Saturday, 13 October 2018

ದೀರ್ಘಬಂಧು (Dirghabandhu)

ಲೇಖಕರು: ವಿದ್ವಾನ್ ಬಿ.ಜಿ. ಅನಂತ, ಮೈಸೂರು

ಭವತಾರಕನಾದ ಗುರುವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದುಂಟು.  ಈ ಹೆಸರುಗಳು ಕೇವಲ ಹೆಸರುಗಳೋ ಸಮಾನಾರ್ಥಕ ಪದಗಳೋ ಆಗಿರದೆ ಗುರುವೆಂಬ ಕರುಣಾ ಸಾಗರನ ಬೇರೆ ಬೇರೆ ಗುಣಗಳನ್ನೂ ಸ್ವಭಾವಗಳನ್ನೂ ಹೇಳುವವುಗಳೇ ಆಗಿವೆ.  ಅವುಗಳಲ್ಲಿ ದೀರ್ಥಬಂಧು’ ಎಂಬುದೂ ಒಂದು.
ಬಂಧು
ಬಂಧನ ಎಂಬರ್ಥದಲ್ಲಿ ಪ್ರಯೋಗದಲ್ಲಿರುವ ಶಬ್ದ ಬಂಧು ಎಂಬುದು.  ಎಂದರೆ ಕಟ್ಟು’ ಎಂದರ್ಥ.  ಯಾರೋ ಇಬ್ಬರ ನಡುವೆ ಒಂದು ಕಟ್ಟುಕಟ್ಟಿಕೊಳ್ಳವಿಕೆ ಇದೆ ಅಥವಾ ಯಾವುದೋ ಒಂದು ವಿಷಯದ ಬಂಧನಕ್ಕೆ ಒಳಗಾದವರು ಎಂಬ ಅರ್ಥದಲ್ಲಿ ಬಂಧುಗಳು ಎಂಬ ಶಬ್ದ ಬಂದಿದೆ.  ಆ ಬಂಧವು ರಕ್ತದಿಂದ(ಹುಟ್ಟಿನಿಂದ) ಬಂದದ್ದು ಎಂಬರ್ಥದಲ್ಲಿ ಇಂದು ಹೆಚ್ಚಾಗಿ ಚಾಲ್ತಿಯಲ್ಲಿದೆ.

ರಕ್ತ ಸಂಬಂಧವು ಒಮ್ಮೆ ಉಂಟಾದರೆ ಅದು ಅಜೀವ ಪರ್ಯಂತವೂ ಮತ್ತು ಆಮೇಲೂ ಇರುತ್ತದೆ.  ಉದಾಹರಣೆಗೆ ಶ್ರೀರಾಮ-ದಶರಥರು ತಂದೆ ಮಕ್ಕಳು. ಅವರು ಆ ಸಂಬಂಧವು ಇನ್ನು ಸಾವಿರ ವರ್ಷ ಕಳೆದರೂ ಹೋಗುವಂಥದ್ದಲ್ಲ.

ಇನ್ನು ಕೆಲವು ಹುಟ್ಟಿನ ಅನಂತರ ಉಂಟಾಗುವ ಸಂಬಂಧಗಳೂ ಹೀಗೆಯೇ ಅಜೀವ ಪರ್ಯಂತ ಇರುವುದುಂಟು.  ಉದಾಹರಣೆಗೆ ಪತಿಪತ್ನಿಯರು,  ಅಂತೆಯೇ ಸ್ನೇಹಿತರು.  ಗುರುಶಿಷ್ಯರ ಸಂಬಂಧವೂ ಹೀಗೆಯೇ-ಒಮ್ಮೆ ಹುಟ್ಟಿಕೊಂಡರೆ ಮುಗಿಯಿತು.  ಆ ಸಂಬಂಧಕ್ಕೆ ಹುಟ್ಟುವುದಕ್ಕೂ ಮೊದಲು ಆಸ್ತಿತ್ವವಿಲ್ಲ.  ಆದರೆ ಒಮ್ಮೆ ಹುಟ್ಟಿಕೊಂಡುಬಿಟ್ಟರೆ ಆಮೇಲೆ ಸಾವಿಲ್ಲ.  ಆಮೇಲೆ ಅದು ಅಮರ.  ಗುರುವು ಶಿಷ್ಯನನ್ನು ಪರಿಗ್ರಹಿಸುವುದಕ್ಕೆ ಮುಂಚೆ ಅಥವಾ ವಿದ್ಯಾರ್ಥಿಯು ಬೋಧಕನನ್ನು ಗುರುವಾಗಿ ಒಪ್ಪುವುದಕ್ಕೆ ಮುಂಚೆ ಅವರು ಗುರುಶಿಷ್ಯರಲ್ಲ.  ಅಲ್ಲೊಂದು ಸಂಬಂಧವೂ ಇಲ್ಲ.  ಆದರೆ ಒಮ್ಮೆ ಹುಟ್ಟಿತೋಅಲ್ಲಿಗೆ ಅದು ಪ್ರಾರಂಭವಾಯಿತು ಅಷ್ಟೇ.
ಗುರುವು
ಲೋಕದಲ್ಲಿ ಕಲಿಯಲು ಕೋಟಿ ವಿಷಯಗಳಿವೆ.  ಆದರೆ ಅವುಗಳನ್ನು ಕಲಿಸುವವರೆಲ್ಲ ಗುರುಗಳಲ್ಲ.  ಕಲಿಯುವವನು ಶಿಷ್ಯನೂ ಅಲ್ಲ.  ಈ ಗುರು’ ಎಂಬುದೂ ಶಿಷ್ಯ’ ಎಂಬುಂದೂ ವಿಶೇಷಾರ್ಥವನ್ನುಳ್ಳ ಪಾರಿಭಾಷಿಕ ಶಬ್ದಗಳು. ಯಾವನು ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಸಾಧಕನ ಕೈಹಿಡಿದು ನಡೆಸುತ್ತಾನೆಯೋ ಮತ್ತು ಅಂತಿಮವಾಗಿ ತತ್ತ್ವಸಾಕ್ಷಾತ್ಕಾರವನ್ನು ಮಾಡಿಸುತ್ತಾನೆಯೋ ಅವನೇ ಗುರುವು ಮತ್ತು ಅಂತಹ ಸಾಧಕನು ಮಾತ್ರ ಶಿಷ್ಯ.  ಆ ಮಾರ್ಗದಲ್ಲಿ ಗುರುವಾದವನು ಕೊಡುವ ಮಾರ್ಗದರ್ಶನವೇನಿದೆಯೋ ಅದುವೇ ವಿದ್ಯೆ.  ಇದನ್ನೇ ಕೃಷ್ಣನು ಗೀತೆಯಲ್ಲಿ ಅಧ್ಯಾತ್ಮ ವಿದ್ಯಾ ವಿದ್ಯಾನಾಂ- ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆಯೇ ನಾನು ಎಂದಿದ್ದಾನೆ.
ಕೇವಲ ಮೋಕ್ಷವನ್ನೇ ಜೀವನದ ಏಕ ಗುರಿಯಾಗಿ ಇಟ್ಟುಕೊಂಡ ಜೀವಿಯ ತನ್ನ ಕೈ ಹಿಡಿದು ಆ ಮಾರ್ಗಕ್ಕೆ ಹತ್ತಿಸುವಂತೆ ಗುರುವಾದವನಲ್ಲಿ ಬೇಡಿಕೊಳ್ಳುತ್ತಾನೆ.  ಹಾಗೆ ಬೇಡುವವನಲ್ಲಿ ಸಾಮರ್ಥ್ಯವಿದ್ದುದೇ ಆದರೆ ಗುರುವು ಅವನನ್ನು ಒಪ್ಪುತ್ತಾನೆ.  ಅವನನ್ನು ಶಿಷ್ಯನಾಗಿ ಪರಿಗ್ರಹಿಸುತ್ತಾನೆ.  ಆ ಕ್ಷಣವೊಂದು ಅಮೃತಘಳಿಗೆ.  ಆ ಮುಹೂರ್ತದಿಂದ ಅವರಿಬ್ಬರೂ ಗುರುಶಿಷ್ಯರಾಗುತ್ತಾರೆ.   ನೆನಪಿಡಬೇಕಾದ ಅಂಶವೆಂದರೆ ಇಲ್ಲಿ ಶಿಷ್ಯನು ಸಾಧಕನೂಗುರುವು ಈಗಾಗಲೇ ಸಾಧನೆಯ ಕೊನೆಮುಟ್ಟಿದ ಸಿದ್ಧನೂ ಆಗಿರುತ್ತಾನೆಂಬುದು.  ಇಬ್ಬರೂ ಸಾಧಕರೇ ಆಗಿದ್ದರೆ ಅದರಲ್ಲಿ ಒಬ್ಬನು ಗುರುವಾಗಲಾರ ಏಕೆಂದರೆ ಒಟ್ಟಿಗೇ ಇಬ್ಬರು ಈಜು ಕಲಿಯುತ್ತಿರುವವರಲ್ಲಿ ಒಬ್ಬನು ಈಜು ಕಲಿಸುವವನಾದರೆ ಆಗುವುದೇನು?
ದೀರ್ಘಬಂಧು
ನಿಜವಾದ ಗುರುವಾದರೆ ಒಮ್ಮೆ ಒಬ್ಬನನ್ನು ಶಿಷ್ಯನಾಗಿ ಪರಿಗ್ರಹಿಸಿದರೆ ಆಯಿತುಶಿಷ್ಯನು ಕೊನೆಮುಟ್ಟುವವರೆಗೂ ಅವನು ಗುರುವೇ.  ನೂರು ಜನ್ಮಗಳಾಗಲಿ ಅವನು ಶಿಷ್ಯನ ಬೆನ್ನುಬಿಡುವುದಿಲ್ಲ.
ತಾಯಿಮೀನು ತನ್ನ ಮರಿಯನ್ನು ಕಾಯುವಂತೆ ಬೇರೆಬೇರೆ ರೀತಿಗಳಲ್ಲಿ ರಕ್ಷಣೆಯನ್ನು ಕೊಟ್ಟುಬಿಡುತ್ತಾನೆ.  ಆದ್ದರಿಂದಲೇ ಅವನನ್ನು ದೀರ್ಘಬಂಧು ಎಂದು ಸಾಧಕಲೋಕವು ಕೃತಜ್ಞತೆಯಿಂದ ಭಾವಿಸುತ್ತದೆ.  ಗುರುಶಿಷ್ಯರ ಬಂಧವನ್ನು ಬಿಟ್ಟು ಜಗತ್ತಿನ ಮತ್ತಾವ ಬಂಧವೂ ಇಷ್ಟು ದೀರ್ಘವಾಗಿರುವುದಿಲ್ಲ ಎಂಬುದು ವಿಶೇಷ.  ಅಂತಹ ಕರುಣಾಮಯನಾದ ದೀರ್ಘಬಂಧುವಿಗೆ ನಮೋ ನಮಃ
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ


To know more about Astanga Yoga Vijnana Mandiram (AYVM) please visit our Official Website, Facebook and Twitter pages