Sunday, February 10, 2019

ಜ್ಞಾನಿಗಳ ಸಮಾಜದಲ್ಲಿ ಸ್ತ್ರೀಯರ ಸ್ಥಾನ (Jnanigala samajadalli striyara sthana)

ಲೇಖಕರು: ಮೈಥಿಲೀ ರಾಘವನ್
ಬೆಂಗಳೂರು

ಭಾರತದೇಶದಲ್ಲಿ ಪಿತೃಪ್ರಭುತ್ವ ವಿಧಾನವೇ ಮೊದಲಿನಿಂದಲೂ ಕಂಡಬರುತ್ತಿದೆ; ಇಲ್ಲಿ ಪುರುಷರ ಆಧಿಕ್ಯವೇ ಹೆಚ್ಚಾಗಿ, ಸ್ತ್ರೀಯರನ್ನು ಕೆಳಕ್ಕೆ ಅದುಮಿ ನಿಕೃಷ್ಟವಾಗಿ ಕಾಣುತ್ತಿದ್ದುದೇ ಹೆಚ್ಚು;ಅವರಿಗೆ ಪುರುಷರಿಗಿರುವಷ್ಟು ಹಕ್ಕಾಗಲೀ, ಮುಂದುವರಿಯಲು ಅವಕಾಶಗಳಾಗಲಿ ದೊರೆಯುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅವರನ್ನು ಮಕ್ಕಳನ್ನು ಹೆರುವ ಯಂತ್ರಗಳಾಗಿ ಕಂಡಿದ್ದಲ್ಲದೇ  ಅಡುಗೆಯ ಮನೆಗೆ ನೂಕಿ ಸಮಾಜದಲ್ಲಿ ಅವರ ಪ್ರಗತಿಯನ್ನು ಕುಂಠಿತಗೊಳಿಸಲಾಗಿತ್ತು ಎಂಬ ನೋಟವೂ ಅಲ್ಲಲ್ಲಿ ಕಾಣುತ್ತಿದೆ.ಈ ಅನ್ಯಾಯವನ್ನು ತಿದ್ದಿ ಸ್ತ್ರೀಯರನ್ನು ಪುರುಷರಿಗೆ ಸಮಾನರಾಗಿ ಭಾವಿಸಿ ಅವಕಾಶಗಳನ್ನು ಒದಗಿಸಲು ಪ್ರಯತ್ನಗಳು ನಡೆದು ಬಹುಮಟ್ಟಿಗೆ ಸುಧಾರಣೆಯೂ ಆಗಿದೆ ಎಂಬುದನ್ನೂ ಗಮನಿಸಬಹುದಾಗಿದೆ.

Sourced from : wikimedia


ಈ ನೇರದಲ್ಲಿ ಮೌಲಿಕವಾಗಿ ಭಾರತೀಯ ಮಹರ್ಷಿಗಳ ಸಮಾಜದಲ್ಲಿ ಸ್ತ್ರೀಯರ ಸ್ಥಾನ-ಮಾನಗಳೇನಿತ್ತು ಎಂಬುದನ್ನು ಗಮನಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಮಹರ್ಷಿಗಳು ತಮ್ಮ ತಪೋ-ಧ್ಯಾನ ಬಲದಿಂದ ಕಂಡ ಒಳ ಬೆಳಕನ್ನೂ ಅದರ ವಿಕಾಸವನ್ನೂ ಮಾನವಮಾತ್ರರೆಲ್ಲರೂ ಕಂಡು ಆನಂದಿಸುವಂತೆ ಸಮಾಜವ್ಯವಸ್ಥೆಯನ್ನು ಅಳವಡಿಸಿದರು. ಸೃಷ್ಟಿಯ ನಿಯಮಾವಳಿಯನ್ನೇ ಅನುಸರಿಸಿ ನಡೆದಾಗ ಜೀವನವು ಸುಗಮವಾಗಿಯೂ ಸುಲಲಿತವಾಗಿಯೂ ಸಾಗುವುದೆಂಬುದನ್ನೂ ಗುರುತಿಸಿದರು.

ಮೊಟ್ಟಮೊದಲಿಗೆ ಪರಂಜ್ಯೋತಿಯು ತಾನೇತಾನಾಗಿದ್ದು ಮುಂದೆ ತಾನು ಬಹುವಾಗಬೇಕೆಂದು ಇಚ್ಛಿಸಿದಾಗ ತನ್ನನ್ನೇ ಪುರುಷ-ಸ್ತ್ರೀ ಎಂದು ಎರಡಾಗಿ ವಿಭಾಗಿಸಿಕೊಂಡನು ಎಂಬುದಾಗಿ ಉಪನಿಷದ್ವಾಣಿ. ಪರಮಪುರುಷನು ತನ್ನ ಆಶಯವನ್ನು ಪ್ರಕೃತಿಮಾತೆಯ ಮೂಲಕ ವಿಸ್ತಾರಗೊಳಿಸಿದನು.

ಸೃಷ್ಟಿಯಲ್ಲೂ ಇದೇ ನಡೆಯಿರುವುದನ್ನು ಗುರುತಿಸಿದ ಮಹರ್ಷಿಗಳು ಸಮಾಜದಲ್ಲಿ ಸ್ತ್ರೀಯನ್ನು ಮಹಾತಾಯಿಯ ಅಂಶವಾಗಿ ಅತ್ಯಂತ ಪೂಜ್ಯಳೆಂದು ಭಾವಿಸಿದರು. ‘ಮಾತೃದೇವೋ ಭವ’ ಎಂಬುದು ವಿದ್ಯಾಭ್ಯಾಸವನ್ನು ಮುಗಿಸಿದ ಬ್ರಹ್ಮಚಾರಿಗೆ ನೀಡುವ ಪ್ರಥಮೋಪದೇಶ. ಆಕೆಯು ಗರ್ಭದಲ್ಲಿ ಮಗುವನ್ನು ಧರಿಸಿ ಪೋಷಿಸಿ, ಹೊರಬಂದಮೇಲೂ ಅದರ ಪಾಲನೆ-ಪೋಷಣೆಗಳನ್ನು ಮಾಡುತ್ತಾಳೆ ಎಂಬುದಷ್ಟುಮಾತ್ರವೇ ಕಾರಣವಲ್ಲ. ಪಾಲನೆ-ಪೋಷಣೆಗಳಮೂಲಕ ಮಗುವನ್ನು ದೇವಮಾರ್ಗದಲ್ಲಿ ಕರೆದೊಯ್ಯುವ ಬೃಹತ್ತಾದ ಜವಾಬ್ದಾರಿಯನ್ನು ನಿರ್ವಹಿಸುವುದರಿಂದ ಅವಳನ್ನು ದೇವಸಮಾನಳಾಗಿ ಪೂಜಿಸುವ ಆದೇಶ. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಎಂಬುದಾಗಿ ನಾರಿಯರನ್ನು ಕೊಂಡಾಡುವ ಮಾತುಗಳೂ ಇವೆ.

ಶರೀರ ರಚನೆಯಷ್ಟೇ ಅಲ್ಲದೆ ಸ್ತ್ರೀಯರಲ್ಲಿ ಪ್ರಕೃತಿಸಹಜವಾಗಿ ಮೂಡಿಬರುವ ವಾತ್ಸಲ್ಯ, ಮಮತೆ, ಕಾರುಣ್ಯ, ಮೃದುಸ್ವಭಾವಗಳನ್ನು ಗುರುತಿಸಿಯೇ ಪಾಲನೆಯ ಹೊಣೆಗಾರಿಕೆಯನ್ನು ಒಪ್ಪಿಸಿದರೇ ಹೊರತು ನಿಕೃಷ್ಟ ಭಾವನೆ ಇಲ್ಲವೆಂಬುದು ಗಮನಾರ್ಹ.

ಅಡುಗೆಯತ್ತ ಮನಒಲಿಯುವುದು ಸ್ತ್ರೀಸಹಜಪ್ರವೃತ್ತಿ. ಆಧುನಿಕಯುಗದ ನವಯುವತಿಯರಿಗೂ ಅತ್ತ ಒಲವಿರುವುದನ್ನು ಕಾಣಬಹುದಾಗಿದೆ. ಅಂತರ್ಜಾಲವನ್ನಾಶ್ರಯಿಸಿ ಹೊಸ ತಿಂಡಿ-ತಿನಿಸುಗಳನ್ನು ತಯಾರಿಸುವುದು ಪ್ರಿಯವಾದ ಮನರಂಜನೆಯ ವಿಷಯವಾಗಿರುವುದನ್ನು ನೋಡಬಹುದಾಗಿದೆ.

ಸೃಷ್ಟಿಸಹಜವಾದ ಈ ಒಲವನ್ನು ಗುರುತಿಸಿ ಸ್ತ್ರೀಯರನ್ನು ಅಡುಗೆಮನೆಯ ಒಡತಿಯರನ್ನಾಗಿ ನೇಮಿಸಿದರು. ಆಡುಗೆಯೆಂಬುದನ್ನು ಆಹಾರ ತಯಾರಿಕೆಯಷ್ಟೇಯೆನ್ನದೆ ದಾಮೋದರನ ಪೂಜೆಗೆ ಅಣಿಮಾಡುವ ಕಾರ್ಯವಾಗಿ ಕಂಡರು ಜ್ಞಾನಿಗಳು. ಆಹಾರವು ಮನಸ್ಸಿನಮೇಲೆ ಪರಿಣಾಮವನ್ನು ಮಾಡುವುದರಿಂದ ತನ್ಮೂಲಕವೇ ಭಗವಂತನತ್ತ  ಸಾಗುವಂತೆ ವ್ಯವಸ್ಥೆಯನ್ನು ರೂಪಿಸಿದರು. ಮನೆಮಂದಿಯೆಲ್ಲರ ಮನಸ್ಸನ್ನೂ ಸನ್ಮಾರ್ಗಕ್ಕೆ ಎಳೆಯುವಲ್ಲಿ ಸ್ತೀಯರದೂ ಒಂದು ಪಾತ್ರ- ಅದೆಷ್ಟು ಉನ್ನತವಾದದ್ದು!.

ಗೃಹವನ್ನು ಸಿಂಗರಿಸುವುದು, ಗೃಹದ ಸದಸ್ಯರೆಲ್ಲರಿಗೂ ಕೊಂಡಿಯಾಗಿದ್ದು ಸೌಮನಸ್ಯವನ್ನೂ ಸೌಹಾರ್ದವನ್ನೂ ಬೆಳೆಸುವುದು, ಗೃಹಕೃತ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಮುಂತಾದ ಕೆಲಸಗಳಿಗೆ ಸ್ತ್ರೀಮನೋಧರ್ಮವು ಸಹಜವಾಗಿಯೇ ಹೊಂದಿಕೊಳ್ಳುವುದರಿಂದ ಗೃಹಕೃತ್ಯಗಳಲ್ಲಿ ಅವಳದೇ ಪ್ರಮುಖಪಾತ್ರವಾಗಿತ್ತು. ಮಹರ್ಷಿಗಳು ಅವಳ ಮನೋಧರ್ಮವನ್ನೇ  ಪ್ರತಿಫಲಿಸುವ ಗೃಹವು ಅವಳೇ ಆಗಿದ್ದಾಳೆ ‘ಗೃಹಿಣೀ ಗೃಹಮುಚ್ಯತೇ’ ಎಂದರು.

ಸೃಷ್ಟಿಯ ನಿಯಮಗಳನ್ನೂ, ಕೊಡುಗೆಯನ್ನೂ ಗಮನಿಸಿ ಸ್ತ್ರೀಯರ ವೈಶಿಷ್ಟ್ಯವನ್ನು ಗುರುತಿಸಿ ಅವರಿಗೆ ಗೌರವದ ಸ್ಥಾನವನ್ನು ಮಹರ್ಷಿಸಮಾಜ ನೀಡಿತ್ತು. ಸ್ತ್ರೀ-ಪುರುಷರಿಬ್ಬರಿಗೂ ಅವರವರ ಪ್ರಕೃತಿಸಹಜವಾದ ವೈಶಿಷ್ಟ್ಯಗಳು ಸಾರ್ವಕಾಲಿಕವಾದ್ದರಿಂದ ಇಂದಿಗೂ ಮಹರ್ಷಿಧ್ಯೇಯವನ್ನು ಆಧರಿಸುವವರು ಈ ವ್ಯವಸ್ಥೆಯ ಲಾಭವನ್ನು ತಮ್ಮದಾಗಿಸಿಕೊಂಡರೆ ಇಡೀ ಕುಟುಂಬವನ್ನೇ ಅಧ್ಯಾತ್ಮಮಾರ್ಗದಲ್ಲಿ ಮುನ್ನಡೆಸುವ ಉತ್ತಮ ಸ್ತ್ರೀ-ಪುರುಷರಾಗುತ್ತಾರೆಂಬುದು ನಿಸ್ಸಂಶಯ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.