Sunday, October 7, 2018

ಗೃಹರಚನೆ (Griharachane)

                ಗೃಹ ಅಥವ ಮನೆ ಎಲ್ಲರಿಗೂ ಅತ್ಯಗತ್ಯವಾದದ್ದು. ಅದರಲ್ಲೂ ಸ್ವಂತಮನೆಯೇ ಆದರೆ ಅತ್ಯುತ್ತಮ. ಮನೆಕಟ್ಟಿ ನೋಡು, ಮದುವೆಮಾಡಿ ನೋಡು ಎನ್ನುವ ಗಾದೆಯಂತೆ ಈ ಕೆಲಸದಲ್ಲಿ ಆರ್ಥಿಕ ಹಾಗೂ ಇತರೇ ಸಮಸ್ಯೆಗಳನ್ನು ಎದುರಿಸಬಾಕಾದರೂ ನಮ್ಮ ಸೌಲಭ್ಯದಂತೆ ವಾಸಸ್ಥಾನವಾಗುವುದೇ ತೃಪ್ತಿಕರ. ಇತ್ತೀಚೆಗೆ ಸಾಕಷ್ಟು ಸೌಲಭ್ಯಗಳು ದೊರಕುವುದರಿಂದ ಕೆಲಸವು ಸುಲಭವಾಗುತ್ತಿದೆ.
                ಆಧುನಿಕ ಚಿಂತನೆಯಲ್ಲಿ ಮನೆಯೆಂಬುದು ನಮ್ಮ ಅನುಕೂಲಕ್ಕೆ, ಅಭಿರುಚಿಗೆ ತಕ್ಕಂತಿರಬೇಕು; ಸುಭದ್ರವಾಗಿಯೂ, ಸುರಕ್ಷಿತವಾಗಿಯೂ ಇರಬೇಕು. ವಾಸ್ತುಶಾಸ್ತ್ರಕ್ಕೆ ತಕ್ಕಂತಿರಬೇಕೆಂಬ ಅಂಶವೂ ಬಹಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ವಾಸ್ತುಸರಿಯಿಲ್ಲದಿದ್ದಲ್ಲಿ ಲಕ್ಷಾಂತರ ಖರ್ಚುಮಾಡಿಯಾದರು ಮನೆಯ ಕೆಲವುಭಾಗಗಳನ್ನು ಕೆಡವಿ ಸರಿಮಾಡಿಸುವ ಪರಿಪಾಟಿಯು ಕಂಡುಬರುತ್ತಿದೆ).
                ಗೃಹರಚನೆಯಲ್ಲಿ ಇಷ್ಟಂಶಗಳನ್ನು ಗಮನಿಸುವುದು ಸಾಕೆಂದರೆ ಪ್ರಾಣಿ-ಪಕ್ಷಿಗಳು ಈ ಕೆಲಸವನ್ನು ಮನುಷ್ಯನಿಗಿಂತಲೂ ಚೆನ್ನಾಗಿ ಮಾಡುತ್ತವೆಯಲ್ಲಾ! ಉದಾಹರಣೆಗೆ, ಗೀಜಗನು ತನ್ನ ಗೂಡಿನಲ್ಲಿ ಮೊಟ್ಟೆಗಳನ್ನಿಡಲು, ಆಹಾರಶೇಖರೆಣೆಗೆ ಇತ್ಯಾದಿಗಳಿಗೆ ಬೇರೆಬೇರೆ ಕೋಣೆಗಳನ್ನು ರಚಿಸಿ, ಗಾಳಿ-ಬೆಳಕೂ ಚೆನ್ನಾಗಿ ಬರುವಂತೆ, ಆಕರ್ಷಕವಾಗಿಯೂ ಇರುವಂತೆ ಕಟ್ಟುತ್ತದೆ. ಅದೂ ಯಾವ ಇನ್ಜಿನೀಯರ್, ಕೆಲಸಗಾರರ ಸಹಕಾರವೂ ಇಲ್ಲದೇಯೇ!
                ಹಾಗಾದರೆ ಮನುಷ್ಯನ ಗೃಹರಚನೆಯಲ್ಲಿ ಇನ್ಯಾವ ವೈಶಿಷ್ಟ್ಯವೂ ಇಲ್ಲವೇ? ಈ ವಿಚಾರದಲ್ಲಿ ಮಹರ್ಷಿಗಳ ಆಶಯವು ಉನ್ನತವಾದ ನೋಟವನ್ನೊಳಗೊಂಡಿದೆ. ಯಾವುದೇ ಮನೆಯನ್ನು ಕಟ್ಟಬೇಕಾದರೂ ಅದಕ್ಕೊಂದು ಪ್ಲಾನ್ ಅವಶ್ಯಕ. ಅದು ಮೊದಲು ನಮ್ಮ ಮತಿಯಲ್ಲಿ ಉದ್ಭವಿಸಿ ನಂತರ ಒಂದು ಹಾಳೆಯಮೇಲೆ ರೂಪತಳೆದು ಕಟ್ಟಡವಾಗಿ ಪರಿಣಮಿಸುತ್ತದೆ. ಆ ಪ್ಲಾನೇ ನಮ್ಮ ಮನೆಗೆ ಮಾಡಲ್ ಆಗುವುದು. ಆದರೆ ಜ್ಞಾನಿಗಳ ನೋಟದಲ್ಲಿ ಗೃಹರಚನೆಗೆ ಮಾಡಲ್ ಆಗಿರುವುದು ನಮ್ಮ ಶರೀರವೇ.
                ಶರೀರದ ವಿವಿಧ ಕೋಶಗಳು ಯಜಮಾನನಾದ ಜೀವಿಯ ಆಶಯದಂತೆ ಸುವ್ಯವಸ್ಥಿತವಾಗಿರುವಂತೆ ನಮ್ಮ ಮನೆಯೂಕೂಡ ನಮ್ಮೊಳಗಿನ ಜೀವಿಯ ಆಶಯಕ್ಕೆ ತಕ್ಕಂತಿರಬೇಕು. ಜೀವಿಯ ಆಶಯವೇನು? ಎಂದರೆ ನಮ್ಮ ಇಂದ್ರಿಯಗಳ ಕಾಮನೆಯನ್ನೇ ಆಶಯವೆಂದು ತಿಳಿಯುತ್ತೇವೆ. ಖೈದಿಯೊಬ್ಬನು ಮತ್ತೊಬ್ಬರ ಅಧೀನದಲ್ಲಿದ್ದಾಗ ನ್ಯಾಯಾಧೀಶನ ಮುಂದೆಯೇ ನಿಲ್ಲಿಸಿದರೂ ನಿಜವನ್ನು ಹೇಳಲಾಗದೆ  ತನ್ನನ್ನು ವಶಪಡಿಸಿಕೊಂಡವರು ನುಡಿಸಿದಂತೆಯೇ ನುಡಿಯುತ್ತಾನೆ. ಅಂತೆಯೇ ನಾವೂಸಹ ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿರುವಾಗ ನಮ್ಮ ನಿಜವಾದ ಆಶಯವನ್ನು ತಿಳಿಯಲಾಗುವುದಿಲ್ಲ. ಆದರೆ ಇಂದ್ರಿಯಗಳ ಸಂಕೋಲೆಯಿಂದ ಬಿಡಿಸಿಕೊಂಡ ಜ್ಞಾನಿಗಳು ಸಾರುವುದು: ಜೀವಿಯ ಆಶಯ-ತಾನು ಎಲ್ಲಿಂದ ಬಂದನೋ ಆ ಭಗವಂತನೆಡೆಗೇ ಸಾಗ ಬೇಕೆನ್ನುವುದೇ. ಆದ್ದರಿಂದ ಜ್ಞಾನಿಗಳ ಉಪಾಯವೇನೆಂದರೆ ಜೀವನದಲ್ಲಿ ಭಗವಂತನೆಡೆಗೆ ಸೇರಲು ಅಡ್ಡಿಮಾಡದಂತೆ ಇಂದ್ರಿಯಗಳಿಗೆ ಬೇಕಾದ ಸುಖವನ್ನೂ ಕೊಟ್ಟುಕೊಂಡೇ ಭಗವಂತನೆಡೆಗೆ ಸಾಗುವಂತೆ ಮಾಡುವುದು. ಅದೇ ಧರ್ಮ-ಅರ್ಥ-ಕಾಮ-ಮೋಕ್ಷಗಳಿಂದೊಡಗೂಡಿದ ಪುರುಷಾರ್ಥಮಯ ಜೀವನವಿಧಾನ. ಅದಕ್ಕಾಗಿ ಜೀವವು ನಿರ್ಮಿಸಿಕೊಂಡ ದಿವ್ಯವಾದ ಗೂಡೇ ಈ ಶರೀರ. ಮಾನವಶರೀರ ಯೋಗ-ಭೋಗಾಯತನವಾದ, ಅದ್ಭುತವಾದ ಸಹಜಶಿಲ್ಪವಾಗಿದೆ.
                ಆದ್ದರಿಂದ ಋಷಿಗಳ ನೋಟದಲ್ಲಿ ಗೃಹವೂಕೂಡ ಯೋಗ-ಭೋಗಗಳಿಗೆ ಎಡೆಯಾಗಿ ಅದಕ್ಕೆ ಅನುಕೂಲಿಸುವಂತಿರಬೇಕು. ಧರ್ಮಮಯವಾದ ಜೀವನನಡೆಸಲು ಮನೆಯಲ್ಲಿ ದುಷ್ಟಶಕ್ತಿಗಳನ್ನು ಓಡಿಸಿ ದೇವತಾಶಕ್ತಿಗಳನ್ನು ತುಂಬಬೇಕು. ಈ ಬಗೆಗೆ ವಿವರಗಳನ್ನು ನೀಡುವುದೇ ವಾಸ್ತುಶಾಸ್ತ್ರ.
                ಮನೆಯ ನಾಲ್ಕು ಗೋಡೆಗಳು ನಾಲ್ಕು ಪುರುಷಾರ್ಥಗಳಿಂದ ಕೂಡಿದ ಜೀವನವನ್ನು ಮಾಡಬೇಕೆನ್ನುವುದನ್ನು ನೆನೆಪಿಸುತ್ತವೆ. ಮನೆಯಲ್ಲಿನ ಕಂಭಗಳೇ ಪ್ರಾಣಾಪಾನಗಳೆಂಬ ಕಂಭದಮೇಲೆ ಶರೀರವು ನಿಂತಿರುವುದರ ಪ್ರತೀಕ. ಮನೆಯ ಮಧ್ಯದಲ್ಲಿ ಪ್ರಧಾನವಾಗಿ ಧರ್ಮದ ಪ್ರತೀಕವಾಗಿ ಒಂದು ಕಂಭವಿರಬೇಕು. ಸೂರ್ಯ-ಚಂದ್ರರ ಗುರುತಾಗಿ ಎರಡು ಬಾಗಿಲುಗಳು. ಮೋಕ್ಷಸಾಧನವಾದ ಪೂಜಾಗೃಹವೆಂಬುದು ಮನೆಯ ಅತ್ಯಗತ್ಯವಾದ ಭಾಗವಾಗಿರಬೇಕು. ಇಂತಹ ವಾಸ್ತುವಿನಿಂದ ಕೂಡಿದ್ದರೆ ಪುರುಷಾರ್ಥಸಾಧನೆ ಸುಲಭವೆಂಬುದು ಮಹರ್ಷಿಗಳ ದೃಷ್ಟಿಯಾಗಿದೆ.
ಶರೀರದಮಾಡಲ್‌ನಲ್ಲಿಯೇ ಗೃಹವನ್ನುನಿರ್ಮಿಸಿ ಜೀವದ ಆಶಯದಂತೆ ಜೀವನಮಾಡಿದರೆ ಬಾಳಾಟ; ಇಲ್ಲವೆಂದರೆ ಗೋಳಾಟವೇ ಸರಿ.
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.