ಲೇಖಕರು: ನಾಗರಾಜ ಗುಂಡಪ್ಪ
ಜಾಗತೀಕರಣದ ಪ್ರಭಾವದಿಂದ ಸಂಸ್ಕೃತಿಗೆ ಬುನಾದಿಯಾಗಿರುವ ಅನೇಕ ವಿಚಾರಗಳು ಮಥನಗೊಳ್ಳುತ್ತಿದ್ದು ಅವುಗಳಲ್ಲಿ ಸಭ್ಯತೆ ಬಗೆಗಿನ ಚಿಂತನೆಯೂ ಒಂದಾಗಿದೆ. ಉದಾಹರಣೆಗೆ, ಉಡುಪುಗಳ ವಿಷಯವು ಟಿ.ವಿ.ಗಳಲ್ಲಿ ಚರ್ಚೆಗೆ ಬಂದಾಗ ಆಧುನಿಕ ವಿಚಾರವಾದಿಗಳು ಯಾವ ರೀತಿಯ ಉಡುಪು ಸಭ್ಯ ಎಂದು ಹೇಗೆ ನಿಶ್ಚಯಿಸುತ್ತೀರಿ? ಸಭ್ಯತೆಗೆ ಮಾನದಂಡವೇನು? ಎನ್ನುವಂತಹ ಪ್ರಶ್ನೆಗಳನ್ನು ಮುಂದಿಡುತ್ತಾರೆ. ಈ ಬಗ್ಗೆ ಸ್ಪಷ್ಟವಾದ ಉತ್ತರ ಬರದಿದ್ದರೆ, ಸಭ್ಯತೆ-ಅಸಭ್ಯತೆಗಳ ನಿರ್ಧಾರ ವೈಯಕ್ತಿಕ ಮತ್ತು ಯಾರೂ ಸಭ್ಯತೆಯನ್ನು ಸಾರ್ವತ್ರಿಕವಾಗಿ ಹೇರಬಾರದು ಎಂದು ಹೇಳಿ ಸುಸಂಸ್ಕೃತ ಭಾವನೆಗಳನ್ನು ಸಡಿಲಗೊಳಿಸಿ ಸ್ವಚ್ಚಂದ ಪ್ರವೃತ್ತಿಯನ್ನು ಪ್ರಬಲಗೊಳಿಸುತ್ತಾರೆ. ಈ ಪ್ರವೃತ್ತಿ ಮುಂದುವರೆದು ಬರೇ ಪ್ರಶ್ನೆಗಳೇ ಉಳಿದುಕೊಂಡು ಉತ್ತರಗಳು ಬಾರದಿದ್ದರೆ, ಸಂಸ್ಕೃತಿಗೆ ಉಳಿಗಾಲವೇ ಇರುವುದಿಲ್ಲ. ಹೀಗಾಗಿ, ಸಭ್ಯತೆಯ ಮಾನದಂಡವೇನು? ಅದನ್ನು ನಿಶ್ಚಯಿಸುವುದು ಹೇಗೆ? ಎನ್ನುವ ಬಗ್ಗೆ ಸಾರ್ವತ್ರಿಕವಾಗಿ ಒಪ್ಪುವಂತಹ ವಿಚಾರವು ಬಹಳ ಅವಶ್ಯಕವಾಗಿದೆ.
ಭಾರತೀಯ ಸಂಸ್ಕೃತಿಯು ಹೇಗೆ ಆಳವಾಗಿದ್ದು ಕಾರ್ಯಕಾರಣಬದ್ಧವಾಗಿ ವಿಸ್ತಾರವಾಗಿದೆಯೋ ಹಾಗೆಯೇ ಸಂಸ್ಕೃತಿಯ ಮತ್ತೊಂದು ಮುಖವಾದ ಸಂಸ್ಕೃತ ಭಾಷೆಯೂ ಸಹ ಕಾರ್ಯಕಾರಣಬದ್ಧತೆಯನ್ನು ಹೊಂದಿದ್ದು, ವಿಶ್ಲೇಷಣೆಗೆ ಚೆನ್ನಾಗಿ ಕೊಟ್ಟುಕೊಳ್ಳುತ್ತದೆ. ಆದುದರಿಂದ ಸಭ್ಯತೆ ಪದದ ವಿಶ್ಲೇಷಣೆಯೇ ಸಭ್ಯತೆಯ ಬಗ್ಗೆ ನಿಶ್ಚಯವಾದ ಅಭಿಪ್ರಾಯವನ್ನು ಕೊಡಬಲ್ಲದು.
ಸಭ್ಯ, ಅಸಭ್ಯ ಪದಗಳು ಸಭಾ ಎನ್ನುವ ಪದದಿಂದ ವಿಸ್ತಾರವಾಗಿವೆ. ಯಾವ ನಡವಳಿಕೆ ಸಭೆಗೆ ಹೊಂದುತ್ತದೆಯೋ ಅದು ಸಭ್ಯ ಮತ್ತು ಹೊಂದದಿರುವುದು ಅಸಭ್ಯ. ಇನ್ನು ಸಭಾ ಎಂದರೇನು ಎಂದು ಪರಿಶೀಲಿಸಿದಲ್ಲಿ, ಸಂಸ್ಕೃತದಲ್ಲಿ 'ಭಾ' ಎಂದರೆ ಬೆಳಕು ಅಥವಾ ಪ್ರಕಾಶ ಎಂದರ್ಥ ಮತ್ತು ಸಭಾ ಎಂದರೆ ಬೆಳಕಿನಿಂದೊಡಗೂಡಿರುವುದು ಅಥವಾ ಪ್ರಕಾಶವನ್ನು ಉಂಟು ಮಾಡುವುದು ಎಂದರ್ಥವಾಗುತ್ತದೆ. ವಿಶ್ಲೇಷಣೆಯನ್ನು ಇನ್ನೂ ಪರಿಷ್ಕರಿಸಿದರೆ, ವಿಷಯವನ್ನು ಪ್ರಕಾಶಕ್ಕೆ ತರುವ ಉದ್ದೇಶದಿಂದ ಕೂಡಿರುವ ಇಬ್ಬರು ಅಥವಾ ಹೆಚ್ಚಿನ ಜನರ ಸ್ತೋಮವನ್ನು ಸಭಾ ಎಂದು ಹೇಳಬಹುದು.
ಹೀಗೆ ಸಭ್ಯತೆ ಎಂದರೆ ಯಾವ ವಿಷಯಪ್ರಕಾಶಕ್ಕಾಗಿ ಸಭೆಯು ಸೇರಿದೆಯೋ ಆ ಉದ್ದೇಶಕ್ಕೆ ಪೋಷಕವಾದ ನಡವಳಿಕೆಯನ್ನಿಟ್ಟುಕೊಳ್ಳುವುದು ಎಂದಾಗುತ್ತದೆ. ಈ ನೇರದಲ್ಲಿ ವಸ್ತ್ರಧಾರಣೆಯ ಉದಾಹರಣೆಯನ್ನು ಗಮನಿಸುವುದಾದರೆ, ಒಮ್ಮೆ ಮಹಾತ್ಮರೊಬ್ಬರನ್ನು ಅವರ ಶಿಷ್ಯರು “ಇನ್ನೊಬ್ಬರೆದುರು ವಿವಸ್ತ್ರರಾಗುವುದು ಸಭ್ಯವೇ ಅಥವಾ ಅಸಭ್ಯವೇ” ಎಂದು ಪ್ರಶ್ನಿಸಿದಾಗ ಆ ಮಹಾತ್ಮರು “ಸಭೆ ಯಾವುದು ಹೇಳೀಪ್ಪಾ ನಂತರ ಸಭ್ಯವೇ ಅಲ್ಲವೇ ಎನ್ನುವುದನ್ನು ನಿಶ್ಚಯಿಸೋಣ” ಎಂದು ಹೇಳಿ “ವೈದ್ಯ-ರೋಗಿಯ ಸಭೆಯಲ್ಲಿ ವಸ್ತ್ರವನ್ನು ಕಳಚುವುದು ಅಸಭ್ಯವಲ್ಲಾಪ್ಪಾ” ಎಂದು ಉತ್ತರಿಸಿದರು. ಅಂದರೆ ಶಸ್ತ್ರಚಿಕಿತ್ಸಾಕೊಠಡಿಯೊಂದರಲ್ಲಿ ರೋಗಿ, ವೈದ್ಯರು, ಸಹಾಯಕರು, ರೋಗಮೂಲ ಹಾಗೂ ಚಿಕಿತ್ಸಾವಿಧಾನವನ್ನು ಪ್ರಕಾಶಕ್ಕೆ ತರಲು ಸಭೆ ಸೇರಿರುವಾಗ, ರೋಗಿಯು ವಿವಸ್ತ್ರನಾಗಬೇಕಾದಲ್ಲಿ ಅದು ಸಭ್ಯವೇ ಆಗುತ್ತದೆ. ಈ ತರ್ಕವನ್ನು ನಾವು ಮುಂದುವರೆಸಿ ಅಸಭ್ಯತೆಯ ಉದಾಹರಣೆಯನ್ನು ಗಮನಿಸುವುದಾದರೆ, ಶಾಲಾ-ಕಾಲೇಜು-ಆಫೀಸುಗಳಲ್ಲಿ ದೇಹ ಸೌಂದರ್ಯವನ್ನು ಪ್ರದರ್ಶಿಸುವ ವಸ್ತ್ರಗಳನ್ನು ಧರಿಸುವುದು ಅಸಭ್ಯವೆನ್ನಿಸಿಕೊಳ್ಳುತ್ತದೆ. ಏಕೆಂದರೆ, ಶಾಲಾ-ಕಾಲೇಜುಗಳು ಪಾಠದ ವಿಷಯಗಳನ್ನು ಪ್ರಕಾಶಕ್ಕೆ ತರುವ ಉದ್ದೇಶವಿರುವ ಸಭೆಗಳಾದುದರಿಂದ ಅಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ದೇಹ ಸೌಂದರ್ಯ ಪ್ರದರ್ಶನ ಸಭೆಗೆ ಪೋಷಕವಲ್ಲ. ಹೀಗಾಗಿ ದೇಹಸೌಂದರ್ಯವನ್ನು ಪ್ರದರ್ಶಿಸುವ ಉಡುಪುಗಳು ಶಾಲಾ-ಕಾಲೇಜುಗಳಲ್ಲಿ ಅಸಭ್ಯವಾಗುತ್ತದೆ.
ಹೀಗೆ, ಭಾಷಾ ವಿಶ್ಲೇಷಣೆಯ ಮೂಲಕ ಸಭ್ಯತೆಯು ವ್ಯಕ್ತಿಯ ಸ್ವೇಚ್ಛೆಗೆ ಬಿಟ್ಟ ವಿಷಯವಲ್ಲ, ಸಭೆಯ ಉದ್ದೇಶವೇ ಸಭ್ಯತೆಯನ್ನು ನಿಶ್ಚಯಿಸುವ ಮಾನದಂಡ ಎಂದು ಸಿದ್ಧವಾಗುತ್ತದೆ. ಈ ವ್ಯಾಖ್ಯಾನವನ್ನು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಹ ಅನ್ವಯಿಸಿಕೊಂಡು ಸಭ್ಯಾಸಭ್ಯತೆಗಳನ್ನು ನಿಶ್ಚಯಿಸಬಹುದು. ಹೀಗೆ, ಸಭ್ಯಾಸಭ್ಯತೆಯ ಚಿಂತನೆಯು ಆಳವಾಗಿ ರೂಢಿಸಿಕೊಂಡು ಸಮಾಜವನ್ನು ಸುವ್ಯವಸ್ಥಿತವಾಗಿಯೂ ಸುಂದರವಾಗಿಯೂ ಇಡಬಲ್ಲ, ಮಹರ್ಷಿಗಳ ಅಮೂಲ್ಯ ಕೊಡುಗೆಯಾಗಿದೆ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.