Sunday, October 7, 2018

ವಿದ್ಯಾವಿಹೀನಃ ಪಶುಭಿಃ ಸಮಾನಃ (Vidyavihinah pashubhihi samanaha)


ಲೇಖಕರು: ತಾರೋಡಿ ಸುರೇಶ, ಬೆಂಗಳೂರು

ವಿದ್ಯೆಯ ಮಹತ್ವವನ್ನು ವಿವರಿಸುವ ಋಷಿಗಳ ಮಾತಿದು. ವಿದ್ಯೆ ಇಲ್ಲದವನು ಪ್ರಾಣಿಗಳಿಗೆ ಸಮಾನ, ವಿದ್ಯೆಯೇ ಮಾನವನಲ್ಲಿರುವ ವಿಶೇಷ. ಅದೇ  ಮಾನವ ಮತ್ತು ಪ್ರಾಣಿಗಳಲ್ಲಿರುವ ಬಹುಮುಖ್ಯ ವ್ಯತ್ಯಾಸ. ಸುಖಮಯವೂ, ಶ್ರೇಷ್ಠವೂ ಆದ ಜೀವನಕ್ಕೆ ವಿದ್ಯೆ ಅತ್ಯಗತ್ಯ. ಆದ್ದರಿಂದಲೇ ವಿದ್ಯಾವಂತನಿಗೆ, ವಿದ್ಯೆಯಿಲ್ಲದ ಪ್ರಾಣಿಗಳು ಸಮನಾಗಲಾರವು. ಮತ್ತು ಪ್ರಾಣಿಗಳಿಗಿಂತ ಉತ್ತಮಬಾಳ್ವೆ ಬೇಕಿದ್ದಲ್ಲಿ ವಿದ್ಯಾವಂತನಾಗಲೇಬೇಕು ಎಂಬ ಸಂದೇಶ ಇಲ್ಲಿದೆ.   
ಪ್ರಾಣಿಗಳು ಪ್ರಕೃತಿಯ ಸೆಳೆತಕ್ಕನುಗುಣವಾಗಿ ಬಾಳುತ್ತವೆ. ಅವುಗಳಲ್ಲಿ ಹಸಿವು, ನಿದ್ರೆ, ಭಯ, ವಂಶಬೆಳೆಸುವಿಕೆ ಇವೆಲ್ಲವೂ ಸಹಜವಾಗಿ ನಡೆಯುತ್ತವೆ. ಅದಕ್ಕೆ ಬೇಕಾದ ಕೌಶಲ್ಯಗಳು ಜನ್ಮಜಾತವಾಗಿರುತ್ತವೆ. 
 ಗಾನಕ್ಕೆ ಕೋಗಿಲೆ, ನಾಟ್ಯಕ್ಕೆ ನವಿಲು, ಓಟಕ್ಕೆ ಚಿರತೆ, ದೇಹಬಲಗಳಿಗೆಲ್ಲ ಪ್ರಾಣಿಗಳೇ ಮಾದರಿಗಳು.  ಇಲ್ಲೆಲ್ಲಾ ಪ್ರಾಣಿಗಳದ್ದೇ ಮೇಲುಗೈ.
ಕೆಲವು ಪ್ರಾಣಿಗಳಲ್ಲಿ ಗಣಿತಪ್ರಜ್ಞೆಯನ್ನೂ ನೋಡಬಹುದು. ದುಂಬಿಯು ತನ್ನ ಗೃಹರಚನೆಗೆ ನಿರ್ದಿಷ್ಟ ಸಂಖ್ಯೆಯ ಎಲೆಗಳನ್ನು ಬಳಸುತ್ತದೆ. ಇರುವೆಗಳಲ್ಲಿ ಸೈನಿಕರದ್ದೇ ಒಂದು ಗುಂಪು. ತಾಯಿಪಕ್ಷಿಯು ಮರಿಗೆ ಹಾರುವುದನ್ನು ಕಲಿಸುವ ಶಿಕ್ಷಕಿ. ಮುಂಗುಸಿಯು ಮೂಲಿಕೆಗಳನ್ನು ತಿಂದು ವಿಷದಿಂದ ರಕ್ಷಿಸಿಕೊಳ್ಳುತ್ತದೆ. ಗಂಧಗ್ರಹಣ, ನಕ್ಷತ್ರಗಳ ನಕ್ಷೆಗಳಿಂದ ತಮ್ಮ ಮನೆಯನ್ನು ಪತ್ತೆಹಚ್ಚುತ್ತವೆ. ಮನೆಕಟ್ಟಲು ಮೇಸ್ತ್ರಿಗಾಗಿ ಕಾಯುವುದಿಲ್ಲ. ಕ್ರೃತಜ್ಞತೆ, ಸ್ವಾಮಿಭಕ್ತಿ ಇತ್ಯಾದಿ ಸದ್ಗುಣಗಳಲ್ಲಿಯೂ ಅವೇ ಮಾದರಿಗಳು.
 ಸಾಕುಪ್ರಾಣಿಗಳಿಗೆ ಮಸಾಲೆ ದೋಸೆ ತಿನ್ನಿಸಿ, ಕಾಫಿ ಕುಡಿಸಿ, ಚಡ್ಡಿ ಹಾಕಿಸಿ ಅಭ್ಯಾಸ ಮಾಡಿಸದಿದ್ದಲ್ಲಿ ಅವು ಸಾಮಾನ್ಯವಾಗಿ ಆರೋಗ್ಯದಿಂದ ಇರುತ್ತವೆ! ಈ ಹಿನ್ನೆಲೆಯಲ್ಲಿ ಪ್ರಾಣಿಗಳಲ್ಲಿ ವಿದ್ಯೆ ಇಲ್ಲವೆಂದು ಹೇಗೆ ಹೇಳಲಾದೀತು?
ಮಾನವನಾದರೋ ಓದಬಲ್ಲ. ಬರೆಯಬಲ್ಲ. ಇನ್ನೊಂದು ಭಾಷೆಯನ್ನು ಕಲಿಯಬಲ್ಲ. ಇಂದ್ರಿಯಗೋಚರವಾದ ಎಲ್ಲ ಕ್ಷೇತ್ರಗಳಲ್ಲಿಯೂ ಮನುಷ್ಯನ ಸಾಧನೆ ಅದ್ಭುತ. ನಿಸರ್ಗದ ರಹಸ್ಯಗಳನ್ನು ಅನ್ವೇಷಿಸಿ ಬಳಸಿಕೊಳ್ಳವಲ್ಲಿ ಮಾನವ ಸಿದ್ಧಹಸ್ತ. ವಿದ್ಯೆಯು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎನ್ನುವುದು ನಿರ್ವಿವಾದ.
ಇಲ್ಲಿ ಗಮನಿಸಬೇಕಾದದ್ದು ಮಾನವ ಮತ್ತು ಪಶುಗಳೆರಡೂ ನಡೆಸುತ್ತಿರುವ ಜೀವನದ ವ್ಯಾಪ್ತಿಯನ್ನು. ಎಚ್ಚರ, ಸ್ವಪ್ನ, ನಿದ್ರೆ-ಈ ಮೂರು ಅವಸ್ಥೆಗಳನ್ನೂ ಅನುಭವಿಸುವುದು ಎರಡೂ ವರ್ಗಗಳಲ್ಲಿಯೂ ಸಾಮಾನ್ಯವಾದುದ್ದು.  ಪ್ರಾಣಿಗಳು ಪ್ರಕೃತಿಯ ಪ್ರೇರಣೆಯಂತೆ ನಡೆದರೆ, ಮಾನವ ತನ್ನ ಬುದ್ಧಿಸಾಮರ್ಥ್ಯವನ್ನೂ ಬಳಸುತ್ತಾನೆ. ಆದರೆ ಎರಡು ಕಡೆಯೂ ಸುಖವು ಮೂರು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ. ವಾಸ್ತವಿಕವಾಗಿ, ಪ್ರಾಣಿಗಳು ನಿಸರ್ಗವನ್ನೂ,ತಮ್ಮ ದೇಹವನ್ನೂ ಮನುಷ್ಯನಂತೆ ದುರ್ಬಳಕೆ ಮಾಡಿಕೊಳ್ಳದೆ, ಮನುಷ್ಯನಿಗಿಂತ ಹೆಚ್ಚು ಸುಖವನ್ನು ಅನುಭವಿಸುತ್ತವೆ. ಒಟ್ಟಿನಲ್ಲಿ ಲೌಕಿಕಜೀವನಕ್ಕೆ ಬೇಕಾದ ವಿದ್ಯೆಗಳನ್ನು ಮಾನವ-ಪ್ರಾಣಿಗಳೆರಡರಲ್ಲೂ ನೋಡುತ್ತೇವೆ.
ಹಾಗಿದ್ದಲ್ಲಿ ವಿದ್ಯಾವಿಹೀನಃ ಪಶುಭಿಃ ಸಮಾನ: ಎನ್ನುವುದು ಹೇಗೆ ಸಮಂಜಸಇಂತಹ ಅಭಿಪ್ರಾಯಗಳ ಹಿಂದಿರುವ ಋಷಿಹೃದಯವೇನು? ಇದಕ್ಕೆ ಉತ್ತರವನ್ನು ನಾವು ಮಾನವ ಹಾಗೂ ಪ್ರಾಣಿಗಳ ದೇಹರಚನೆಯಲ್ಲಿನ ವ್ಯತ್ಯಾಸ ಮತ್ತು ವಿದ್ಯೆಯ ಸರಿಯಾದ ಪರಿಕಲ್ಪನೆಯಲ್ಲಿ ಹುಡುಕಬೇಕಾಗುತ್ತದೆ.
 ಸಾಮಾನ್ಯಮನುಷ್ಯರು ತಮ್ಮ ದೇಹವನ್ನಾಗಲೀ, ಜಗತ್ತನ್ನಾಗಲೀ ಇಂದ್ರಿಯಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರಷ್ಟೆ. ಹಾಗಲ್ಲದೆ, ಅತೀಂದ್ರಿಯವಾದ ದೃಷ್ಟಿ(ಯೋಗದೃಷ್ಟಿ)ಯನ್ನು  ತಪಸ್ಸಿನಿಂದ ಸಂಪಾದಿಸಿ ಜೀವನವನ್ನು ಸಮಗ್ರವಾಗಿ ಅರ್ಥಮಾಡಿಕೊಂಡವರೇ ಋಷಿಗಳು. ಇಂತಹ ದೃಷ್ಟಿಸಂಪಾದನೆ ಮಾನವನಿಗೆ ಮಾತ್ರ ಸಾಧ್ಯ. ಯೋಗದೃಷ್ಟಿಯಿಂದ ನೋಡಿದಾಗ ಅವರಿಗೆ ಮಾನವದೇಹರಚನೆಯ ವಿಶೇಷತೆಯೂ, ಜೀವನದ ಸಹಜ ಧ್ಯೇಯವೂ ಮತ್ತು ಅದನ್ನು ಸಾಧಿಸಿದಾಗ ಆಗುವ ಲಾಭವೂ ಸಮಗ್ರವಾಗಿ ಅರ್ಥವಾಯಿತು. ಅವರ ಅನ್ವೇಷಣೆಯ ವಿವರಗಳನ್ನು ಈ ಕೆಳಗಿನಂತೆ ಸಂಗ್ರಹಿಸ ಬಹುದು.
ಜೀವಿಗಳೆಲ್ಲರ ಹೃದಯದಲ್ಲಿ ಜ್ಯೋತೀರೂಪದಲ್ಲಿ ಬೆಳಗುತ್ತಿರುವ ಒಂದು ತತ್ವವಿದೆ. ದೇವರು, ಭಗವಂತ ಎಂದೆಲ್ಲ ಕರೆಯಲ್ಪಟ್ಟ, ಆ ವಿಶ್ವಬೀಜದಿಂದಲೇ ಸಂಪೂರ್ಣವಿಶ್ವವೂ, ಸಮಸ್ತಜೀವಿಗಳೂ-ಸೂಕ್ಷ್ಮವಾದ ಆಲದ ಬೀಜದಿಂದ ವಿಶಾಲ ವಟವೃಕ್ಷವು ವಿಕಾಸಗೊಳ್ಳುವಂತೆ-ಅರಳಿಬಂದಿವೆ. ಬೀಜದಿಂದ ಬೆಳೆದ ವೃಕ್ಷವು ಪುನಃ ಬೀಜದಲ್ಲಿಯೇ ತನ್ನ ವಿಕಾಸವನ್ನು ಮುಗಿಸಿಕೊಳ್ಳುವಂತೆ ತಮ್ಮ ಸಹಜನೆಲೆಯಾದ ಪರಮಾತ್ಮ ತತ್ವದಲ್ಲಿ ಜೀವಿಗಳು ಲಯಗೊಂಡಾಗಲೇ ಪೂರ್ಣವಿಶ್ರಾಂತಿ. ಅಲ್ಲಿ ದೊರೆಯುವ ಆನಂದವನ್ನು ಊಹಿಸುವುದೂ ಅಸಾಧ್ಯ. 
 ಅಷ್ಟಲ್ಲದೆ, ಮನುಷ್ಯನು ಯೋಗ ಮುಂತಾದ ವಿದ್ಯೆಗಳನ್ನು ಅವಲಂಬಿಸಿ ತನ್ನ ಮೂಲಸ್ವರೂಪದಲ್ಲಿ ಸೇರಬಲ್ಲ. ಅಂತಹ ರಚನಾವಿನ್ಯಾಸ ಮಾನವ ದೇಹದಲ್ಲಿದೆ. ಅದೇ ಮಾನವ ಮಾತ್ರರು ಅನುಭವಿಸಬಹುದಾದ ತುರೀಯವೆಂಬ ನಾಲ್ಕನೆಯ ಅವಸ್ಥೆ.  ನಾಲ್ಕೂ ಅವಸ್ಥೆಗಳ ಪೂರ್ಣಜೀವನ ಮಾನವನ ಜನ್ಮಸಿದ್ಧ ಹಕ್ಕು. ತುರೀಯವನ್ನು ಸಾಧಿಸದಿದ್ದರೆ ಜೀವನ ವ್ಯರ್ಥ. ಏಕೆಂದರೆ ಮಾನವದೇಹದ  ವೈಶಿಷ್ಟ್ಯವೇ ತುರೀಯವನ್ನು ಸಾಧಿಸಬಲ್ಲ ಸಹಜ ಸಾಮರ್ಥ್ಯ. ಈ ತುರೀಯವನ್ನು ಪಡೆಯುವ ದೇಹರಚನೆ, ಮನೋರಚನೆಗಳು ಪ್ರಾಣಿಗಳಿಗಿಲ್ಲ.
ಋಷಿಗಳ ದೃಷ್ಟಿಯಲ್ಲಿ ವಿದ್ಯೆಯು ಕೇವಲ ಲೌಕಿಕ ಜೀವನಕ್ಕೆ ಸಾಧಕವಾದ ಕೌಶಲ್ಯವಲ್ಲ. ಮಾಹಿತಿಸಂಗ್ರಹವಲ್ಲ. ವಿದ್ಎಂದರೆ ಜ್ಞಾನವೆಂದೂ. ಯಾಎಂದರೆ ಅದನ್ನು ಒದಗಿಸಿಕೊಡುವ ಸಾಧನವೆಂದೂ ಅರ್ಥ. ಗೀತೆ ಇತ್ಯಾದಿ ಆರ್ಷಗ್ರಂಥಗಳಲ್ಲಿ ಜ್ಞಾನ ಎಂಬ ಪದದ ಮೌಲಿಕವಾದ ಅರ್ಥವು ಪರಮಾತ್ಮ ಎಂದು ಸ್ಪಷ್ಟಪಡಿಸಿದೆ. ಹೀಗೆ ವಿದ್ಯೆಯೆಂದರೆ ಜ್ಞಾನವನ್ನು,ಸುಖದ ನಿಧಿಯಾದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನ-ವಿದ್ಯಯಾ ಅಮೃತಮಶ್ನುತೇ ಮಾನವನ ದೇಹರಚನೆಯೇ ಒಂದು ವಿದ್ಯಾರೂಪವಾಗಿದೆ ವಿದ್ಯಾಮಯೋ~ಯಮ್ ಪುರುಷಃ  
ಈ ಅರ್ಥದಲ್ಲಿ ಮಾನವ ವಿದ್ಯಾವಂತನಾದರೆ ಕೇವಲ ಪ್ರಾಣಿಸದೃಶನಾಗಿ ಉಳಿಯುವುದಿಲ್ಲ. ಇಲ್ಲದಿದ್ದರೆ ಮಹತ್ತಾದ ಸುಖದಿಂದ ವಂಚಿತನಾಗಿ ಬದುಕು ವ್ಯರ್ಥವಾಗುವುದು ಎಂಬ ವಿಷಯವನ್ನು ಮನವರಿಕೆ ಮಾಡಿಕೊಟ್ಟವರು ಶ್ರೀರಂಗಮಹಾಗುರುಗಳು. ಹೀಗೆ ಈ ಆರ್ಷವಾಕ್ಯವು ಅರ್ಥಪೂರ್ಣವಾಗಿದೆ. ಭಾರತದ ಜನಮಾನಸವು ತಮ್ಮ ಪೂರ್ವಜರಾದ ಋಷಿಗಳ ಆಶಯದಂತೆ ನಿಜವಾದ ಅರ್ಥದಲ್ಲಿ ವಿದ್ಯಾವಂತರಾಗಿ ಬಾಳಿ ಶ್ರೇಷ್ಠಜೀವನದ ಹರಿಕಾರರಾಗುವ ಸಂದೇಶವನ್ನು ನೀಡುತ್ತದೆ. 
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.