Sunday, December 29, 2019

ಭಗವಂತನು ನಮಗೇಕೆ ಕಾಣಿಸುವುದಿಲ್ಲ? (Bhagavanthanu namageke kanisuvudilla?)

ಲೇಖಕರು:   ಶ್ರೀನಿವಾಸ ಅಯ್ಯಂಗಾರ್
B.Sc., B.L., G.D.C.S., F.C.S
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ - "ಎಲೈ ಅರ್ಜುನ ! ಎಲ್ಲಭೂತಗಳನ್ನು ಮಾಯೆಯಿಂದ ತಿರುಗಿಸುತ್ತಿರುವ ಈಶ್ವರನು ಸರ್ವಭೂತಗಳ ಹೃದಯದಲ್ಲಿಯೂ ಇರುವನು " ಎಂದು ಹೇಳುತ್ತಾನೆ. ಹಾಗಂದಮೇಲೆ -ನಮ್ಮೆಲ್ಲರ ಹೃದಯದಲ್ಲಿಯೂ ಭಗವಂತನು ಇದ್ದಾನೆ ಎಂದಾಯಿತು. ಹೃದಯವು ನಮ್ಮೆಲ್ಲರಲ್ಲಿಯೂ ಇದೆ. ಹೃದಯದಲ್ಲಿರುವ ಭಗವಂತನನ್ನು ಹೇಗೆನೋಡುವುದು? ಹೃದಯವು ದೇಹದ ಒಳಗಡೆ ಇದೆ. ಕಣ್ಣು  ಹೊರಗಿದೆ! ಹಾಗಾದರೆ ಹಾರ್ಟ್ ಆಪರೇಷನ್ ಮಾಡುವ ವೈದ್ಯರಿಗೂ ಕಾಣಿಸುವುದಿಲ್ಲವಲ್ಲ !!

ಅನುಭವಿಗಳು ವರ್ಣಿಸಿದಂತೆ, ನಮ್ಮ ಶರೀರವು ಒಂದು ರಥ. ಇದಕ್ಕೆ ನರ ರಥವೆಂದು ಹೆಸರು. ನರ ಎಂದರೆ ಜೀವ. ಈ ರಥದಲ್ಲಿ ನರರಿಗೆ ಅಯನನಾಗಿ, ಗುರಿಯಾಗಿ, ನೆಲೆಯಾಗಿರುವ ನಾರಾಯಣನೂ ಉಂಟು. ಹೃದಯ ಸ್ಥಾನವು ಜೀವ ದೇವರ ಸಂಧಿಸ್ಥಾನ. ಮಾನವನ ದೇಹದಲ್ಲಿ 'ಜೀವ-ದೇವರು ಇದ್ದಾರೆ' ಎಂದರೆ ಹೇಗೆಒಪ್ಪುವುದು? ನಮ್ಮೊಳಗೇ ಇರುವ ಪರಮಾತ್ಮನು ನಮಗೇಕೆ ಕಾಣುತ್ತಿಲ್ಲ ಎಂದರೆ - ನಾವು ಅತ್ತಕಡೆ ಲಕ್ಷ್ಯ ನೀಡುತ್ತಿಲ್ಲ. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಕೊಡುತ್ತಾರೆ. ಮನುಷ್ಯ ಅನ್ಯಕಾರ್ಯಮಗ್ನನಾಗಿದ್ದಾಗ ಲಕ್ಷ್ಯನೀಡದಿದ್ದರೆ ಮನುಷ್ಯ ಸಹಜವಾದಹಸಿವು -ನಿದ್ರೆಗಳೂ ಮರೆಯಾಗುವುದುಂಟು. ಮಾತಿನ ನಡುವೆಯೇ, ಕಾರ್ಯಾಂತರದಲ್ಲಿ ಮಗ್ನನಾಗಿದ್ದಾಗಲೇ ಮನುಷ್ಯನಿಗೆ ಹಸಿವು ಸೂಚನೆಯನ್ನು ಕೊಡುವುದುಂಟು. ಆದರೆ ಅದನ್ನು ಇತರ ವೇಗಗಳಿಗೆ ವಶನಾಗಿ ಗಮನಿಸುವುದಿಲ್ಲ. ಅಥವಾ ತಿಳಿದರೂ ನಿರ್ಲಕ್ಷಿಸುತ್ತಾನೆ. ಸೆಕೆಂಡ್ -ಷೋ ಸಿನಿಮಾಗೆ ಹೋದಾಗ ರಾತ್ರಿ-ನಿದ್ರೆ ಕಣ್ಣೆಳೆಯುತ್ತೆ. ಆದರೆ ಅವನು ಅದನ್ನು ಉಪೇಕ್ಷಿಸುತ್ತಾನೆ. ಹೀಗೆಯೇ ಅಭ್ಯಾಸ ಮಾಡಿಬಿಟ್ಟರೆ ಹಸಿವೇ ಮುಚ್ಚಿ ಹೋಗುತ್ತದೆ.
   
 ಹೀಗೆನಾವು ಇಂದ್ರಿಯಗಳು ಏನನ್ನು ಕೇಳುತ್ತದೆಯೋ ಅದನ್ನು ಕೊಟ್ಟುಬಿಡುತ್ತೇವೆ. ಅವುಗಳ ವೇಗದಲ್ಲಿ ಆತ್ಮನ ಹಸಿವನ್ನು ಮರೆಯುತ್ತಿದ್ದೇವೆ. ಆದುದರಿಂದ ಭಗವಂತನು ನಿಶ್ಚಿತವಾಗಿ ನಮ್ಮೊಳಗಿದ್ದರೂ ನಮಗೆ ಕಾಣಿಸುವುದಿಲ್ಲ. ಆದ್ದರಿಂದಲೇ ನಮ್ಮ ಮಹರ್ಷಿಗಳು ಭಗವಂತನಕಡೆಗೆ ನಮ್ಮ ಲಕ್ಷ್ಯವನ್ನು ತಿರುಗಿಸುವುದಕ್ಕಾಗಿ ಭಾರತ ಭೂಮಿಯಲ್ಲಿ ಗುಡಿ ಗೋಪುರಗಳನ್ನು ನಿರ್ಮಾಣ ಮಾಡಿದರು. ಪ್ರತಿಯೊಂದು ಮನೆಯಲ್ಲಿಯೂ ೧೬ ಸಂಸ್ಕಾರಗಳು ನೆಡೆಯಲು ಏರ್ಪಾಡು ಮಾಡಿದರು. ಜೀವಿಗಳ ಅನುಕೂಲ ಸಂಪಾದನೆಗಾಗಿ ಮತ್ತು ಪ್ರತಿಕೂಲ ನಿವಾರಣೆಗಾಗಿ ವಿಧಿ ನಿಷೇಧಗಳನ್ನು ತಂದರು.

 ಒಂದು ಮಗುವು ಹುಟ್ಟಿದೊಡೆನೆಯೇ ಊರ್ದ್ವ ತ್ರಿಕೋಣದಲ್ಲಿರುವ ದೀಪವನ್ನು ತೋರಿಸುತ್ತಿದ್ದರು. ಘಂಟಾನಾದವನ್ನು ಮಾಡುತ್ತಿದ್ದರು. ಹೀಗೆ ಜ್ಯೋತಿ-ನಾದಗಳತ್ತ ಲಕ್ಷ್ಯವು ಉಂಟಾಗುವಂತೆ ಮಾಡಿ ಜೀವನದ ಉದ್ದಕ್ಕೆ ಭಗವಂತನತ್ತ ಮನೋಧಾರೆಯು ಹರಿಯುವಂತೆ ಜೀವನವನ್ನು ಅಳವಡಿಸಿದ್ದರು. ಈಗ ಅವೆಲ್ಲಾ ಮರೆಯಾಗಿದೆ. ಭಗವಂತನೂ ಮರೆಯಾಗಿದ್ದಾನೆ.
ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ-“ಎಚ್ಚರ, ಕನಸು, ನಿದ್ರೆಗಳು, ಹೇಗೆ ಜೀವನಿಗೆ ಸಹಜಸಿದ್ಧವಾದ ಹಕ್ಕೋ ಹಾಗೆಯೇ ಸುಖವಾಗಿ ಭಗವಂತನ ಜೊತೆಯಲ್ಲಿರೋಣ ಎನ್ನುವುದೂ ಜೀವನದ ಹಕ್ಕು”.

ನಾವೆಲ್ಲರೂ  ಭಗವಂತನನ್ನು ಕಂಡು ಅನುಭವಿಸಿ ನಲಿಯುವಂತೆ ಆ ಸರ್ವೇಶ್ವರನು  ಅನುಗ್ರಹಿಸಲಿ.  

ಸೂಚನೆ:  29/12/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.