Saturday, May 3, 2025

ಕೃಷ್ಣಕರ್ಣಾಮೃತ ಕೃ 61 ಮಧುರಮುಖದ ಮುರಾರಿಯಲ್ಲಿ ಮಗ್ನವಾದ ಮಾನಸ (Krishakarnamrta 61)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕೃಷ್ಣನನ್ನು ಬಿಟ್ಟು ಮತ್ತಾರನ್ನೂ ನಾವು ಹುಡುಕೆವು - ಎನ್ನುತ್ತಾನೆ, ಕವಿ. ಏಕೆ? ಎಂತಹವನು ಕೃಷ್ಣ? ಅದಕ್ಕೊಂದು ಪುಟ್ಟಪದ್ಯವಿದೆ, ಕೃಷ್ಣಕರ್ಣಾಮೃತದಲ್ಲಿ. ನನ್ನನು ರಕ್ಷಿಸು - ಎಂಬುದಾಗಿ ಹೇಳಿಕೊಂಡು ಬಳಿ ಬಂದವರು ಶರಣಾಗತರು. ಹಾಗೆ ಬಂದವರಿಗೆ ಸಂಪೂರ್ಣರಕ್ಷಣೆಯನ್ನು ಕೊಡುವವನು ಶ್ರೀಕೃಷ್ಣ. ಈ ಮಾತನ್ನು ಕೇವಲ ನೇರವಾಗಿ ಹೇಳಿದರೆ ಮನಸ್ಸಿಗೆ ಸ್ಪಷ್ಟವಾಗುವುದಿಲ್ಲ. ಹೇಳುವ ವಿಷಯವನ್ನೇ ಉಪಮೆಯ ಮೂಲಕವೋ ರೂಪಕದ ಮೂಲಕವೋ ಹೇಳಬಲ್ಲವನೇ ಕವಿ. ಕಾವ್ಯಭಂಗಿಯಿಂದ ಹೇಳಿದಾಗಲೇ ಮನಸ್ಸಿಗೆ ಚೆನ್ನಾಗಿ ನಾಟುವುದು, ಅಲ್ಲವೇ?

ಎಂದೇ "ಸುರಕ್ಷೆಯ ವ್ಯವಸ್ಥೆ"- ಎಂಬುದನ್ನು ಇಲ್ಲಿ  "ವಜ್ರಪಂಜರ"ವೆಂದಿರುವುದು. ಪಂಜರದೊಳಗೆ ಇರಿಸಿರುವ ಗಿಳಿಗೆ ಏನೂ ಅಪಾಯ ಬರದು. ಯಾರೂ ಇಲ್ಲದ ಸಮಯದಲ್ಲಿ ಬೆಕ್ಕು ಬಂದರೂ ಅದನ್ನು ಆಕ್ರಮಿಸಿಬಿಡಲಾರದು, ಕೊಲ್ಲಲಾರದು. ಇನ್ನು ವಜ್ರದಿಂದ ಮಾಡಿರುವ ಪಂಜರವೆಂದರೆ ಹೇಳಲೇಬೇಕಿಲ್ಲ. ವಜ್ರವು ಅಭೇದ್ಯ. ಅಲ್ಲಿಗೆ, ಶ್ರೀಕೃಷ್ಣನು ಶರಣಾಗತರಾಗಿ ಬಂದವರಿಗೆ ವಜ್ರಪಂಜರದಂತೆ ಇರುವವನೆಂದರೆ, ಇನ್ನು ಮುಂದಕ್ಕೆ ಅವರಿಗೆ ಯಾರಿಂದಲೂ ಏನೂ ಭಯವಿಲ್ಲವೆಂಬುದೇ. ಇದಕ್ಕೋಸ್ಕರವಾಗಿಯೇ ಆತನು ಸುಲಭನೂ ಆಗಿದ್ದಾನೆ. ಹೇಗೆ? ಗೋಪ-ವಿಗ್ರಹವನ್ನು, ಎಂದರೆ ಗೋಪಾಲಕನ ಶರೀರವನ್ನು, ಧರಿಸಿಬಂದಿದ್ದಾನಲ್ಲವೇ? ಯಾವ ರೂಪವನ್ನಾದರೂ ಧರಿಸಿ ಬರಬಲ್ಲವನು ಭಗವಂತ. ರಾಜವಂಶವನ್ನೇ ಅಲಂಕರಿಸಿದ್ದರೂ ಗೊಲ್ಲರ ನಡುವೆಯೇ ಕಾಣಿಸಿಕೊಂಡಿದ್ದಾನೆ. ರಾಜನೆಂದರೆ ಬಳಿ ಸುಳಿಯುವುದು ಸುಲಭವಲ್ಲ; ಗೊಲ್ಲ ಹಾಗಲ್ಲ.

ಕೊಂಬು, ಕಹಳೆ ಎಂಬ ವಾದ್ಯಗಳ ಹೆಸರನ್ನು ಕೇಳಿರುವೆವಲ್ಲವೇ? ಕೊಂಬನ್ನು ವಾದ್ಯಕ್ಕಾಗಿಯಲ್ಲದೆ ಬಿಲ್ಲುಮಾಡಲು ಬಳಸುವುದೂ ಉಂಟು. ಶೃಂಗವೆಂದರೆ ಕೊಂಬು. ಶೃಂಗದಿಂದ ಮಾಡಿದ ಬಿಲ್ಲಿಗೆ ಶಾರ್ಙ್ಗವೆನ್ನುವರು. ಶಿವನ ಬಿಲ್ಲಿಗೆ ಪಿನಾಕವೆಂದು ಹೆಸರಾದರೆ, ವಿಷ್ಣುವಿನ ಬಿಲ್ಲಿಗೆ ಶಾರ್ಙ್ಗವೆಂದು ಹೆಸರು. ಎಂದೇ ವಿಷ್ಣುವನ್ನು ಶಾರ್ಙ್ಗಧರನೆನ್ನುವುದು. ಆತನ ವೈಭವವೆಂತು ಎಂಬುದನ್ನು ಕಾಣಬೇಕಾದರೆ ಕೃಷ್ಣನನ್ನು ಕಂಡರಾಯಿತು. ಆತನೇ ನಮಗೆ ಶರಣ. ಶರಣ ಎಂದರೆ ರಕ್ಷಕ. ಇಂತಹ ಕೃಷ್ಣನೇ ನಮಗೆ ರಕ್ಷೆಯಾಗಿ ದೊರೆತಿರಲು, ಮತ್ತಿನ್ನಾವ ದೈವವನ್ನು ನಾವು ಹುಡುಕಬೇಕು? - ಎಂದು ಕೇಳುತ್ತಾನೆ, ಕವಿ. ಕೃಷ್ಣನು ಸಿಕ್ಕಮೇಲೆ ಮತ್ತಿನ್ನಾರ ಹಂಗೂ ಇಲ್ಲ. ಪೂರ್ಣ-ರಕ್ಷಣ-ಪ್ರದನೇ ಕೃಷ್ಣ. ಆತನಲ್ಲೇ ನಾವು ಸಂಪೂರ್ಣವಾಗಿ ಶರಣಾಗಿದ್ದೇವೆ - ಎಂಬುದು ಇಲ್ಲಿಯ ಭಾವ.

ಶರಣಾಗತ-ವಜ್ರಪಂಜರೇ

ಶರಣೇ ಶಾರ್ಙ್ಗಧರಸ್ಯ ವೈಭವೇ |

ಕೃಪಯಾ ಧೃತ-ಗೋಪ-ವಿಗ್ರಹೇ

ಕಿಯದನ್ಯನ್ಮೃಗಯಾಮಹೇ ವಯಮ್? ||

*****

ಮತ್ತೊಂದು ಶ್ಲೋಕ. ನನ್ನ ಮನಸ್ಸು ಮುಳುಗುವುದು ಕೃಷ್ಣನಲ್ಲೇ – ಎನ್ನುತ್ತಾನೆ, ಕವಿ. ಏಕೆ? ಪ್ರೀತಿಯೆಂದರೆ ಪ್ರೇಮವೆಂಬ ಅರ್ಥ ಪ್ರಸಿದ್ಧವೇ. ಆದರೆ ಸಂಸ್ಕೃತದಲ್ಲಿ ಅದಕ್ಕೆ ಸಂತೋಷವೆಂಬ ಅರ್ಥವೇ ಪ್ರಚುರ. ಎಂದೇ ಪ್ರೀತನೆಂದರೆ ಸಂತುಷ್ಟನಾದವನು. ಯಾವುದರಿಂದ ಕೃಷ್ಣನು ಅಧಿಕಪ್ರೀತನಾಗುವನು? ಗೋಪಿಯರ ಲೀಲಾ-ಭರಿತವಾದ ಕಟಾಕ್ಷಗಳಿಂದ. ಹಾಗೂ, ಅವರ ನಿರ್ಭರ-ಪರಿಷ್ವಂಗಗಳಿಂದ, ಎಂದರೆ ಗಾಢಾಲಿಂಗನಗಳಿಂದ. ಇಂತಹವುಗಳಿಂದಲೇ ಅಧಿಕವಾದ ಮೋದ, ಶ್ರೀಕೃಷ್ಣನಿಗೆ. ಇನ್ನು ಆತನ ವೇಣುನಾದವೋ, ಅದು ಅಮೃತದಂತೆ. ನಾದವು ಉತ್ಕೃಷ್ಟವೆನಿಸಿದಾಗ ಅದನ್ನು ಪ್ರಣಾದವೆನ್ನುವರು. ಹೀಗಾಗಿ ಅದು ಪ್ರಣಾದಾಮೃತವೇ. ಒಬ್ಬೊಬ್ಬರಿಗೆ ಒಂದೊಂದು ರಾಗವೋ ರಚನೆಯೋ ರುಚಿಸುವುದಲ್ಲವೇ? ಹಾಗೆ ಇಲ್ಲಿ ರೀತಿ-ವಿಭಾಗಗಳೆಂದರೆ ಗಾನಭೇದಗಳ ರಚನೆಗಳೆಂದರ್ಥ. ಗಾನ-ಪಾಠ್ಯಗಳನ್ನು ಕುರಿತು ಇಲ್ಲಿ ಹೇಳಿದೆ.

ಆದರೆ ಅವುಗಳಲ್ಲೇ ಸಂಗರವಂತೆ! ಸಂಗರವೆಂದರೆ ಜಗಳ. ಅವಲ್ಲೇಕೆ ಪೈಪೋಟಿ? ಪುಂಖಾನುಪುಂಖವಾಗಿ ಹರಿದುಬರುತ್ತಿರುವ ನಾನಾ ರಾಗಲಹರಿಗಳು, ಅನ್ಯಾನ್ಯ ಭಾವಲಹರಿಯ ಸಾಹಿತ್ಯಗಳು - ಇವಲ್ಲಿ ಒಂದಕ್ಕಿಂತ ಒಂದು ರಂಜಕ. ಹೀಗೆ ಸಮಾನ-ಲಕ್ಷ್ಯ-ಸಾಧಕರಲ್ಲಿ ನಾ ಹೆಚ್ಚು-ತಾ ಹೆಚ್ಚು – ಎನ್ನುವುದು ಇದ್ದದ್ದೇ. ಈ ಗಾನ-ಗೇಯಗಳು ಆಹ್ಲಾದಕತೆಯಲ್ಲಿ ಒಂದನ್ನೊಂದು ಮೀರಿಸುತ್ತವೆ! ಇವುಗಳ ಒಟ್ಟಿನ ವಿಲಾಸವೇ ಆತನ ವೇಣು-ಪ್ರಣಾದದಲ್ಲಿದೆ. ಮಕ್ಕಳನ್ನು ಮುದ್ದಿಸುವುದೆಂದರೆ ಕೈಗಳಿಂದಲೇ ಹೆಚ್ಚಾಗಿ, ಅಲ್ಲವೇ? ಆದರೆ ಕೃಷ್ಣನ ಮುಖವನ್ನು ರಾಧೆಯು ತನ್ನ ಲೋಚನಗಳಿಂದಲೇ ಲಾಲಿಸುವಳಂತೆ. ಯಾರಾದರೂ ಮುದ್ದಿಸಿದಾಗ ಮುಖದ ಮೇಲೊಂದು ಮುಗ್ಧವಾದ ಮುಗುಳ್ನಗೆಯು ಮೂಡುವುದು ಸ್ವಾಭಾವಿಕವಲ್ಲವೇ? ಹಾಗೆ ಲಲಿತವಾದ ಸ್ಮೇರ-ಮುಖ ಕೃಷ್ಣನದು. ಸ್ಮಿತವುಳ್ಳದ್ದು ಸ್ಮೇರ.

ಎಂದೇ ನನ್ನ ಮನಸ್ಸು ಮಗ್ನವಾಗಿದೆ, ಶ್ರೀಕೃಷ್ಣನ ಮುಖೇಂದುಕಮಲದಲ್ಲಿ - ಎನ್ನುತ್ತಾನೆ ಕವಿ. ಮುಖವೆಂಬುದೇ ಒಂದು ಚಂದ್ರ, ಮತ್ತು ಅದುವೇ ಒಂದು ಕಮಲದಂತೆಯೂ ಇರುವುದು! ಎಂದೇ ಮಾಧುರ್ಯವೆಂಬ ಒಂದೇ ರಸವೇ ಅಚ್ಚೊತ್ತಿದೆ, ಆತನ ಮೊಗದಲ್ಲಿ. ಹೀಗೆ ಗೋಪೀ-ಕಟಾಕ್ಷಗಳಿಂದ, ಗೋಪಿಕಾ-ಪರಿರಂಭಗಳಿಂದ ಪ್ರೀತವಾದುದು, ಕೃಷ್ಣನ ಮುಖ; ವೇಣುನಾದಾಮೃತವನ್ನು ಹರಿಸುವ ಮುಖವದು; ರಾಧಾ-ಲೋಚನಗಳಿಂದ ಲಾಲಿತವಾದ ಮುಖ; ಮುಗುಳ್ನಗೆಯು ಶೋಭೆ ತಂದ ಮುಖ; ಮಧುರರಸಕ್ಕೆ ನೆಲೆವೀಡಾದ ಮುಖ - ಹೀಗೆಲ್ಲ ಇದ್ದು, ಚಂದ್ರನ ಆಹ್ಲಾದಕತ್ವ, ಕಮಲದ ಕಮನೀಯತೆ - ಇವುಗಳಿಂದ ಕಂಗೊಳಿಸುವ ಮುಖವದು! ಅದರಲ್ಲಿ ನನ್ನ ಮನಸ್ಸು ಮಗ್ನ - ಎನ್ನುತ್ಟಾನೆ, ಕವಿ. ಮಗ್ನವೆಂದರೆ ಮುಳುಗಿರುವುದು. ಎಲ್ಲಿ ಆಸ್ವಾದನೆಯುಂಟೋ ಅಲ್ಲೇ ಮನಸ್ಸು ಮುಳುಗುವುದು. ಮತ್ತು ಹಾಗೆ ಮುಳುಗಿರುವುದೆಂದರೆ ಅದು ಧ್ಯಾನಾವಸ್ಥೆಯೇ ಸರಿ!

ಲೀಲಾಟೋಪ-ಕಟಾಕ್ಷ-ನಿರ್ಭರ-ಪರಿಷ್ವಂಗ-ಪ್ರಸಂಗಾಧಿಕ-/

ಪ್ರೀತೇ ಗೀತಿ-ವಿಭಂಗ-ಸಂಗರ-ಲಸದ್-ವೇಣು-ಪ್ರಣಾದಾಮೃತೇ |

ರಾಧಾಲೋಚನ-ಲಾಲಿತಸ್ಯ ಲಲಿತ-ಸ್ಮೇರೇ ಮುರಾರೇರ್ಮುದಾ/

ಮಾಧುರ್ಯೈಕರಸೇ ಮುಖೇಂದು-ಕಮಲೇ ಮಗ್ನಂ ಮದೀಯಂ ಮನಃ ||

***

ಅಷ್ಟಬಾಹುಗಳುಳ್ಳ ಹರಿಯ ಧ್ಯಾನವನ್ನು ಈ ಶ್ಲೋಕವು ಹೇಳುತ್ತದೆ.

ಎರಡು ಕೈಗಳಲ್ಲಿ ಬಿಲ್ಲುಬಾಣಗಳನ್ನು ಹಿಡಿದಿದ್ದಾನೆ, ಹರಿ. ಐಕ್ಷವವೆಂದರೆ ಕಬ್ಬಿನಿಂದಾದುದು. ಕಬ್ಬಿನ ಜಲ್ಲೆಯಿಂದಾದ ಬಿಲ್ಲು.ಅದೂ ಅಖಂಡವಾದದ್ದು, ಎಂದರೆ ದೃಢವಾದದ್ದು. ಅದಕ್ಕೆ ಜೋಡಿಸುವುದು ಪುಷ್ಪದಿಂದಾದ ಇಷುವನ್ನು- ಎಂದರೆ ಹೂಗಳಿಂದಾದ ಬಾಣವನ್ನು. ಇನ್ನೆರಡು ಕೈಗಳಲ್ಲಿ ಚಕ್ರಾಬ್ಜಗಳಿವೆ. ಅಬ್ಜವೆಂದರೆ ಜಲಜ.  ಶಂಖವೂ ಜಲ-ಜವೇ. ಹೀಗೆ ಸುದರ್ಶನಚಕ್ರವನ್ನೂ ಶಂಖವನ್ನೂ ಮತ್ತೆರಡು ಕೈಗಳಲ್ಲಿ ಹಿಡಿದಿದ್ದಾನೆ. ಹಾಗೆಯೇ ಪಾಶ-ಸೃಣಿಗಳನ್ನು ಧರಿಸಿದ್ದಾನೆ. ಸೃಣಿಯೆಂದರೆ ಅಂಕುಶ. ಹೀಗೆ ಮತ್ತೆರಡು ಕೈಗಳಿಂದ ಪಾಶಾಂಕುಶಧಾರಿಯಾಗಿದ್ದಾನೆ ಶ್ರೀಕೃಷ್ಣ.

ಕೊಳಲನ್ನೇ ಹೇಳದಿದ್ದರೆ ಆತ ಕೃಷ್ಣನಾಗಬಲ್ಲನೇ? ಕಾಂಚನ-ವಂಶನಾಳವೆಂದರೆ ಚಿನ್ನದ ಕೊಳಲಿನ ನಳಿಕೆ. ಅದನ್ನು ನುಡಿಸುವುದೆಂದರೆ ಎರಡು ಕೈಗಳಿಗೂ ಕೆಲಸವುಂಟು. ಹೀಗಾಗಿ ಮತ್ತೆರಡು ಕೈಗಳಲ್ಲಿ ಕಾಂಚನದ ಕೊಳಲನ್ನು ಹಿಡಿದಿದ್ದಾನೆ. ಹೀಗೆ ಎರಡೆರಡು ಕೈಗಳಿಂದ ಬಿಲ್ಲುಬಾಣಗಳನ್ನು, ಶಂಖಚಕ್ರಗಳನ್ನು, ಪಾಶಾಂಕುಶಗಳನ್ನು, ಹಾಗೂ ಸ್ವರ್ಣವೇಣುವನ್ನು ಧರಿಸಿರುವ ಈ ಹರಿ ಅರ್ಕವರ್ಣವುಳ್ಳವನು, ಎಂದರೆ ಸೂರ್ಯನ ಬಣ್ಣವನ್ನು ಹೊಂದಿರುವವನು. ಮದನನೇ ಗೋಪವಿಲಾಸವೇಷವನ್ನು ಧರಿಸಿ ಬಂದಂತಿರುವ ಈ ಹರಿಯನ್ನು ಧ್ಯಾನಿಸಬೇಕೆಂದು ಲೀಲಾಶುಕನು ಹೇಳುತ್ತಾನೆ. ಇದು ತ್ರೈಲೋಕ್ಯ-ಮೋಹನವೆಂಬ ಕೃಷ್ಣರೂಪದ ಧ್ಯಾನಶ್ಲೋಕವೆಂದು ಹೇಳುತ್ತಾರೆ.

ಕೋದಂಡಂ ಐಕ್ಷವಂ ಅಖಂಡಂ, ಇಷುಂ ಚ ಪೌಷ್ಪಂ /

ಚಕ್ರಾಬ್ಜ-ಪಾಶ-ಸೃಣಿ-ಕಾಂಚನವಂಶನಾಳಂ|

ಬಿಭ್ರಾಣಂ ಅಷ್ಟವಿಧಬಾಹುಭಿರರ್ಕವರ್ಣಂ / 

ಧ್ಯಾಯೇತ್ ಹರಿಂ ಮದನ-ಗೋಪ-ವಿಲಾಸ-ವೇಷಮ್ ||

ಸೂಚನೆ : 03/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.