Sunday, October 7, 2018

ಭುವನತ್ರಯಗಳೇ ನನ್ನ ದೇಶ (Bhuvanatrayagale nanna desha)

ಯಾವುದು ನಿಮ್ಮ ದೇಶ ? ಭಾರತೀಯರಿಗೆ ಭಾರತ, ಇಂಗ್ಲೆಂಡ್ ನವರಿಗೆ ಇಂಗ್ಲೆಂಡ್, ಅಮೆರಿಕನ್ನರಿಗೆ ಅಮೇರಿಕ, ಜಪಾನೀಯರಿಗೆ ಜಪಾನ್. ಇದರಲ್ಲೇನು ವಿಶೇಷ? ಯಾವ ನೆಲ ನಮ್ಮ ಹುಟ್ಟು, ಬೆಳವಣಿಗೆಗೆ ಕಾರಣವಾಯಿತೋ ಆ ಭೂಮಿಯನ್ನು ನನ್ನ ದೇಶ ಎನ್ನುವುದು ಸರ್ವೇ ಸಾಮಾನ್ಯ. ಸ್ವದೇಶ ಎಂದರೆ ನಾವು ಬಾಳನ್ನು ಕಟ್ಟಿಕೊಂಡಿರುವ ನಾಡು. ನಾವು ವಾಸಿಸುವ ಭೂಮಿ.ತಮ್ಮ ದೇಶದ ವಿಷಯದಲ್ಲಿ  ನಿಷ್ಠೆ,ಪ್ರೀತಿ, ಎಲ್ಲ ದೇಶದವರಲ್ಲೂ ಇರುವುದು ಸ್ವಾಭಾವಿಕ.
ಆದರೆ ನಮ್ಮ ಶೀರ್ಷಿಕೆಯಲ್ಲಿ ಭುವನತ್ರಯಗಳೇ ನನ್ನ ದೇಶ- ಸ್ವದೇಶೋ ಭುವನತ್ರಯಂ  ಎಂಬ ಮಾತು ಬಂದಿದೆ. ಇದು ಈ ದೇಶದ ಮಹರ್ಷಿಗಳ ಮಾತು. ಬರಿಯ ನಾವು ವಾಸಿಸುವ ಭೌಗೋಳಿಕ ಪ್ರದೇಶವಷ್ಟೇ ಅಲ್ಲ, ಮೂರೂ ಲೋಕಗಳೂ ನಮ್ಮ ದೇಶ ಎಂದಿದ್ದಾರೆ. ಹೇಗೆ ಇದು ಹೊಂದಿಕೊಳ್ಳುತ್ತದೆ? ಇದು ಹೃದಯ ವೈಶಾಲ್ಯದ ಪ್ರದರ್ಶನ ಮಾತ್ರವೇ? ಅಥವಾ ಬರಿಯ ದೊಡ್ಡ ಮಾತೇ? ಅಥವಾ ಈ ಮಾತಿನ ಹಿಂಬದಿಯಲ್ಲಿ ಏನಾದರೂ ತಿರುಳಿದೆಯೇ ಎಂದು ವಿವೇಚಿಸಬೇಕಾಗಿದೆ.
ಇಲ್ಲಿ “ಸ್ವ” ಎಂದರೆ ನಮ್ಮನ್ನು ಆಳುವ ಜೀವ ಶಕ್ತಿ. ನಾವು ಜೀವಂತವಾಗಿರಲು, ಮಾತನಾಡಲು, ಅಷ್ಟೇ ಏಕೆ ಉಸಿರಾಡಲೂ ಸಹ ನಮ್ಮ ಹಿಂಬದಿಯ ಜೀವ ಶಕ್ತಿಯ ಅವಲಂಬನ ಬೇಕಾಗುತ್ತದೆ. ಜೀವ ಇದ್ದರೆ ಎಲ್ಲವೂ.ಮಹರ್ಷಿಗಳ ಅನುಭವಿಕ ಜ್ಞಾನದಂತೆ ಈ  ಚೇತನದ ವ್ಯಾಪ್ತಿ ಮೂರೂ ಲೋಕಗಳಲ್ಲಿ ಹರಡಿದೆ. ಯಾವುದು ಮೂರು ಲೋಕ? ಹೊರಗೆ ಕಾಣುವ ಸ್ಥೂಲ-ಭೂ:  ಈ ಸ್ಥೂಲ ಲೋಕಕ್ಕೆ ನೆಲೆಯಾಗಿ ಹಿಂದಿರುವ ಸೂಕ್ಷ್ಮ ಲೋಕ-ಭುವಃ. ದೇವತೆಗಳ ಸಾಮ್ರಾಜ್ಯ.ಅದಕ್ಕೂ ನೆಲೆಯಾಗಿ ಸರ್ವ ಮೂಲವಾದ ಪರಬ್ರಹ್ಮ  ಲೋಕವೇ “ಪರಾ” - ಸುವಃ. ಜೀವ ಶಕ್ತಿಯು ತಪಸ್ಯೆಯಿಂದ ಈ ಮೂರೂ ಲೋಕಗಳನ್ನು ವ್ಯಾಪಿಸುವಂತಾದಾಗ ಬಂದ ಮಾತಿದು.
 ಹೀಗೆ ಮೂರೂ ಲೋಕಗಳಲ್ಲಿ ಸಂಚರಿಸಿ ಅದರ ಆನಂದವನ್ನು ಒಳಗೆ ಅನುಭವಿಸಿದ ಮಹರ್ಷಿಗಳು ತಾವಿರುವ ನೆಲೆಯನ್ನು, ಕೇವಲ ಭೌತಿಕವಾದ ಕೆಲವು ಭೂ ಭಾಗಗಳಲ್ಲಿ ಮಾತ್ರ ಕಾಣಲಿಲ್ಲ. ಈ ಭೌತಿಕವಾದ ಭೂ ಭಾಗಗಳಿಗೂ ಯಾವುದು ಅಧಾರವಾಗಿದೆಯೋ, ನೆಲೆಮನೆಯಾಗಿದೆಯೋ, ಅಂತಹ ಪರಬ್ರಹ್ಮ ವಸ್ತುವು ವ್ಯಾಪಿಸಿದ ದೇಶವೆಲ್ಲವೂ ಸ್ವದೇಶವೇ. ಅದು ಅವರಿಗೆ ಮೂರು ಲೋಕಗಳಲ್ಲೂ ವ್ಯಾಪಿಸಿದ ಬದುಕು. ಎಂದೇ ಸ್ವದೇಶೋ ಭುವನತ್ರಯಂ ಎಂಬ ಅನುಭವದ ಮಾತು.
ಕೇವಲ ಇಂದ್ರಿಯ ಕ್ಷೇತ್ರದಲ್ಲಿ ಮಾತ್ರವೇ ಓಡಾಡುವ ನಮಗೆ ಇಂದ್ರಿಯಗಳಿಗೂ ಹಿಂದೆ ಇದ್ದು ಚೈತನ್ಯವನ್ನೀಯುವ ಅತೀಂದ್ರಿಯ ಕ್ಷೇತ್ರದ, ಸೂಕ್ಷ್ಮ, ಪರಾ ದೃಷ್ಟಿಗಳ  ಅರಿವಿಲ್ಲ. ಹಾಗೆಂದೇ ನಾವು ಪರಿಮಿತ ಕ್ಷೇತ್ರವನ್ನು ನಮ್ಮ ದೇಶ ಎಂದು ಗುರುತಿಸುತ್ತೇವೆ. ಆದರೆ ಸರ್ವವ್ಯಾಪಿಯಾದ ಪರಮಾತ್ಮ ಸುಖದಲ್ಲಿ ರಮಿಸುವ ತಪಸ್ವಿಗಳು ಅಂತಹ ಅಪರಿಮಿತವಾದ ಕ್ಷೇತ್ರವನ್ನೇ ತಮ್ಮ ದೇಶವೆಂದುದು ಸಹಜವಾಗಿದೆ.ಅಂತಹ ಒಳ ಅನುಭವವನ್ನು ಹೊತ್ತು ಬಂದ ಮಾತಾಗಿದೆ-“ಸ್ವದೇಶೋ ಭುವನತ್ರಯಂ” ಇದು ಕೇವಲ ಭಾವನಾತ್ಮಕವಾದ ಮಾತಲ್ಲ.ಅದನ್ನು ಅನುಭವಿಸಿ ಆನಂದಿಸಿದವರ ವಾಸ್ತವಿಕವಾದ ಘೋಷಣೆ.
ಇದನ್ನೇ ಪುಷ್ಟೀಕರಿಸುವ ಸುಭಾಷಿತವೊಂದಿದೆ- “ಅಯಂ ನಿಜಃ ಪರೋವೇತಿ ಗಣನಾ ಲಘು ಚೇತಸಾ| ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ”|| ಎಂದರೆ “ಇದು ನನ್ನದು, ಇದು ಪರರದು ಎಂಬುದಾಗಿ ಸಣ್ಣ ಮನಸ್ಸಿನವರು ಯೋಚಿಸುತ್ತಾರೆ. ಆದರೆ ಎಲ್ಲರಲ್ಲೂ, ಎಲ್ಲದರಲ್ಲೂ ಸರ್ವಮೂಲನಾದ ಭಗವಂತನನ್ನೇ ನೋಡುವ ಉದಾರ ಚರಿತರಿಗೆ ವಿಶ್ವವೆಲ್ಲವೂ ತಮ್ಮ ಕುಟುಂಬವೆಂದೇ ಎನ್ನಿಸುವುದು ಸ್ವಾಭಾವಿಕ.
ಜಗತ್ತನ್ನೆಲ್ಲ ಈ ಉದಾರ ಭಾವದಿಂದ ನೋಡುವಂತಾಗಬೇಕಾದರೆ ಎಲ್ಲವನ್ನೂ ವ್ಯಾಪಿಸಿರುವ ಪರಮ ಸತ್ಯದ ಅನುಭವವಾಗಬೇಕು. ಅಂತಹ ಅನುಭವವನ್ನೇ  ಜೀವನದ ಪರಮ ಲಕ್ಷ್ಯವಾಗಿ ಕಂಡು ಎಲ್ಲರ ಬಾಳೂ ಆ ಆನಂದದ ಸೆಲೆಯಾಗಬೇಕು ಎಂಬ ನಿಟ್ಟಿನಲ್ಲಿ ಮನಸ್ಸನ್ನು, ಮನೆಯನ್ನು, ನಾಡನ್ನು ಕಡೆಗೆ ಇಡೀ ರಾಷ್ಟ್ರವನ್ನು ಕಟ್ಟಿ ಬೆಳೆಸಿದ ಭೂಮಿ ನಮ್ಮ ಭಾರತ. ಇಂತಹ ಅಂತರಂಗದ ಅನುಭವದಿಂದ ಬಂದ  ವ್ಯಾಪಕವಾದ ದೃಷ್ಟಿಯೇ “ಸ್ವದೇಶೋ ಭುವನತ್ರಯಂ “
 ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.