Saturday, October 27, 2018

ಅವತಾರ (Avatara)


ಶ್ರೀರಾಮ ಮತ್ತು ಶ್ರೀಕೃಷ್ಣ ಹಾಗೂ ಇನ್ನೂ ಅನೇಕ ಮಹಾಪುರುಷರನ್ನು ಅವತಾರಪುರುಷರೆಂದು ಆರಾಧಿಸುವ ಪರಂಪರೆ ನಮ್ಮ ದೇಶದಲ್ಲಿದೆ.ಅವರ ಪುಣ್ಯಕಥೆಗಳನ್ನು ಪುನಃಪುನಃ ಕೇಳಿ ಧನ್ಯರಾಗಬೇಕೆಂದು ಬಯಸುವ ಭಕ್ತರೂ ಅಸಂಖ್ಯ. ಒಟ್ಟಾರೆ ಅವತಾರದ ಪರಿಕಲ್ಪನೆಯು ನಮ್ಮ ಭಾರತೀಯ ಜೀವನದ ಒಂದು ಅವಿಭಾಜ್ಯ ಅಂಗ.

ಆದರೆ ಅವತಾರದ ಯತಾರ್ಥತೆಯ ಬಗ್ಗೆಯೇ  ಪ್ರಶ್ನೆಗಳೂ ಇಲ್ಲದಿಲ್ಲ. 

1.ವಿಶ್ವವ್ಯಾಪಕನಾದ ದೇವರಿಗೆ ಅವತಾರವೆನ್ನುವುದು ಸರಿಯಲ್ಲ.ಅವತರಿಸುವುದು ಎಂದರೆ ಇಳಿದುಬರುವುದು ಎಂದರ್ಥ.ಹಾಗೆ ಇಳಿದುಬಂದರೆ ಅವನು ಹಿಂದೆ ಇದ್ದ ಜಾಗವು ಬರಿದಾಗುವುದೇ? ಅವನು ಇಲ್ಲದ ಜಾಗವೇ ಇಲ್ಲ.ಆಗ ಅವನು ಒಂದೆಡೆಯಿಂದ ಇನ್ನೊಂದೆಡೆಗೆ ಇಳಿದುಬರುವುದು ಎಂದರೆ ಅರ್ಥಹೀನವಲ್ಲವೇ? ಹಾಗಾಗಿ ಭಗವಂತನಿಗೆ ಆಗಮನ ನಿರ್ಗಮನಗಳಿಲ್ಲ.

2.ಅವತಾರವೆಂದರೆ ಮನುಷ್ಯ ಇತ್ಯಾದಿ ಜನ್ಮಗಳನ್ನು ತಾಳುವುದು.ಆದರೆ ಹಾಗೆ ಹೇಳುವುದು ಭಾರತೀಯ ಶಾಸ್ತ್ರಚಿಂತನೆಗೇ ವಿರುದ್ಧವಾದದ್ದು.ಏಕೆಂದರೆ ಹುಟ್ಟು-ಸಾವುಗಳು ವಿಕಾರಗಳು.ಅವತಾರವಾದವನ್ನು ಒಪ್ಪಿದರೆ ಭಗವಂತನಿಗೆ ವಿಕಾರವನ್ನು ಆರೋಪಿಸಿದಂತಾಗುತ್ತದೆ.ಅದು ಸರಿಯಲ್ಲ.ಅವಿಕಾರಾಯ ಶುದ್ಧಾಯ ಎಂದು ಅವನನ್ನು ಸ್ತುತಿಸುತ್ತೇವೆ.

3.ಭಗವಂತನು ಎಲ್ಲರೊಳಗೂ ಇರುವ ಅಂತರ್ಯಾಮಿ.ಆದ್ದರಿಂದ ದುಷ್ಟನಿಗ್ರಹ,ಅಧರ್ಮದ ನಾಶವನ್ನು ಅವತರಿಸಿಯೇ ಮಾಡಬೇಕೆಂದಿಲ್ಲ.ಅವನು ಸರ್ವಶಕ್ತ,ಸರ್ವಜ್ಞ.ಒಳಗಿನಿಂದಲೇ ದುಷ್ಟರ ಬುದ್ಧಿಯಲ್ಲಿ ಪರಿವರ್ತನೆ ತರಬಲ್ಲ.ಆದ್ದರಿಂದ ಅವತಾರದ ಆವಶ್ಯಕತೆಯೇ ಇಲ್ಲವಲ್ಲ ?.

4.ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ಆದರ್ಶ ಮಾನವರೆಂದು ಗೌರವಿಸಿ ಅನುಸರಿಸಿದರೆ ಸಾಲದೇ? ಎನ್ನುವುದು ಕೆಲವರ ವಾದ.

 ಆದರೆ ದೈವತ್ವವನ್ನು ಅಳೆಯಲು ಅತೀಂದ್ರಿಯ ದೃಷ್ಟಿ ಬೇಕು ಎನ್ನುವುದು ಋಷಿಗಳ ಅನುಭವಾತ್ಮಕವಾದ ನಿರ್ಣಯ. “ದೃಶ್ಯತೇ ಜ್ಞಾನಚಕ್ಷುರ್ಭಿಃ ತಪಶ್ಚಕ್ಷುರ್ಭಿರೇವಚ,,,,” ಜೊತೆಗೆ, ಪ್ರತ್ಯಕ್ಷಾನುಭವ,ಯುಕ್ತಿ-ತರ್ಕ ಮತ್ತು ಆಪ್ತವಾಕ್ಯ (ಅನುಭವಿಗಳ ನೈಜಕಥನ) ಇವುಗಳನ್ನು ಆಧರಿಸಿಯೇ ನಾವು ನಿಜವನ್ನು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ.

ಅವತಾರದ ವಿಷಯದಲ್ಲಿ ಜ್ಞಾನಿಗಳ ಅನುಭವದ ಗಾಥೆಯನ್ನೂ,ಆ ಅನುಭವಕ್ಕೆ ಹೊಂದುವ ಯುಕ್ತಿಯನ್ನೂ, ಇವೆರಡನ್ನೂ ಆಧರಿಸಿರುವ ಆಪ್ತ(ಸತ್ಯ)ವಚನಗಳನ್ನೂ ಭಾರತೀಯ ಸಾಹಿತ್ಯದಲ್ಲಿ ವಿಪುಲವಾಗಿ ಕಾಣುತ್ತೇವೆ.ಜೊತೆಗೆ ಭಿನ್ನ ಭಿನ್ನ ಕಾಲ-ದೇಶಗಳಲ್ಲಿ ಅವತಾರಪುರುಷರ ದರ್ಶನಾದಿ ಅನುಭವಗಳು ಸಾಧಕರಲ್ಲಿ ಕಂಡುಬಂದಿರುವ ಇತಿಹಾಸ ಕೂಡ ಇದೆ.

ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತತಮವಾಗಿ ಮೇಲಿನ ಪ್ರಶ್ನೆಗಳ ಸಮಾಧಾನಕ್ಕೆ ಯತ್ನಿಸೋಣವಂತೆ. ಭಗವಂತನಿಗೆ ಪಾರಮಾರ್ಥಿಕವಾಗಿ ಏರಿಕೆ,ಇಳಿಕೆ ಯಾವುದೂ ಇಲ್ಲ. ಅವನು ಸರ್ವತ್ರ ಸದಾ ಪರಿಪೂರ್ಣನು.ಕರ್ಮಸಂಬಂಧದಿಂದ ಉಂಟಾಗುವ ಹುಟ್ಟೂ ಅವನಿಗೆ ವಾಸ್ತವವಾಗಿ ಇಲ್ಲ. ಅವನಿಗೆ ಅವತಾರವನ್ನು ಹೇಳಿರುವುದು ಔಪಚಾರಿಕ ಅರ್ಥದಲ್ಲಿ ಮಾತ್ರ.ಅವನು ತನ್ನ ಸಂಕಲ್ಪದಿಂದ ಇಲ್ಲಿ ಯಾವಾಗ ಜೀವಿಗಳಿಗೆ ವ್ಯಕ್ತಪಡುತ್ತಾನೆಯೋ ಆಗ ಅದು ಅವನ ‘ಅವತಾರ’ ಎಂದು ಕರೆಯಲಾಗಿದೆ.ಹೀಗೆ ಭಗವಂತನ ಅವತಾರವು ಅಭಿವ್ಯಕ್ತಿಯೇ ಹೊರತು ವಾಸ್ತವವಾದ ಇಳಿತವಲ್ಲವಾದ್ದರಿಂದ ಅವನ ಪೂರ್ಣತೆ ವ್ಯಾಪಕತೆಗಳಿಗೆ ವಿರೋಧವೇನೂ ಇಲ್ಲ.

ಹುಟ್ಟುಸಾವುಗಳನ್ನು ವಿಕಾರವೆಂದು ಕರೆಯುವ ಶಾಸ್ತ್ರಗಳು ಭಗವಂತನನ್ನು ಅಜಾಯಮಾನೋ ಬಹುಧಾ ವಿಜಾಯತೇ-ಅಂದರೆ ಹುಟ್ಟದೆಯೇ ಹುಟ್ಟುತ್ತಾನೆ ಎನ್ನುತ್ತವೆ. ಅಂದರೆ ಅವನು ತನ್ನ ಸಂಕಲ್ಪಕ್ಕೆ ಅನುಗುಣವಾಗಿ ಅಭಿವ್ಯಕ್ತನಾಗುತ್ತಾನೆಯೇ ಹೊರತು ಜನ್ಮಾಂತರದ ಕರ್ಮಗಳ ಕಾರಣದಿಂದಲ್ಲ. ಆದ್ದರಿಂದ ವಿಕಾರವೆಂಬುದು ಅವನಿಗೆ ಅನ್ವಯಿಸುವುದಿಲ್ಲ.

ಅಂತರ್ಯಾಮಿಯಾಗಿ ತನ್ನ ಸಂಕಲ್ಪವನ್ನು ಪೂರೈಸಿಕೊಳ್ಳುವುದು ಸರ್ವಶಕ್ತನಾದ ಅವನಿಗೆ ಅಸಾಧ್ಯವೇನಲ್ಲ. ಹಾಗೆಂದು ಭಕ್ತರ ಅಂತರ್ಬಾಹ್ಯ ದೃಷ್ಟಿಗೆ ಗೋಚರನಾಗಿ,ಪರಮನಯನೋತ್ಸವಕಾರಣನಾಗಿ ಅವರನ್ನು ಉದ್ಧಾರ ಮಾಡುವ ಸ್ವಾತಂತ್ರ್ಯ ಅವನಿಗಿಲ್ಲವೆ ?

ಅವತಾರಪುರುಷರು ಧ್ಯಾನಕ್ಕೆ ಶುಭಾಶ್ರಯರಾಗಿ ಉಪಾಸಕರಿಗೆ ಭೋಗ-ಮೋಕ್ಷಗಳನ್ನು ಅನುಗ್ರಹಿಸುವ ಶಕ್ತಿಯುಳ್ಳವರಾಗಿರುತ್ತಾರೆ. ಅವತಾರಕ್ಕೆ ಪೂರ್ವದಲ್ಲೂ, ಅವತಾರಕಾಲದಲ್ಲೂ ಮತ್ತು ಉಪಸಂಹಾರದ ನಂತರವೂ ಅವರ ಸತ್ತೆಯು-ಪ್ರಭಾವವು ಒಂದೇ ತೆರನಾಗಿರುತ್ತದೆ. ಅದೇ ತಾನು ಒಬ್ಬ ಜೀವಿಯಾಗಿದ್ದು ತನ್ನ ಸಾಧನೆಯಿಂದ ಸಿದ್ಧಿಯನ್ನು ಪಡೆದವನಿಗೆ ಆ ಮಟ್ಟದ ಸಾಮರ್ಥ್ಯವಿರುವುದಿಲ್ಲ. ಇನ್ನು ಆದರ್ಶವಾದ ಜೀವನವನ್ನು ನಡೆಸಿರುವ ನಾಯಕನಾಗಿದ್ದಲ್ಲಿ ಅವನ ಅನುಕರಣೆಯಿಂದ ಜನರು ಧಾರ್ಮಿಕರಾಗಬಹುದು ಅಷ್ಟೆ.

ಹೀಗೆ  ಅವತಾರದ ಪರಿಕಲ್ಪನೆಯು ಅತೀಂದ್ರಿಯ ಅನುಭವಸಂಪನ್ನರ ಕಾರಣದಿಂದ  ಭಾರತೀಯರ ಜೀವನವನ್ನು ಹಾಸುಹೊಕ್ಕಾಗಿ ವ್ಯಾಪಿಸಿಕೊಂಡಿದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.