ಲೇಖಕರು: ಮೈಥಿಲೀ ರಾಘವನ್
ಶ್ರೀರಾಮ, ಶ್ರೀಕೃಷ್ಣ ಮುಂತಾದ ಅವತಾರ ಪುರುಷರು ಹುಟ್ಟಿ ಬೆಳೆದು ನಡೆದಾಡಿ ಪಾವನಗೊಳಿಸಿದ ಭವ್ಯಭೂಮಿ ಭಾರತಭೂಮಿ. ಶ್ರೀರಾಮನು ವನವಾಸದ ಕಾಲದಲ್ಲಿ ಭಾರತಭೂಮಿಯ ಅನೇಕ ಜಾಗಗಳನ್ನು ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ್ದಾನೆ. ಅಂತಹ ಜಾಗಗಳಲ್ಲಿ ಲೇಪಾಕ್ಷಿ ಎಂಬ ಸ್ಥಳವೂ ಒಂದಾಗಿದೆ. ಶ್ರೀರಾಮನ ವನವಾಸ ಸಂದರ್ಭದಲ್ಲಿ ಸೀತಾಮಾತೆಯನ್ನು ರಾವಣಾಸುರನು ಎತ್ತಿಕೊಂಡೊಯ್ದದ್ದು ಪ್ರಸಿದ್ಧವಾಗಿದೆ. ಆ ಸಮಯದಲ್ಲಿ ಜಟಾಯುವೆಂಬ ಪಕ್ಷಿರಾಜನು ರಾವಣನನ್ನೆದುರಿಸಿ ಸೀತೆಯನ್ನು ಕಾಪಾಡುವ ಪ್ರಯತ್ನದಲ್ಲಿ ವಿಫಲನಾಗಿ ಅಸುನೀಗಿದನು. ಸೀತಾಮತೆಯನ್ನು ಅರಸುತ್ತ ಬಂದ ರಾಮಚಂದ್ರನು ರಾವಣನಿಂದ ಹೊಡೆದುಬೀಳಿಸಲ್ಪಟ್ಟ ಜಟಾಯುವನ್ನು ಕಂಡದ್ದು ಇಂದಿನ ಲೇಪಾಕ್ಷಿಸ್ಥಳದಲ್ಲಿ ಎಂಬ ಪ್ರತೀತಿ ಇದೆ. ಜಟಾಯುವನ್ನು ಕಂಡ ರಾಮ “ಲೇ ಪಕ್ಷಿ”(ಏಳು, ಓ ಹಕ್ಕಿಯೇ) ಎಂದು ಕರುಣೆಯಿಂದ ಅದನ್ನು ಸಂಭೋದಿಸಿದನಂತೆ. ಆದ್ದರಿಂದ ಈ ಸ್ಥಳಕ್ಕೆ ಲೇಪಾಕ್ಷಿಯೆಂದು ಹೆಸರು ಎಂಬುದಾಗಿ ತಿಳಿದುಬರುತ್ತದೆ. ಶ್ರೀರಾಮನು ಜಟಾಯುವಿಗೆ ಮೋಕ್ಷವನ್ನು ಅನುಗ್ರಹಿಸಿದನೆಂದು ಶ್ರೀಮದ್ರಾಮಾಯಣವು ತಿಳಿಸುತ್ತದೆ. ಆದ್ದರಿಂದ ಇದನ್ನು ಜಟಾಯುಮೋಕ್ಷಸ್ಥಾನವೆಂದೂ ಕರೆಯುತ್ತಾರೆ.
ಬೆಂಗಳೂರಿನಿಂದ 135 ಕಿ.ಮಿ ದೂರದಲ್ಲಿ ಆಂದ್ರಪ್ರದೇಶದಲ್ಲಿರುವ ಈ ಚಿಕ್ಕ ಹಳ್ಳಿಯು ತೀರ್ಥಯಾತ್ರೆ ಹಾಗೂ ಉಲ್ಲಾಸ ಪ್ರವಾಸ ಎರಡಕ್ಕೂ ಹೊಂದುವ ಜಾಗವಾಗಿದೆ. ಈ ಸ್ಥಳವು ಸ್ಕಾಂದಪುರಾಣದಲ್ಲೂ ಶೈವರ ದಿವ್ಯಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಕಾರು ಅಥವ ಟಾಕ್ಸಿಯಲ್ಲಿ ಸುಮಾರು 3 ಘಂಟೆಗಳಕಾಲದ ಪ್ರಯಾಣ. ಅಲ್ಲಿನ ವಿರೂಪಾಕ್ಷ ದೇವಾಲಯವು ಅಚ್ಯುತರಾಯನ ಕಾಲದಲ್ಲಿ ಕಟ್ಟಲ್ಪಟ್ಟು ಅದ್ಭುತ ಶಿಲ್ಪಗಳ ನೆಲೆವೀಡಾಗಿದೆ. ಇದು ವಿಜಯನಗರ ಶೈಲಿಯಲ್ಲಿ ರಚಿಸಲ್ಪಟ್ಟಿದೆ. ದೇವಾಲಯದ ಪ್ರಾಕಾರಗಳು ಅತ್ಯಂತ ಉನ್ನತ ಮಟ್ಟದ ಕಲಾನೈಪುಣ್ಯವನ್ನು ಪ್ರದರ್ಶಿಸುವ ಸ್ಥಂಭಗಳಿಂದ ಅಲಂಕೃತವಾಗಿವೆ. ಒಳಚಾವಣಿಯೂ ಕೂಡ ಸುಂದರವಾದ ಚಿತ್ರಗಳಿಂದ ಕೂಡಿದೆ. ದೇವಾಲಯದ ಮಂಟಪದಲ್ಲಿ ಅದ್ಭುತಕೆತ್ತನೆಗಳಿಂದ ಕೂಡಿದ 64 ಸ್ಥಂಭಗಳಿವೆ. ಅವುಗಳಲ್ಲಿ ಒಂದು ಸ್ಥಂಭವು ನೆಲದಿಂದ ಸ್ವಲ್ಪಮೇಲಕ್ಕೇ ನಿಂತಿದೆ. ಅಡಿಯಲ್ಲಿ ಒಂದು ಬಟ್ಟೆ ಅಥವ ಕಾಗದವನ್ನು ಅದರ ಅಡಿಯಿಂದ ತೂರಿಸಿ ಮತ್ತೊಂದು ಬದಿಯಿಂದ ಹೊರತೆಗೆಯಬಹುದಾಗಿದೆ! ಎಂತಹ ಅದ್ಭುತ ರಚನೆ! ವಿದೇಶೀಯನೊಬ್ಬನು ಆ ಕಂಭವನ್ನು ಸ್ವಲ್ಪ ಅಲ್ಲಾಡಿಸಿ ಅದು ಯಾವ ಆಧಾರದಿಂದ ನಿಂತಿದೆಯೆಂದು ನೋಡುವ ಪ್ರಯತ್ನ ಮಾಡಿದಾಗ ಅಲ್ಲಿದ್ದ ಅಷ್ಟೂ ಕಂಭಗಳೂ ಅಲ್ಲಾಡಲು ಶುರುವಾಯಿತಂತೆ! ಆತ ಗಾಬರಿಗೊಂಡು ತನ್ನ ಪ್ರಯತ್ನವನ್ನು ಬಿಟ್ಟು ಓಡಿಹೋದನಂತೆ! ಅದೆಂತಹ ಅದ್ಭುತ ಕಟ್ಟದ ನಿರ್ಮಾಣ! ಅದನ್ನು ರಚಿಸಿದ ಮಹಾನುಭಾವನನ್ನು ಅದೆಷ್ಟು ಕೊಂಡಾಡೋಣ?
ಇಲ್ಲಿರುವ ದೊಡ್ಡಲಿಂಗದ ಮೇಲೆ ಹಾವಿನ ಹೆಡೆಯು ಕೆತ್ತಲ್ಪಟ್ಟಿದೆ. ಅಷ್ಟು ದೊಡ್ಡ ಗಾತ್ರದ ಆಕೃತಿಯು ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವುದು ಅಚ್ಚರಿಯ ಸಂಗತಿ. ಲೇಪಾಕ್ಷಿಯ ಇನ್ನೊಂದು ಪ್ರಸಿದ್ಧ ಕಲಾಕೃತಿಯೆಂದರೆ ಒಂದೇ ಕಲ್ಲಿನಿಂದ ನಿರ್ಮಿತವಾದ ಬೃಹದಾಕಾರದ ನಂದಿ. ಇದು ಸುಮಾರು 20 ಅಡಿಗಳಷ್ಟು ಎತ್ತರ, 30 ಅಡಿಗಳಷ್ಟು ಉದ್ದದ್ದಾದ ಭವ್ಯ ಕಲಾಕೃತಿ. ನಂದಿಯ ಸುತ್ತಲೂ ದೊಡ್ಡದಾದ ಸುಂದರ ಉದ್ಯಾನವನವು ನಿರ್ಮಿತವಾಗಿದೆ. ಪ್ರವಾಸಿಗಳಿಗೆ ಅತ್ಯಂತ ಆಕರ್ಷಕ ಸ್ಥಾನ. ಇಲ್ಲಿಯ ಮತ್ತೊಂದು ವಿಶೇಷವೆಂದರೆ, ದೊಡ್ಡದಾದ ಒಂದು ಪಾದದ ಗುರುತು ಕಲ್ಲಿನ ಮೇಲೆ ಕಾಣಿಸುತ್ತದೆ. ಅದು ಸೀತಾಮಾತೆಯ ಪಾದದ ಗುರುತು ಎಂಬ ಪ್ರತೀತಿ ಇದೆ. ಇದರಲ್ಲಿ ಸದಾ ಕಾಲವೂ ನೀರು ಜಿನುಗುತ್ತಿರುತ್ತದೆ. ಬಟ್ಟೆಯಿಂದ ಒರಸಿದರೂ ಮತ್ತೆ ನೀರು ಜಿನುಗುತ್ತೆ! ನೀರು ಎಲ್ಲಿಂದ ಬರುತ್ತದೆಂಬುದೇ ಯಾರಿಗೂ ತಿಳಿದಿಲ್ಲವಂತೆ. ಹೀಗೆ ಅನೇಕ ವಿಸ್ಮಯಗೊಳಿಸುವ ಅಂಶಗಳಿಂದಲೂ ಶಿಲ್ಪಕಲಾ ವೈಭವದಿಂದಲೂ
ಮೆರೆಯುವ ಈ ಸ್ಥಳವು ಪ್ರತಿನಿತ್ಯವೂ ವಾಹನಗಳಸದ್ದು-ಗಲಾಟೆಗಳ ಮಧ್ಯದಲ್ಲಿ ಓಡಾಡಿ ತಲೆಬಿಸಿಯಾಗಿರುವ ನಗರ ವಾಸಿಗಳಿಗೆ ಪ್ರಶಾಂತವಾದ ವಾತಾವರಣವನ್ನೂ, ದೈವೀಭಾವವನ್ನೂ, ಮನೋರಂಜನೆಯನ್ನೂ, ಉಲ್ಲಾಸವನ್ನೂ ನೀಡೂವಒಳ್ಳೆಯ picnic spot ಹಾಗೂ ತೀರ್ಥಕ್ಷೇತ್ರ ಎರಡೂ ಆಗಿದೆ.
ಪ್ರಕಟವಾಗಿದೆ .