ಲೇಖಕರು: ಡಾ|| ಸಿ.ಆರ್. ರಾಮಸ್ವಾಮಿ
ಪರಮಪೂಜ್ಯ ರಂಗಪ್ರಿಯ ಶ್ರೀಶ್ರೀಗಳವರು ನಂಜನಗೂಡು ತಾಲೂಕಿನ ಹೆಡೆತಲೆ ಗ್ರಾಮದವರು. ಇವರ ಪವಿತ್ರ ಜನನವು ೧೯೨೭-ಸಿಂಹಮಾಸ ಮಖಾನಕ್ಷತ್ರದ ಶುಭದಿನದಂದು.
ಬಾಲ್ಯದ ವಿದ್ಯಾಭ್ಯಾಸವು ನಂಜನಗೂಡಿನಲ್ಲಿ, ಮುಂದೆ ಮೈಸೂರು ಸಂಸ್ಕೃತ ಪಾಠಶಾಲೆಯಲ್ಲಿ ಮುಂದುವರೆದು, ಮಧ್ಯಪ್ರದೇಶದ ಸೌಗರ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಎಮ್.ಏ ಪದವಿ-ಸುವರ್ಣ ಪದಕವನ್ನು ಪಡೆದರು. ಜೊತೆಗೆ ವೇದಾಂತಶಾಸ್ತ್ರ, ಧರ್ಮಶಾಸ್ತ್ರ,
ನ್ಯಾಯಶಾಸ್ತ್ರ, ಅಲಂಕಾರಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. ಸಂಸ್ಕೃತ-ತಮಿಳು-ಹಿಂದಿ-ಪ್ರಾಕೃತ-ಪಾ ಳೀ ಹಾಗೂ ಆಂಗ್ಲಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದ್ದರು. ನಡೆದಾಡುವ ಗ್ರಂಥಾಲಯವೇ ಆಗಿದ್ದರು! ಅತ್ಯದ್ಭುತವಾಗ್ಮಿಗಳೂ, ಪ್ರತ್ಯುತ್ ಪನ್ನಮತಿಗಳೂ ಆದವರು. ತಮ್ಮ ಯೌವನದಲ್ಲೇ ೪ ರಾತ್ರಿಗಳಲ್ಲಿ ಗಜೇಂದ್ರ ಮೋಕ್ಷವೆಂಬ ಅದ್ಭುತ ಸಂಸ್ಕೃತ ಕಾವ್ಯವನ್ನು ರಚಿಸಿ ಪ್ರಶಸ್ತಿಯನ್ನು ಪಡೆದ ಮಹಾನ್ ಕವಿ. ಇವರು ಆಶುಗಕವಿಗಳಾಗಿದ್ದುದೂ ಪ್ರಸಿದ್ಧವಾದ ವಿಚಾರವಾಗಿದೆ.
ಪಾಂಡಿತ್ಯದಜೊತೆ ಗೆ ಅತ್ಯಂತ ವಿನಯ ಸಂಪನ್ನರು, ಸರಳರು, ಸುಲಭರೂ ಆಗಿ ಆದರ್ಶ ಉಪಾದ್ಯಾಯರಾಗಿಸೇವೆ ಸಲ್ಲಿಸಿದರು.
ಹುಣುಸೂರು, ಚಾಮರಾಜನಗರಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದು, ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ಕಾಲೇಜಿನ ಪ್ರಾಧ್ಯಾಪಕರಾಗಿ ನಿವೃತ್ತರಾದರು. He is a born Teacher ಎಂಬುದಾಗಿ ಎಲ್ಲರಿಂದಲೂ ಕೊಂಡಾಡಲ್ಪಟ್ಟವರು.
ಇವೆಲ್ಲಕ್ಕೂ ಶಿಖರಪ್ರಾಯವಾದುದೆಂದರೆ ಬಾಲ್ಯದಿಂದಲೇ ಭಗವದ್ಭಕ್ತ ಶಿರೋಮಣಿಗಳಾಗಿದ್ದರು. ಜೀವನದುದ್ದಕ್ಕೂ ಪರಮ ವಿರಕ್ತರಾಗಿದ್ದವರು. ಶ್ರೀರಂಗ ಮಹಾಗುರುಗಳ ಪ್ರಮುಖ ಶಿಷ್ಯರು. ಗುರುನಿಷ್ಠೆಗೆ ಆದರ್ಶಪ್ರಾಯರು. ಅತ್ಯುನ್ನತ ಮಟ್ಟದ ತಪಸ್ವಿಯೂ, ಯೋಗಿಗಳೂ ಆಗಿದ್ದರು. ತನ್ನೆಡೆಗೆಬಂದ ಮುಮುಕ್ಷುಗಳಿಗೆ ಸೂಕ್ತಸಂಸ್ಕಾರಗಳನ್ನು ಕೊಟ್ಟು ಶ್ರೀಗುರುವಿನೆಡೆಗೆ ಕರೆದೊಯ್ದ ಮಹಾಗುರುದ್ವಾರವಾದವರು.
ಶ್ರೀಗುರುವಿನಿಂದ ಕಲಿತು, ಪಾಂಡಿತ್ಯದಿಂದ ಬೆಳೆಸಿಕೊಂಡ ಭಾರತೀಯಸಂಸ್ಕೃತಿಯ ವಿಚಾರಗಳನ್ನು ಲೋಕದಮುಂದಿಡುವ ಗುರುಸೇವಾ ಕಾರ್ಯದಲ್ಲೇ ಅನವರತವೂ ನಿರತರಾಗಿದ್ದರು. ಈ ನೇರದಲ್ಲಿ ಸಾವಿರಾರು ಪ್ರವಚನಗಳನ್ನು ಅನೇಕ ವೇದಿಕೆಗಳಲ್ಲಿ ಕರುಣಿಸಿದ್ದಾರೆ. ಭಾರತೀಯ ಹಬ್ಬ-ಹರಿದಿನಗಳು ಎಂಬ ಬೃಹತ್‌ಗ್ರಂಥವನ್ನು ರಚಿಸಿ ಲೋಕಕ್ಕೆ ಪರಮೋಪಕಾರವನ್ನು ಮಾಡಿರುವರು. ವಿಚಾರಸುಮನೋಮಾಲಾ ಮುಂತಾಗಿ ಅನೇಕ ಗ್ರಂಥಗಳು ಇವರ ಪ್ರವಚನಗಳನ್ನೊಳಗೊಂಡದ್ದಾಗಿವೆ.
ಅಷ್ಟಾಂಗಯೋಗ ವಿಜ್ಞಾನ ಮಂದಿರದ ಕಾರ್ಯದರ್ಶಿಗಳಾಗಿದ್ದು ಕಾರ್ಯಗಳನ್ನು ಗುರುವಿನ ಆಶಯದಂತೆ ನಡೆಸುತ್ತಿದ್ದ ಮಹಾತ್ಮರು. ಭಾರತ ದರ್ಶನದ ಅಧ್ಯಕ್ಷರಾಗಿದ್ದು ಶ್ರೀಮದ್ರಾಮಾಯಣ, ಮಹಾಭಾರತ, ಶ್ರೀ ಮದ್ಭಾಗವತ, ಹರಿವಂಶ ಮುಂತಾದ ಗ್ರಂಥಗಳ ಕನ್ನಡ ಅನುವಾದಕ್ಕೆ ಮಾರ್ಗದರ್ಶಕರಾಗಿದ್ದರು.
ಸ್ವಾಮಿಗಳು ಪರಮ ಕರುಣಾಳುಗಳೂ, ಉದಾರರೂ ಆಗಿದ್ದರು. ವಯಸ್ಸು-ಕುಲ-ಗೋತ್ರ-ಜಾತಿ-ಮತ ಇದಾವ ಭೇದವೂಇಲ್ಲದೇ ತಮ್ಮಲ್ಲಿಬಂದವರೆಲ್ಲರಲ್ಲೂ ಒಂದೇರೀತಿಯಾಗಿ ಪರಮ ಪ್ರೀತಿ-ವಾತ್ಸಲ್ಯಗಳನ್ನು ತೋರುತ್ತಿದ್ದರು ಎಂಬುದಕ್ಕೆ ಅವರಲ್ಲಿಗೆ ಬಂದವರೆಲ್ಲರೂ ಸಾಕ್ಷಿಯಾಗಿದ್ದಾರೆ. (ಸ್ಮರಣಸಂಪುಟದಲ್ಲಿ ವಿವರಗಳನ್ನು ಕಾಣಬಹುದು)
ಹೀಗೆ ಉನ್ನತ ಮಟ್ಟದಲ್ಲಿ ಲೋಕೋಪಕಾರವನ್ನು ಗುರುಸೇವರೂಪದಲ್ಲಿ ಸಲ್ಲಿಸಿ ೨೦೧೨ ಇಸವಿ ಮಾರ್ಚ್ ತಿಂಗಳಿನಲ್ಲಿ ಭಗವಂತನ ಪಾದಾರವಿಂದಗಳನ್ನು ಸೇರಿದರು.