ಲೇಖಕರು: ತಾರೋಡಿ ಸುರೇಶ, ಬೆಂಗಳೂರು
ನೋಟುಗಳಲ್ಲಿ ಖೋಟಾ ನೋಟನ್ನು ಪತ್ತೆ ಹಚ್ಚುವುದು ಹೇಗೆ? ನೂರಾರು ಪಾದರಕ್ಷೆಗಳಿದ್ದಲ್ಲಿ ನಮ್ಮದನ್ನೇ ಹಾಕಿಕೊಂಡು ಹೋಗಬೇಕಲ್ಲವೆ? ಗುರುತಿಸಲು ಪದಾರ್ಥದ ಲಕ್ಷಣವನ್ನರಿತಿರಬೇಕು. ಮೋಸಹೋಗದಿರಲೂ ಲಕ್ಷಣಗೊತ್ತಿರಬೇಕು. ಒಳ್ಳೆ ಕೇಸರಿ ಬೇಕಿದ್ದಲ್ಲಿ ಒರಿಜಿನಲ್ಲಿಗೂ ಡೂಪ್ಲಿಕೇಟ್‍ಗೂ ವ್ಯತ್ಯಾಸ ತಿಳಿದಿರಬೇಕು. ಚಿನ್ನವನ್ನು ಪತ್ತೆ ಹಿಡಿಯಲೂ ಲಕ್ಷಣ ತಿಳಿದಿರಬೇಕು.
ಲಕ್ಷಣಜ್ಞತೆಯಿಂದ ಆಗುವ ಇನ್ನೊಂದು ಲಾಭವೆಂದರೆ ಸಮಚಿತ್ತತೆ. ಲಕ್ಷಣಜ್ಞತೆ ಇದ್ದಾಗ ನಮ್ಮ ಅವಲಕ್ಷಣದಿಂದಲೂ ನಮಗೆ ದುಃಖವಾಗುವುದಿಲ್ಲ. ಆಯಾ ವಸ್ತುವನ್ನು ಅವುಗಳ ಸಹಜ ಲಕ್ಷಣದ ಮೇಲೆ ಅಳೆಯುವ ದೃಷ್ಟಿ ಬರುವುದರಿಂದ ಕಪಿಯನ್ನು ನೋಡಿದರೂ ಅದು ಲಕ್ಷಣವಾಗಿದೆ ಎಂದೇ ಅನ್ನಿಸುತ್ತದೆ. ಒಬ್ಬ ಕುರುಡನನ್ನು ನೋಡಿದಾಗದಯೆ ಮೂಡುತ್ತದೆ.
ಮನುಷ್ಯನು ಸಹಜವಾಗಿಯೇ ಎಚ್ಚರ, ನಿದ್ರೆ, ಸ್ವಪ್ನ ಎಂಬ ಸ್ಥಿತಿಗಳನ್ನು ಅನುಭವಿಸುತ್ತಿದ್ದಾನಷ್ಟೆ. ಅವುಗಳ ಲಕ್ಷಣವನ್ನರಿತಿದ್ದರೆ ಆಯಾಕಾಲದಲ್ಲಿ ಅವು ಬಂದಾಗ ದುಃಖವಾಗುವುದಿಲ್ಲ. ಅವು ಸಹಜ ಎಂದು ನೆಮ್ಮದಿಯಿಂದಿರಬಹುದು
ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿಚೈವ ಶ್ವಪಾಕೇಚ ಪಂಡಿತಾಃ ಸಮದರ್ಶಿನಃ ||
ಮೇಲೆ ಕೊಟ್ಟ ಶ್ಲೋಕದಲ್ಲಿ ಹೆಸರಿಸಿರುವ ಜೀವಿಗಳೆಲ್ಲವೂ ಕಣ್ಣಿಗೆ ಭಿನ್ನಭಿನ್ನವಾಗಿವೆ. ಬ್ರಾಹ್ಮಣ, ಆನೆ, ನಾಯಿ ಇಲ್ಲೆಲ್ಲ ವ್ಯಾಪಿಸಿರುವ ಭಗವಂತನ ಲಕ್ಷಣವನ್ನರಿತವನು, ಈ ಭಿನ್ನತೆಗಳನ್ನೆಲ್ಲಾ ನೋಡದೆ ಭಗವಂತನನ್ನು ಮಾತ್ರ ನೋಡುತ್ತಾನೆ. ಇದು ಹೇಗೆಂದರೆಬೇರೆ ಬೇರೆ ಆಕಾರದ ಮಿಠಾಯಿಗಳನ್ನು ಆನೆ, ಪಕ್ಷಿ, ಮೀನು ಇತ್ಯಾದಿ ಆಕೃತಿಗಳಲ್ಲಿ ತಯಾರು ಮಾಡಿದರೂ ಎಲ್ಲವುದರಲ್ಲಿಯೂ ಸಾಮಾನ್ಯವಾದದ್ದು ಸಿಹಿ. ಈ ಮಿಠಾಯಿಗಳ ಪರಿಚಯವಿದ್ದವನು ಹೊರ ಆಕಾರಗಳನ್ನು ನೋಡದೆ ಅವುಗಳಲ್ಲಿರುವ ಮಾಧುರ್ಯದ ಮೇಲೆ ಕಣ್ಣಿಡುತ್ತಾನೆ.
ಇನ್ನು ಮನುಷ್ಯನಲ್ಲಿ ಲಕ್ಷಣ ಅವಲಕ್ಷಣಗಳನ್ನು ನೋಡುವುದು ಹೇಗೆ? ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುತ್ತಾರಲ್ಲಾ ಹಾಗೆ ಅಳೆಯುವುದೇ?
ಯಾವುದೇ ಪದಾರ್ಥದ ಲಕ್ಷಣವನ್ನು ಖಚಿತವಾಗಿ ಹೇಳಬೇಕಾದಲ್ಲಿ, ಆಯಾ ಪದಾರ್ಥದ ಸೃಷ್ಟಿಯ ಮೂಲೋದ್ಧೇಶವೇನು? ಆ ಫಲ ಈ ಪದಾರ್ಥದಿಂದ ದೊರೆಯುತ್ತದೆಯೇ ಎನ್ನುವುದರ ಮೇಲೆ ನಿರ್ಣಯಿಸಬೇಕು. ಪದಾರ್ಥದ ಆಮೂಲಾಗ್ರವಾದ ಪರಿಚಯವಿರಬೇಕು. ಉದಾಹರಣೆಗೆ ಮನುಷ್ಯನ ಸಮಗ್ರವಾದ ಪರಿಚಯವೇನು? ಹೊರಗಣ್ಣಿಗೆ ರುಂಡ, ಮುಂಡ, ಕೈಕಾಲು. ಯಂತ್ರಗಳ ಸಹಾಯದಿಂದ ಒಳಗಿನ ಅಂಗಗಳು, ಮನಸ್ಸನ್ನು, ಕರ್ಮಜ್ಞಾನೇಂದ್ರಿಯಗಳನ್ನು ಸ್ವಾನುಭವದಿಂದಲೂ ತಿಳಿಯುತ್ತೇವೆ.
ಸೂಕ್ಷ್ಮದರ್ಶಕ ಯಂತ್ರದಿಂದ ಬರಿಗಣ್ಣಿಗೆ ಕಾಣದ್ದನ್ನು ನೋಡುವಂತೆ, ತಪಸ್ಸಿನಿಂದ ದೊರೆತ ದಿವ್ಯದೃಷ್ಟಿಯಿಂದ ನಮ್ಮೊಳಗೇ ಗುಪ್ತವಾಗಿದ್ದು ಚೈತನ್ಯವನ್ನು ನೀಡುತ್ತಿರುವ ಭಗವಂತನನ್ನೂ ನೋಡಬಹುದು ಎನ್ನುತ್ತಾರೆ ಋಷಿಗಳು. ಅಂತಹಎಲ್ಲ ಸೌಲಭ್ಯಗಳನ್ನೂ ಬಳಸಿಕೊಂಡು ಬಾಳಿದರೆ ಅವನು ಮನುಷ್ಯ. ಒಟ್ಟಾರೆದೇಹ ಮನಸ್ಸು ಇಂದ್ರಿಯಗಳು, ಪ್ರಾಣಾದಿ ತತ್ವಗಳು ಭಗವಂತನ ದರ್ಶನಕ್ಕೆ ಸಹಕಾರಿಯಾಗಿದ್ದರೆ ಆ ವ್ಯಕ್ತಿಯನ್ನು ಲಕ್ಷಣವಂತ ಎನ್ನಬಹುದು. ಲಕ್ಷ್ಯದತ್ತ ಕರೆದೊಯ್ಯುವುದಾದರೆ ಅದು ಲಕ್ಷಣ. ಲಕ್ಷ್ಯದ ವ್ಯಾಖ್ಯೆಯೇ ಲಕ್ಷಣ.
ಸಾಮಾನ್ಯ ಲಕ್ಷಣ, ವಿಶೇಷ ಲಕ್ಷಣ ಎಂದು ಎರಡು ವಿಧ. ಮನುಷ್ಯನಂತೆ ಆಹಾರ, ನಿದ್ರೆ, ಭಯ, ಸಂತಾನ ಇವು ಪ್ರಾಣಿಗಳಲ್ಲಿಯೂ ಸಾಮಾನ್ಯ. ಆದರೆ ಮಾನವನ ವಿಶೇಷತೆಯೆಂದರೆ ಅವನ ಅದ್ಭುತವಾದ ದೇಹ. ಏಕೆಂದರೆ ಮಾನವದೇಹದಲ್ಲಿ ಮಾತ್ರ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು ಋಷಿಗಳು ಸಾರುತ್ತಾರೆ. ಹಾಗೆ ತನ್ನದೇಹದ ಲಕ್ಷಣವನ್ನರಿತವನು ಅಂತಹಯೋಗ-ಭೋಗಗಳಿಂದ ಕೂಡಿರುವ ಪೂರ್ಣಜೀವನಕ್ಕಾಗಿ ಯತ್ನಿಸುತ್ತಾನೆ.
ಋಷಿರೇವ ವಿಜಾನಾತಿ ದ್ರವ್ಯ ಸಂಯೋಗಜಂ ಫಲಂ! ಎಂದು ಆಯುರ್ವೇದವು ಹೇಳುತ್ತದೆ. ಎಲ್ಲ ದ್ರವ್ಯಗಳ ಗುಣಧರ್ಮಗಳನ್ನು ಅರಿತಿರುವ ಋಷಿಗಳು ಮಾತ್ರ ಅವುಗಳ ಸೇರುವಿಕೆಯ ಫಲವನ್ನೂ ಬಲ್ಲರು. ಆಮೂಲಾಗ್ರವಾಗಿ ಪದಾರ್ಥಧರ್ಮವನ್ನು ಅರಿಯುವ, ತಪೋಬಲದಿಂದ ಗಳಿಸಿದ ಸೂಕ್ಷ್ಮ ಸಾಮರ್ಥ್ಯ ಅವರಿಗಿದೆ. ಹಾಗೆಯೇ ನಮ್ಮೊಳಗೇ ಇರುವ ದೇವನಿಂದ ಹಿಡಿದು ದೇಹದವರೆಗೂ ಯಾವ ದ್ರವ್ಯವು ಏನು ಪರಿಣಾಮ ಮಾಡುತ್ತದೆ ಎಂಬ ಪರಿಚಯವೂ ಅವರಿಗುಂಟು. ಹೀಗೆ ನಿಸರ್ಗವನ್ನು ಬಡವಾಗಿಸದೆ, ಬದುಕಿನ ಅತ್ಯುನ್ನತ ಧ್ಯೇಯವನ್ನು ಸಾಧಿಸುವಂತೆ ಅಳವಡಿಕೆ ಇವು ಋಷಿಗಳಿಗಿದ್ದ ಲಕ್ಷಣಜ್ಞಾನದಿಂದಲೇ ಬಂದಿದ್ದು.
ಒಟ್ಟಿನಲ್ಲಿ ಸಮಚಿತ್ತತೆಗೆ ಮತ್ತು ಸತ್ಯವೂ-ಶಿವವೂ-ಸುಂದರವೂ, ಶುದ್ಧವೂ ಆದ ಬಾಳಾಟಕ್ಕೆ ಲಕ್ಷಣಜ್ಞಾನ ಆವಶ್ಯಕ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ