Saturday, October 13, 2018

ಗಂಗೆ ಗೌರಿಯರು ಸವತಿಯರೇ? (Gange gauriyaru savatiyare ?)

ಲೇಖಕರುಸುಬ್ರಹ್ಮಣ್ಯ ಸೋಮಯಾಜಿಬೆಂಗಳೂರು

ಪುರಾಣದ ಕಥೆಗಳಲ್ಲಿ ಗಂಗೆ ಗೌರಿ ಇಬ್ಬರು ಶಿವನ ಪತ್ನಿಯರು ಎಂಬ ಚಿತ್ರಣವಿದೆ.ಅದನ್ನೇ ಕಾವ್ಯಗಳಲ್ಲಿ , ಚಲನ ಚಿತ್ರಗಳಲ್ಲಿ ಸವತಿಯರಾಗಿ ತೋರಿಸುತ್ತಾರೆ.  ನಾವು  ಸಮಾಜದಲ್ಲಿ ಸವತಿಯರ ಮಾತ್ಸರ್ಯ, ಸ್ಪರ್ಧೆ,ಜಗಳಗಳು ಇವನ್ನೆಲ್ಲಾ ನೋಡಿದ್ದೇವೆ.ನಮ್ಮ ಈ ಅರಿವನ್ನು  ಗಂಗೆ ಗೌರಿಯರ ವಿಷಯದಲ್ಲೂ  ಭಾವಿಸುವುದಾಗಿದೆ. ಸಮಾಜದಲ್ಲಿ ಕಾಣುವ ಪತಿಗಳಂತೆ ಇವರಿಬ್ಬರನ್ನು ಸಂಭಾಳಿಸುವುದು ಶಿವನಿಗೆ ಕಷ್ಟವಾಗಿತ್ತು ಎಂದು ಭಾವಿಸುವಂತೆ ಚಿತ್ರಗಳಲ್ಲಿ,ನಾಟಕಗಳಲ್ಲಿ,ಕಾವ್ಯಗಳಲ್ಲಿ ಬಿಂಬಿಸಲಾಗಿದೆ. ಆದರೆ ದೇವತೆಗಳು ನಮ್ಮಂತೆ ರಸ್ತೆಗಳಲ್ಲಿ ಓಡಾಡುವ ಇಂದ್ರಿಯ ಕ್ಷೇತ್ರದ ಬದುಕುಗಳಲ್ಲ.ಎಲ್ಲ ಭೂತಗಳ ಅಂತರಂಗದಲ್ಲಿ ಪ್ರಕಾಶರೂಪವಾಗಿ  ಕೆಲಸ ಮಾಡುವ,ಕೇವಲ ಜ್ಞಾನದ ಕಣ್ಣುಗಳಿಗೆ ಮಾತ್ರವೇ ಗೋಚರಿಸುವ ಶಕ್ತಿ ವಿಶೇಷಗಳು ಎಂಬುದನ್ನು ನಾವು ಮರೆಯ ಬಾರದು.
ಗಂಗೆ ಗೌರಿಯರ ನೈಜ ಪರಿಚಯವಾದಾಗಲೇ ನಮ್ಮ ಭೌತಿಕ ಭಾವವು ದೈವಿಕ ಭಾವದಲ್ಲಿ ಪರ್ಯವಸಾನವಾದೀತು.
ಭಾದ್ರಪದಮಾಸದ ಶುಕ್ಲಪಕ್ಷದ ತದಿಗೆಯಂದು ಸಂಭ್ರಮದಿಂದ ಸ್ವರ್ಣಗೌರೀ ಪೂಜೆಯನ್ನು ಆಚರಿಸುತ್ತೇವೆ.ಜಗದಾದಿ ದಂಪತಿಗಳಾದ ಪಾರ್ವತೀಪರಮೇಶ್ವರರ ಮಕ್ಕಳೇ ನಾವೆಲ್ಲರೂ.ಅವರದಲ್ಲದ ಯಾವುದೂ ಸೃಷ್ಟಿಯಲ್ಲಿಲ್ಲ ಎಂಬುದು ಅವರನ್ನು ತಪಸ್ಸಿನ ಕಣ್ಣುಗಳಿಂದ ಕಂಡ ಜ್ಞಾನಿಗಳ ಅನುಭವದ ಮಾತು.ಹಾಗೆಂದೇ ತಾಯಿ ಪಾರ್ವತಿಯ ಪೂಜೆ ನಮ್ಮೆಲ್ಲರಿಗೂ ಪರಮ ಶ್ರೇಯಸ್ಕರ.
ಶಂಕರ ಭಗವತ್ಪಾದರು ಅವಳ ಸ್ವರೂಪವನ್ನು ಹೇಳುವಾಗ “ಚಾಂಪೇಯ ಗೌರಾರ್ಧ ಶರೀರಕಾಯೈ “ ಎಂದಿದ್ದಾರೆ. ಅವಳದು ಸಂಪಿಗೆ ಹೂವಿನ ಬಣ್ಣ. ಗೌರ ಎಂದರೆ ಸಂಪಿಗೆ ಅಥವಾ ಬಿಳಿಯ ಬಣ್ಣ.ಎಂದೇ ಅವಳಿಗೆ ಗೌರೀ ಎಂಬ ಹೆಸರು.ಆಕೆಯು  ಸಂಹಾರಕಾರ್ಯ ಮಾಡುವಾಗ ಕಾಳಿ.ವಿದ್ಯಾಪ್ರದಾನ ಮಾಡುವಾಗ ಶ್ಯಾಮಲಾಮ್ಬಿಕಾ. ಹಾಗೆಯೇ ಸೌಮಾಂಗಲ್ಯ-ಸೌಭಾಗ್ಯ-ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣ್ಣದ, ಕೆಲವೊಮ್ಮೆ ಹಿಮ-ಶುಭ್ರವರ್ಣದ ಗೌರೀ.ತ್ರಿಲೋಕವ್ಯಾಪಿಯಾಗಿ ಜ್ಞಾನಪ್ರವಾಹವಾದಾಗ  ಗಂಗೆ.
ಹೇಗೆ ಒಬ್ಬನೇ ಪರಮಾತ್ಮನು ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಬ್ರಹ್ಮ-ವಿಷ್ಣು-ಮಹೇಶ್ವರ ರೂಪವನ್ನು ತಾಳುತ್ತಾನೆಯೋ ಹಾಗೆಯೇ  ಒಬ್ಬಳೇ ಪರಾ ಪ್ರಕೃತಿರೂಪಿಣಿಯಾದ ತಾಯಿಯೇ ತಾನು ನಿರ್ವಹಿಸಬೇಕಾದ ಕೆಲಸಕ್ಕನುಗುಣವಾದ ನಾಮ-ರೂಪಗಳಿಂದ  ಅಲಂಕೃತೆಯಾಗುತ್ತಾಳೆ.ಸರಸ್ವತೀ-ಲಕ್ಷ್ಮೀ-ಪಾರ್ವತೀ ಈ ರೂಪಗಳೆಲ್ಲ ಆ ಮಹಾ ತಾಯಿಯದೇ.
ಗೌರೀ ಪೂಜೆಯ ಪರ್ವದಲ್ಲಿ ಪೂಜಿಸಲ್ಪಡುವ ಗೌರಿಯ ವಿಗ್ರಹವನ್ನು ಮಾಡುವುದಕ್ಕೆ ಬೇಕಾದ ಮಣ್ಣನ್ನು ಗಂಗೆಯಿಂದ ತರುವ ವಾಡಿಕೆ ಇದೆ.
ನಮ್ಮ ಪುರಾಣಗಳಲ್ಲಿ ಗಂಗೆ ಗೌರಿಯರು ಹಿಮವಂತನ ಪುತ್ರಿಯರು ಎಂದಿದೆ.ಗಂಗೆಯು ಹಿಮಾಲಯದಲ್ಲಿ ಹುಟ್ಟುವುದರಿಂದ ಹಾಗೆ ಕರೆಯಬಹುದು.ಹಾಗೆಯೇ ಗಂಗೆಯನ್ನು-ವಿಷ್ಣು ಪಾದದಿಂದ ಜನಿಸಿದವಳು,ಬ್ರಹ್ಮ ಕಮಂಡಲದ ತೀರ್ಥ,ಜಹ್ನು ಮಹರ್ಷಿಯ ಪುತ್ರಿ,ಭಗೀರಥನ ಪುತ್ರಿ-ಭಾಗೀರಥೀ ಎಂದೆಲ್ಲ ಆಯಾ ಕಥೆಗಳನ್ನು ಅನುಸರಿಸಿ ಕರೆಯುವುದನ್ನೂ ಕೇಳುತ್ತೇವೆ.
ಆದರೆ ತಾತ್ವಿಕವಾಗಿ ನೋಡಿದಾಗ ಗಂಗೆಯು ಬ್ರಹ್ಮವಿದ್ಯಾ ಪ್ರವಾಹವೇ ಆಗಿದೆ.ಆ ವಿದ್ಯಾ ಪ್ರವಾಹದ ಉಗಮ, ಭಗವಂತನ ಧಾಮವೇ.ಅಲ್ಲಿಂದಲೇ ಅದು ಲೋಕ ಕಲ್ಯಾಣಕ್ಕಾಗಿ ಹರಿದು ಬರುವುದು,ಪರಮೋನ್ನತವಾದ ಶಿಖರಗಳನ್ನು ಹೊಂದಿ ಯೋಗಿಗಳಿಗೆ ಧ್ಯಾನ ಭೂಮಿಯಾಗಿರುವ ಹಿಮವನ್ತನೂ ಪರಮಾತ್ಮನ ಪ್ರತಿನಿಧಿಯೇ ಆಗುತ್ತಾನೆ.ಹಾಗೆಯೇ ಬ್ರಹ್ಮಜ್ಞಾನಿಯ ಬಲಗಿವಿಯಿಂದ ವೇದವಿದ್ಯಾ ಮಾರ್ಗವಾಗಿ ಬಂದಾಗ ಆ ಮಹರ್ಷಿ ಪುತ್ರಿಯೂ ಹೌದು.ಅಂತಹ ಜ್ಞಾನ ಪ್ರವಾಹವನ್ನು ಮಹಾ ತಪಸ್ಸಿನ ಸಾಧನೆಯಿಂದ ಪಡೆದು ಲೋಕಕ್ಕೆ ವಿನಿಯೋಗಿಸಿದ ಮಹಾಯೋಗಿ ಭಗೀರಥ. ಈ ಎಲ್ಲ ವಿಷಯಗಳೂ ಗಂಗೆಯು ಜ್ಞಾನದ ಪ್ರವಾಹಕ್ಕೆ ಮತ್ತೊಂದು ಹೆಸರು ಎಂದೇ ಸಾರುತ್ತಿವೆ. “ತ್ರಿಭುವನ ಜನನೀ ವ್ಯಾಪಿನೀ ಜ್ಞಾನಗಂಗಾ” ಎಂದು ಶ್ರೀ ಶಂಕರರೂ ಸಾರುತ್ತಾರೆ. ಹಾಗೆಯೇ ಗೌರಿಯೂ ಸಹ ಶಂಕರಾರ್ಧ ಶರೀರಿಣಿಯಾಗಿ ಬ್ರಹ್ಮವಿದ್ಯಾಸ್ವರೂಪಿಣಿಯೇ ಆಗಿದ್ದಾಳೆ. ಇಬ್ಬರೂ ಶಿವ ಸ್ವರೂಪಿಯಾದ ಭಗವಂತನ ಜ್ಞಾನವನ್ನು ವಿಸ್ತರಿಸುತ್ತಿರುವ ಅವನ ಮಡದಿಯರೇ
ಹೀಗೆ ಗಂಗೆ ಗೌರಿ ಇಬ್ಬರೂ ಒಬ್ಬಳೇ ಪರಾ ಪ್ರಕೃತಿಯ ಎರಡು ಕವಲುಗಳು. ಇಬ್ಬರ ಸತ್ವ ಸಾರವೂ ಜ್ಞಾನವೇ. ಆದ್ದರಿಂದ ಅವರನ್ನು ಒಡಹುಟ್ಟಿದವರೆಂದು ಶಾಸ್ತ್ರಗಳು ಕರೆಯುತ್ತವೆ.ಅವರಲ್ಲಿ ಲೋಕದಲ್ಲಿ ಕಂಡಂತೆ ಸವತಿ ಮತ್ಸರಗಳು ಇತ್ಯಾದಿ ಭಾವಿಸುವುದು ಬಾಲಿಶ ಭಾವವಾಗುತ್ತದೆ. ಅದು ಸತ್ಯಕ್ಕೆ ಮಾಡುವ ಅಪಚಾರವೇ ಆಗುತ್ತದೆ. ಜ್ಞಾನಪ್ರವಾಹವಾಗಿ ಮೇಲಿಂದ ಕೆಳಗೆ ಇಳಿದುಬಂದಾಗ ಗಂಗೆ. ಜಗತ್ತಿನ ಇರುವಿಕೆಗೆ ಕಾರಣವಾಗಿ ಪರಶಿವನ ಆಶಯದಂತೆ ಸೃಷ್ಟಿವಿಸ್ತಾರ ಕಾರ್ಯದಲ್ಲಿ ಪ್ರವೃತ್ತಳಾದಾಗ ಗೌರೀ.

ಇಂದಿನ ನಮ್ಮ ಭಗವತಿ ಗೌರೀಪೂಜೆಯ ಶುಭ ಸಂದರ್ಭದಲ್ಲಿ ಅವರಿಬ್ಬರನ್ನೂ ಈ ಪವಿತ್ರಭಾವದಿಂದ ಪೂಜಿಸೋಣ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.