ಲೇಖಕರು: ಅರ್
ಮೈಥಿಲೀ, ಬೆಂಗಳೂರು
ಇದೀಗ ಬರಲಿದೆ ಗಣೇಶಚತುರ್ಥಿ. ಎಲ್ಲೆಡೆಯಲ್ಲೂ ವಿವಿಧ ಭಂಗಿಗಳಲ್ಲಿರುವ ಗಣಪನನ್ನು
ಕಾಣಬಹುದಾಗಿದೆ. ಅದೆಷ್ಟು ಬಣ್ಣಗಳು, ಎಷ್ಟು ಅಲಂಕಾರಗಳು!
ಸಣ್ಣ ಮೂರ್ತಿಯಿಂದ ಹಿಡಿದು ಬೃಹದಾಕಾರದ
ಮೂರ್ತಿಯವರೆಗು ಅದೆಷ್ಟು ವೈವಿಧ್ಯ?! ಇವುಗಳ ನಿರ್ಮಾಣದಲ್ಲಿ ಆಗುವ ಹಣದ ಕರ್ಚು, ಪದಾರ್ಥಗಳ ಕರ್ಚು, ಶಿಲ್ಪಿಯ
ಪರಿಶ್ರಮಗಳು ಅಪಾರ.
ಈ ಮೂರ್ತಿಗಳನ್ನು ನಮ್ಮ ಆನುಕೂಲ್ಯಕ್ಕೆ ತಕ್ಕಂತೆ ಖರೀದಿಸಿ ತಂದು ಮನೆಯಲ್ಲಿ/ಸಾಮೂಹಿಕ
ಕೂಟಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಪೂಜೆಯನ್ನು ಜರುಗಿಸುವುದು ಎಲ್ಲರಿಗೂ ತಿಳಿದೇ ಇದೆ. ಪೂಜೆಯ
ನಂತರ ಆ ದಿನವೇ ಅಥವಾ ಮುಂದಿನ ನಿರ್ದಿಷ್ಟದಿನಗಳಲ್ಲಿ ಆ ಮೂರ್ತಿಯನ್ನು ನೀರಿನಲ್ಲಿ
ವಿಸರ್ಜಿಸುವುದೂ ಪ್ರಸಿದ್ಧವಾಗಿದೆ.
ಆದರೆ ಇದೇನಿದು? ಅಷ್ಟು ಭಕ್ತಿಯಿಂದ
ಪೂಜಿಸಿದ ಮೂರ್ತಿಯನ್ನು ನೀರುಪಾಲು ಮಾಡುವುದೇ? ಗಣೇಶನ ವಿಸರ್ಜನೆಯನ್ನು ಮಾಡುವಾಗ ಇಷ್ಟು ದಿನಗಳು ಪ್ರೀತಿಯಿಂದ ಆರಾಧಿಸಿದ ಮುದ್ದುಗಣಪನನ್ನು
ಅಗಲಬೇಕಾಗಿದೆಯಲ್ಲಾ ಎಂಬ ವ್ಯಥೆಯಿಂದ ಕೊರಗುವವರೂ ಇಲ್ಲದಿಲ್ಲ. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ಎಂಬಂತೆ ಸಾವಿರಾರು ರುಪಾಯಿಗಳು
ಕರ್ಚುಮಾಡಿ ಅನೇಕ ದಿನಗಳ ಕಾಲ ಶ್ರಮಿಸಿ ತಯಾರಿಸಿದ್ದನ್ನು ನಿಮಿಷಮಾತ್ರದಲ್ಲಿ ನೀರುಪಾಲು
ಮಾಡುವುದೇನು ನ್ಯಾಯ? ಮನೆಯಲ್ಲಿ
ಪ್ರತಿನಿತ್ಯವೂ ಪೂಜಿಸುವ ಗಣೇಶನ ಮೂರ್ತಿಗಳನ್ನು ನಾವು ನೀರಿಗೆ ಹಾಕುವುದಿಲ್ಲವಷ್ಟೆ. ಈ ಹಬ್ಬದ
ಆರಾಧ್ಯನಿಗೆ ಮಾತ್ರ ಏಕೆ ಈ ಗತಿ? ಇವನನ್ನೂ ಮನೆಯಲ್ಲಿ
ಉಳಿಸಿ ಕೊಳ್ಳಬಾರದೇಕೆ? ಈ ಎಲ್ಲ
ಪ್ರಶ್ನೆಗಳಿಗೂ ಹಿರಿಯರಿಂದ ಬಂದ ಪದ್ಧತಿ, ಅದನ್ನು ಅಂತೆಯೇ ಪ್ರಶ್ನೆಮಾಡದೇ ಪಾಲಿಸೋಣ ಎಂದು ಹೇಳಿ ಜಾರಿಕೊಳ್ಳುವುದೇಯಾಗಿದೆ.
ಆದರೆ ಜ್ಞಾನಿಗಳಿಂದ ಬಂದ ಈ ವಿಚಿತ್ರವೆನ್ನಿಸುವ ಪದ್ಧತಿಗೆ ಸಮರ್ಪಕವಾದ ವಿವರಣೆಯನ್ನು ಅವರು
ಮಾತ್ರವೇ ಕೊಡಬಲ್ಲರು. ಋಷಿಹೃದಯವನ್ನೂ, ಅವರ ಸಂಸ್ಕೃತಿಯ
ಮರ್ಮವನ್ನೂ ಕರತಲಾಮಲಕವಾಗಿ ಅರಿತ ಶ್ರೀರಂಗಮಹಾಗುರುಗಳೆಂಬ ಜ್ಞಾನಿಶ್ರೇಷ್ಠರು ಇದಕ್ಕೆ ನೀಡಿದ
ವಿವರಣೆ ಹೀಗಿದೆ.
ವಿನಾಯಕನ ಅನೇಕ ಮೂರ್ತಿಗಳಲ್ಲಿ ಸಿದ್ಧಿವಿನಾಯಕ ಮೂರ್ತಿಯನ್ನೇ ಗಣೇಶ ಚತುರ್ಥಿಯಂದು
ಪೂಜಿಸಬೇಕು. ಈ ಮೂರ್ತಿಯ ಪೂಜೆಯು ತಾಪತ್ರಯಗಳಿಂದ(ಆಧಿಭೌತಿಕ-ಆಧಿದೈವಿ ಕ-ಆಧ್ಯಾತ್ಮಿಕಗಳಲ್ಲಿನ
ಸಂಕಟಗಳಿಂದ) ನಮ್ಮನ್ನು ಮುಕ್ತಗೊಳಿಸುತ್ತದೆ. ಮಹಾಯೋಗಿಗಳು ಈ ದಿನದ ಪೂಜೆಯಲ್ಲಿ ತಮ್ಮ
ಮನಸ್ಸನ್ನು ಮೊದಲು ಮೂಲಾಧಾರಸ್ಥಾನದಲ್ಲಿ ಕಂಗೊಳಿಸುವ ಗಣೇಶನ ಮೂರ್ತಿಯಲ್ಲಿ ಲಯಗೊಳಿಸುತ್ತಾರೆ.
ನಂತರ ಮನಸ್ಸನ್ನು ಇನ್ನೂ ಮೇಲಕ್ಕೆ ಏರಿಸಿ ಸ್ವಾಧಿಷ್ಟಾನಚಕ್ರದಲ್ಲಿ ಗಣೇಶನಜೊತೆಯಲ್ಲಿ
ಲಯಗೊಳಿಸಿದಾಗ ಅಲ್ಲಿ ತಾಪತ್ರಯಗಳ ನಿವಾರಣೆಯಾಗಿ ತಂಪನ್ನು ಅನುಭವಿಸುತ್ತಾರೆ. ಮೂಲಾಧಾರವು
ಪ್ರಿಥ್ವೀ ತತ್ತ್ವದ ಸ್ಥಾನ, ಸ್ವಾಧಿಷ್ಟಾನವು
ಅಪ್ಪ್ ತತ್ತ್ವದ ಸ್ಥಾನ ಎಂದು ಪ್ರಸಿದ್ಧವಾಗಿದೆ.
ಯೋಗಿಗಳು ತಮ್ಮ ಈ ಅಂತರಂಗಪೂಜೆಯ ಗುರುತಾಗಿ ಹೊರಗಡೆಯೂ ಗಣೇಶನ ಪೂಜಾವಿಧಾನವನ್ನು
ಕಲ್ಪಿಸಿದ್ದಾರೆ. ಪೃಥ್ವಿತತ್ತ್ವದ ಹೊರ ಪ್ರತೀಕವಾಗಿರುವುದು ಮಣ್ಣು; ಅಪ್ಪ್ ತತ್ತ್ವದ ಪ್ರತೀಕ ಜಲ. ಆದ್ದರಿಂದ ಒಳ
ಪ್ರಪಂಚದಲ್ಲಿ ನಡೆಯ ಬೇಕಾಗಿರುವ ಕ್ರಿಯೆಯನ್ನು ಸೂಚಿಸಲು ಹೊರಗೆ ಮಣ್ಣಿನ ಗಣೇಶನ ಪೂಜೆ, ನಂತರ ಅದನ್ನು ನೀರಿನಲ್ಲಿ ಲಯಗೊಳಿಸುವುದು. ನಮ್ಮ
ಮನಸ್ಸನ್ನು ಒಳಕೇಂದ್ರಗಳತ್ತ ಸೆಳೆದು, ಎಲ್ಲಿ
ನಿಲ್ಲಿಸಬೇಕೆಂಬುದನ್ನು ನೆನಪಿಸುತ್ತಿದ್ದಾರೆ ಜ್ಞಾನಿಗಳು. ತನ್ಮೂಲಕ ನಮಗೆ ತಾಪತ್ರಯಗಳಿಂದ ಮುಕ್ತಿಯನ್ನು
ಪಡೆಯುವ ಮಾರ್ಗವನ್ನು ತೋರಿಸಿ ನೆಮ್ಮದಿಯನ್ನುಂಟುಮಾಡುವ ಜಾಣ್ಮೆಯಿಂದ ಕೂಡಿದ ಒಂದು ತಂತ್ರವೇ ಈ
ಹೊರ ಪೂಜೆ ಹಾಗೂ ವಿಸರ್ಜನೆಗಳು.
ಆದ್ದರಿಂದ ಈ ಹಬ್ಬದ ದಿನ ಪೂಜೆಯಲ್ಲಿ ಭೌತಿಕ ಪ್ರಯೋಜನೆಗಳಿಗೆ ಮಾತ್ರವಲ್ಲದೆ ತಾಪತ್ರಯಗಳ
ನಿವಾರಣೆಗಾಗಿ ವಿಶೇಷ ಸಂಕಲ್ಪವನ್ನು ಮಾಡಿಕೊಳ್ಳಬೇಕಾಗಿದೆ. ಅಂತರಂಗದಲ್ಲಿ ನಡೆಯಬೇಕಾಗಿರುವ
ಕಾರ್ಯವನ್ನು ನೆನಪಿಸಿಕೊಂಡು, ಮುಂದೆ ಆ ನೇರದಲ್ಲಿ
ಪ್ರಯತ್ನವನ್ನು ಕೈಗೊಳ್ಳುವ ಸಂಕಲ್ಪದ ಜೊತೆಗೆ ಹೊರ ಪೂಜೆಯನ್ನು ಸಲ್ಲಿಸೋಣ. ಆಚರಿಸುವ ಕ್ರಿಯೆಗಳ
ಮರ್ಮವನ್ನು ಅರಿತು ಆಚರಿಸಿದಾಗ ಅದರಲ್ಲಿ ವಿಶೇಷ ಪ್ರಯೋಜನವುಂಟು.