Showing posts with label author_mgprasad. Show all posts
Showing posts with label author_mgprasad. Show all posts

Saturday, August 3, 2019

ನಮ್ಮ ಜೀವನಕ್ಕೆ ಯೋಗ ಅಗತ್ಯವಾಗಿರಬೇಕು (Namma jeevanakke yoga agatyavaagirabeku)

ಲೇಖಕರು: ಡಾ. ಎಂ. ಜಿ. ಪ್ರಸಾದ್, ಅಮೇರಿಕಾ


ವಿಶ್ವದ ಎಲ್ಲೆಡೆಯಲ್ಲಿಯೂ ಮನುಷ್ಯನು ಜೀವನದಲ್ಲಿ ಸುಖ ಹಾಗೂ ಸಂತೋಷವನ್ನು  ಪಡೆಯಲು ಪ್ರಯತ್ನಿಸುತ್ತಿರುತ್ತಾನೆ. ಇದಕ್ಕಾಗಿ ಬಹಳ ಹಿಂದಿನ ಕಾಲದಿಂದಲೂ ಜೀವನ ವಿಧಾನವನ್ನು ರೂಪಿಸುವ ಮಾರ್ಗಕ್ಕಾಗಿ ಅನ್ವೇಷಣೆ ನಡೆದಿದೆ. ಇಂತಹ ಅನ್ವೇಷಣೆಗಳ ಇತಿಹಾಸದಲ್ಲಿ ಸನಾತನ ಧರ್ಮದ ಋಷಿಗಳಿಂದ ರೂಪುಗೊಂಡ ಯೋಗಮಾರ್ಗವು ವಿಶ್ವವಿಖ್ಯಾತವಾಗಿದೆ.

ಯೋಗವೆಂದರೇನು?

'ಯೋಗ' ಎನ್ನುವ ಪದ ' ಯುಜ್ ' ಎಂದರೆ ' 'ಕೂಡಿಸು' ಎಂಬ ಧಾತುವಿನಿಂದಾಗಿದೆ. ಇಲ್ಲಿ 'ಕೂಡಿಸು' ಎಂದರೆ ಸಾಧಕನನ್ನು ಗುರಿಯೊಂದಿಗೆ ಒಂದುಗೂಡಿಸುವುದು. ಶ್ವೇತಾಶ್ವತರ ಮತ್ತು ಕಠೋಪನಿಷತ್ತುಗಳಿಂದ ಆರಂಭಿಸಿ ಭಗವದ್ಗೀತಾ ಹಾಗು ಪಾತಂಜಲ ದರ್ಶನದ ಮೂಲಕ ಯೋಗದ ತತ್ವ ಮತ್ತು ಅನುಷ್ಠಾನಗಳನ್ನು ಋಷಿಗಳು ನಮಗೆ ನೀಡಿದ್ದಾರೆ. ಯೋಗವೆಂದರೇನು ಎಂಬ ಪ್ರಶ್ನೆಗೆ ಕೆಲವು ಉತ್ತರಗಳು ಕೆಳಗಿನಂತಿವೆ. 

(೧) ಯೋಗವೆಂದರೆ ಚಿತ್ತದ (ಮನಸ್ಸಿನ) ವೃತ್ತಿಯನ್ನು (ಓಡಾಟಗಳನ್ನು) ಹತೋಟಿ ಯಲ್ಲಿಟ್ಟುಕೊಳ್ಳುವುದು. 
(೨) ಯೋಗವೆಂದರೆ ದುಃಖದ ಜೊತೆ ಸಂಬಂಧವನ್ನು ಕಡಿಯುವುದು. 
(೩) ಯೋಗವೆಂದರೆ ಎಲ್ಲವನ್ನು ಸಮತ್ವದಿಂದ ನೋಡುವುದು. 
(೪) ಯೋಗವೆಂದರೆ ಜೀವಾತ್ಮ (ತನ್ನ) ಹಾಗೂ ಪರಮಾತ್ಮನ ಒಂದುಗೂಡುವಿಕೆ (ಅಂದರೆ ಪರಮಾತ್ಮನ ದರ್ಶನ ಹಾಗು ಅನುಭವ).

ಯೋಗಸಾಧನೆಯಲ್ಲಿ ಮನಸ್ಸಿನ ಪಾತ್ರ ಬಹಳ ದೊಡ್ಡದು. ನಮ್ಮ ಜೀವನದಲ್ಲಿ ಉಲ್ಲಾಸಕ್ಕೆ ಹಾಗೂ ಕೊರಗುವಿಕೆಗೆ ಮನಸ್ಸೇ ಪ್ರಧಾನ ಕಾರಣ. ಆದ್ದರಿಂದಲೇ ಯೋಗದ ಉಪಯೋಗ ಮನುಷ್ಯರೆಲ್ಲರಿಗೂ ಆಗಲೆಂದು ಪತಂಜಲಿ ಮಹರ್ಷಿಗಳು ವಿಶ್ವ ವಿಖ್ಯಾತವಾದ  'ಅಷ್ಟಾಂಗ ಯೋಗ' ಕ್ರಮ ನೀಡಿದ್ದಾರೆ. 

ಅಷ್ಟಾಂಗಯೋಗವೆಂದರೇನು? 

ಯೋಗಾಚಾರ್ಯರಾದ ಮಹರ್ಷಿ ಪತಂಜಲಿ ನೀಡಿರುವ ೧೯೬ ಯೋಗಸೂತ್ರ ಗಳಲ್ಲಿ ನಿರೂಪಿತವಾಗಿರುವ ಎಂಟು ಅಂಗಗಳಿಂದ ಕೂಡಿರುವುದೇ 'ಅಷ್ಟಾಂಗಯೋಗ'.ಇದರ ಉದ್ದೇಶವೇ ಜೀವನವನ್ನು ಉಲ್ಲಾಸದಿಂದ ನಡೆಸಿ ಮೂಲಲಕ್ಷ್ಯವಾದ ಪರಮಾತ್ಮನ ದರ್ಶನಾನುಭವ ಪಡೆಯುವುದು. ಮೊದಲನೆಯದಾದ 'ಯಮ' ಎಂಬ ಅಂಗದಲ್ಲಿರುವ  'ಅಹಿಂಸೆ, ಸತ್ಯ, ಕದಿಯದಿರುವುದು, ಬ್ರಹ್ಮಚರ್ಯ ಹಾಗು ಅಪರಿಗ್ರಹ' ಗಳ ಆಚರಣೆಗಳಿಂದ  ಮನಸ್ಸನ್ನು ಶುದ್ಧಸ್ಥಿತಿಯಲ್ಲಿಟ್ಟುಕೊಳ್ಳುವುದು.ಎರಡನೆಯದಾದ 'ನಿಯಮ' ದಲ್ಲಿ 'ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನ' ಗಳ ಆಚರಣೆಯಿಂದ  ಮನಸ್ಸು ಯೋಗಮಾರ್ಗದಲ್ಲಿ ಮುಂದುವರೆಯಲು ಅಣಿಯಾಗುತ್ತದೆ. ಮೂರನೆಯ ಅಂಗವಾದ 'ಆಸನ' ಗಳಿಂದ ಮನಸ್ಸು ಹಾಗೂ ದೇಹಕ್ಕೆ ಸ್ಥಿರತೆ ಮತ್ತು ಸುಖವುಂಟಾಗುತ್ತದೆ. ಆಸನ ಮಾಡುವುದನ್ನೇ ಯೋಗ ಎಂದುಕೊಳ್ಳಬಾರದು. ನಾಲ್ಕನೆಯದಾದ 'ಪ್ರಾಣಾಯಾಮ' ದ ಅಭ್ಯಾಸದಿಂದ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಹೊಂದಿ ಯೋಗದ  ಉನ್ನತ ಮಟ್ಟಕ್ಕೆ ಹೋಗಲನುವಾಗುವುದು. 

ಐದನೆಯ ಅಂಗವಾದ 'ಪ್ರತ್ಯಾಹಾರ' ದಲ್ಲಿ ಇಂದ್ರಿಯಗಳ ಮೂಲಕ ಮನಸ್ಸನ್ನು ಆಕರ್ಷಿಸುವ  ವಸ್ತುಗಳಿಂದ ಮನಸ್ಸನ್ನು ಹಿಂತೆಗೆದುಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳುವುದು. ಆರನೆಯದಾದ'ಧಾರಣೆ' ಯಲ್ಲಿ ಒಳಸೆಳೆದ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸುವುದು. ಏಳನೆಯದಾದ 'ಧ್ಯಾನ' ದಲ್ಲಿ ಮನಸ್ಸನ್ನು ನಿರಂತರವಾಗಿ ಮತ್ತು ಏಕಾಗ್ರವಾಗಿ ಪರಮಾತ್ಮನಲ್ಲಿ ಇರಿಸುವುದು. ಎಂಟನೆಯದಾದ 'ಸಮಾಧಿ' ಯಲ್ಲಿ ತಾನು ಪರಮಾತ್ಮನಲ್ಲಿ ಒಂದಾಗಿ ಶಾಂತಿ ಹಾಗೂ ಆನಂದದ ಇಂದ್ರಿಯಾತೀತ ಅವರ್ಣನೀಯ ಸ್ಥಿತಿಯಲ್ಲಿರುವುದು.  

ಮಹಾಯೋಗಿಗಳಾದ ಶ್ರೀರಂಗ ಮಹಾಗುರುಗಳ ಮಾತಿನಲ್ಲಿ "ಭಾರತೀಯರ ಆಹಾರ, ವಿಹಾರ, ಆಚಾರ-ವಿಚಾರ, ಉಡಿಗೆ-ತೊಡಿಗೆ, ನಡೆ-ನುಡಿ, ಪುಣ್ಯ ಪಾಪ ವಿವೇಚನೆ, ವಿದ್ಯೆ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳು, ರಾಜನೀತಿ, ಕರ್ಮಮೀಮಾಂಸೆ, ಸಂಸ್ಕಾರ ಮುಂತಾದವುಗಳೆಲ್ಲವೂ ಅಷ್ಟಾಂಗಯೋಗದಿಂದ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟಿವೆ".

ಸಾರಾಂಶ 

ಮನುಷ್ಯನ ಜೀವನದಲ್ಲಿ ಮನಸ್ಸನ್ನು ಉಲ್ಲಾಸದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅದು ಅಷ್ಟು ಸುಲಭವಲ್ಲ. ಅಷ್ಟಾಂಗಯೋಗ ಸಾಧನೆಯಿಂದ ಮನಸ್ಸನ್ನು ಉಲ್ಲಾಸದಲ್ಲಿಟ್ಟುಕೊಳ್ಳುವುದಷ್ಟೇ ಅಲ್ಲದೆ ಜೀವನದ ಮೂಲಲಕ್ಷ್ಯವಾದ ಪರಮಾತ್ಮನ ದರ್ಶನ ಹಾಗು ಅನುಭವವನ್ನು ಪಡೆಯುವುದು ಮನುಷ್ಯರೆಲ್ಲರಿಗೂ ಸಾಧ್ಯ.   

ಸೂಚನೆ:  03/08/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Monday, May 20, 2019

ಶ್ರೀ ನರಸಿಂಹಾವತಾರದ ವೈಶಿಷ್ಟ್ಯ (Shri Narasimhavatarada vaishishtya)

ಲೇಖಕರು:  ಡಾ. ಎಂ. ಜಿ. ಪ್ರಸಾದ್


ಪೀಠಿಕೆ:

ಭಗವಂತನು ಸರ್ವವ್ಯಾಪಿ, ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿ. ಈ ತತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡು ಜೀವನದಲ್ಲಿ ಉದಾತ್ತಧ್ಯೇಯವನ್ನು ಹೊಂದಿಪರರಿಗೆ ಹಿಂಸೆಮಾಡದೆ ಜೀವನಮಾಡುವವರೇ ಶಿಷ್ಟರು. ಇದಕ್ಕೆ ವಿರುದ್ಧವಾಗಿ ಪರಮಾತ್ಮ ತತ್ವವನ್ನು ತಿರಸ್ಕರಿಸಿ ತನ್ನನ್ನೇ ಭಗವಂತನೆಂದುಕೊಂಡು ಪರರನ್ನು ಹಿಂಸಿಸುವರೇ ದುಷ್ಟರು. ಯಾವಾಗ ದುಷ್ಟರ ಹಾವಳಿಯು ಮಿತಿಮೀರುತ್ತದೆಯೋ ಆಗ ಶಿಷ್ಟರ ರಕ್ಷಣೆಯನ್ನು ಮಾಡಿ ದುಷ್ಟರನ್ನು ಶಿಕ್ಷಿಸುವುದಕ್ಕಾಗಿ ಭಗವಂತನು ವ್ಯಕ್ತವಾಗುವುದೇ ಅವತಾರ. ಭಗವಂತನ ಎಲ್ಲ ಅವತಾರಗಳಲ್ಲಿ ಶ್ರೀ ನರಸಿಂಹಾವತಾರವು ಅತಿ ವೈಶಿಷ್ಟ್ಯವನ್ನು ಹೊಂದಿದೆ. ನರಸಿಂಹಸ್ವಾಮಿಯ ದೇವಾಲಯಗಳೂ ಬಹಳವಾಗಿವೆ. ಭಗವಂತನ ಈ ಅವತಾರದ ವೈಭವವು ಅಥರ್ವವೇದ ಸಂಹಿತೆ, ನಾರಸಿಂಹ ತಾಪನೀಯ ಉಪನಿಷತ್ತು, ಮಹಾಭಾರತ, ಹರಿವಂಶ , ಶ್ರೀಮದ್ಭಾಗವತ ಮಹಾ ಪುರಾಣ ಮುಂತಾದ ಮಹಾಗ್ರಂಥಗಳಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ. ಈ ಅವತಾರದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಇದರ ಹಿಂದಿರುವ ತತ್ವ ಹಾಗು ವೈಶಿಷ್ಟ್ಯವು ರೋಚಕವಾಗಿದೆ ಹಾಗು ಸ್ಪೂರ್ತಿಯುತವಾಗಿದೆ.                                                                                           

ಶ್ರೀಮದ್ಭಾಗವತ ಮಹಾ ಪುರಾಣದ  ಮಾತು:

” ಸತ್ಯಂ ವಿಧಾತುಂ ನಿಜಭೃತ್ಯ ಭಾಷಿತಂ ವ್ಯಾಪ್ತಿಮ್ ಚ ಭೂತೇಷ್ವಖಿಲೇಷುಚಾತ್ಮನಃ ಅದೃಶ್ಯತಾತ್ಯದ್ಭುತ ರೂಪಮುದ್ವಹನ್ ಸ್ತಂಭೇ ಸಭಾಯಾ೦ ನ ಮೃಗಂ ನ ಮಾನುಷ೦”

"ಒಡನೆಯೇ ಅಲ್ಲಿ ಸಭೆಯ ಕಂಬದಲ್ಲಿ ಅತ್ಯದ್ಭುತವಾದ ರೂಪದಿಂದ ಪ್ರಕಟಗೊಂಡ ಪರಮಪುರುಷ, ಕೇವಲ ಮೃಗ ಎನ್ನುವಂತಿಲ್ಲ. ಕೇವಲ ಮನುಷ್ಯ ಎಂದೂ ಹೇಳುವಂತಿಲ್ಲ. ಇಂತಹ ಮೃಗ-ಮಾನುಷರೂಪಗಳೆರಡೂ ಕೂಡಿದ ರೂಪದಿಂದ ಕಾಣಿಸಿಕೊಂಡನು. ತನ್ನ ಭಕ್ತ ನಾದ  ಪ್ರಹ್ಲಾದ ಕುಮಾರನ ಮತ್ತು ಬ್ರಹ್ಮದೇವರ ಮಾತುಗಳನ್ನು ಸತ್ಯಗೊಳಿಸುವುದಕ್ಕೋಸ್ಕರವೂ ಮತ್ತು ತಾನು ಸಮಸ್ತ ಭೂತಗಳಲ್ಲಿಯೂ ವ್ಯಾಪಿಸಿರುವೆನೆಂಬುದನ್ನು ಪ್ರಮಾಣಿಸುವುದೊಕ್ಕಸ್ಕರವೂ ಸ್ವಾಮಿಯು ಹಾಗೆ ಪ್ರಕಟವಾದನು. "     

ಅವತಾರಕ್ಕೆ ಮೂರು  ಕಾರಣಗಳು: 

ಈ ವಿಶಿಷ್ಟವಾದ ಅವತಾರಕ್ಕೆ ಮೂರು ಕಾರಣಗಳನ್ನು ಕಾಣಬಹುದು. ಮೊದಲನೆಯದಾಗಿ ಹುಟ್ಟಿನಿಂದಲೇ ಭಗವಂತನಲ್ಲಿ ಅನನ್ಯ ಹಾಗು ಸಂಶಯರಹಿತ ಪೂರ್ಣ ಭಕ್ತಿಯುಳ್ಳ ಪ್ರಹ್ಲಾದನ ಮಾತನ್ನು ಹಾಗು ದೈತ್ಯರಾಜನಾದ ಹಿರಣ್ಯಕಶಿಪುವು ಕೇಳಿದ ವಿಶೇಷವಾದ ವರವನ್ನು ನೀಡಿದ ಸೃಷ್ಟಿಕರ್ತ ಬ್ರಹ್ಮನ ಮಾತನ್ನು ನಿಜಗೊಳಿಸಿವುದು. ಎರಡನೆಯದಾಗಿ ತೀವ್ರವಾದ ತಪಸ್ಸು ಹಾಗು ಸಾಧನೆ ಮಾಡಿ ಸೃಷ್ಟಿಕರ್ತ ಬ್ರಹ್ಮನನ್ನು ಒಲಿಸಿಕೊಂಡ ಹಿರಣ್ಯಕಶಿಪುವಿನಂತಹ ಯಾರೇ  ಆಗಲಿ, ಎಲ್ಲೆಡೆಯೂ ಇರುವ ಹಾಗು ಎಲ್ಲಕ್ಕೂ ಮೂಲವಾಗಿರುವ ಪರಮಾತ್ಮನ ಶಕ್ತಿಯನ್ನು ಯಾರೂ ಮೀರಲು ಸಾಧ್ಯವಿಲ್ಲವೆಂದು ತೋರಿಸುವುದು. ಮೂರನೆಯದಾಗಿ ಪರಮಾತ್ಮನು  ಶಕ್ತಿಯ ರೂಪದಲ್ಲಿ ಪ್ರಪಂಚದ ಎಲ್ಲೆಡೆ ಅಂದರೆ ಎಲ್ಲ ಚೈತನ್ಯವಿರುವ ಜೀವಜಂತುಗಳಷ್ಟೇ ಅಲ್ಲದೆ ಎಲ್ಲೆಡೆಯಿರುವ ಜಡವಸ್ತುಗಳಲ್ಲಿಯೂ ಸಹ ತುಂಬಿಕೊಂಡಿದ್ದಾನೆ ಎಂದು ತೋರಿಸುವುದು.                                          .                                             

ಭಯವನ್ನು ದಾಟಿದ್ದ ಭಕ್ತ ಪ್ರಹ್ಲಾದ: 

ಸರ್ವಶಕ್ತನಾದ ಪರಮಾತ್ಮನನ್ನು ತಿರಸ್ಕರಿಸಿ ತನನ್ನೇ ಸರ್ವಶಕ್ತನೆಂದು ತನ್ನನ್ನೇ ಎಲ್ಲರೂ ಪೂಜಿಸಬೇಕೆಂದು ತನ್ನ ರಾಜ್ಯದಲ್ಲಿ ನಿಯಮವನ್ನು ಜಾರಿಗೆ ತಂದಿದ್ದರೂ  ರಾಕ್ಷಸ ರಾಜ ಹಿರಣ್ಯಕಶಿಪುವಿಗೆ  ತನ್ನ ಮಗನಾದ ಬಾಲಕ ಪ್ರಹ್ಲಾದನ ಮೇಲೆ ಅದನ್ನು ಜಾರಿಗೆ ತರಲಾಗಲಿಲ್ಲ. ಏಕೆಂದರೆ ಪ್ರಹ್ಲಾದನ ಒಳಗಣ್ಣು ಅವನ ಹುಟ್ಟಿನಿಂದಲೇ ಬೆಳೆದಿದ್ದ ಪರಮಾತ್ಮನ ಅನನ್ಯ ಭಕ್ತಿಯಿಂದ ತೆರೆದಿತ್ತು. ಆ ತೆರೆದಿದ್ದ ಒಳಗಣ್ಣಿನಿಂದ ಹಾಗು ಹೊರಗಣ್ಣಿನಿಂದ ಪ್ರಹ್ಲಾದನು ಎಲ್ಲೆಡೆಯೂ ಮತ್ತು ತನ್ನ ತಂದೆಯಲ್ಲಿಯೂ ಆ ಪರಮಾತ್ಮನ ಶಕ್ತಿಯ ಬೆಳಕನ್ನು ನೋಡುತ್ತಿದ್ದನು. ಸದಾ ಕಾಲದಲ್ಲಿಯೂ ಎಲ್ಲೆಡೆಯೂ ಹರಡಿದ್ದ ಬೆಳಕನ್ನು ನೋಡುತ್ತಿದ್ದ ಪ್ರಹ್ಲಾದನಿಗೆ ಮರಣಭಯವೂ ಇರಲಿಲ್ಲ. ಆದ್ದರಿಂದಲೇ ತಂದೆ ವಿಧಿಸಿದ ಮರಣ ಶಿಕ್ಷೆಯನ್ನು  ಸದಾ ಪರಮಾತ್ಮನ ಸ್ಮರಣೆಯಿಂದ ಬೆಳಕನ್ನು ನೋಡುತ್ತಾ ಯಾವ ಭಯವೂ ಇಲ್ಲದೆ ಪರಮಾತ್ಮನ ರಕ್ಷಣೆಯಲ್ಲಿದ್ದನು. 

ಕಂಬದಿಂದ ಹೊರಬಂದ  ಶ್ರೀ ನರಸಿಂಹ ಸ್ವಾಮಿಯು ಅತಿ ಕೋಪದಿಂದ  ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ  ಯಾರಿಗೂ ಹಾಗೂ ಶ್ರೀ ಲಕ್ಷ್ಮಿಗೂ ಧೈರ್ಯವಾಗಲಿಲ್ಲ. ಆದರೆ ಪ್ರಹ್ಲಾದನು ಪರಮಾತ್ಮನ ಬೆಳಕನ್ನು ಎಲ್ಲೆಡೆ ನೋಡುತ್ತಾ ಭಯವೇ ಇಲ್ಲದೆ ಶ್ರೀ ನರಸಿಂಹ ಸ್ವಾಮಿಯ ಬಳಿಗೆ ಹೋಗಿ ಮುಗ್ಧತೆಯಿಂದ ಭಕ್ತಿಯಿಂದ ಸ್ತುತಿಸಿದ. ಆ ಶುದ್ಧ ಮುಗ್ಧತೆಗೆ ಕರಗಿದ ಶ್ರೀ ನರಸಿಂಹ ಸ್ವಾಮಿಯು ಶಾಂತನಾಗಿ ಪ್ರಹ್ಲಾದನನ್ನು ಹರಸಿದನು. ಅಷ್ಟೇ ಅಲ್ಲದೆ ಯಾರೇ ಆಗಲಿ ಪ್ರಹ್ಲಾದನಂತೆ ಸದಾ ಶುದ್ಧ ಮುಗ್ಧ ಅನನ್ಯ ಭಕ್ತರಾಗುತ್ತಾರೆಯೋ ಅವರಿಗೂ ಶ್ರೀ ನರಸಿಂಹ ಸ್ವಾಮಿಯ ಕೃಪೆ ಹಾಗು  ಅಂತರ್ದರ್ಶನವಾಗುತ್ತದೆ. ಆದ್ದರಿಂದಲೇ ಪ್ರಹ್ಲಾದನು ಭಕ್ತರಲ್ಲಿ ಅಗ್ರಗಣ್ಯ. ಎಲ್ಲರೂ ಪ್ರಹ್ಲಾದನನ್ನು ಸ್ಮರಿಸುತ್ತಾ ಅವನನ್ನು ಹಾಗು ಶ್ರೀನರಸಿಂಹ ಸ್ವಾಮಿಯನ್ನು ನಮ್ಮ ಹೃದಯದಲ್ಲಿ ಸ್ಥಾಪಿಸಿ ನಮಗೂ ಸದಾ ನಿರ್ಭಯತೆಯನ್ನು ಕರುಣಿಸೆಂದು ಪ್ರಾರ್ಥಿಸೋಣ.

Sunday, May 5, 2019

ಶಂಖನಾದ (Shankhanada)

ಲೇಖಕರು : ಡಾ. ಎಂ. ಜಿ. ಪ್ರಸಾದ್
  ನಿವೃತ್ತ ಪ್ರಾಧ್ಯಾಪಕರು,
ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
ಅಮೇರಿಕಾ


ಪೀಠಿಕೆ:

ಶಂಖವನ್ನು ಊದುವುದರಿಂದ ಹೊರಬರುವ ನಾದದಲ್ಲಿ ಏನೋ ವೈಶಿಷ್ಟ್ಯ ಇರಬೇಕೆಂದು ತೋರುತ್ತದೆ. ಅದಕ್ಕೇ ವಿಶ್ವದ ಅನೇಕ ಸಂಸ್ಕೃತಿಗಳಲ್ಲಿ ಜನರು ಶಂಖನಾದವನ್ನು ವಿವಿಧ ಕಾರಣಗಳಿಗೆ ಉಪಯೋಗಿಸುತ್ತಾರೆ. ನ್ಯೂ ಗಿನಿ ಸಂಸ್ಕೃತಿಯಲ್ಲಿ ಶಂಖನಾದದ ಮೂಲಕ ಪರಸ್ಪರ ಸಂದೇಶ ಕಳುಹಿಸುವುದು ಹಾಗು ಮುಖ್ಯವಾದ ಸಮಾರಂಭಗಳ ಆರಂಭ ಸೂಚಿಸುವುದಕ್ಕೆ ಉಪಯೋಗಿಸುವುದುಂಟು. ಮತ್ತೆ ಕೆಲವು ಪ್ರಾಚೀನ ಸಂಸ್ಕೃತಿಯಲ್ಲಿ ಸಾರ್ವಜನಿಕ ಸ್ನಾನಗೃಹಗಳು ತೆರೆದಿವೆ ಎಂಬುದನ್ನು ಸೂಚಿಸುತ್ತಿದ್ದರು. ಪಶ್ಚಿಮ ಬೊಹೆಮಿಯಾದ ಸಂಸ್ಕೃತಿಯಲ್ಲಿ ಅತಿಮಾನುಷ ಶಕ್ತಿಯಿದೆಯೆಂದು ಹಾಗು ಮುಂಬರುವ ಬಿರುಗಾಳಿಯನ್ನು ತಡೆಯುವುದೆಂಬ ನಂಬಿಕೆಯಿಂದ ಶಂಖನಾದ ಮಾಡುತ್ತಿದ್ದರು. ನಮಗೆಲ್ಲಾ ತಿಳಿದಂತೆ ಮಹಾಭಾರತದ ಧರ್ಮಯುದ್ಧದ ಆರಂಭದಲ್ಲಿಯೇ ಶ್ರೀ ಕೃಷ್ಣನೂ ಸೇರಿದಂತೆ ಅನೇಕರು ಶಂಖನಾದ ಮಾಡಿದರು. ಈಗಲೂ ಸಹ ಭಾರತೀಯ ಸಂಸ್ಕೃತಿಯಲ್ಲಿ ಪೂಜೆ, ಉತ್ಸವ, ಮದುವೆ ಮುಂತಾದ ಸಮಾರಂಭಗಳಲ್ಲಿ ಶಂಖನಾದವನ್ನು ಶುಭಾರಂಭಕ್ಕೆ ಉಪಯೋಗಿಸುವುದುಂಟು. ಈ ವರುಷದ ಜನವರಿ ೨೬, ೨೦೧೯ ರಂದು ನಡೆದ ಭಾರತದ ಗಣರಾಜ್ಯೋತ್ಸವದ ಮೆರೆವಣಿಗೆಯಲ್ಲಿ ಕೂಡ ಶಂಖನಾದವನ್ನು ಮಾಡಲಾಯಿತು.


ಶಂಖ ಹಾಗು ಶಂಖನಾದದ ವೈಶಿಷ್ಟ್ಯ:




ಶಂಖಗಳಲ್ಲಿ ಬಲಮುರಿ ಮತ್ತು ಎಡಮುರಿ ಎಂಬ ಎರಡು ರೀತಿ (ಚಿತ್ರ ೧ ನ್ನು ನೋಡಿ).  
ಶಂಖವನ್ನು ಊದುವ ರೀತಿಯಲ್ಲಿ ಇಟ್ಟುಕೊಂಡಾಗ ಶಂಖದ ಕಿವಿಯು ಬಲಗಡೆ ಇದ್ದರೆ ಅದು ಬಲಮುರಿ ಶಂಖ. ಹಾಗೆಯೇ ಶಂಖದ ಕಿವಿಯು ಎಡಗಡೆ ಇದ್ದರೆ ಅದು ಎಡಮುರಿ ಶಂಖ. ಮತ್ತೊಂದು ವಿಶೇಷವೇನೆಂದರೆ ಬಲಮುರಿ ಅಥವಾ ಎಡಮುರಿ ಶಂಖದಿಂದಾಗಲಿ  ಕಿವಿಯನ್ನು ಮುಚ್ಚಿಟ್ಟುಕೊಂಡಾಗ ಸುತ್ತಮುತ್ತಲ ಪರಿಸರಿದಲಿನ್ನ ಶಬ್ದವು ಶಂಖದ ಮೂಲಕ ಕಿವಿಗೆ ಸಮುದ್ರದ ಅಲೆಗಳ ಬಡಿತದ ಶಬ್ದದಂತೆ ಕೇಳಿಸುತ್ತದೆ.  ಸಾಮಾನ್ಯವಾಗಿ ಬಲಮುರಿ ಶಂಖವನ್ನು ದೇವರಪೂಜೆಯಲ್ಲಿ ಅಭಿಷೇಕ ಮಾಡುವುದಕ್ಕೆ ಉಪಯೋಗಿಸಲಾಗುತ್ತದೆ. ಹಾಗೆಯೇ ಎಡಮುರಿ ಶಂಖವನ್ನು ಪೂಜೆಯ ಆರಂಭ, ಅಭಿಷೇಕ ಹಾಗು ಮಂಗಳಾರತಿಯ ಸಮಯಗಳಲ್ಲಿ ಊದಲು  ಉಪಯೋಗಿಸಲಾಗುತ್ತದೆ.  

ಒಳ್ಳೆಯ ಶಂಖದಿಂದ ಬರುವ ನಾದವು ಕಂಠದ ಮೂಲಕ ಓಂಕಾರವನ್ನು ಹೇಳಿದ ಹಾಗೆ ಕೇಳಿಸುತ್ತದೆ. ಶಂಖವನ್ನುಸ್ಪಷ್ಟವಾಗಿ ಊದಬೇಕಾದರೆ ಊದುವವನು ಚೆನ್ನಾಗಿ ಉಸಿರೆಳೆದು ಹಿಡಿದುಕೊಂಡು ತುಟಿಗಳನ್ನು ಶಂಖದ  ಮುಂದಿರುವ ತೂತಿಗೆ ಅಳವಡಿಸಿ ಅದರ ಜೊತೆಗೆ ತುಟಿಗಳ ಕಂಪನದ ಜೊತೆಗೆ ನಿಧಾನವಾಗಿ ಉಸಿರನ್ನು ತೂತಿನಲ್ಲಿ ಬಿಡಬೇಕು.ಆಗ ಶಂಖವು ಊದುವವನ ತುಟಿಗಳ ಕಂಪನದ ಸಣ್ಣದಾದ ಶಬ್ದವನ್ನು ಸ್ಪಂದಿಸಿ ಬಹಳವಾಗಿ ದೊಡ್ಡದಾಗಿಸುತ್ತದೆ. ಅದರಿಂದ ದೊಡ್ಡದಾದ ಶಂಖನಾದ ಕೇಳಿಸುತ್ತದೆ. ಶಂಖದಿಂದ ಬರುವ ನಾದವು ಬಹಳ ಸ್ವಾರಸ್ಯಕರ. ಹೇಗೆಂದರೆ ಕಂಪಿತಗೊಂಡ ಊದಿದ ಉಸಿರು ಶಂಖದ ಒಳಗಿನ ಸುತ್ತು ಬಳಸಿದ ಪಥದಲ್ಲಿ ಚಲಿಸಿ ಏಕಕಂಪನದಿಂದ ಮಾಧುರ್ಯತೆ ತುಂಬಿ ಹೊರಬರುತ್ತದೆ. ಹೊರಬಂದ ಏಕಕಂಪನಗಳನ್ನು 
ಚಿತ್ರ ೨ ರಲ್ಲಿ ಚೆನ್ನಾಗಿ ನೋಡಬಹುದು. 







ಹಾಗೆಯೇ ಶಂಖದ ಒಳಗಿನ ಸುತ್ತು ಬಳಸಿಕೆಯನ್ನು ಚಿತ್ರ ೩ ರಲ್ಲಿ ಚೆನ್ನಾಗಿ ನೋಡಬಹುದು. ಈ ಏಕಕಂಪನದಿಂದ ಹೊರಬಂದ ಮಧುರ ನಾದವು ಮನಸ್ಸಿನ ಏಕಾಗ್ರತೆಗೆ ಕಾರಣವಾಗುತ್ತದೆ. ಆದರಿಂದಲೇ ಒಳ್ಳೆಯ ಶಂಖದಿಂದ ಬಂದ  ನಾದವನ್ನು ಶುದ್ಧವಾದ ನಾದವೆನ್ನುವುದು.ಸಂಗೀತ ಪ್ರಪಂಚದಲ್ಲಿಯೂ  ಶಂಖವನ್ನು ಒಂದು ವಾಯುವಾದ್ಯವೆಂದು ಪರಿಗಣಿಸಲಾಗಿದೆ. ಮತ್ತೊಂದು ಮುಖ್ಯವಾದ ಅಂಶವೇನೆಂದರೆ ಶಂಖವನ್ನು ಚೆನ್ನಾಗಿ ಊದುವುದನ್ನು ಅಭ್ಯಾಸ ಮಾಡಿದರೆ ಊದುವವರಿಗೆ ಒಂದುರೀತಿಯ ಪ್ರಾಣಾಯಾಮದ ಅಭ್ಯಾಸವೂ ಆಗುತ್ತದೆ. ಹೇಗೆಂದರೆ ಊದುವ ಮುನ್ನ ಉಸಿರನ್ನು ಚೆನ್ನಾಗಿ ಒಳಗೆ ತೆಗೆದುಕೊಂಡು ನಂತರ ಶಂಖದ ಮೂಲಕ ಬಹಳ ನಿಧಾನವಾಗಿ ಬಿಡಬೇಕು. ಇದನ್ನು ಅಭ್ಯಾಸ ಬಲದಿಂದಲೇ ಸಾಧಿಸಬೇಕು.

ಸಾರಾಂಶ:

ಒಟ್ಟಿನಲ್ಲಿ ಶಂಖ ಹಾಗು ಶಂಖನಾದವನ್ನು ಭಾರತೀಯ ಸಂಸ್ಕೃತಿಯಲ್ಲಿ ಮಂಗಲವನ್ನುಂಟುಮಾಡುವ ಸಾಧನವನ್ನಾಗಿ  ಉಪಯೋಗಿಸಲಾಗುತ್ತಿದೆ. ಶಂಖದಿಂದಬರುವ ಏಕಕಂಪನದ ನಾದವು ಬಹಳ ದೂರದವರೆಗೆ ಪ್ರಸಾರಗೊಳ್ಳುತ್ತದೆ. ಆದ್ದರಿಂದಲೇ ಶಂಖವನ್ನು ಊದುವವರಲ್ಲೂ ಹಾಗು ಶ್ರೋತೃಗಳಲ್ಲೂ ಏಕಾಗ್ರತೆಯನ್ನು ತರುತ್ತದೆ.


ಸೂಚನೆ: 04/05/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Sunday, March 10, 2019

ವಾಗ್ವೈಖರೀ (Vaagvaikhari)

ಲೇಖಕರು : ಡಾ. ಎಂ. ಜಿ. ಪ್ರಸಾದ್
ನಿವೃತ್ತ ಪ್ರಾಧ್ಯಾಪಕರು, ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ನ್ಯೂಜರ್ಸಿ, ಅಮೇರಿಕಾ






ಪರಿಚಯ:
ಸಾಮಾನ್ಯವಾಗಿ ಮನುಷ್ಯನಿಗೆ ಮಾತನಾಡುವುದು ಹುಟ್ಟಿನಿಂದ ಬರುವ ಶಕ್ತಿ. ಅದರಲ್ಲಿಯೂ ಮಕ್ಕಳಾಡುವ ಮಾತು ಚೆನ್ನ. ಹಾಗೆಯೇ ಮಕ್ಕಳು ಬೆಳೆಯುತ್ತಿದ್ದಂತೆ ಅವರು ಮಾತನಾಡುವ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು. ನಮಗೆಲ್ಲಾ ತಿಳಿದಂತೆ ಮಾತನಾಡುವ ಕಲೆ ಜೀವನದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಾತು ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ‘ವಾಕ್ ‘ ಎಂದಾಗುತ್ತದೆ. ಅಂತೆಯೇ ಯಾರಾದರೂ ವೇದಿಕೆಯ ಮೇಲೆ ಅಥವಾ ಸಾಮಾನ್ಯವಾಗಿಯಾದರೂ ಪ್ರಭಾವಶಾಲಿಯಾಗಿ ಮಾತನಾಡಿದಾಗ ಅವರ ವಾಗ್ವೈಖರೀ ಎಷ್ಟು ಚೆಂದ ಎನ್ನುತೇವೆ. ಆದ್ದರಿಂದ ಯಾವ ಶಕ್ತಿಯಿಂದ ಇಂತಹ ವಾಗ್ವೈಖರೀ ಹೊರಬರುತ್ತದೆ? ಎಂಬ ಪ್ರಶ್ನೆ ಕುತೂಹಲವನ್ನು ಉಂಟುಮಾಡುತ್ತದೆ. ಇದಕ್ಕೆ ಉತ್ತರವಾಗಿ ನಮ್ಮ ಸನಾತನ ಧರ್ಮದ ಮೂಲವಾದ ವೇದಗಳಲ್ಲಿ ವಾಕ್ಕಿಗೆ ನಾಲ್ಕು ಹಂತಗಳಿವೆ ಎಂದು ಹೇಳಿದೆ.

ಮಾತಿನ ನಾಲ್ಕು ಹಂತಗಳು:
ಮಾತನಾಡುವುದು ಸಾಮಾನ್ಯವಾಗಿ ಸುಲಭವೆಂದು ಕಂಡುಬಂದರೂ ನಮ್ಮ ಬಾಯಿನಿಂದ ಹೊರಬರುವ ಮಾತನ್ನು ಆಳವಾದ ದೃಷ್ಟಿಯಿಂದ ನಮಗೆ ವೇದಗಳನ್ನು ನೀಡಿದ ಋಷಿಗಳು ನೋಡಿದ್ದಾರೆ. ಋಗ್ವೇದದ ಒಂದು ಮಂತ್ರದ ಭಾವಾರ್ಥ ಹೀಗಿದೆ. ಮಾತಿಗೆ ನಾಲ್ಕು ಹಂತಗಳಿವೆ ಎಂದು ಜ್ಞಾನಿಗಳು ಹೇಳುತ್ತಾರೆ. ಅದರಲ್ಲಿ ಮೂರು ಹಂತಗಳು ಮನುಷ್ಯನ ದೇಹದೊಳಗೆ ಗುಹೆಯಲ್ಲಿ ಇರುವಂತೆ ಅಡಗಿವೆ. ಮನುಷ್ಯನ ಬಾಯಿನಿಂದ ಹೊರಬರುವ ಮಾತು ನಾಲ್ಕನೆಯ ಹಂತ.  ಈ ನಾಲ್ಲಕು ಹಂತಗಳನ್ನೇ ಪರಾ, ಪಶ್ಯಂತೀ, ಮಧ್ಯಮಾ ಹಾಗು ವೈಖರೀ ಎಂದು ಶಾಸ್ತ್ರಗಳಲ್ಲಿ ಗುರುತಿಸುತ್ತಾರೆ.

ಮಾತು ಎಲ್ಲಿ ಹುಟ್ಟುತ್ತದೆ?
ಮಾತಿನ ಅಥವಾ ವಾಕ್ಕಿನ ಹುಟ್ಟು ಎಲ್ಲಿಂದಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರವೇ ಎಲ್ಲಿ ‘ಪರಾ’ ಎಂಬ ಮೂಲವಾದ ಹಂತದ ಸ್ಥಾನವೋ ಅಲ್ಲಿಂದ ಮಾತು ಶಕ್ತಿ ರೂಪದಲ್ಲಿ ಹುಟ್ಟುತ್ತದೆ. ನಮ್ಮ ದೇಹದಲ್ಲಿ ಯೋಗದೃಷ್ಟಿಯಿಂದ ನೋಡಿದಾಗ ನಮ್ಮಲ್ಲಿ ಉದ್ದೀಪನಗೊಳ್ಳುವ ಶಕ್ತಿಗಳಿಗೆ ಮೂಲಸ್ಥಾನವಾಗಿ ಮೂಲಾಧಾರ ಚಕ್ರವಿದೆ. ಈ ಮೂಲಾಧಾರ ಚಕ್ರವು ಗುದ ಮತ್ತು ಲಿಂಗಗಳ ಮಧ್ಯೆ ಇರುವ ತ್ರಿಕೋನ ಪ್ರದೇಶದಲ್ಲಿರುತ್ತದೆ. ಮಾತನಾಡಬೇಕೆಂಬ ಇಚ್ಛೆಯು ವ್ಯಕ್ತಿಯಲ್ಲಿ ಬಂದಾಗ ಈ ಇಚ್ಛಾಶಕ್ತಿಯೂ ಮನಸ್ಸಿನ ಮೂಲಕ ಮೂಲಾಧಾರದಲ್ಲಿ ಅಡಗಿರುವ ಪರಾ ಹಂತದಲ್ಲಿ ಮಾತಿನ ಶಕ್ತಿಯ ರೂಪದಲ್ಲಿ ಮೇಲ್ಮುಖವಾಗಿ ಚಲಿಸುತ್ತದೆ. ನಂತರ ಆ ಶಕ್ತಿಯು ನಾಭಿ ಎಂದರೆ ಹೊಕ್ಕಳಿನ ಸ್ಥಾನಕ್ಕೆ ಚಲಿಸುತ್ತದೆ. ನಾಭಿ ಸ್ಥಾನದಲ್ಲಿ ಈ ಶಕ್ತಿಯು ಪಶ್ಯಂತೀ ಎನಿಸಿಕೊಳ್ಳುತ್ತದೆ. ಹಾಗೆಯೇ ಮಾತಿನ ಶಕ್ತಿಯು ಮೇಲ್ಮುಖವಾಗಿ ಚಲಿಸಿ ಹೃದಯ ಸ್ಥಾನಕ್ಕೆ ಬರುತ್ತದೆ. ಆಗ ಅದು ಮಧ್ಯಮಾ ಎನಿಸಿಕೊಳ್ಳುತ್ತದೆ. ಕೊನೆಗೆ ಈ ಶಕ್ತಿಯು ಮೇಲ್ಮುಖವಾಗಿ ಚಲಿಸಿ ಗಂಟಲಿನ ಸ್ಥಾನಕ್ಕೆ ಬಂದು ನಾಲಗೆ, ಹಲ್ಲು, ಮೂಗು, ದವಡೆಗಳು ಹಾಗು ತುಟಿಗಳ ಸಹಾಯದಿಂದ ಬಾಯಿಯ ಮೂಲಕ ಹೊರಬಂದು ವೈಖರೀ ಎಂದೆನಿಸಿಕೊಳ್ಳುತ್ತದೆ.

ಮಾತಿನ ಮಹತ್ವ:
ವ್ಯಕ್ತಿಯ ಮನಸ್ಸಿನಲ್ಲಿ ಏಳುವ ಭಾವನೆಗಳು ಒಂದು ಭಾಷೆಯ ಮೂಲಕ ಮಾತಿನ ರೂಪದಲ್ಲಿ ವ್ಯಕ್ತವಾಗುವುದಕ್ಕೆ ವ್ಯಕ್ತಿಯ ದೇಹದಲ್ಲಿ ಇಷ್ಟು ಕ್ರಿಯೆಗಳಾಗಬೇಕು. ಇದಕ್ಕೆ ಪೂರಕವಾಗಿ ವ್ಯಕ್ತಿಯು ತನ್ನಲ್ಲಿರುವ ಜ್ಞಾನ, ಮಾತಿನ ದೃಷ್ಟಿ ಹಾಗು ಪದಗಳ ಭಂಡಾರ ಇವುಗಳನ್ನು ಉಪಯೋಗಿಸಿಕೊಂಡು ಮಾತನ್ನಾಡಬೇಕು. ಆದ್ದರಿಂದಲೇ ತ್ರಿಕರಣಗಳ ಶುದ್ಧಿ ಎಂದಾಗ ಕಾಯಾ, ವಾಚಾ ಹಾಗು ಮನಸಾ ಶುದ್ಧತೆ ಎಂದೆನಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮಾನಾಮ್  ಎಂದರೆ ಮಹಾತ್ಮರ ಕಾರ್ಯ, ಮಾತು ಹಾಗು ಮನಸ್ಸು ಒಂದಾಗಿರುತ್ತದೆ. ಅದಕ್ಕಾಗಿಯೇ ಮಾತಿಗೆ ಇಷ್ಟು ಮಹತ್ವ. ಆದ್ದರಿಂದಲೇ ನಮ್ಮ ಸನಾತನ ಧರ್ಮದಲ್ಲಿ ವಾಕ್ಕಿನ ಶಕ್ತಿಯನ್ನು ವಾಗ್ದೇವಿ ಅಥವಾ ಸರಸ್ವತಿ ದೇವಿಯೆಂದು ಆರಾಧಿಸುತ್ತೇವೆ. ಒಬ್ಬ ವ್ಯಕ್ತಿಯ ವಾಗ್ವೈಖರೀ ಚೆನ್ನಾಗಿದೆ ಎನ್ನಬೇಕಾದರೆ ಅದರ ಹಿಂದಿರುವ ಈ ಎಲ್ಲಾ ಅಂಶಗಳನ್ನು ನೋಡಬೇಕು.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.