ಲೇಖಕರು: ಮೈಥಿಲೀ ರಾಘವನ್, ಬೆಂಗಳೂರು
ಏನಿದು ಪ್ರಶ್ನೆ? ಮನಸ್ಸನ್ನು
ಸೆಳೆಯುವುದನ್ನು ಬಯಸಬೇಕು. ಇಂದಿನ ಯುಗದಲ್ಲಿ ಎತ್ತ ತಿರುಗಿದರೂ ಮನಸೆಳೆಯುವ ವಿಷಯಗಳು
ಅಸಂಖ್ಯಾತವಾಗಿ ಕಂಡು ಬರುತ್ತಿವೆ. ಅಲಂಕಾರ ಸಾಧನ ಸಾಮಗ್ರಿಗಳು, ನೂತನ ಶೈಲಿಯ ವೇಷಭೂಷಣಗಳು, ಮನೋರಂಜನೆಯ ಮಾಧ್ಯಮಗಳು, ಬಗೆಬಗೆಯ ಆಹಾರ ಪದಾರ್ಥಗಳು, ಸುಖಸೌಲಭ್ಯಗಳನ್ನು ಒದಗಿಸುವ ಯಂತ್ರಗಳು ಇತ್ಯಾದಿ.
ಇವುಗಳಿಂದ ಮನೆತುಂಬಿಸುವಷ್ಟು ಶ್ರೀಮಂತಿಕೆಯೂ ಸಹ ಇಂದು ಸರ್ವ ಸಾಮಾನ್ಯವಾಗಿದೆ. ಹೀಗಿರುವಾಗ
ಏನನ್ನು ಬಯಸೋಣ ಎಂಬ ಪ್ರಶ್ನೆಯೇ ಹಾಸ್ಯಾಸ್ಪದ. ಎಲ್ಲೆಡೆಯಲ್ಲೂ ಚೆನ್ನನ್ನೇ ಬಯಸುವುದು ಮಾನವನ
ಪ್ರವೃತ್ತಿಯಾದ್ದರಿಂದ ಚೆನ್ನಾಗಿರುವ ಯಾವುದೇ ಪದಾರ್ಥವನ್ನಾದರೂ ಬಯಸಿ ಪಡೆದು
ಸಂತೋಷಿಸಬಹುದಲ್ಲವೇ?
ನಮ್ಮ ಮನಸ್ಸನ್ನು ಆಕರ್ಷಿಸುವ ವಸ್ತುವೇ ನಮ್ಮ ಪಾಲಿಗೆ ಚೆನ್ನಾಗುವುದು. ಆದರೆ ನಮಗೆ
ಪ್ರಿಯವಾದದ್ದು ಮತ್ತೊಬ್ಬರಿಗೆ ಅಪ್ರಿಯವಾಗಬಹುದು. ಆದ್ದರಿಂದ ಯಾವುದು ಚೆನ್ನು ಎಂಬ ನಿರ್ಣಯವು
ಅವರವರ ಅಭಿರುಚಿಯನ್ನವಲಂಬಿಸಿದೆಯೇ ಹೊರತು ವಸ್ತುನಿಷ್ಟವಾದುದಲ್ಲ ಎನ್ನೋಣವೇ?
ಕುಡುಕನೊಬ್ಬನಿಗೆ ಮದ್ಯಪಾನವೇ ಚೆನ್ನು, ಪ್ರಾಣಕ್ಕಿಂತಲೂ ಪ್ರಿಯ. ಇಂದಿನ ಬಾಲಕರಿಗೆ ಆಟೋಟಗಳಿಗಿಂತಲೂ ನಿರಂತರ ಕಾರ್ಟೂನ್-ನೋಟವೇ
ಚೆನ್ನು. ಅನೇಕರಿಗೆ ಬೀದಿಯಲ್ಲೇ ತಯಾರಾಗಿ ಅಲ್ಲೇ ಮಾರಾಟವಾಗುವ (ಧೂಳುತುಂಬಿದ) ಆಹಾರವೇ ಬಲು
ಆಸ್ವಾದನೀಯ. ಆದರೆ ಒಬ್ಬ ವೈದ್ಯನ ನೋಟದಲ್ಲಿ ಇವು ಯಾವುದೂ ಚೆನ್ನಲ್ಲ. ಕಾರಣ ಇವು
ದೇಹಾರೋಗ್ಯಕ್ಕೆ ತಂದೊಡ್ಡುವ ತೊಡಕು ಮತ್ತು ಉಂಟುಮಾಡುವ ಬುದ್ಧಿಭ್ರಮಣ. ಇಲ್ಲಿ ದೇಹ ಮತ್ತು
ಬುದ್ಧಿಗಳ ಮೇಲೆ ಆಗುವ ಪರಿಣಾಮವೇ ಚೆನ್ನಿನ ನಿರ್ಣಯಕ್ಕೆ ಮಾನದಂಡ. ಆದ್ದರಿಂದ ವಿವೇಕದಿಂದ
ನೋಡಿದಾಗ ಆಕರ್ಷಣೆಗಿಂತ ಆರೋಗ್ಯವೇ ಪ್ರಧಾನವೆಂಬುದು ನಿಸ್ಸಂಶಯ. ಮತ್ತು ಚೆನ್ನೆಂಬುದು
ವ್ಯಕ್ತಿಗತವಲ್ಲ, ಪದಾರ್ಥದ
ಗುಣವನ್ನವಲಂಬಿಸಿದೆಯೆಂಬುದೂ ಸ್ಪಷ್ಟವಾಗುತ್ತದೆ.
ಇನ್ನೂ ಆಳವಾಗಿ ವಿವೇಚಿಸುವುದಾದರೆ, ನಮ್ಮ ಮನಸ್ಸನ್ನು
ದುಃಖದುಗುಡಗಳು ಆವರಿಸಿರುವಾಗ ಮೇಲೆ ಹೇಳಿದ ಆರೋಗ್ಯದ ದೃಷ್ಟಿಯಿಂದ ಚೆನ್ನಾದ ಯಾವುದೇ ವಸ್ತುವೂ
ನಮಗೆ ರುಚಿಸದು. ಕಾರಣ ಎಂತಹ ಸುಖವನ್ನಾದರೂ ನಾವು ಅನುಭವಿಸುವುದು ಮನಸ್ಸಿನ ಮೂಲಕವೇ ಅಲ್ಲವೇ?
ಆದ್ದರಿಂದ ಮನಸ್ಸಿನ
ಸ್ವಾಸ್ಥ್ಯದ ಮೇಲೆ ಆಗುವ ಪರಿಣಾಮವು ಒಳಿತನ್ನು ನಿರ್ಣಯಿಸುವಲ್ಲಿ ಹೆಚ್ಚಿನ ಪಾತ್ರವನ್ನು
ವಹಿಸುತ್ತದೆ ಎನ್ನಬಹುದು. ಯಾವುದೇ ಪದಾರ್ಥವನ್ನೂ ಬಯಸುವ ಮುನ್ನ ಈ ದೃಷ್ಟಿಯಿಂದ ಅದನ್ನು
ಅಳೆಯುವುದು ಅನಿವಾರ್ಯವೆಂದರೆ ತಪ್ಪಾಗಲಾರದು.
ಹಾಗಾದರೆ ಮನಸ್ಸಿನ ಸ್ವಾಸ್ಥ್ಯವೆಂದರೇನು? ಕಣ್ಣಿನ ಆರೋಗ್ಯವೆಂದರೆ ಸಾಮಾನ್ಯರ ಗಣನೆಗೆ ಕಣ್ಣು ಕಾಣೀಸುತ್ತಿದೆ ಎನ್ನುವುದಷ್ಟೇ. ಆದರೆ
ಕಣ್ಣಿನತಜ್ಞನೊಬ್ಬನಿಗೆ ಇದಿಷ್ಟೇ ಆರೋಗ್ಯದ ಲಕ್ಷಣವಲ್ಲ. ಕಣ್ಣಿನ ಹಿಂದಿರುವ ನರಮಂಡಲಗಳು,
ಅವುಗಳ ಉಗಮಸ್ಥಾನವಾದ
ಮೆದುಳಿನಕೇಂದ್ರ, ಅಲ್ಲಿ ನಡೆಯುವ
ಪ್ರಕ್ರಿಯೆಗಳು-ಇವೆಲ್ಲವೂ ತಮ್ಮ ಸ್ವಸ್ಥಿಯಲ್ಲಿದ್ದು ಪೂರ್‍ಣ ಸಾಮರ್ಥ್ಯದಿಂದ ಕೂಡಿರುವುದೇ
ಕಣ್ಣಿನ ಆರೋಗ್ಯಸ್ಥಿತಿ ಎಂಬುದಾಗಿ ಪರಿಗಣಿಸುತ್ತಾನೆ. ಅದರಂತೆಯೇ ಮನಸ್ಸು ತನ್ನ ಪೂರ್ಣ
ಸಾಮರ್ಥ್ಯದಿಂದ ಕೂಡಿರುವುದೇ ಅದರ ಆರೋಗ್ಯದ ಲಕ್ಷಣ. ಈ ಬಗೆಗೆ ಆಧುನಿಕ ವೈದ್ಯಶಾಸ್ತ್ರವು
ಸಾಕಷ್ಟು ವಿವರಣೆಗಳನ್ನು ನೀಡುತ್ತಿದೆ. ಆ ವಿಚಾರಗಳೆಲ್ಲವೂ ಭೌತಿಕಕ್ಷೇತ್ರವನ್ನು ಸಾದ್ಯವಾದಷ್ಟು
ಮಟ್ಟಿಗೆ ಅನ್ವೇಷಣೆ ಮಾಡಿ ನಿರ್ಧರಿಸಿದ ಅಂಶಗಳಾಗಿವೆ.
ಆದರೆ ಭಾರತೀಯ ಮಹರ್ಷಿಗಳ ಅನುಭವಸಿದ್ಧವಾದ ಘೋಷಣೆಯೆಂದರೆ ಪ್ರತಿಮಾನವನಲ್ಲೂ
ಭೌತಿಕಕ್ಷೇತ್ರವನ್ನೂ (ಅಂಗೋಪಾಂಗಗಳನ್ನೂ) ಮೀರಿದ ಅನೇಕ ಕೇಂದ್ರಗಳುಂಟು. ಅಲ್ಲಿ ಬೆಳಗುವ
ಅನೇಕಾನೇಕ ದೇವತಾಶಕ್ತಿಗಳುಂಟು. ಆ ದೇವತೆಗಳಿಗೂ ನಿಯಾಮಕನಾದ ಪರಾತ್ಪರ ವಸ್ತು, ಪರಮಾತ್ಮನುಂಟು. ಮಾನವನ ಮನಕ್ಕೆ ಆ
ಕೇಂದ್ರಗಳನ್ನೆಲ್ಲವನ್ನೂ ಮುಟ್ಟಿ ಆಯಾ ದೇವತೆಗಳನ್ನೂ, ಪರಮಾತ್ಮನನ್ನೂ ದರ್ಶನಮಾಡಿ ಅದರಿಂದಾಗುವ
ಪರಮಾನಂದವನ್ನು ಭುಜಿಸಿ ಸುಖಿಸುವ ಯೋಗ್ಯತೆಯು ಜನ್ಮಸಹಜವಾಗಿಯೇ ಉಂಟು. ಕರ್ಮವಶದಿಂದಾಗಿ
ಮುಚ್ಚಿಹೋಗಿರುವ ಆ ಕೇಂದ್ರಗಳು ಸದ್ಗುರುವಿನ ಅನುಗ್ರಹ, ಮಾರ್ಗದರ್ಶನಗಳಿಂದಕೂಡಿದ ಪ್ರಯತ್ನದಿಂದ ಮತ್ತೆ
ತೆರೆಯಬಲ್ಲುದು ಎಂಬುದನ್ನು ಜ್ಞಾನಿಗಳು ಘಂಟಾಘೋಷವಾಗಿ ಸಾರುತ್ತಾರೆ.
ಮನುಷ್ಯಮಾತ್ರರಿಗೆ ಸಹಜ ಸಿದ್ಧವಾದ ಈ ಯೋಗ್ಯತೆಯನ್ನು ಮತ್ತೆ ಪಡೆಯುವುದೇ ಮನಸ್ಸಿನ
ಪೂರ್ಣಸಾಮರ್ಥ್ಯದ, ಆರೋಗ್ಯದ ಲಕ್ಷಣ
ಎನ್ನುವುದು ಋಷಿ ದೃಷ್ಟಿ. ಆದ್ದರಿಂದ ನಾವು ಬಯಸಿ ಬಳಸುವ ಪದಾರ್ಥವು ಮನಸ್ಸಿನ ಈ ಸಾಮರ್ಥ್ಯವನ್ನು
ಕುಂಠಿತಗೊಳಿಸದಿದ್ದರೆ ಮಾತ್ರವೇ ಅವು ಬಳಕೆಗೆ ಯೋಗ್ಯವೆಂಬುದು ಅವರ ಮತ.
ಎಲ್ಲ ವಸ್ತುಗಳೂ ದರ್ಶನ-ಸ್ಪರ್ಶ-ಆಘ್ರಾಣಗಳ ಮೂಲಕ ಮಾನವನಮೇಲೆ ತಮ್ಮ ಪ್ರಭಾವವನ್ನು
ಅವಶ್ಯವಾಗಿ ಬೀರುತ್ತವೆ. ಅವುಗಳ ಪರಿಣಾಮವು ಭೌತಿಕ-ದೈವಿಕ-ಆಧ್ಯಾತ್ಮಿಕವೆಂಬ ಮೂರೂ
ಕ್ಷೇತ್ರಗಳಲ್ಲೂ ಆಗುವುದು ಎಂಬುದು ಋಷಿಗಳ ಪ್ರಯೋಗಸಿದ್ಧವಾದ ಸತ್ಯ. ತುಲಸಿ, ಎಲಕ್ಕಿ ಮುಂತಾದ ಕೆಲವುಪದಾರ್ಥಗಳು ಮೂರೂ
ಕ್ಷೇತ್ರಗಳಲ್ಲಿ ಸಂಚರಿಸಲು ಸಹಕರಿಸುವುವಾದರೆ ಈರುಳ್ಳಿ, ಬೆಳ್ಳುಳ್ಳಿ ಮುಂತಾದವು ದೇಹಾರೋಗ್ಯದೃಷ್ತಿಯಿಂದ
ಅತ್ಯುತ್ತಮವಾದವುಗಳಾದರೂ ದೈವೀ ಕೇಂದ್ರಗಳನ್ನು ಮುಟ್ಟಲು ಅಡ್ಡಿಯಾಗುತ್ತವೆ. ಆದ ಕಾರಣದಿಂದಲೇ
ಋಷಿಗಳು ಪದಾರ್ಥಗಳನ್ನು ಸೇವ್ಯ, ವರ್ಜ್ಯ ಎಂಬುದಾಗಿ
ವರ್ಗೀಕರಿಸಿದ್ದಾರೆ. ಋಷಿದೃಷ್ಟಿಗೆ ಗೋಚರವಾಗಿ ಕಾಲಕ್ರಮದಲ್ಲಿ ಮರೆಯಾಗಿರುವ ಈ ಪದಾರ್ಥವಿಜ್ಞಾನದ
ಮೇಲೆ ಬೆಳಕನ್ನು ಚೆಲ್ಲಿ ಪುನರುಜ್ಜೀವನಗೊಳಿಸಿದವರು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು.
ಇವರು ದ್ರವ್ಯಗಳ ಮೂರೂಕ್ಷೇತ್ರಗಳಲ್ಲಿನ ಗುಣಮಟ್ಟವನ್ನು ನಿಖರವಾಗಿ ಅಳೆದು ಹೇಳುವ ಸಾಮರ್ಥ್ಯದಿಂದ
ಕೂಡಿದ ಮಹಾಪುರುಷರಾಗಿದ್ದರು.
ಭಗವತ್ಸಾಕ್ಷಾತ್ಕಾರದ ಮೂಲಕ ಎಣೆಯಿಲ್ಲದ ಪರಮಾನಂದವನ್ನು ಅನುಭವಿಸುವ ಆಕಾಂಕ್ಷೆಯುಳ್ಳವರಿಗೆ
ಪದಾರ್ಥಗಳ ಆಯ್ಕೆಯಲ್ಲಿ ಇದೊಂದು ಮಾನದಂಡವಾಗುವುದು ಎಂಬುದುರಲ್ಲಿ ಸಂಶಯವಿಲ್ಲ.