿಯೇ ಬಂದದ್ದು ಎಂಬುದನ್ನು ಗಟ್ಟಿಯಾಗಿ ಮನಸ್ಸಿನಲ್ಲಿ ಧರಿಸಬೇಕು. ಇವಾವುದೂ ಕಪೋಲಕಲ್ಪಿತವಾದವುಗಳಲ್ಲ ಎಂಬ ವಿಷಯ ಸೂರ್ಯಚಂದ್ರರಷ್ಟೇ ಸತ್ಯ.
ಮಾಘ ಶುಕ್ಲ ಸಪ್ತಮೀ-ರಥಸಪ್ತಮೀ:
ಪ್ರಕೃತಕ್ಕೆ ಬರುವುದಾದರೆ ಮಾಘಮಾಸದ ಶುಕ್ಲಪಕ್ಷದ ಸಪ್ತಮಿಯ ಪರಿವರ್ತನೆಯನ್ನು ವಿಶೇಷವಾಗಿ ಪರಿಗಣಿಸಿ ಅದನ್ನು ಒಂದು ಹಬ್ಬವಾಗಿ ಆಚರಿಸುವ ಸಂಪ್ರದಾಯ ಬಂದಿದೆ. ಇದನ್ನು ಒಂದು ಹಬ್ಬವಾಗಿ ಆಚರಿಸುವ ಔಚಿತ್ಯವೇನು?  ನಮಗೆ ಕಾಣುವ ಸೂರ್ಯಚಂದ್ರರೇ ಇದಕ್ಕೆ ಕಾರಣ. ಸೂರ್ಯಚಂದ್ರರು ಪ್ರಕೃತಿಯ ಭಾಗವಷ್ಟೇ.  ಅವರ ಉದಯಾಸ್ತಗಳು ನಿಸರ್ಗದ ಮೇಲೆ ಯಾವೆಲ್ಲ ಪರಿಣಾಮವನ್ನು ಬೀರುತ್ತವೆ ಎಂಬ ವಿವರದ ಅಗತ್ಯವಿಲ್ಲ. ಅವುಗಳಿಂದ ಪ್ರಭಾವಿತವಾಗಿ ಪ್ರಕೃತಿಯು ತನ್ನನ್ನು ಹೇಗೆಲ್ಲ ಬದಲಾವಣೆಯನ್ನು ಹೊಂದುತ್ತದೆ ಎಂಬುದು ತಿಳಿದ ವಿಷಯವೇ. ಇವುಗಳನ್ನು ಆದರಿಸಿಯೇ ನಮ್ಮ ಸನಾತನ ಆರ್ಯ ಭಾರತ ಮಹರ್ಷಿಗಳು ಈ ಪರಿವರ್ತನೆಯನ್ನು ಹಬ್ಬವಾಗಿ ಆಚರಿಸಿದರು. ಅಂದರೆ ಭೂಮಿಯ ಮೇಲೆ ನಿಂತು ನೋಡುವ ನಮಗೆ ಸೂರ್ಯ ಚಲಿಸುವಂತೆ ಕಾಣುತ್ತದೆ. ಆಗ ಸೂರ್ಯಚಂದ್ರರ ನಡುವೆ ಅಂತರವೂ ಉಂಟಾಗುತ್ತದೆ. ಯಾವಾಗ ಸೂರ್ಯಚಂದ್ರರು ಒಂದು ನೇರದಲ್ಲಿ ಒಟ್ಟಿಗೆ ಕಾಣುವರೋ ಅದನ್ನು 'ಅಮಾವಾಸ್ಯಾ' ಎಂದು, ಅವರ ನಡುವಿನ ಅಂತರ ೧೮೦ ಅಂಶವಾದರೆ ಅದನ್ನು 'ಪೂರ್ಣಿಮಾ' ಎಂದು ಕರೆದರು. ಹೀಗೆ ಅಂತರವನ್ನು ಪರಿಗಣಿಸಿ ತಿಥಿಯನ್ನು ಲೆಕ್ಕಾಚಾರ ಮಾಡಿದರು. ಇಂತಹ ಕಾಲದ ಗಣನೆಯೆ ಮಾಘಮಾಸದ ಶುಕ್ಲಪಕ್ಷದ ಎಳನೆ ದಿನ- ಸಪ್ತಮೀ. ಇದನ್ನು ರಥಸಪ್ತಮೀ ಎಂದು
ಕರೆಯುತ್ತಾರೆ.

ರಥಸಪ್ತಮೀ:
ಸೂರ್ಯನು ತನ್ನ ಪಥದಲ್ಲಿ ಸುತ್ತುವಾಗ ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣವನ್ನು ಬೆಳೆಸುತ್ತಾನೆ. ಸೂರ್ಯನು ತನ್ನ ಏಳು ಕುದುರೆಗಳಿಂದ ಕೂಡಿದ ರಥವನ್ನು ಏರಿ ಉತ್ತರದ ಕಡೆ ಪಯಣಿಸುತ್ತಾನೆ ಎಂಬುದಾಗಿ ತಿಳಿದು ಈ ದಿನವನ್ನು ‘ರಥಸಪ್ತಮೀ’
ಎಂಬುದಾಗಿ ಕರೆದಿದ್ದಾರೆ. ವಸ್ತುತಃ ಸೂರ್ಯನಿಗೆ ಚಲನೆ ಉಂಟೇ? “ಸೂರ್ಯ ಆತ್ಮಾ ಜಗತಸ್ತಸ್ಥುಶಶ್ಚ” ಎಂಬುದಾಗಿ ವೇದವೂ ಸೂರ್ಯಕೆಂದ್ರವನ್ನೆ ಸಾರುತ್ತದೆ. ಸೂರ್ಯನು ಚಲಿಸುತ್ತಾನೆ ಎಂದರೆ ನಮಗೆ ಸೂರ್ಯ ಚಲಿಸಿದಂತೆ ಭಾಸವಾಗುತ್ತದೆ ಎಂದರ್ಥ. ಇದರಿಂದ ಭೂಮಿಯ ಮೇಲೆ ಪ್ರಭಾವವು ಅಷ್ಟೇ ಸತ್ಯ. ಈ ಬದಲಾವಣೆಯನ್ನು ನಮ್ಮ ಹಿಂದಿನವರು ಗುರುತಿಸಿದರು. ಇಂತಹ ಸೂರ್ಯನ ಗತಿಯನ್ನು ಗುರುತಿಸಿ ಆ ಕಾಲವನ್ನು ಸೂರ್ಯನ ಆರಾಧನೆಗೆ ಸೂಕ್ತವಾದ ಕಾಲ ಎಂದು ಬಗೆದರು. ಹಾಗಾಗಿ ಈ ಶುಭದಿನದಂದು ಸೂರ್ಯನಾರಾಯಣನನ್ನು ಭಕ್ತಿಭಾವದಿಂದ ಜನರು ಪೂಜಿಸುತ್ತಾರೆ.
ಶ್ರೀರಂಗಮಹಾಗುರುವಿನ ಹೃದಯ ಇದಕ್ಕೆ ಅಷ್ಟಾಂಗ ಯೋಗ ವಿಜ್ಞಾನ ಮಂದಿರದ ಸ್ಥಾಪಕಾಧ್ಯಕ್ಷರೂ, ಋಷಿಹೃಯದಯ ಸಂವೇದ್ಯರೂ ಆದ 'ಶ್ರೀರಂಗಮಹಾಗುರುಗಳು' ಈ ಮಹಾಪರ್ವಕ್ಕೆ ಇರುವ ಹಿನ್ನೆಲೆಯನ್ನು ಎತ್ತಿ ತೋರಿಸಿದ್ದಾರೆ.  "ಜ್ಞಾನಿಗಳ ದಹರಾಕಾಶದಲ್ಲಿ ಜ್ಞಾನಸವಿತೃವು ಸುತ್ತಿಕೊಂಡು ಬರುವಾಗ ಈ ಪಾರ್ಥಿವಕ್ಷೇತ್ರದಲ್ಲೂ ಬೆಳಕು ಚೆಲ್ಲುವುದುಂಟು. ಸಪ್ತಾಶ್ವವೆಂದರೆ ಸಪ್ತಧಾತುಗಳು, ಸಪ್ತಪ್ರಾಣಗಳೂ ಆಗುವುವು. ಸಪ್ತಧಾತು-ಸಪ್ತಪ್ರಾಣರೂಪವಾದ ವಾಘೆಯನ್ನು ಹಿಡಿದು ಶರೀರದಲ್ಲೂ ಅಂತೆಯೆ ವಿಶ್ವದಲ್ಲೂ ಅವನು ಸಂಚರಿಸತೊಡಗಿದರೆ, ನಮಗೆ ತಿಥಿ, ವಾರ, ನಕ್ಷತ್ರಗಳ ನೆನಪು ಬರುತ್ತದೆ. ಈಗ ನಮಗೆ ಹಗಲಾದರೆ ಇನ್ನೊಂದು ಕಡೆ ರಾತ್ರಿಯಾಗಿದೆ. ಒಮ್ಮೊಮ್ಮೆ ಒಂದೊಂದು ಕಡೆ ಹಗಲು-ರಾತ್ರಿ" ಎಂದು.
ಆಚರಣೆ:
ಭಗವಂತನನ್ನು ಪೂಜಿಸಬೇಕು, ಸಾಕ್ಷಾತ್ಕರಿಸಿಕೊಳ್ಳಬೇಕು ಎಂಬುದು ಮಾನವನ ಸಹಜ ಆಸೆ. ಇದಕ್ಕೆ ಪೂರಕವಾದ ಅಂಶಗಳು ಪ್ರಕೃತಿಯಲ್ಲಿ, ಕಾಲದಲ್ಲಿ ಸಿಗುತ್ತವೆ. ಅಂದರೆ ಈ ಸಪ್ತಮಿಯ ಶುಭದಿನ ಭಗವಂತನನ್ನು ಸೂರ್ಯನ ರೂಪದಲ್ಲಿ ಆರಾಧಿಸಲು ಪ್ರಕೃತಿಯೇ ನಮಗೆ ಏರ್ಪಡಿಸಿಕೊಟ್ಟ ಉತ್ತಮ ಕಾಲ. ಈ ಕಾಲದಲ್ಲಿ ಮಾಡುವ ಪ್ರತಿಯೊಂದು ಉತ್ತಮವಾದ ಕಾರ್ಯವೂಭಗವಂತ ಪೂಜೆಯಾಗಿ ಆಗುವುದು. ಅದಕ್ಕೆ ಕೆಲವು ವಿಧಿವಿಧಾನಗಳನ್ನು ಹಾಕಿಕೊಟ್ಟರು. "ಅರುಣೋದಯವೇಲಾಯಾಂ ಶುಕ್ಲೇ ಮಾಘಸ್ಯ ಸಪ್ತಮೀ| ಪ್ರಯಾಗೇ ಯದಿ ಲಭ್ಯೇತ ಕೋಟಿಸೂರ್ಯಗ್ರಹೈಃ ಸಮಾ|" ಎಂಬುದಾಗಿ. ಸೂರ್ಯೋದಯದ ಕಾಲದಲ್ಲಿ ಪವಿತ್ರ ನದಿಯಲ್ಲಿ ಪುಣ್ಯಸ್ನಾನವನ್ನು ಮಾಡಬೇಕು. ಅದರಲ್ಲೂ ಪ್ರಯಾಗದಲ್ಲಿ ಮಾಡುವ ಪುಣ್ಯಸ್ನಾನವು ಅತ್ಯಂತಶ್ರೇಷ್ಠ ಎಂದಿದ್ದಾರೆ. ಈ ವರ್ಷ ಪ್ರಯಾಗದಲ್ಲಿ ನಡೆಯುವ ಕುಂಭಮೇಳದಲ್ಲಿ ಅದೆಷ್ಟು ಕೋಟಿಜನ ಪುಣ್ಯ ಸಂಪಾದಿಸಿದರೋ ತಿಳಿಯದು. ಸೂರ್ಯನಿಗೆ ಯಾರು ಪ್ರತಿನಿತ್ಯದಲ್ಲು ನಮಿಸುತ್ತಾರೋ ಅವರಿಗೆ ಯಾವ ರೋಗವೂ ಬಾರದು. ಯೋಗಶಾಸ್ತ್ರದಲ್ಲಿ ಸೂರ್ಯನಮಸ್ಕಾರಕ್ಕೆ ಅಷ್ಟೊಂದು ಪ್ರಾಮುಖ್ಯವನ್ನು ಕೊಟ್ಟಿರುವುದು ವಿದಿತವೇ. ಇಂತಹ ನಿಸರ್ಗ ದತ್ತವಾದಪುಣ್ಯಕಾಲವನ್ನು ಉಪಯೋಗಿಸಿಕೊಂಡು ಜೀವನವನ್ನು ಸಾರ್ಥಕ ಪಡಿಸಿ ಕೊಳ್ಳೋಣ.

ಸೂಚನೆ: ವಿಜಯ ಕರ್ನಾಟಕದ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.