Sunday, December 22, 2019

ವೈರಾಗ್ಯ (Vairagya)

ಲೇಖಕರು: ಕೆ.ಎಸ್.ರಾಜಗೋಪಾಲನ್
   ಪ್ರತಿಕ್ರಿಯಿಸಿರಿ lekhana@ayvm.in


ಮನುಷ್ಯನಿಗೆ ವೈರಾಗ್ಯವಿದ್ದರಷ್ಟೆ ಅವನು ದೇವರನ್ನು ನೋಡಲು ಸಾಧ್ಯ ಎಂಬನಂಬಿಕೆ, ಎಷ್ಟೋಜನಗಳಲ್ಲಿದೆ. ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಅಭ್ಯಾಸ, ವೈರಾಗ್ಯಗಳ ಮೂಲಕವೇ ಮನಸ್ಸನ್ನು ನಿಗ್ರಹಿಸಬಹುದೆನ್ನುತ್ತಾನೆ. ನಾವು ಬದುಕಿರುವವರೆವಿಗೂ ನಮಗೆ ಎಷ್ಟೋ ಆಸೆಗಳಿದ್ದೇ ಇರುತ್ತವೆ. ಇವೆಲ್ಲವನ್ನೂ ಬಿಡುವುದುಹೇಗೆ? “ಹುಚ್ಚು ಬಿಟ್ಟಹೊರತು ಮದುವೆಯಿಲ್ಲ; ಮದುವೆಯಾದ ಹೊರತು ಹುಚ್ಚುಬಿಡುವುದಿಲ್ಲ” ಎಂಬಂತೆ ನಿಜಕ್ಕೂ ಭಗವಂತನನ್ನು ಕಂಡಹೊರತು ಪ್ರಾಪಂಚಿಕ ವಿಷಯಗಳ ಬಗ್ಗೆ ವೈರಾಗ್ಯ ಬರುವುದಿಲ್ಲ. ವೈರಾಗ್ಯ ಬಂದ ಹೊರತು ದೇವರು ಸಿಕ್ಕುವುದಿಲ್ಲ-- ಎನ್ನುವಂತೆಯೇ ಇದೆ. ಆದ್ದರಿಂದ ವೈರಾಗ್ಯದ ಬಗ್ಗೆ ಸ್ವಲ್ಪ ಚಿಂತನೆ ಬೇಕೆನಿಸುತ್ತದೆ.

ರಾಗವೆಂದರೆ ಅತಿಯಾದ ಪ್ರೀತಿ; ಒಂದು ವಿಧವಾದ ಅಂಟು. ವೈರಾಗ್ಯವೆಂದರೆ ಅಂಟಿಲ್ಲದಿರುವುದು. ಹಿರಿಯರೊಬ್ಬರು ಒಂದು ಉದಾಹರಣೆ ಕೊಡುತ್ತಿದ್ದರು. ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ತಪ್ಪಲ್ಲ; ಕುರ್ಚಿಯಿಂದ ಎದ್ದ ಕೂಡಲೇ ಕುರ್ಚಿಯೂ ನಮಗೆ ಅಂಟಿಕೊಂಡು ನಮ್ಮೊಡನೆಯೇ ಎದ್ದರೆ ವ್ಯವಹಾರ ಹೇಗೆ ಸಾಗಬೇಕು? ಎಂದು. ಹೀಗಾಗಿ ವೈರಾಗ್ಯದ (ಅಂಟಿಲ್ಲದಿರುವಿಕೆಯ) ಅವಶ್ಯಕತೆ ಯಾರಿಗಾದರೂ ತಿಳಿಯುತ್ತದೆ. 

ನಿಜವಾದ ವೈರಾಗ್ಯದಿಂದ ಯಾರಾದರೂ ಇದ್ದದ್ದುಂಟೆ? ಎಂಬ ಪ್ರಶ್ನೆ ಏಳಬಹುದು. ಅದಕ್ಕೊಂದೆರಡು ಉದಾಹರಣೆಗಳು- ಶ್ರೀರಾಮಕೃಷ್ಣ ಪರಮಹಂಸರು ದೇವಾಲಯವೊಂದರಲ್ಲಿ ಅರ್ಚಕರಾಗಿದ್ದರು. ದೇವಾಲಯದವರು ಬಂದು, ‘ಆಡಳಿತವರ್ಗದಆಜ್ಞೆಯಾಗಿದೆ; ನೀವಿನ್ನು ಕೆಲಸಬಿಟ್ಟು ಹೋಗಬೇಕಂತೆ’ ಎಂದರು. ಅಲ್ಲಿಯವರೆಗೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಪರಮಹಂಸರು, ಸ್ವಲ್ಪವೂ ವಿಚಲಿತರಾಗದೇ “ಹಾಗೋಸರಿ” ಎನ್ನುತ್ತಾ ಹೆಗಲ ಮೇಲೆ ಚೌಕವನ್ನು ಹಾಕಿಕೊಂಡು ಹೊರಟೇಬಿಟ್ಟರು. ಪುನಃ ಅವರನ್ನು ಅಲ್ಲಿಗೆ ಬರಮಾಡಿಕೊಳ್ಳಲು ದೇವಾಲಯದ ಅಧಿಕಾರಿಗಳು ಇಚ್ಚೆಪಟ್ಟಾಗ, ಒತ್ತಾಯದಿಂದ ಹಿಂದಿರುಗುವಂತೆ ಮಾಡಬೇಕಾಯಿತು. 

ಪಟ್ಟಾಭಿಷಿಕ್ತನಾಗಬೇಕಿದ್ದ ಶ್ರೀರಾಮನು ಕಾಡಿಗೆ ಹೊರಡಬೇಕೆಂದಾಗಲೂ ಅವನ ಮನಸ್ಸಿನಲ್ಲಿ ಕಿಂಚಿತ್ತಾದರೂ ವಿಕಾರವು ಏರ್ಪಡಲಿಲ್ಲವೆಂದು ವಾಲ್ಮೀಕಿಗಳು ಬಣ್ಣಿಸಿದ್ದಾರೆ. 
ಒಂದು ವಿಷಯದಲ್ಲಿ ತೊಡಗಿಕೊಂಡಾಗ ಆ ವಿಷಯವನ್ನು ಒಂದೇ ಮನಸ್ಸಿನಿಂದ ಭಾವಿಸಬೇಕು. ಆ ಕಾಲದಲ್ಲಿ ಉಳಿದೆಲ್ಲ ವಿಷಯಗಳ ಬಗ್ಗೆ ವೈರಾಗ್ಯವಿರಬೇಕು. ಆಗಷ್ಟೇ ನಮ್ಮ ಮನಸ್ಸು ಲಕ್ಷ್ಯವನ್ನು ಸಾಧಿಸಬಲ್ಲದು. ಅಂತೆಯೇ ಭಗವಂತನ ಧ್ಯಾನಕ್ಕೆ ಕುಳಿತಾಗ ಪ್ರಪಂಚದ ಉಳಿದೆಲ್ಲ ವಿಷಯಗಳನ್ನು ದೂರತಳ್ಳಿ ಕುಳಿತುಕೊಳ್ಳಬೇಕು. ಹೀಗೆ ಮಾಡಲು ಅಭ್ಯಾಸಬೇಕು. ನಾವು ವ್ಯವಹರಿಸುವ ಎಲ್ಲ ವಿಷಯಗಳಲ್ಲೂ ಅಂಟಿದ್ದರೆ ಧ್ಯಾನಕ್ಕೆ ಕುಳಿತಾಗಲೂ ಆ ವಿಷಯಗಳೇ ನಮ್ಮ ಮನಸ್ಸನ್ನು ಆವರಿಸುತ್ತವೆ. ಹೀಗಾದಾಗ ಧ್ಯಾನದಲ್ಲಿ ಏಕಾಗ್ರತೆ ಹೇಗೆ ಸಾಧ್ಯ?

ಮುಂದೆ ಒಳ್ಳೆಯ ಕೆಲಸ ಸಿಗುವುದೆಂಬ ಗುರಿಯನ್ನಿಟ್ಟುಕೊಂಡು, ಒಬ್ಬ ಜಾಣ ವಿದ್ಯಾರ್ಥಿಯು ತನಗೆ ಆಕರ್ಷಣೆಯಿರುವ ಎಲ್ಲ ವಿಷಯಗಳಲ್ಲಿ ವೈರಾಗ್ಯವನ್ನು ಹೊಂದಿ, ವ್ಯಾಸಂಗವನ್ನು ಮಾಡಲು ತೊಡಗುತ್ತಾನೆ. ಹಾಗೆಯೇ, ಭಗವದ್ದರ್ಶನವು ಅತ್ಯಂತ ಸುಖವನ್ನು ಕೊಡುತ್ತದೆ ಎಂಬ ನಂಬಿಕೆಯು ಸಾಧನಾ ಕಾಲದಲ್ಲಿದ್ದರೆ ಉಳಿದ ವಿಷಯಗಳಲ್ಲಿ ವೈರಾಗ್ಯವುಂಟಾಗುತ್ತದೆ. ಆದರೆ ಪ್ರಕೃತಿ ಸಹಜವಾದ ಕಾಮನೆಗಳನ್ನು ಮೆಟ್ಟಿ, ಸಾಮಾನ್ಯವಾಗಿ ಯಾರೂ ಸಾಧನೆಮಾಡಲಾರರು. ಆದ್ದರಿಂದ ಇಹದ ಸುಖವನ್ನು ಯಾವರೀತಿಯಲ್ಲಿ ಅನುಭವಿಸಬೇಕೆಂಬುದನ್ನು ಅರಿಯಬೇಕು. ಇಂದ್ರಿಯ ಸುಖಗಳು ಬೇಡವೆನ್ನುವ ಬುದ್ಧಿಯೂ ಕೂಡದು. ಇಂದ್ರಿಯದಾಸ್ಯವೂ ಸಲ್ಲದು. 

ಶ್ರೀರಂಗಮಹಾಗುರುಗಳು ತಮ್ಮ ಪಾಠ ಪ್ರವಚನಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಇಂದ್ರಿಯ ಸುಖಾನುಭವದ ಬಗ್ಗೆ ತಿಳಿಸಿರುವುದನ್ನು ಸಂಗ್ರಹವಾಗಿ ಹೀಗೆ ಹೇಳಬಹುದು.
-ವಿಷಯ ಸುಖಗಳನ್ನು ಅನುಭವಿಸದಿದ್ದರೆ ಭಗವದಪಚಾರ. ಏಕೆಂದರೆ ಈ ಶರೀರವು ನಮಗೆ ಭಗವಂತಕೊಟ್ಟ ಆಸ್ತಿ. ಅವನ ಇಷ್ಟದಂತೆ ಈ ಆಸ್ತಿಯನ್ನು ಬಳಸಬೇಕು.
-ಇಂದ್ರಿಯ ಸುಖಾನುಭವ ಆತ್ಮ ಯೋಗಕ್ಕೆ ಅವಿರೋಧವಾಗಿರಬೇಕು.
-ಇಂದ್ರಿಯ ಸುಖಾನುಭವವೇ ಅಂತಿಮ ಗುರಿಯಲ್ಲ; ಇಂದ್ರಿಯಗಳ ಸುಖವು ಇಂದ್ರಿಯಾಧೀಶನಾದ ಭಗವಂತನ ಪ್ರೀತಿಯಲ್ಲಿ ನಿಲ್ಲಬೇಕು.

ಹೀಗೆ ಸರಿಯಾದ ರೀತಿಯಲ್ಲಿ ಇಂದ್ರಿಯ ಸುಖಾನುಭವವನ್ನು ಪಡೆದು, ಜೊತೆ ಜೊತೆಗೆ ಮನಸ್ಸನ್ನು ಪಳಗಿಸಿದರಷ್ಟೆ ನಿಜವಾದ ವೈರಾಗ್ಯ ಸಿದ್ಧಿಸೀತು. ನೀರಿಗಿಳಿದ ಹೊರತು ಈಜು ಬರುವುದಿಲ್ಲ. ಆದರೆ ಈಜು ಬಂದ ಹೊರತು ನೀರಿಗಿಳಿಯುವುದಿಲ್ಲ ಎನ್ನಲಾಗುವುದಿಲ್ಲವಷ್ಟೆ. ನೀರೊಳಗೆ ಬಿದ್ದೆದ್ದು ಈಜು ಕಲಿಯುವಂತೆ, ಸಂಸಾರದಲ್ಲಿದ್ದೂ, ಏಳು ಬೀಳುಗಳಿಗಂಟದೇ ವೈರಾಗ್ಯವನ್ನು ಸಾಧಿಸಹೊರಟರೆ, ಭಗವತ್ಕೃಪೆಯಿಂದ ಎಂದಾದರೊಮ್ಮೆ ಅದು ಫಲಿಸೀತು. ಕೈಗೆ ಎಣ್ಣೆಹಚ್ಚಿಕೊಂಡು ಹಲಸಿನಹಣ್ಣನ್ನು ಕುಯ್ಯುವವನ ಕೈ ಅಂಟಾಗದಂತೆ, ಭಗವದ್ಭಕ್ತಿ  ಎಂಬ ಜಿಡ್ಡನ್ನು ನಮಗೆ ಅಂಟಿಸಿಕೊಂಡು ದೈನಂದಿನ ವ್ಯವಹಾರವನ್ನು ಮಾಡಬೇಕು. ಅದೇ ನಿಜವಾದ ವೈರಾಗ್ಯ. 

ಸಾಮಾನ್ಯವಾಗಿ, ಬಹುಜನರ ಅಭಿಪ್ರಾಯದಂತೆ,  ವೈರಾಗ್ಯವೆಂದರೆ ಎಲ್ಲ ವಿಷಯಗಳಲ್ಲಿಯೂ ನೀರಸತೆ. ಆದರೆ ನಿಜವಾದ ವೈರಾಗ್ಯವಂತನಿಗೆ ಎಲ್ಲೆಲ್ಲೂ ರಸಾನುಭವವೇ!

ಸೂಚನೆ:  19/12/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.