ಲೇಖಕರು:ತಾರೋಡಿಸುರೇಶ
ಭಾರತೀಯ ಸಂಸ್ಕೃತಿಯಲ್ಲಿ ತೆಂಗಿನಕಾಯಿಗೆ ವಿಶೇಷ ಮಾನ್ಯತೆ. ಅಡುಗೆಗೆ, ಔಷಧಿಗೆ, ದಾನಕ್ಕೆ ದೇವರ ನಿವೇದನೆಗೆ, ಎಲ್ಲೆಡೆಯಲ್ಲಿಯೂ ತೆಂಗಿನಕಾಯಿಗೆ ಬಹು ಪುರಸ್ಕಾರ. ಕೇವಲ ಕಾಯಿಗೆ ಮಾತ್ರ ಬೆಲೆಯಲ್ಲ. ವೃಕ್ಷಕ್ಕೂ ಕಲ್ಪವೃಕ್ಷವೆಂಬ ಗೌರವ. ಬಯಸಿದ್ದನ್ನೆಲ್ಲಾ ನೀಡುತ್ತದೆಯಂತೆ. ಉಳಿದ ಕಾಯಿಗಳನ್ನು ಮಾವಿನಕಾಯಿ, ಬಾಳೇಕಾಯಿ ಎಂದು ಹೆಸರಿನೊಡನೆ ಹೇಳುತ್ತೇವೆ. ತೆಂಗಿನಕಾಯಿಯ ವಿಷಯ ಹಾಗಿಲ್ಲ. ಅಂಗಡಿಯಲ್ಲಿ ಕಾಯಿ ಬೇಕೆಂದರೆ ಕೊಡುವುದು ತೆಂಗಿನಕಾಯಿಯಯನ್ನೇ. ಇಷ್ಟು ದೊಡ್ಡ ಸ್ಥಾನ. ಇದೇಕೆ ಹೀಗೆ?.
ಆಹಾರ
ಬೆಳೆಯಾಗಿ ಗೃಹಿಣಿಗೆ ಅತ್ಯಂತ ಆವಶ್ಯಕ. ಸಾಮಾನ್ಯವಾಗಿ ಅಡುಗೆಯ ಎಲ್ಲ ಪದಾರ್ಥಗಳ
ತಯಾರಿಕೆಗೂ ಇದರ ಸಹಕಾರ ಬೇಕೇಬೇಕು. ಮಧುರರಸಾದಿಯಾಗಿ ಎಲ್ಲ ಷಡ್ರಸಗಳೊಂದಿಗೂ
ಬೆರೆಯುತ್ತದೆ. "ತೆಂಗು, ಇಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ" ಎಂದು ಗಾದೆಯ ಮಾತು.
ತೆಂಗಿನಕಾಯಿಯು
ತನ್ನ ಔಷಧೀಯ ಗುಣಗಳಿಗೂ ಹೆಸರಾದದ್ದೇ. ಇದು ಮಧುರರಸಯುಕ್ತವಾದದ್ದು.
ಶೈತ್ಯವೀರ್ಯವುಳ್ಳದ್ದು. ತ್ರಿದೋಷಗಳಲ್ಲಿ ವಾತ, ಪಿತ್ತ ಶಮನಕಾರಿ. ತೆಂಗಿನೆಣ್ಣೆಯೂ
ಚರ್ಮರೋಗ ನಿವಾರಕ. ಮೆದುಳು ಮತ್ತು ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ. ಎಳೆನೀರು
ವಾತಹಾರಿಯಲ್ಲದೆ ಮನಸ್ಸಿಗೂ ತೃಪ್ತಿದಾಯಕವಾದದ್ದು.
ಇಷ್ಟೇ ಆದರೆ
ನಿಸರ್ಗದಲ್ಲಿ ಇದನ್ನೂ ಮೀರಿಸುವ ಇನ್ನೂ ಅನೇಕ ಪದಾರ್ಥಗಳು ಸಿಗಬಹುದು.
ಮಹರ್ಷಿಭಾರತದಲ್ಲಿ ತೆಂಗಿನಕಾಯಿಯು ಇಷ್ಟೊಂದು ಮಹತ್ವ ಪಡೆದಿರುವುದಕ್ಕೆ ಇನ್ನೇನಾದರೂ
ಕಾರಣವಿದೆಯೇ?.
"ತಲೆಯೇ ತೆಂಗಿನಕಾಯಿ ನಾರಾಯಣ, ಬೆರಳೇ
ಬಾಳೆಹಣ್ಣು ನಾರಾಯಣ" ಎಂದು ಹೇಳುವುದುಂಟು. ತೆಂಗಿನಕಾಯಿಯು ಜ್ಞಾನಿಗಳ ಶಿರಸ್ಸನ್ನು
ಪ್ರತಿನಿಧಿಸುತ್ತದೆ. ಅದು ಒಳಗೆ ಬೆಳಗುವ ಜ್ಞಾನದೀಪದ ಕೇಂದ್ರವಾಗಿದ್ದು ನಮ್ಮ ದೇಹದಲ್ಲಿ
ಬಹುಮುಖ್ಯ ಸ್ಥಾನವಾಗಿದೆ. ಶಿರಸ್ಸಿನಲ್ಲಿ ಎರಡು ಕಪಾಲಗಳಿರುವಂತೆ ತೆಂಗಿನಫಲವನ್ನೂ
ಎರಡು ಹೋಳಾಗಿ ವಿಭಾಗಿಸುತ್ತೇವೆ. ಹೇಗೆ ಜ್ಞಾನಿ ಅಥವಾ ಸಾಧಕನು-ಯಸ್ಯ ಜ್ಞಾನಮಯೀಂ
ಶಿಖಾ..ಎಂದು ಶಿಖೆಯನ್ನು ಬಿಟ್ಟಿರುತ್ತಾನೆಯೋ ಅದೇ ರೀತಿ ಕಾಯಿಯಲ್ಲಿಯೂ ಶಿಖೆ(ಜುಟ್ಟು)
ಯನ್ನು ನೋಡುತ್ತೇವೆ. ಅದು ಜ್ಞಾನಶಿಖೆಯನ್ನು ಪ್ರತಿಬಿಂಬಿಸುತ್ತದೆ. ಶಿರಸ್ಸು
ಭ್ರೂಮಧ್ಯಕೇಂದ್ರವನ್ನೂ ಮತ್ತು ಸಹಸ್ರಾರವೆರಡನ್ನೂ ತನ್ನ ಪರಿಧಿಯಲ್ಲಿ ಹೊಂದಿದೆಯಷ್ಟೆ. ಈ
ಎರಡು ಆಧ್ಯಾತ್ಮಿಕ ಕೇಂದ್ರಗಳ ಮಧ್ಯೆ ಸಾಧಕರು ಸರ್ವರಸಗಳಿಗೂ ಆಶ್ರಯನಾದ ಭಗವಂತನ
ದರ್ಶನವನ್ನು ಮಾಡುತ್ತಾರೆ. ಅವರು ಅದನ್ನು ಭಕ್ತಿರಸದ ಸಹಕಾರದಿಂದ ಸಾಧಿಸುತ್ತಾರೆ.
ಅದರಂತೆಯೇ ತೆಂಗಿನಕಾಯಿಯೂ ತನ್ನೊಳಗೆ ಅಂತರಂಗದಲ್ಲಿ ಮಧುರವಾದ ರಸವನ್ನು
ಇಟ್ಟುಕೊಂಡಿರುತ್ತದೆ.
ಸಾಮಾನ್ಯ ಮನುಷ್ಯರಂತಲ್ಲದೆ
ಜ್ಞಾನಿಯು ಮೂರನೆಯ ಕಣ್ಣನ್ನು ಪಡೆದಿರುತ್ತಾನೆ. ಅದು ಜ್ಞಾನನೇತ್ರವಾಗಿದ್ದು ಭ್ರೂಮಧ್ಯದ
ಕೇಂದ್ರವು ಸಾಧನೆಯಿಂದ ಜಾಗೃತಗೊಂಡಾಗ ತೆರೆಯುತ್ತದೆ. ಇದನ್ನೇ ಹೋಲುವ ಮೂರನೆಯ
ಕಣ್ಣೊಂದು ತೆಂಗಿನಕಾಯಿಯಲ್ಲಿಯೂ ಇದೆ.
ಪಕ್ವಗೊಂಡ
ಕಾಯಿಯಲ್ಲಿ ಮೂರನೆಯ ಕಣ್ಣಿನ ಜಾಗದಲ್ಲಿ ಹೂವಿನರೂಪದ ಪದಾರ್ಥವು ದೊರೆಯುವುದುಂಟು. ಬಹಳ
ಪೂಜ್ಯತೆಯಿಂದ ಅದನ್ನು ಶಿರಸ್ಸಿನಲ್ಲಿ ಧರಿಸುತ್ತಾರೆ. ಅದು ವಿಶ್ವಕ್ಕೇ ಬೀಜರೂಪವಾದ
ಲಿಂಗವನ್ನು ಸೂಚಿಸುತ್ತದೆ. “ಸಾಧಕರು ತೀವ್ರವಾದ ಸಾಧನೆಯನ್ನು ನಡೆಸಿ ಭ್ರೂಮಧ್ಯದಲ್ಲಿ
ಲಿಂಗರೂಪನಾದ ಭಗವಂತನನ್ನು ದರ್ಶನಮಾಡಿ ಮಹದಾನಂದವನ್ನು ಅನುಭವಿಸುವುತ್ತಾರಪ್ಪಾ” ಎಂದು
ಶ್ರೀರಂಗಮಹಾಗುರುಗಳು ನುಡಿಯುತ್ತಿದ್ದರು.
ಜೊತೆಗೆ
ತೆಂಗಿನ ಮರದ ಕರಟ, ಎಲೆ, ಕಾಂಡ, ಸೋಗೆ ಎಲ್ಲವೂ ವಿವಿಧ ಪ್ರಯೋಜನವನ್ನು ಹೊಂದಿದೆ.
ಅದಕ್ಕೇ ಕಲ್ಪವೃಕ್ಷವೆಂದು ಕರೆದಿದ್ದಾರೆ. ಅಂತಹ ವೃಕ್ಷದ ಫಲ ತೆಂಗು. ಇದೇ ರೀತಿ
ಪುರುಷಾರ್ಥಗಳಾದ ಧರ್ಮಾರ್ಥಕಾಮಮೋಕ್ಷಗಳು ದಿವ್ಯ ಸಂಕಲ್ಪವೃಕ್ಷದ ಫಲಗಳು. ಪುರುಷಾರ್ಥಗಳು
ಪ್ರತಿ ಮಾನವನ ಜನ್ಮಸಿದ್ಧ ಹಕ್ಕು. ತೆಂಗಿನ ಫಲವನ್ನು ಒಡೆದೇ ನಿವೇದನೆ ಮಾಡುವಂತೆ,
ಧ್ಯಾನನಿರ್ಮಥನದಿಂದ ಶಿರಸ್ಸನಲ್ಲಿರುವ ಸಹಸ್ರಾರವನ್ನು ಒಳಗೇ ಬೇಧಿಸಿ ಭಗವಂತನ
ಬಳಿಸಾರಬೇಕು.
ದಾನಕ್ಕೂ ಶ್ರೇಷ್ಠವಾದ ಪದಾರ್ಥವಾಗಿದೆ.
ಪುಣ್ಯಕರವೂ, ದೇವತಾಪ್ರಸನ್ನಕರವೂ ಆದದ್ದು, ಶೀಘ್ರದಲ್ಲಿ ಫಲಕಾರಿ, ಎಂಬುದಾಗಿ
ಮಹರ್ಷಿಗಳು ಸಾರುತ್ತಾರೆ. ಆದರೆ ಕಳ್ಳಗಾಯಿ ಆಗಬಾರದು. ಮೇಲಿನ ವಿವರಗಳು ಕಳ್ಳಗಾಯಿಗೆ
ಅನ್ವಯಿಸುವುದಿಲ್ಲ.
ಇಂತಹ ನಮ್ಮ ಒಳಹೊರಜೀವನದ ದರ್ಪಣವಾದ, ಪ್ರಕೃತಿಯನ್ನು ಸಂಸ್ಕರಿಸುವ,ಸರ್ವೋಪಕಾರಕವಾದ ತೆಂಗಿನಕಾಯಿಗೆ ಭಾರತೀಯ ಸಂಸ್ಕೃತಿಯಲ್ಲಿ ತಕ್ಕ ಸ್ಥಾನವು ದೊರಕಿದೆ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.