Wednesday, February 27, 2019

ಮಹರ್ಷಿ ಸಂಸ್ಕೃತಿಯಲ್ಲಿ ‘ಸಂಸ್ಕಾರಗಳು’ (Maharshi samskruthiyalli Samskaragalu)

ಲೇಖಕರು:ತಾರೋಡಿಸುರೇಶ

ಸಂಸ್ಕಾರ ಎಂಬ ಪದದ ಬಳಕೆಯೂ ಇತ್ತೀಚೆಗೆ ಅಪರೂಪವಾಗುತ್ತಿದೆ. ಅವುಗಳ  ಆಚರಣೆಗಳೂ ಕಣ್ಮರೆಯಾಗುತ್ತಿವೆ. ಸಂಸ್ಕಾರಗಳ ಉದ್ಧೇಶದ ಅರಿವೂ ಕಂಡುಬರುತ್ತಿಲ್ಲ. ಉಪನಯನ, ವಿವಾಹಗಳೆರಡು ಮಾತ್ರ ಸ್ವಲ್ಪ ಪರಿಚಯದಲ್ಲಿವೆ. ಅನೇಕರಿಗೆ ಇವೆರಡೂ, ಸಂಸ್ಕಾರಗಳ ಗುಂಪಿಗೆ ಸೇರಿವೆ ಎನ್ನುವ ಅರಿವೂ ಇಲ್ಲ. ವಿಪರ್ಯಾಸವೆಂದರೆ ಉಪನಯನವು ವಿವಾಹಕ್ಕೆ ಪರವಾನಿಗೆಯಂತೆ ಉಪಯೋಗಿಸಲ್ಪಡುತ್ತಿದೆ.  

ಜೊತೆಗೆ ಇವುಗಳ ಆಚರಣೆಯಲ್ಲಿ ಒಂದು ಸಂತೋಷವೂ ಸಿಗುತ್ತಿಲ್ಲ. “ನಿದ್ರೆಯಲ್ಲಿರುವ ಮಗುವಿಗೆ ಹಾಲು ಕುಡಿಸಿದಂತೆ ಆಗಿದೆ” ಎಂದು ಶ್ರೀರಂಗಮಹಾಗುರುಗಳು ನುಡಿಯುತ್ತಿದ್ದರು. ಯಾವುದನ್ನೇ ಆದರೂ ತಿಳಿದು ಮಾಡಿದರೆ ವೀರ್ಯವತ್ತರವಾಗಿರುತ್ತದೆ. ಋಷಿಸಂಸ್ಕೃತಿಯಲ್ಲಿ ತಂದಿರುವ ಸಂಸ್ಕಾರಗಳ ವಿರೂಪವು ಹೋಗಿ ಅದರ ಸುರೂಪಕ್ಕಾಗಿ ಸಂಸ್ಕಾರಗಳ ಬಗ್ಗೆ ಚಿಂತಿಸಬೇಕಾಗಿದೆ.

ಸಂಸ್ಕೃತ, ಪರಿಷ್ಕಾರ, ಉತ್ಕರ್ಷ, ವಿದ್ಯೆ, ಇವೆಲ್ಲವನ್ನೂ ಸಂಸ್ಕಾರ ಶಬ್ಧವು ಒಳಗೊಂಡಿದೆ. ಮನಸ್ಸಿನಲ್ಲಿರುವ ಗುರುತುಗಳಿಗೂ ಸಂಸ್ಕಾರವೆನ್ನುವುದುಂಟು. ಶುದ್ಧಿ ಎನ್ನುವುದು
ಸಂಸ್ಕಾರ ಶಬ್ಧದ ಮೌಲಿಕ ಅರ್ಥ. ಒಟ್ಟಿನಲ್ಲಿ, ವಸ್ತುವಿನಲ್ಲಿರುವ ದೋಷನಿವಾರಣೆ, ಗುಣೋತ್ಕರ್ಷ, ತನ್ಮೂಲಕ ಆ ವಸ್ತುವನ್ನು ಮೂಲರೂಪಕ್ಕೆ ತರುವ ಪ್ರಕ್ರಿಯೆಯೇ ಸಂಸ್ಕಾರ.

ಸಂಸ್ಕಾರವು ಆಯಾ ವಸ್ತ್ರುಗಳಿಗನುಗುಣವಾಗಿ ವಿಶಿಷ್ಟವಾಗಿರುತ್ತದೆ. ಪಾತ್ರೆಯನ್ನು ಶುದ್ಧಗೊಳಿಸುವ ಕ್ರಮಕ್ಕೂ, ಬಟ್ಟೆಯನ್ನು ಶುದ್ಧಗೊಳಿಸುವ ಕ್ರಮಕ್ಕೂ ವ್ಯತ್ಯಾಸವಿದೆ. ಶುದ್ದಿಯ ರೀತಿಯಾಗಲೀ, ಅದಕ್ಕೆ ಬೇಕಾದ ಸಾಧನಗಳಾಗಲೀ ಎಲ್ಲವೂ ಭಿನ್ನವೇ. ಸಂಸ್ಕಾರದ ವಿಧಿವಿಧಾನಗಳು ವಸ್ತು, ಅದರ ಕೊಳೆಯ ಸ್ವರೂಪ, ತರಬೇಕಾದ ಮೂಲರೂಪ ಇವುಗಳನ್ನವಲಂಬಿಸಿರುತ್ತದೆ. ಬಟ್ಟೆ ಹರಿಯುವವರೆಗೂ ಒಗೆಯುವುದಿಲ್ಲ. ಪಾತ್ರೆ ಸವೆಯುವವರೆಗೂ ತೊಳೆಯುವುದಿಲ್ಲ ಅಲ್ಲವೆ?.
ಸಂಸ್ಕಾರಗಳು ಮಾನವ ಜೀವನದ ಸಹಜ ಸಾರ್ಥಕ್ಯಕ್ಕಾಗಿ, ಆತ್ಯಂತಿಕವಾದ ಶುದ್ಧಿಗಾಗಿ ಎನ್ನುವುದನ್ನು ಶಾಸ್ತ್ರ,ಸಂಪ್ರದಾಯಗಳು ಸ್ಪಷ್ಟವಾಗಿ ಘೋಷಿಸಿವೆ. ಮಾನವ ಜೀವನವು ಕೇವಲ ನಮ್ಮ ಹೊರಗಣ್ಣಿಗೆ ಕಾಣುವಂತೆ ದೇಹ ಕಂಡು ಮರೆಯಾಗುವವರೆಗಿನದು ಮಾತ್ರವಲ್ಲ. ಆದಿಭೌತಿಕ, ಆದಿದೈವಿಕ ಹಾಗೂ ಆಧ್ಯಾತ್ಮಿಕ ಎಂಬ ಮೂರು ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿರುವಂತಹದ್ದು. ದೇವರು ಎಂಬ ಮೂಲ ಶಕ್ತಿಯಿಂದ ಅಭಿವ್ಯಕ್ತಗೊಂಡು ಇಂದ್ರಿಯಜೀವನವನ್ನೂ ನಡೆಸಿ ಪುನಃ ಜೀವವು ದೇವಮೂಲದಲ್ಲಿಯೇ ನೆಲೆಗೊಳ್ಳಬೇಕು. ಯೋಗ-ಭೋಗವೆರಡನ್ನೂ ಅನುಭವಿಸಬೇಕು. ಇಲ್ಲದಿದ್ದರೆ ದುಃಖಮಯವಾದ ಬಾಳಾಟದೊಂದಿಗೆ ಸಂಸಾರಬಂಧನದಲ್ಲಿ ಬಂಧಿಯಾಗಿರಬೇಕಾಗುವುದು. ದೇವನೊಡನೆಯ ಸಂಯೋಗದಲ್ಲಿನ ಅನುಪಮವಾದ ಆನಂದದಿಂದ ವಂಚಿತವಾಗಬೇಕಾಗುವುದು. ತನ್ನ ಸ್ವರೂಪ, ಸ್ವಾತಂತ್ರ್ಯದೊಡನೆ ಬಾಳಿದಂತಾಗದು. 

ಇದು, ಸ್ಥೂಲದೃಷ್ಟಿಯಿಂದ ಮಾತ್ರ ನೋಡದೆ, ತಮ್ಮ ತಪಸ್ಸಿನಿಂದ ಸಂಪಾದಿಸಿದ ಯೋಗದೃಷ್ಟಿಯಿಂದ ನೋಡಿದಾಗ ಮಹರ್ಷಿಗಳಿಗೆ ದೊರೆತ ಜೀವನ ದರ್ಶನ. ಹಾಗೆಯೇ ನಮ್ಮ ಇಂದಿನ ದುರವಸ್ಥೆಗೂ ದೇವರ ವಿಸ್ಮೃತಿಯುಟಾಗಿರುವುದೇ ಕಾರಣ. ಆ ವಿಸ್ಮೃತಿಯೇ ಜೀವಿಯನ್ನು ಆವರಿಸಿಕೊಂಡಿರುವ ಕೊಳೆ, ಅಶುದ್ಧಿ. ಆದ್ದರಿಂದಲೇ ಈ ದೋಷವನ್ನು ನಿವಾರಿಸಿ, ಸ್ಮೃತಿಯನ್ನುಂಟುಮಾಡುವ ಸಂಸ್ಕಾರಗಳನ್ನು ಋಷಿಗಳು ಪರಮಕರುಣೆಯಿಂದ ರೂಪಿಸಿಕೊಟ್ಟಿದ್ದಾರೆ.  

ಈ ಸಂಸ್ಕಾರಗಳಲ್ಲಿ ನಾವು ಮಂತ್ರ, ತಂತ್ರ, ದ್ರವ್ಯ, ಕಾಲ ಎಲ್ಲವನ್ನು ಅಳವಡಿಸಿರುವುದನ್ನು ನೋಡಬಹುದು. ತಂತ್ರದಲ್ಲಿಯೂ ನಿರ್ದಿಷ್ಟವಾದ ರೂಪುರೇಷೆಗಳುಂಟು. ಸಂಸ್ಕಾರಗಳನ್ನು ವಿಜ್ಞಾನಪೂರ್ಣವಾಗಿ ಆಚರಿಸಿದಾಗ ನಮ್ಮ ದೇಹ, ಮನೋಬುದ್ಧೀಂದ್ರಿಯಗಳನ್ನೂ ಶುದ್ಧಗೊಳಿಸಿ ಜ್ಞಾನರೂಪವಾದ ಫಲವನ್ನು ನೀಡಬಲ್ಲವು.

ಜೀವನದ ಪ್ರತಿಹಂತದಲ್ಲಿಯೂ ಆಗಬೇಕಾದ ಪರಿಣಾಮವನ್ನು ಗಮನಿಸಿ ಅನ್ಯಾನ್ಯ ಸಂಸ್ಕಾರಗಳು ಅಳವಡಿಸಿಲ್ಪಟ್ಟಿದೆ. ಗರ್ಭಾದಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ಅನ್ನಪ್ರಾಶನ, ನಿಷ್ಕ್ರಮಣ, ಚೂಡಾಕರ್ಮ, ಅಕ್ಷರಾಭ್ಯಾಸ, ಉಪನಯನ, ನಾಲ್ಕುವ್ರತಗಳು, ವಿವಾಹ ಮತ್ತು ಅಂತ್ಯೇಷ್ಟಿ ಇವೇ ಪ್ರಧಾನವಾದ ಷೋಡಶಸಂಸ್ಕಾರಗಳು. ಆದರೆ ದೋಷಗಳು ಅನಂತವಾಗಿರುವುದರಿಂದ ಸಂಸ್ಕಾರಗಳೂ ಅನಂತವಾಗಿರುತ್ತವೆ.

ಸಂಸ್ಕಾರಗಳಿಂದ ಗರ್ಭಕ್ಕೆ(ಸ್ತ್ರೀ) ಮತ್ತು ಬೀಜಕ್ಕೆ(ಪುರುಷ) ಸಂಬಂಧಿಸಿದ ದೋಷಗಳು ಪರಿಹಾರವಾಗಿ ಶುದ್ಧವಾದ ವಂಶವು ಬೆಳೆಯುತ್ತದೆ. ಶುದ್ಧಿಯು ಸ್ವಸ್ವರೂಪದಲ್ಲಿ ನಿಲ್ಲಿಸುತ್ತದೆ. ಇನ್ನೊಂದು ಪ್ರಮುಖ ಲಾಭವೆಂದರೆ ದೇಹಮನೋಬುದ್ಧೀಂದ್ರಿಯಗಳಲ್ಲಿ ಶುದ್ಧಿಯುಂಟಾದಂತೆಲ್ಲ ಭಗವಂತನಲ್ಲಿ ಸಹಜವಾಗಿರುವ ದಯಾ, ಕ್ಷಮೆ, ಅನಸೂಯ ಇತ್ಯಾದಿ ಆತ್ಮಗುಣಗಳು ವ್ಯಕ್ತಿಯಲ್ಲಿ ಹಾಗೂ ವಂಶದಲ್ಲಿ ಅರಳುತ್ತವೆ. ಇದರಿಂದ ಸ್ವಸ್ಥಸಮಾಜವೂ ರೂಪುಗೊಳ್ಳುತ್ತದೆ

ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.