Sunday, September 30, 2018

ನಿಜ ಸುಖ ಎಲ್ಲಿದೆ? (Nija sukha ellide?)


ಲೇಖಕರುಸುಬ್ರಹ್ಮಣ್ಯ ಸೋಮಯಾಜಿಬೆಂಗಳೂರು

ಕಳೆದ ಐವತ್ತು ವರ್ಷಗಳಿಂದೀಚೆಗೆ ನಮ್ಮೆಲ್ಲರ ಜೀವನದಲ್ಲಿ, ಮಾತ್ರವಲ್ಲ, ಮಾನವ ಜೀವನದಲ್ಲೇ ಸಾಕಷ್ಟು ಪರಿವರ್ತನೆಗಳಾಗಿವೆ. ನಮ್ಮ ಭಾರತೀಯ ಸಮಾಜದ ಮೇಲೂ ಈ ಪರಿವರ್ತನೆಗಳು ಜೋರಾಗಿಯೇ ಇವೆ. ಮಾಹಿತಿ ತಂತ್ರಜ್ಞಾನದ ಕ್ರಾಂತಿ ಮನುಷ್ಯನ ಬದುಕನ್ನೇ ಹೊಸ ಯುಗದತ್ತ ಕರೆದೊಯ್ದಿದೆ. ಜಾಗತೀಕರಣ ನಮ್ಮನ್ನು ಹೊಸ ಹೊಸ ಉದ್ಯಮಗಳತ್ತ, ಹೊಸ ವಸ್ತುಗಳತ್ತ, ಹೊಸ ಹೊಸ ವ್ಯಕ್ತಿಗಳತ್ತ, ಆಕರ್ಷಿಸಿ ನಮ್ಮ ಚಿಂತನೆಯ ದಿಕ್ಕನ್ನೇ ನವೀನಗೊಳಿಸಿವೆ. ನಮ್ಮ ಕೈಯಲ್ಲಿ ಇಡೀ ಜಗತ್ತನ್ನೇ ಹಿಡಿದಿಡಬಹುದಾದ ಮೊಬೈಲ್ ತಂತ್ರಜ್ಞಾನ ಈಗ ನಮಗೆ ಹಳತಾಗುತ್ತಿದೆ. ಸಾಮಾಜಿಕ ಜಾಲ ತಾಣಗಳು ಜಗತ್ತನ್ನು ಕಿರಿದಾಗಿಸಿವೆ. ನಾವು ಎಲ್ಲೂ ಹೋಗಬೇಕಾಗಿಲ್ಲ. ನಮ್ಮ ನಮ್ಮ ಜಾಗದಲ್ಲೇ ಇಡೀ ಜಗತ್ತನ್ನು ನಿರ್ವಹಿಸಬಲ್ಲಷ್ಟು ತಾಂತ್ರಿಕತೆಯ ಮಾಯಾಲೋಕದಲ್ಲಿ ನಾವೆಲ್ಲರೂ ವಿಹರಿಸುತ್ತಿದ್ದೇವೆ ಎಂದರೆ ಹೆಚ್ಚಾಗದು.
ಹಾಗೆಯೇ ಐವತ್ತು ವರ್ಷಗಳಿಂದೀಚೆಗೆ ಸಮಾಜದಲ್ಲಿ ಅಸಹನೆ, ಆತ್ಮಹತ್ಯೆಗಳು, ಮಾನಸಿಕ ಖಿನ್ನತೆ, ವಿವಾಹ  ವಿಚ್ಛೇದನಗಳು, ಕೌಟುಂಬಿಕ ಕಲಹಗಳು, ದಾಂಪತ್ಯ ಸಮಸ್ಯೆಗಳು, ಇವುಗಳ ಸಂಖ್ಯೆಯೂ ಹೆಚ್ಚಿದೆ. ಹರೆಯದ ಹುಡುಗ ಹುಡುಗಿಯರು ಕ್ಷುಲ್ಲಕ ಕಾರಣಗಳಿಗೆ ಖಿನ್ನತೆಗೊಳಗಾಗುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸಂಬಂಧಗಳಲ್ಲಿ ಚಿಕ್ಕ ವಿಷಯಗಳಿಗಾಗಿ ಬಿರುಕು ಕಾಣಿಸಿಕೊಳ್ಳುತ್ತದೆ. ಏಕೆ ಈ ವಿಪರ್ಯಾಸ. ನಮ್ಮ ಜೀವನದಲ್ಲಿ ಅನುಕೂಲತೆಗಳು ಕಡಿಮೆ ಇದ್ದಾಗಿನ ಸಂತೋಷ, ನೆಮ್ಮದಿ ಅವು ಹೆಚ್ಚಾದಾಗ ಸ್ವಾಭಾವಿಕವಾಗಿ ಇಮ್ಮಡಿಯಾಗಬೇಕಿತ್ತು. ಆದರೆ ಲೋಕದ ನಡೆ ಹಾಗೆ ಕಂಡುಬರುತ್ತಿಲ್ಲ.
ನಿರಂತರ ನಾವು ಸುಖದಿಂದಿರಬೇಕಾದರೆ ನಮ್ಮ ಜೀವನ ಹೇಗಿರಬೇಕು ಎಂದು ಆಲೋಚಿಸುವುದು ಅತ್ಯಂತ ಪ್ರಸ್ತುತವಾಗಿದೆ. ಗುರು ಶ್ರೀರಂಗರು ಅಪ್ಪಣೆಕೊಡಿಸಿದಂತೆ, ಭಾರತೀಯ ಪರಂಪರೆಯಲ್ಲಿ ಸುಖವನ್ನು, ನೆಮ್ಮದಿಯನ್ನು ಅರಸಿ ಅದರ ನೆಲೆಯನ್ನು ಕಂಡುಕೊಂಡ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈ ದೇಶದ ಜ್ಞಾನಿಗಳು ಸುಖವನ್ನು ಹೊರಬುದ್ಧಿಗೆ ಎಟುಕುವ ವಿಸ್ತಾರವಾದ ಪ್ರಪಂಚದಲ್ಲಾಗಲೀ, ಅಲ್ಲಿನ ವಿಧವಿಧ ವಸ್ತು ವಿಷಯಗಳಲ್ಲಾಗಲೀ ಹುಡುಕುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ತಮ್ಮನ್ನೇ ತಾವು ಅಧ್ಯಯನ ನಡೆಸಿ ಮಾನವನ ಸುಖದ ಸ್ರೋತಸ್ಸು ಅವನ ಅಂತರಂಗದಲ್ಲೇ ಇರುವುದನ್ನು ತಮ್ಮ ತಪಸ್ಯೆಯಿಂದ ಕಂಡುಕೊಂಡರು.ಅವರ ಪ್ರಯಾಣವೆಲ್ಲ ಬುದ್ಧಿಗೂ ಚೈತನ್ಯವನ್ನು ಕೊಡುತ್ತಿರುವ ನಮ್ಮೊಳಗೇ ಬೆಳಗುವ ಬೆಳಕಿನ ಕಡೆಗೆ ಸಾಗಿತ್ತು.ಅಲ್ಲಿ ಅಂತಹ ನೆಮ್ಮದಿಯ ನೆಲೆದಾಣವಿರುವುದನ್ನೂ ಅದರ ಆನಂದದ ಎದುರು ವಿಶ್ವದ ಉಳಿದೆಲ್ಲ ಆನಂದ ಸುಖಗಳು ತೃಣ ಸಮಾನವೆಂದೂ ತಮ್ಮ ಅನುಭವದಿಂದ ನಿಷ್ಕರ್ಷೆಗೆ ಬಂದರು.
ನಿಸರ್ಗದಲ್ಲಿ ಉನ್ನತವಾದ ಗುರಿಯೊಂದು ನಿಶ್ಚಯವಾದರೆ ಉಳಿದುದೆಲ್ಲ ಆ ಗುರಿಗೆ ಅನುಗುಣವಾಗಿ ನಡೆಯುತ್ತದೆ. ನಮಗೆ ನಮ್ಮ ಜೀವನ ನಿರ್ವಹಣೆಗೆ ಬೇಕಾದ ಹಣ ಸಂಪಾದನೆ ಮಾಡಲು ಬೆಳಿಗ್ಗೆ ೭.೩೦ಕ್ಕೇ ಕೆಲಸಕ್ಕೆ ಹೋಗುವುದು ಅನಿವಾರ್ಯವಾದರೆ ನಮ್ಮ ನಿದ್ರೆ, ತಿಂಡಿ,  ಸ್ನಾನ, ಇತ್ಯಾದಿ ಎಲ್ಲವನ್ನೂ ಅದಕ್ಕೆ ಸರಿಯಾಗಿ ನಾವು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಹಾಗೆಯೇ ನಮ್ಮ ದೇಶದ ಜ್ಞಾನಿಗಳು ಜೀವನದ ಪರಮ ಸುಖವಾದ ಅತ್ಮಾನುಭವವನ್ನೂ ಹೊಂದಿ, ಲೋಕಜೀವನದಲ್ಲೂ ಸುಖ, ಶಾಂತಿ, ಸಮೃದ್ಧಿಗಳಿಂದ ಬಾಳಲು ಅನುಗುಣವಾದ  ಜೀವನ ವಿಧಾನವನ್ನು ರೂಪಿಸಿದರು. ಅವರು ಭೌತಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನೆಲ್ಲ ಗೌಣವಾಗಿ ಕಂಡು ಆ ಉನ್ನತವಾದ ಆ ಗುರಿಗಾಗಿ ಎಲ್ಲವೂ focus ಆಗುವಂತೆ ಬಾಳಿದರು.
ಮಾನವನ ಶರೀರ ರಚನೆಯಲ್ಲಿ ಅಂತಹ ಸುಖವನ್ನು ಅನುಭವಿಸುವ ಅನುಕೂಲತೆಗಳು ಇರುವುದನ್ನು ಗಮನಿಸಿ ಯಾವ ಬಗೆಯಲ್ಲಿ ನಮ್ಮ ನಿತ್ಯಜೀವನವನ್ನು ಇಟ್ಟುಕೊಂಡರೆ ಒಳಗೆ ಬೆಳಗುವ ಆ ಆನಂದವನ್ನೂ ಅನುಭವಿಸ ಬಹುದು ಹಾಗೂ ಹೊರಗಿನ ಇಂದ್ರಿಯ ಸುಖವನ್ನೂ ಅನುಭವಿಸಬಹುದು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅಂತಹ ಜೀವನ ವಿಧಾನವನ್ನು ಜೀವಲೋಕದ ಮೇಲಿನ ಕರುಣೆಯಿಂದ ದಯಪಾಲಿಸಿದ್ದಾರೆ.
ಆ ಜೀವನ ವಿಧಾನದಲ್ಲಿ ನಮ್ಮ ನಿತ್ಯಜೀವನದ, ಸ್ನಾನ, ಊಟ, ಮನೋರಂಜನೆ, ವೃತ್ತಿ ಎಲ್ಲೆಡೆಯಲ್ಲೂ ಆ ಒಳ ಸುಖದ ಛಾಪು ಮರೆಯಾಗದಂತೆ ಹಾಸು-ಹೊಕ್ಕಾಗಿ ಹೆಣೆದರು. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪ್ರಾತರ್ವಿಧಿಗಳನ್ನೆಲ್ಲ ಮುಗಿಸಿ ನಮ್ಮ ಜೀವನ ಮೂಲನಾದ ಭಗವಂತನ ಧ್ಯಾನ, ಅದರ ತಂಪಾದ ನೆನಪಿನಿಂದ ಸ್ನಾನ, ದೇವರ ಪೂಜೆ, ನಾವು ತೆಗೆದುಕೊಳ್ಳುವ ಆಹಾರವನ್ನು ಅದು ಯಾರ ಕೃಪೆಯಿಂದ ಬಂದಿದೆಯೋ ಅಂತಹ ಮೂಲ ನೆಲೆಗೆ ಸಮರ್ಪಿಸಿ ಪ್ರಸಾದ ರೂಪವಾಗಿ ಅದರ ಸೇವನೆ, ಎಲ್ಲ ಜೀವಿಗಳಲ್ಲೂ ಅವನೇ ಪ್ರಕಾಶಿಸುತ್ತಿರುವುದರಿಂದ ಎಲ್ಲರನ್ನೂ ಸ್ನೇಹ, ವಿಶ್ವಾಸಗಳಿಂದ ನೋಡುವ ಮನೋಭಾವ, ನಾವು ಸ್ವೀಕರಿಸುವ ಆಹಾರಗಳು ನಮ್ಮ ಮನಸ್ಸನ್ನು ಕಲುಷಿತಗೊಳಿಸದೆ ನಮ್ಮನ್ನು ಸಾತ್ವಿಕವಾಗಿ ಇಟ್ಟಿರುವಂತಹ ಆಹಾರ ವ್ಯವಸ್ಥೆ, ನಾವು ಕೇಳುವ ಶಬ್ದ, ನೋಡುವ ರೂಪ, ಸ್ಪರ್ಶಿಸುವ ವಸ್ತುಗಳು,ನಮ್ಮ ರುಚಿ, ನಮ್ಮ ವಾಸನೆ ಎಲ್ಲವೂ ಈ ಒಳ ಹೊರ ಜೀವನಕ್ಕೆ ಅನುಗುಣವಾಗಿರುವಂತೆ ಪರಿಷ್ಕರಿಸಿ ತೆಗೆದುಕೊಳ್ಳುವಂತೆ  ಭಾರತೀಯ ಜೀವನಪದ್ಧತಿಗಳು ರೂಪುಗೊಂಡಿವೆ. ಇಂತಹ ಪರಿಷ್ಕೃತವಾದ ಜೀವನ ನಮ್ಮದಾದಲ್ಲಿ ನಮಗೆ ಜೀವನದ ಯಾವ ಸಮಸ್ಯೆಗಳೂ ಭಾರಿಯಾಗಿ ಕಾಣದೇ ತಂಪಾದ ಮನಸ್ಸಿನಿಂದ ಅವುಗಳನ್ನು ನಿಭಾಯಿಸುವ ಸಾಮರ್ಥ್ಯ  ಬರುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಜೀವನದ ಗುರಿ ಸತ್ಯದ ಸಾಕ್ಷಾತ್ಕಾರ. ಅದಕ್ಕೆ ಬೇಕಾದ ನಡೆ ಇದ್ದಾಗ ಉಳಿದೆಲ್ಲವೂ ಎಷ್ಟು ಕೂಡಿಬಂತೋ ಅಷ್ಟು ಎಂಬ ಹೃದಯ ವೈಶಾಲ್ಯ ತಾನಾಗಿಯೇ ಬರುತ್ತದೆ.

ಇಂತಹ ಜ್ಞಾನಿಗಳ ಜೀವನ ವ್ಯವಸ್ಥೆ ನಮಗೆಲ್ಲ ಆದರ್ಶವಾಗುವುದಾದಲ್ಲಿ ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ ಜಯಶಾಲಿಗಳಾಗಿ ಒಂದು ಸರ್ವಾಂಗ ಸುಂದರವಾದ ಸಮಾಜವನ್ನು ಕಟ್ಟುವುದರಲ್ಲಿ ನಮ್ಮ ತರುಣರೆಲ್ಲ ಯಶಸ್ವಿಯಾದಾರು.ಅಂತಹ ವೈಭವದ ಭಾರತ ಮತ್ತೆ ಮೆರೆಯುವಂತಾಗಲಿ ಎಂದು ಹಾರೈಸೋಣ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.