Monday, February 3, 2025

ವ್ಯಾಸ ವೀಕ್ಷಿತ 121 ಕೃಷ್ಣನಿಗೆ ಚಕ್ರ, ಅರ್ಜುನನಿಗೆ ಗಾಂಡೀವ (Vyaasa Vikshita 121)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಇಂತಹ ಅದ್ಭುತ-ಧ್ವಜದಿಂದ ಕೂಡಿ ಶೋಭಿಸುತ್ತಿದ್ದ ಆ ಶ್ರೇಷ್ಠತಮವಾದ ರಥವನ್ನು ಅಗ್ನಿದೇವನಿಂದ ಪಡೆದು, ಪಾರ್ಥನು ಅದನ್ನು ಹತ್ತಿದನು. ಮೊದಲು ಅದಕ್ಕೆ ಪ್ರದಕ್ಷಿಣಮಾಡಿದನು. ದೇವತೆಗಳಿಗೆ ವಂದಿಸಿದನು. ಕವಚ-ಖಡ್ಗ-ಗೋಧಾ-ಅಂಗುಲಿತ್ರಗಳನ್ನು ಧರಿಸಿದ್ದನು. ಧನುಸ್ಸಿನ ಹೆದೆಯ ಏಟು ತಗಲದಿರಲೆಂದು ತೋಳಿಗೆ ಕಟ್ಟುವ ಚರ್ಮದ ಪಟ್ಟಿಯೇ ಗೋಧಾ. ಅಂಗುಲಿತ್ರವೆಂದರೆ ಬಿಲ್ಲಿನ ಹೆದೆಯನ್ನು ಎಳೆಯುವಾಗ ಗಾಯವಾಗದಿರಲೆಂದು ಬೆರಳಿಗೆ ಹಾಕಿಕೊಳ್ಳುವ ಚರ್ಮದ ಹೊದಿಕೆ.


ಅಗ್ನಿಯಿತ್ತ ಆ ರಥವನ್ನು ಅರ್ಜುನನು ಹತ್ತಿದನು: ಪುಣ್ಯಶಾಲಿಯು ವಿಮಾನವನ್ನೇರುವ ಪರಿಯಲ್ಲಿ! ಬ್ರಹ್ಮನಿಂದ ನಿರ್ಮಿತವಾದ ಆ ಶ್ರೇಷ್ಠವಾದ ದಿವ್ಯ-ಧನುಸ್ಸನ್ನು - ಅರ್ಥಾತ್ ಗಾಂಡೀವವನ್ನು - ಕೈಗೆತ್ತಿಕೊಳ್ಳುತ್ತಿರುವಂತೆಯೇ ಅರ್ಜುನನಿಗೆ ಸಂತೋಷವುಕ್ಕಿತು.


ಬಲಶಾಲಿಯಾದ ಅರ್ಜುನನು ಹೆದೆಯನ್ನೇರಿಸುತ್ತಿರುವಾಗ ಧನುರ್-ಧ್ವನಿಯುಂಟಾಯಿತು. ರಥ-ಧನುಸ್ಸುಗಳನ್ನೂ  ಅಕ್ಷಯ-ತೂಣೀರವನ್ನೂ ಪಡೆದ ಅರ್ಜುನನು ಈಗ ಅಗ್ನಿಗೆ ಸಹಾಯ ಮಾಡಲು ಸಮರ್ಥನಾದನು. ಅಗ್ನಿಯು ಕೃಷ್ಣನಿಗೆ ಚಕ್ರಾಯುಧವನ್ನು ಕೊಟ್ಟನು. ಅದರ ಮಧ್ಯಭಾಗವು ವಜ್ರಕ್ಕೆ ಸಮನಾಗಿದ್ದಿತು. ಅಗ್ನಿಯಿತ್ತ ಈ ಚಕ್ರಾಸ್ತ್ರದಿಂದಾಗಿ ಶ್ರೀಕೃಷ್ಣನೂ ಅಗ್ನಿಗೆ ಉಪಕರಿಸಲು ಸಮರ್ಥನಾದನು.


ಅಗ್ನಿದೇವನು ಆತನಿಗೆ ಹೇಳಿದನು: ಈ ಚಕ್ರದಿಂದಾಗಿ ನೀನು ಅಮಾನುಷರನ್ನು ಸಹ ಯುದ್ಧದಲ್ಲಿ ಜಯಿಸುವೆ. ಅರ್ಥಾತ್, ಯುದ್ಧದಲ್ಲಿ ಮನುಷ್ಯರಷ್ಟೇ ಅಲ್ಲದೆ,  ದೇವತೆಗಳು, ರಾಕ್ಷಸರು, ಪಿಶಾಚರು, ದೈತ್ಯರು, ಹಾಗೂ ನಾಗರು - ಇವರುಗಳಿಗಿಂತ ಹೆಚ್ಚು ಶಕ್ತಿ-ಶಾಲಿಯಾಗುವೆ. ಅವರನ್ನು ಸಂಹರಿಸುವುದರಲ್ಲಿ ನಿಃಸಂಶಯವಾಗಿಯೂ ಉದ್ದಾಮನಾಗುವೆ. ಅಷ್ಟೇ ಅಲ್ಲ. ಯುದ್ಧದಲ್ಲಿ ಈ ಚಕ್ರವನ್ನು ಶತ್ರುಗಳ ಮೇಲೆ ನೀನು ಪ್ರಯೋಗಿಸಿದಾಗಲೆಲ್ಲಾ ಅದು ಅಪ್ರತಿಹತವಾಗಿ - ಎಂದರೆ ಶತ್ರುಗಳು ಬಳಸುವ ಶಸ್ತ್ರಾಸ್ತ್ರಗಳಿಂದ ಪರಾಭವಗೊಳ್ಳದೆ - ನಿನ್ನ ಹಸ್ತಕ್ಕೇ ಮತ್ತೆ ಬಂದು ಸೇರುವುದು!


ಆ ಸಂದರ್ಭದಲ್ಲಿ ವರುಣನೂ ಘೋರವಾದ ಗದೆಯೊಂದನ್ನು ಕೃಷ್ಣನಿಗೆ ಕೊಟ್ಟನು. ಅದರ ಹೆಸರು ಕೌಮೋದಕೀ. ಸಿಡಿಲಿನ ಧ್ವನಿಯನ್ನು ಮಾಡುವ ಅದು ದೈತ್ಯ-ನಾಶಕವಾದದ್ದು.


ಇದೆಲ್ಲವೂ ನೆರವೇರಲು ಅರ್ಜುನಾಚ್ಯುತರು, ಎಂದರೆ ಅರ್ಜುನ ಮತ್ತು ಕೃಷ್ಣರು, ಅಸ್ತ್ರ-ಸಂಪನ್ನರೂ ಶಸ್ತ್ರ-ಯುಕ್ತರೂ ರಥವಂತರೂ ಧ್ವಜ-ಸಹಿತರೂ ಆದರು. ಅಗ್ನಿಯನ್ನು ಕುರಿತು ಅವರು ಹೇಳಿದರು: "ಅಗ್ನಿದೇವನೇ, ಈಗ ರಥಾದಿಗಳಿಂದ ಕೂಡಿದ ನಾವು ಯಾವುದೇ ಸುರರೊಂದಿಗೂ ಅಸುರರೊಂದಿಗೂ ಸೆಣಸಲು ಸಮರ್ಥರಾಗಿದ್ದೇವೆ. ತಕ್ಷಕ-ನಾಗನ ರಕ್ಷಣೆಗಾಗಿ ಯುದ್ಧ ಮಾಡಲೂ ಸಂನದ್ಧನಾಗಿರುವ ವಜ್ರಾಯುಧ-ಧಾರಿಯಾದ ಇಂದ್ರನೊಡನೆ ಸೆಣಸುವುದು ಇನ್ನೆಷ್ಟರ ಮಾತು?" ಎಂದರು.


ಆ ಬಳಿಕ ಅರ್ಜುನನು ಹೇಳಿದನು: "ಓ ಅಗ್ನಿದೇವ, ಮಹಾಪರಾಕ್ರಮಿಯಾದ ಹೃಷೀಕೇಶನು, ಎಂದರೆ ಕೃಷ್ಣನು, ಚಕ್ರಪಾಣಿಯಾಗಿ, ಎಂದರೆ ಕೈಯಲ್ಲಿ ಈ ಚಕ್ರಾಯುಧವನ್ನು ಧರಿಸಿದವನಾಗಿ, ಯುದ್ಧಗಳಲ್ಲಿ ವಿಚರಿಸುವಾಗ, ಈ ಚಕ್ರವನ್ನು ಪ್ರಯೋಗಿಸಿದ್ದೇ ಆದರೆ, ಮೂರೂ ಲೋಕಗಳಲ್ಲಿಯೂ ಭಸ್ಮವಾಗದೇ ಏನೂ ಉಳಿಯಲೇ ಆರದು. ಓ ಅಗ್ನಿಯೇ, ಈ ಗಾಂಡೀವ-ಧನುಸ್ಸನ್ನೂ ಅಕ್ಷಯ್ಯವಾದ ಈ ಮಹತ್ತಾದ ಇಷುಧಿಯನ್ನೂ, ಎಂದರೆ ಬತ್ತಳಿಕೆಯನ್ನೂ,  ಹಿಡಿದು ಹೊರಟ ನಾನಾದರೂ ರಣದಲ್ಲಿ ಎಲ್ಲ ಲೋಕಗಳನ್ನೂ ಜಯಿಸಬಲ್ಲೆನೇ ಸರಿ. ಅಗ್ನಿಯೇ, ಸರ್ವ-ದಿಕ್ಕುಗಳಿಂದಲೂ ಸುತ್ತುವರಿದುಕೊಂಡು ಈ ಕಾಡನ್ನು ಯಥೇಚ್ಛವಾಗಿ ನೀನೀಗಲೇ ಸುಡಬಹುದು. ನಾವಿಬ್ಬರೂ ನಿನಗೆ ಸಹಾಯವೆಸಗಲಿಕ್ಕೆ ಸಿದ್ಧರಿದ್ದೇವೆ."

ಸೂಚನೆ : 19/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ 74 ರಾಮೋ ವಿಗ್ರಹವಾನ್ ಧರ್ಮಃ (Astaksari 74)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆಯು ಕಳೆದ ವರ್ಷ ಈ ಹೊತ್ತಿಗೆ ನೆರವೇರಿತಷ್ಟೆ. ಆ ಸಂದರ್ಭದಲ್ಲಿ ರಾಮಾಯಣವನ್ನು ಕುರಿತಾದ ಲೇಖನ-ಮಾಲೆಯೊಂದನ್ನು ಇಲ್ಲಿ ಆರಂಭಿಸಲಾಯಿತು. ಇಪ್ಪತ್ತನಾಲ್ಕನೆಯ ಲೇಖನವಿದು. ವರ್ಷಾವಧಿಯಲ್ಲಿ ರಾಮಾಯಣದ ಸಂಕ್ಷಿಪ್ತ-ಸದುಕ್ತಿಗಳನ್ನು ಸಂಗ್ರಹಿಸಿ ಸಂಸ್ಕೃತಿಯ ಸಂದರ್ಶನವೊಂದನ್ನು ಇಲ್ಲಿ ಮೂಡಿಸಿದೆ.

ರಾಮಾಯಣವು ಹೇಗೆ ಪವಿತ್ರ? ಶಬರಿಯು ಹೇಗೆ ವಂದ್ಯಳು? ಗುಹನು ಹೇಗೆ ಅಭಿನಂದ್ಯನು? ಪಕ್ಷಿಗೂ ಕಪಿಗೂ ರಾಕ್ಷಸನಿಗೂ (ಎಂದರೆ ಜಟಾಯು-ಸುಗ್ರೀವ-ವಿಭೀಷಣರಿಗೆ) ಅನುಗ್ರಹವನ್ನು ರಾಮನು ಮಾಡಿದುದು ಹೇಗೆ? ವಾಲ್ಮೀಕಿ-ಶಾಪವು ಹೇಗೆ ಉಗ್ರವಲ್ಲ? ರಾಮಾಯಣ-ರಚನೆಯಲ್ಲಿ ಹೇಗೆ ಯೋಗ-ದೃಷ್ಟಿಯು ಕೆಲಸಮಾಡಿದೆ? - ಮುಂತಾದ ಪ್ರಶ್ನೆಗಳನ್ನೆತ್ತಿ ಉತ್ತರಗಳನ್ನಿತ್ತಿದೆ.

ರಾಮನನ್ನು ಧರ್ಮ-ಮೂರ್ತಿಯೆನ್ನುವರಲ್ಲಾ, ಅದೆಂತು? - ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದರೆ ರಾಮಾಯಣವನ್ನು ಕುರಿತಾದ ಈ ಲೇಖನ-ಮಾಲೆಗೆ ಕಲಶ-ಪ್ರಾಯವಾಗುವುದಲ್ಲವೇ?

ರಾಕ್ಷಸನಾದ ಮಾರೀಚನು ರಾಮನ ಕ್ಷಾತ್ತ್ರತೇಜಸ್ಸು-ಧರ್ಮಬುದ್ಧಿಗಳನ್ನು ಕಂಡುಕೊಂಡವನು. ಎಂದೇ ಆತನು ಹೇಳುವ ಮಾತೇ "ರಾಮೋ ವಿಗ್ರಹವಾನ್ ಧರ್ಮಃ". ಅರ್ಥಾತ್, ಧರ್ಮವೇ ಮೈತಾಳಿಬಂದಿತೆಂದರೆ ಅದುವೇ ಶ್ರೀರಾಮ.

ದುಷ್ಟ-ರಾವಣನು ಮಾರೀಚನಿಗೆ ಹೇಳಿದ್ದೇನು? "ನೀನು ಸುವರ್ಣ-ಮೃಗವಾಗಿ ಹೋಗಿ ಸೀತೆಯ ಮನಸ್ಸನ್ನು ಆಕರ್ಷಿಸು; ಅದನ್ನು ನನಗೆ ದೊರಕಿಸಿಕೊಡು - ಎಂದು ಸೀತೆಯು ರಾಮ-ಲಕ್ಷ್ಮಣರನ್ನು ಯಾಚಿಸುವಳು. ಅವರು ದೂರ ಸಾಗಿರಲಾಗಿ ನಾನು ಅವಳನ್ನು ಅಪಹರಿಸುವೆ."

ಮಾರೀಚನು ಅದಕ್ಕೆ ಕೊಟ್ಟ ಉತ್ತರವು ತನಗೂ ಹಿತ, ರಾವಣನಿಗೂ ಹಿತವಾದದ್ದು – ಎನ್ನುತ್ತಾರೆ, ವಾಲ್ಮೀಕಿಗಳು: " ರಾಮನು ಮಹಾವೀರ್ಯ-ಸಂಪನ್ನ, ಜೊತೆಗೆ ಗುಣೋನ್ನತ - ಎಂದರೆ ಉತ್ಕೃಷ್ಟಗುಣ-ಸಂಪನ್ನ. ರಾವಣಾ, ರಾಕ್ಷಸ-ಕುಲಕ್ಕೇ ನಾಶವು ಬರುತ್ತಿದೆಯೇ? ನಿನ್ನ ಬಾಳನ್ನು ಕೊನೆಗಾಣಿಸಲೆಂದೇ ಸೀತೆಯು ಜನಿಸಿಲ್ಲವಷ್ಟೆ? ನೀನು ಸ್ವಜನ-ಸ್ವರಾಷ್ಟ್ರಗಳನ್ನು ಧ್ವಂಸಮಾಡಲು ಹೊರಟಿಲ್ಲವಷ್ಟೆ? ರಾಮನು ಸುಶೀಲ, ಸತ್ಯಸಂಧ, ಧರ್ಮಾತ್ಮಾ. ಹೆಚ್ಚೇನು ಆತನು ಧರ್ಮವೇ ಸಶರೀರವಾಗಿ ಬಂದಂತೆ!  ರಾಮನೆಂದರೆ ಅಗ್ನಿ; ಆತನ ಬಾಣಗಳು ಜ್ವಾಲೆಗಳು; ಬಿಲ್ಲು-ಖಡ್ಗಗಳು ಇಂಧನಗಳು - ಅಂತಹ ಅಗ್ನಿಯೊಳಗೆ ಧುಮುಕುವೆಯಾ? ಆತನ ಪತ್ನಿ ಸೀತೆಯು ಮಹಾತೇಜಸ್ಸು; ಅಗ್ನಿಶಿಖೆ ಅವಳು! ಎಚ್ಚರ!" ಎಂದು. ಆತ್ಮನಾಶಕ್ಕೆ ಹೊರಟ ರಾವಣನ ಮುಂದಿನ ಕಥೆ ಗೊತ್ತಿರುವುದೇ.

ಬರೀ ಮಾರೀಚನೇ ಅಲ್ಲ, ವಾಲ್ಮೀಕಿಗಳೇ ರಾಮನ ಧರ್ಮಾತ್ಮತೆಯನ್ನು ಉದ್ದಕ್ಕೂ ಹೇಳುತ್ತಲೇ ಬಂದಿದ್ದಾರೆ. "ಧರ್ಮ" ಎಂಬ ಪದವೇ ರಾಮಾಯಣದಲ್ಲಿ ಸಾವಿರಬಾರಿಗಿಂತಲೂ ಹೆಚ್ಚಾಗಿ ಬಳಕೆಯಾಗಿದೆ. ರಾಮನನ್ನು ಧರ್ಮಜ್ಞನೆಂದೂ ಧರ್ಮದಲ್ಲಿ ನೆಲೆಗೊಂಡವನೆಂದೂ ಪ್ರಥಮ-ಸರ್ಗದಲ್ಲೇ ಬಗೆಬಗೆಯಾಗಿ ಹೇಳಿದೆ: ಆತನು ಗುಣವಂತ, ಕೃತಜ್ಞ, ಸತ್ಯ-ವಾಕ್ಯ, ಚಾರಿತ್ರದಿಂದ ಕೂಡಿದವ, ಸರ್ವ-ಭೂತಗಳಿಗೂ ಹಿತವನ್ನುಂಟುಮಾಡುವವ, ಆತ್ಮವಂತ, ಕ್ರೋಧವನ್ನು ಜಯಿಸಿದವ, ಅಸೂಯೆಯಿಲ್ಲದವ; ಅಷ್ಟೇ ಅಲ್ಲ, ಆತನು ವೀರ್ಯವಂತ, ದೇವತೆಗಳು ಸಹ ರಣದಲ್ಲಿ ಆತನ ರೋಷಕ್ಕೆ ಬೆದರುವವರೇ! ಆತನು ಶತ್ರು-ನಿಬರ್ಹಣ, ಎಂದರೆ ರಿಪುಗಳನ್ನು ದಮನ ಮಾಡುವವ; ಹಾಗೆ ಮಾಡುವುದರಿಂದಲೇ ಆತನು ಜೀವಲೋಕ-ರಕ್ಷಕ, ಧರ್ಮ-ಪರಿರಕ್ಷಕ, ಸ್ವಧರ್ಮ-ರಕ್ಷಕ, ಸ್ವಜನ-ರಕ್ಷಕ, ಕ್ರೋಧವೇ ಬಂದಲ್ಲಿ ಕಾಲಾಗ್ನಿಗೇ ಸಮ - ಎಂದೆಲ್ಲ ಹೇಳಿದೆ.

ಮೇಲೆ ಹೇಳಿರುವ ಅನೇಕ ಗುಣಗಳಲ್ಲಿ ಎರಡು ಎಳೆಗಳನ್ನು ವಿಶಿಷ್ಟವಾಗಿ ಕಾಣಬಹುದು. ಆತನ ಸದ್ವರ್ತನೆ ಹಾಗೂ ಶತ್ರು-ಧ್ವಂಸಕತೆ.

ರಾಮನಿಗಾರು ಶತ್ರು? ಅಧರ್ಮವೇ ಶತ್ರು. ರಾವಣನಾದರೋ ಅಧರ್ಮವೇ ಮೈತಾಳಿದವನು. ಅವನಿಗೆ ಬಲದುಂಬಿದ ಪುತ್ರ ಇಂದ್ರಜಿತ್ತೂ ಅಧರ್ಮ-ಪ್ರತೀಕವೇ. ಎಂದೇ ಇಂದ್ರಜಿತ್-ಸಂಹಾರದ ಸಮಯದಲ್ಲಿ ಲಕ್ಷ್ಮಣನು ಮಾಡುವ ಆಣೆ "ಶ್ರೀರಾಮನು ಧರ್ಮಾತ್ಮನೇ ಆಗಿದ್ದಲ್ಲಿ, ಓ ಬಾಣವೇ ಈ ಇಂದ್ರಜಿತ್ತನ್ನು ಕೊಲ್ಲು" ಎಂದಿರುವುದು.

ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ, "ಲಕ್ಷ್ಮಣನಿಗೆ ರಾಮನು ಬೇಕು; ಅದಕ್ಕಿಂತಲೂ ಮೊದಲು ಬೇಕಾದದ್ದು ಧರ್ಮ"! ಇದಕ್ಕಾದರೂ ಕಾರಣವಿದು: "ದೇಶ-ಕ್ಷೇಮವು ಏರ್ಪಡುವುದು ಧರ್ಮದಿಂದ; ದೇಶ-ಕ್ಷೋಭೆಯು ಅಧರ್ಮದಿಂದ. ಇದು ಸಿದ್ಧವಾದ ಮೇಲೆ ಧರ್ಮವೇ ದೇಶವನ್ನಾಳಬೇಕು, ಅಲ್ಲವೇ?"

ರಾವಣನು ಲೋಕ-ರಾವಣ, ಎಂದರೆ ಲೋಕಗಳನ್ನೆಲ್ಲ ಗೋಳಾಡಿಸುವವನು. ಇದುವೇ ಲೋಕ-ಕ್ಷೋಭೆ. ಹನುಮಂತನು ಸಹ ರಾವಣನಲ್ಲಿ ಅಧರ್ಮವೇ ಬಲಿಷ್ಠವಾಗಿರುವುದನ್ನು ಉಸುರುತ್ತಾನೆ.

ಹೀಗೆ ರಾಮ-ರಾವಣರು ಧರ್ಮ-ಅಧರ್ಮಗಳೇ ಮೈತಾಳಿಬಂದಂತೆ. ಅಧರ್ಮವು ತಳೆಯುವ ಬಗೆಬಗೆಯ ವೇಷಗಳನ್ನೂ ಧೋರಣೆಗಳನ್ನೂ, ಅದನ್ನು ಹತ್ತಿಕ್ಕುವಲ್ಲಿ ಧರ್ಮವು ಇಡಬೇಕಾದ ಹೆಜ್ಜೆಗಳನ್ನೂ ತಂತ್ರಗಳನ್ನೂ ರಾಮಾಯಣವು ತೋರಿಗೊಡುವುದು.

ಹೀಗೆ ಎಂದೆಂದಿಗೂ ಜೀವನಕ್ಕೆ ಅವಶ್ಯವಾದ ಪಾಠಗಳನ್ನೂ ಮೌಲ್ಯಗಳನ್ನೂ ಕಥಾದ್ವಾರಾ ತಿಳಿಸುವ ರಾಮಾಯಣವು ಶಾಶ್ವತ-ಕಾವ್ಯವೆಂಬುದರಲ್ಲಿ ಅಚ್ಚರಿಯೇನು?

ಸೂಚನೆ: 1/2//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Saturday, February 1, 2025

ಕೃಷ್ಣಕರ್ಣಾಮೃತ 49 ಸೋತ ಕೃಷ್ಣ ಕಾಪಾಡಲಿ! (Krishakarnamrta 49)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಅಂಗುಲ್ಯಾ ಕಃ ಕವಾಟಂ


ಕನ್ನಡದಲ್ಲಿ "ಗೆದ್ದೆತ್ತಿನ ಬಾಲ ಹಿಡಿಯುವುದು" ಎಂಬ ಪದಗುಚ್ಛ ಪ್ರಸಿದ್ಧವಾದದ್ದೇ. ಆದರೆ ಸೋತವರ ಪಕ್ಷವನ್ನು ಹಿಡಿಯುವುದು, ಅಥವಾ ಸೋತವರನ್ನೇ ಆಶ್ರಯಿಸುವುದು - ಇದನ್ನು ಯಾರಾದರೂ ಜಾಣರು ಮಾಡುವರೇ? ಲೀಲಾಶುಕನು ಮಾಡಿದ್ದಾನೆ. ಮುಷ್ಟಿಕಾದಿ-ಮಲ್ಲರನ್ನು ಗೆಲ್ಲಬಲ್ಲ ಕೃಷ್ಣ ಗೊಲ್ಲತಿಯೊಬ್ಬಳಿಂದ ಸೋಲು ಕಂಡಿದ್ದಾನೆ.

ಸೋತವರು ನಮ್ಮನ್ನು ಕಾಪಾಡುತ್ತಾರೆಯೇ? ಅಯ್ಯೋ ಪಾಪ, ಮೊದಲು ಅವರು ಆತ್ಮರಕ್ಷಣೆಯನ್ನು ಮಾಡಿಕೊಳ್ಳಲಿಎಂದಲ್ಲವೇ ನಮಗೆನಿಸುವುದು? ಆದರೆ ಸೋತವನನ್ನೇ ಸಮಾಶ್ರಯಿಸುತ್ತಿದ್ದಾನೆ, ಲೀಲಾಶುಕ!

ಜೀವನದಲ್ಲಿ ಗೆಲ್ಲುತ್ತಿರುವುದೇ ಸರಿಯಾದ ಹಾದಿಯೆಂದೇನಲ್ಲ. ಗೆದ್ದು ಸೋಲುವುದೂ, ಸೋತು ಗೆಲ್ಲುವುದೂ ಉಂಟು. ಎಲ್ಲೆಲ್ಲಿ ಇಬ್ಬರ ನಡುವೆ ಒಂದು ಚಿರಕಾಲ ನಿಲ್ಲಬೇಕಾದ ಸತ್-ಸಂಬಂಧವುಂಟೋ ಅಲ್ಲೆಲ್ಲ ಲೆಕ್ಕವು ಆಗಾಗ್ಗೆ ಬೇಕಾಗುತ್ತಿರುವುದೇ. ಪ್ರಣಯಿಗಳಲ್ಲಿ ಬಗೆ ಉಪಕಾರಿಯೇ. ಹಠಹಿಡಿಯುವುದೇ ದೊಡ್ಡದಲ್ಲ. ಸೋತದ್ದೆಲ್ಲಾ ಭಂಗವೆಂದು ಸಹ ಅಲ್ಲ. ಚಿಕ್ಕಮಕ್ಕಳ ಮನ ನೊಂದಿರುವಾಗಲಂತೂ ಅವನ್ನು ಆಟಕ್ಕೆ ಕರೆದು ಆಗೊಮ್ಮೆ ಈಗೊಮ್ಮೆ ನಾವು ಬೇಕೆಂದೇ ಸೋತಲ್ಲಿ, ಅವುಗಳ ಖಿನ್ನತೆಯು ದೂರವಾಗುವುದಲ್ಲದೆ, ಅವುಗಳ ಮನಸ್ಸು ಪ್ರಫುಲ್ಲವಾಗುವುದೂ ಉಂಟು.

ಪ್ರಕೃತ, ಗೋಪಿಯೊಬ್ಬಳೊಡನೆ ಕೃಷ್ಣನು ಸೋತಿದ್ದಾನೆ, ಮಾತಿನಲ್ಲಿ. ಅದೆಂತು ಶಕ್ಯ? ಎಳಸಿನಿಂದಲೂ ಆತನು ವಾಕ್-ಪಟುವೇ ಅಲ್ಲವೇ? - ಎಂದೆನಿಸಬಹುದು. ಆದರೂ ವನಿತೆಯರಲ್ಲಿಯ ವಿವಿಧ-ವಾಕ್-ಚಾತುರ್ಯಗಳು ವಿಶಿಷ್ಟವಾದವು, ಅನುಪದಿಷ್ಟವಾದವು, ಎಂದರೆ ಯಾರೂ ಹೇಳಿಕೊಡದೆಯೇ ಬರುವಂತಹವು.

ಪ್ರಕೃತ-ಶ್ಲೋಕದಲ್ಲಿ ಮಾಧವ, ವಸಂತ, ಚಕ್ರೀ, ಧರಣಿ-ಧರ, ಘೋರಾಹಿ-ಮರ್ದೀ, ಹರಿ - ಎಂಬ ಆರು ಪದಗಳಿಗೆ ಅನ್ವಯಿಸಬಹುದಾದ ಎರಡೆರಡು ಅರ್ಥಗಳನ್ನು ಬಳಸಿ ಶಬ್ದ-ಕ್ರೀಡೆಯೊಂದನ್ನು ನಿರ್ಮಿಸಿದೆ.

ಶ್ಲೋಕದ ಪ್ರಸಂಗ ಹೀಗಿದೆ. ಕೃಷ್ಣನೊಮ್ಮೆ ಗೋಪಿಯೊಬ್ಬಳ ಮನೆಗೆ ಹೋಗಿದ್ದಾನೆ - ಮೊದಲೇ ಸೂಚಿಸಿಯೇ ಹೋಗಿರುವುದೆಂದುಕೊಳ್ಳಿಆದರೆ ಕೃಷ್ಣನನ್ನು ಸ್ವಲ್ಪ "ಆಟ ಆಡಿಸ"ಬೇಕೆಂಬ ಮನಸ್ಸಾಗಿದೆ, ಗೋಪಿಗೆ. ಎಂದೇ ಕೃಷ್ಣನು ಆಕೆಯ ಮನೆಗೆ ಹೋಗಿ ಬಾಗಿಲು ತಟ್ಟಿದಾಗ ಬಾಗಿಲನ್ನು ತೆಗೆದಿಲ್ಲ, ಬದಲಾಗಿ ಕೆಣಕಿದ್ದಾಳೆ, ಈ ಕೀಟಲೆಸುಬ್ಬಿ.

ಬಾಗಿಲು ತಟ್ಟಿದವನನ್ನು ಕೇಳಿದ್ದಾಳೆ: "ಯಾರದು ಬಾಗಿಲುತಟ್ಟುತ್ತಿರುವವರು, ಬೆರಳಿಂದ?" ಹೇಳಿಯೇ ಬಂದಿದ್ದರೂ ಹೀಗೆ ಕೇಳುತ್ತಿರುವುದಕ್ಕಾಗಿ ಕೃಷ್ಣನಿಗವಳ ಮೇಲೆ ತುಸು ಕೋಪವೇ. ಎಂದೇ ಅವಳನ್ನು ಮೂದಲಿಸಿಯೇ ಮಾತನ್ನಾರಂಭಿಸಿದ್ದಾನೆ, "ಕುಟಿಲೇ" ಎಂದೇ ಸಂಬೋಧಿಸಿ. ಕುಟಿಲೆಯೆಂದರೆ ವಕ್ರ-ಬುದ್ಧಿಯುಳ್ಳವಳು. ಹಾರ್ದವಾಗಿ ಸ್ವಾಗತಿಸುವ ಬದಲು, ಆತನ ಆಗಮನವೇ ತನಗರಿಯದೆಂಬಂತೆ ನಟಿಸುತ್ತಾ ಹೀಗೆ ಕೇಳುತ್ತಿರುವವಳು ಕುಟಿಲೆಯಲ್ಲದೆ ಮತ್ತೇನು? ಋಜು-ಬುದ್ಧಿಯವಳಾಗಿದ್ದರೆ ಬಂದದ್ದಕ್ಕೇ ಅಮಿತಾನಂದವನ್ನು ತೋರ್ಪಡಿಸಿಕೊಳ್ಳುತ್ತಿದ್ದಳು.  ಸಲಿಗೆ ಹೆಚ್ಚಾದಾಗ ನಟನೆ-ಕುಟಿಲತೆಗಳು ಮೈದೋರುವುದುಂಟಲ್ಲವೇ? ಇವಳಿಗೆ ಸ್ವಲ್ಪ ಬುದ್ಧಿ ಕಲಿಸಬೇಕು – ಎನಿಸಿರಬೇಕು, ಕೃಷ್ಣನಿಗೆ.


ಅದಕ್ಕೇ ಆತನ ಉತ್ತರ, "ಕುಟಿಲೇ, ನಾನು ಮಾಧವ" ಎಂದು. ಮಾ ಎಂದರೆ ಲಕ್ಷ್ಮಿ; ಲಕ್ಷ್ಮಿಯ ಗಂಡ - ಎಂಬ ಅರ್ಥದಲ್ಲಿ ಮಾ-ಧವ. ಆದರೆ ಮಾಧವ-ಪದವನ್ನು ವಸಂತ-ಋತುವಿಗೂ ಬಳಸುವುದುಂಟು. ಅದಕ್ಕಿರುವ ವಿಷ್ಣು ಮತ್ತು ವಸಂತ ಎಂಬ ಎರಡರ್ಥಗಳಲ್ಲಿ ಎರಡನೆಯದನ್ನೇ ಹಿಡಿದುಕೊಂಡು ಕೇಳಿದಳು: "ಹಾಗೆಂದರೆ ವಸಂತನೆಂದೋ?" ಎಂದು.

ಅವನು, "ಇಲ್ಲ, ನಾನು ಚಕ್ರೀ" ಎಂದ. ಚಕ್ರೀ ಎಂದರೆ ಚಕ್ರಾಯುಧವನ್ನು ಧರಿಸಿರುವವನು. ಆದರೆ ಕುಂಬಾರನು ಮಡಕೆಯನ್ನು ನಿರ್ಮಿಸುವಾಗ ಚಕ್ರವನ್ನು ಬಳಸುವನಾದ್ದರಿಂದ ಅವನೂ ಚಕ್ರಿಯೇ – ಎಂಬ ಲೆಕ್ಕದ ಮೇಲೆ ಕೇಳಿದಳು " , ನೀನು ಕುಂಬಾರನೋ?"

ವೀರ-ಕ್ಷತ್ರಿಯ-ರಾಜನನ್ನು ಕುಂಬಾರನೆಂದರೆ ಕೆರಳುವುದಿಲ್ಲವೇ? ಕುಂಬಾರನು ಹಿಡಿಮಣ್ಣನ್ನು ಹಿಡಿದು ಕೆಲಸಮಾಡುವವ. ಎಂದೇ ಅದಕ್ಕೆ ಪ್ರತಿಯಾಗಿ ತಾನು ಧರಣಿ-ಧರ ಎಂದ. ಧರಣಿ-ಧರನೆಂದರೆ ಇಡೀ ಭೂಮಿಯನ್ನು ಧರಿಸಿರುವವ, ಭೂ-ರಕ್ಷಕ, ರಾಜ. ವಿಷ್ಣುವಿನ ಕೆಲಸವಲ್ಲವೇ ಭೂ-ರಕ್ಷಣೆ?

ನಾನು ಸೋತೆನೆಂದುಕೊಂಡಳೇ ಗೋಪಿ? ಸುತರಾಂ ಇಲ್ಲ. ಪುರಾಣಕಥೆಗಳನ್ನು ಚೆನ್ನಾಗಿಯೇ ಬಲ್ಲವಳಾಗಿದ್ದಳಾದ್ದರಿಂದ ಅವಳಿಗೆ ಗೊತ್ತಿತ್ತು, ಭೂಮಿಯನ್ನು ಆದಿಶೇಷನು ಹೊತ್ತಿರುವನು - ಎಂಬುದಾಗಿ. ಹೀಗಾಗಿ, ಧರಣಿಯನ್ನು ಧರಿಸಿರುವವನು ಎಂದರೆ ಆದಿಶೇಷನೂ ಆಗಬಹುದೆಂದಾಯಿತು. ಅದನ್ನೇ ಹಿಡಿದು, "ನೀನು ಆದಿಶೇಷನೋ?" ಎಂದು ಕೇಳಬಹುದಾಗಿತ್ತು; ಅದರ ಬದಲಾಗಿ, ಇನ್ನೂ ಚೆನ್ನಾಗಿ ಕೆರಳಿಸುವ ಪರಿಯಲ್ಲಿ ಕೇಳಿದಳು; ನೇರಾಗಿ "ನೀನು ಸರ್ಪರಾಜನೋ?" ಎಂದು ಕೂಡ ಕೇಳಲಿಲ್ಲ; ಬದಲಾಗಿ, "ಅಲ್ಲಿಗೆ, ನೀನು ಎರಡು ನಾಲಿಗೆಯ ಸರ್ಪಾಧಿಪತಿಯೋ?" ಎನ್ನುತ್ತಾಳೆ. ಎರಡು ನಾಲಿಗೆಯವನು ಎಂದರೆ, ಆಡಿದ ಮಾತಿಗೆ ತಪ್ಪುವವ - ಎಂಬ ಧ್ವನಿಯೂ ಬರುತ್ತದಲ್ಲವೇ? ಜೊತೆಗೆ ಹಾವಿನ ಹೋಲಿಕೆ ಬೇರೆ. ಕೆರಳಿಕೆ ಹೆಚ್ಚಾಯಿತೇ.

ಕೃಷ್ಣನಿಗೆ ಮತ್ತಷ್ಟು ಕೋಪವೇ. "ತಾನು ಹಾವಲ್ಲ"ವೆಂದಷ್ಟೇ ಹೇಳುವುದಿಲ್ಲ; ಬದಲಾಗಿ, ತಾನು ಕಾಳಿಯ-ಮರ್ದನವನ್ನು ಮಾಡಿದ ವೀರಾವೇಶವನ್ನು ನೆನೆಸಿಕೊಂಡು, "ನಾನು ಘೋರವಾದ ಅಹಿಯನ್ನು, ಎಂದರೆ ಸರ್ಪವನ್ನು, ಮೆಟ್ಟಿದವನು" ಎಂದ. ಎಲ್ಲರೂ ಭಯಪಡುವ ವಿಷಮಯವಾದ ಸರ್ಪವನ್ನು ಬಾಲ್ಯದಲ್ಲಿಯೇ ಮೆಟ್ಟಿದ್ದ ತನ್ನನ್ನು "ನೀನು ಹಾವಾ?" ಎಂದರೆ ಕೋಪವುಕ್ಕದೇ?

ಆದರೇನು? ಅವಳಿಗೆ ಪೌರಾಣಿಕ ಕಥೆಗಳು ಬೇಕಾದಷ್ಟೇ  ಗೊತ್ತಿದ್ದವು. ಹಿಂದೊಮ್ಮೆ ಗರುಡನು ಸರ್ಪಗಳನ್ನೆಲ್ಲ ಮಟ್ಟಹಾಕಿದ್ದನಲ್ಲವೇ? ಅದನ್ನು ಸ್ಮರಿಸಿಕೊಂಡು, "ಹಾಗೆಂದರೆ ನೀನು ಗರುಡನೇ?" ಎಂದು ಕೇಳಿಬಿಟ್ಟಳು.

ಕೃಷ್ಣನಿಗೆ ಸಾಕಾಗಿಹೋಯಿತೇನೋ? ತನ್ನ ಸ್ವ-ಸ್ವರೂಪವನ್ನೇ ಜ್ಞಾಪಿಸಿಕೊಂಡನೋ ಏನೋ? ಅದಕ್ಕೇ, "ಇಲ್ಲಾ, ನಾನು ಹರಿ" ಎಂದು ಸರಳವಾಗಿ ಸುಸ್ಪಷ್ಟವಾಗಿ ಉತ್ತರವಿತ್ತನು. ಅವಳೋ ಸೋಲೊಪ್ಪದ ಮಲ್ಲಿ. ಬಿಟ್ಟಾಳೇ? ಅದಕ್ಕೂ ಕೊಕ್ಕೆ ಹಾಕಿದಳು. ಹರಿ ಎಂಬ ಪದಕ್ಕೆ ಕೋತಿಯೆಂಬ ಅರ್ಥವೂ ಇದೆಯಾದ್ದರಿಂದ "ಹಾಗಾದರೆ ನೀನು ಕಪೀಂದ್ರನೇ?" ಎಂದುಬಿಟ್ಟಳು.

ಗೋಪಿಯ ಈ ಮಾತಿಗೆ ಕೋಪಿಯಾದರೂ ಮುಂದಕ್ಕೆ ಇನ್ನೇನೂ ತೋಚದಾಯಿತು, ಕೃಷ್ಣನಿಗೆ. ಹೀಗೆ ಮಾತಿನ ಮಲ್ಲಿಯಾದ ಗೊಲ್ಲತಿಯೊಬ್ಬಳೆದುರಿಗೆ ಸೋತುಹೋದ, ಈ ಕೃಷ್ಣ-ಭೂಪ!

ಹೀಗೆ ಮಾತಿನಲ್ಲಿ ಸೋತ ಚಕ್ರ-ಪಾಣಿಯಾದ ಕೃಷ್ಣನು ನಮ್ಮನ್ನು ಪೊರೆಯಲಿ - ಎಂದು ಬೇಡಿಕೊಳ್ಳುತ್ತಾನೆ, ಲೀಲಾಶುಕ.

ತಮ್ಮ ಬಳಿ ಸೋತವನನ್ನು ಕಂಡರೆ ಕೆಲವು ನಾರಿಯರಿಗೆ ಹೆಚ್ಚು ಪ್ರೀತಿಯಂತೆ. ಮಾತಿನಲ್ಲಿ ಸೋತು ಹೃದಯವನ್ನು ಗೆದ್ದವ, ಕೃಷ್ಣ! ಹೀಗೆ ವಾಕ್-ಚಮತ್ಕಾರದಿಂದ ನಡೆದ ವಾಗ್ಯುದ್ಧವು ಕೃಷ್ಣ-ಗೋಪಿಕೆಯರ ಪ್ರೀತಿಯನ್ನೇ ವರ್ಧಿಸುವಂತಹುದು.

ಒಂದರ್ಥದಲ್ಲಿ ಪ್ರಸಂಗವನ್ನೇ ವಿಸ್ತಾರವಾಗಿ ಪ್ರಸ್ತಾವಿಸುತ್ತಾ ಲೀಲಾಶುಕನು ಮಾಡಿರುವುದೂ ಒಂದು ಬಗೆಯ ಮೂದಲಿಕೆಯೇ. ಆದರೂ ನಮ್ಮ ಕೃಷ್ಣ ಅಷ್ಟಕ್ಕೆಲ್ಲಾ ಬೇಜಾರುಮಾಡಿಕೊಳ್ಳದವ, ಅಲ್ಲವೇ?! ನೋಡಬೇಕಾದದ್ದು ಮಾತನ್ನಲ್ಲ, ಮನಸ್ಸನ್ನು. ಭಾವ-ಗ್ರಾಹಿಯಲ್ಲವೇ ಭಗವಂತ?

"ಅಂಗುಲ್ಯಾ ಕಃ ಕವಾಟಂ ಪ್ರಹರತಿ?" "ಕುಟಿಲೇ! ಮಾಧವಃ"

"ಕಿಂ ವಸಂತಃ?"/ "ನೋ ಚಕ್ರೀ"

"ಕಿಂ ಕುಲಾಲಃ?" "ನಹಿ ಧರಣಿ-ಧರಃ"

"ಕಿಂ ದ್ವಿ-ಜಿಹ್ವಃ ಫಣೀಂದ್ರಃ?"/ "ನಾಹಂ ಘೋರಾಹಿ-ಮರ್ದೀ"

"ಕಿಮಸಿ ಖಗ-ಪತಿಃ?" "ನೋ ಹರಿಃ"

"ಕಿಂ ಕಪೀಂದ್ರಃ?"

– ಇತ್ಯೇವಂ ಗೋಪಕನ್ಯಾ-ಪ್ರತಿವಚನ-ಜಿತಃ ಪಾತು ವಃ ಚಕ್ರಪಾಣಿಃ||

ಸೂಚನೆ : 1/2/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.