ಲೇಖಕರು: ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm. in)
ಭಾರತೀಯರ ನಿತ್ಯ,ನೈಮಿತ್ತಿಕ ಆಚರಣೆಗಳಲ್ಲಿ ಆಹಾರವನ್ನು ಸೇವಿಸದಿರುವ ವಿಧಿಗಳಿರುತ್ತವೆ. ಇದನ್ನು ಉಪವಾಸದ ನಿಯಮ ಎನ್ನುತ್ತಾರೆ. ಏಕಾದಶೀ, ಶಿವರಾತ್ರಿ ಮುಂತಾದ ಕೆಲವು ಹಬ್ಬಗಳನ್ನು ಉಪವಾಸದ ಹಬ್ಬವೆಂದೇ ಕರೆಯುತ್ತಾರೆ.
ಉಕ್ತಕ್ರಮದಲ್ಲಿ, ಉಕ್ತಕಾಲದಲ್ಲಿ ಉಪವಾಸವನ್ನು ಮಾಡುವುದರಿಂದ ಅನೇಕ ಜನ್ಮಗಳ ಪಾಪರಾಶಿಯೂ ನಾಶವಾಗುತ್ತದೆ. ಮಹಾಯಜ್ಞ, ತೀರ್ಥಕ್ಷೇತ್ರಗಳೂ ಇದಕ್ಕೆ ಸಮನಲ್ಲ. ಉಪವಾಸವು ಸ್ವರ್ಗ, ಮುಕ್ತಿ, ಸತ್ಸಂತಾನ ಮತ್ತು ದೇಹಾರೋಗ್ಯ ಇತ್ಯಾದಿ ಫಲಗಳನ್ನು ಕೊಡುತ್ತದೆ ಎಂದು ಭಾರತೀಯ ಶಾಸ್ತ್ರಗಳು ಘೋಷಿಸುತ್ತವೆ. ಆಚರಿಸಲೇಬೇಕೆಂಬ ವಿಧಿಯಿರುವಾಗ ಉಪವಾಸ ಮಾಡದಿದ್ದರೆ ಮಹಾದೋಷವೆಂದೂ ಎಚ್ಚರಿಸುತ್ತವೆ.
ಹಾಗಿದ್ದರೆ ಕೇವಲ ಆಹಾರವರ್ಜನೆಯಿಂದ ಇಷ್ಟು ದೊಡ್ಡ ಫಲವು ದೊರೆಯುವುದೇ? ಮುಕ್ತಿಯೂ ಲಭ್ಯವಾಗುವುದಾದರೆ ತಪಸ್ಸು, ಧ್ಯಾನ, ಇತ್ಯಾದಿಗಳ ಅಗತ್ಯವೇನು? ಊಟೋಪಚಾರಗಳಿಗೆ ಗತಿಯಿಲ್ಲದವರಿಗಂತೂ ಒಳ್ಳೆಯದೇ ಆಯಿತು. ಮೋಕ್ಷವೇ ದೊರಕಿಬಿಟ್ಟಿತಲ್ಲ? ಮುಂತಾದ ಪ್ರಶ್ನೆಗಳು ಸಹಜ. ಆದ್ದರಿಂದ ಉಪವಾಸವನ್ನು ಕುರಿತು ಇನ್ನೂ ಸ್ವಲ್ಪ ಆಳವಾದ ಚಿಂತನೆ ಬೇಕಾಗುತ್ತದೆ.
ಉಪವಾಸಕ್ಕೆ ರೂಢಿಯಲ್ಲಿ ಆಹಾರಪಾನೀಯಗಳನ್ನು ವರ್ಜಿಸುವುದು ಎಂಬರ್ಥವಿದೆಯಷ್ಟೆ. ಇದು ಉಪವಾಸದ ಹೊರಲಕ್ಷಣ ಮಾತ್ರ ಎಂದು ಜ್ಞಾನಿಗಳು ಹೇಳುತ್ತಾರೆ. ಉಪವಸ್ತಾ, ಉಪೋಶಿತಂ ಉಪವಸನ-ಇವೆಲ್ಲ ಉಪವಾಸ ಎಂಬ ಪದಕ್ಕೆ ಪರ್ಯಾಯಪದಗಳು. ಉಪವಾಸ, ಉಪವಸನ ಎಂದರೆ ಸಮೀಪದಲ್ಲಿ ವಾಸಮಾಡುವುದು ಎಂದರ್ಥ. ಉಪವಸ್ತಾ ಎನ್ನುವ ಪದಕ್ಕೆ ಸಮೀಪದಲ್ಲಿದ್ದು ಸ್ತಂಭನಮಾಡುವವನು ಎಂದೂ, ಉಪೋಶಿತಂ ಎಂದರೆ ಹತ್ತಿರದಲ್ಲಿದ್ದು ದಹಿಸುವ ಕರ್ಮ ಎಂದೂ ಅರ್ಥವಿದೆ. ಇವುಗಳಿಗೆ, ಪರಮಾತ್ಮನ ಸಮೀಪದಲ್ಲಿರಬೇಕು, ಆತ್ಮಗುಣಗಳಿಂದ ಕೂಡಿರಬೇಕು, ಇಂದ್ರಿಯಗಳನ್ನು ಸ್ತಂಭನಮಾಡಬೇಕು ಮತ್ತು ದುಷ್ಟಕಾರ್ಯ, ದುಷ್ಟಸಂಸ್ಕಾರಗಳನ್ನು ದಹನಮಾಡಬೇಕು ಎಂಬ ಅಭಿಪ್ರಾಯವನ್ನು ಹೊಂದಿವೆ. ಆತ್ಮಗುಣಸಂಪನ್ನನಾಗಿದ್ದು ಪಾಪಗಳಿಂದ ಬಿಡುಗಡೆ ಹೊಂದಲು ಉಪವಾಸವೇ ಹೊರತು ಕೇವಲ ಶರೀರ ಶೋಷಣೆಯಲ್ಲ, ಎಂದು ಸ್ಪಷ್ಟವಾಗಿ ಶಾಸ್ತ್ರಗಳು ಸಾರುತ್ತವೆ. ನಮ್ಮೆಲ್ಲ ವ್ರತಾಚರಣೆಗಳಲ್ಲೂ ಪುರುಷಾರ್ಥಪ್ರಾಪ್ತಿಯ ಸಂಕಲ್ಪವಿರುವುದರ ಹಿನ್ನೆಲೆಯಲ್ಲಿ ನೋಡಿದಾಗ ಇದು ಇನ್ನೂ ಖಚಿತವಾಗುತ್ತದೆ.
ಹಾಗಾದರೆ ಉಪವಾಸ ಎಂದರೆ ಆಹಾರವರ್ಜನೆ ಎಂಬ ಅಭಿಪ್ರಾಯ ಏಕೆ ಬಂದಿತು? ಉಪವಾಸಕ್ಕೆ ಸಹಾಯಮಾಡುವ ಕ್ರಿಯೆಯೂ ಉಪವಾಸವೇ. ಯೋಗಸಮಾಧಿಯಲ್ಲಿದ್ದಾಗ, ಎಲ್ಲ ಇಂದ್ರಿಯಗಳು ಸ್ತಬ್ಧವಾಗಿರುತ್ತವೆ. ಹೊರಗಿನ ಆಹಾರ ಬೇಕಾಗುವುದಿಲ್ಲ. ಆಸ್ವಾದಿಸುವ ಜಿಹ್ವೆಯಲ್ಲದೆ ಸಮಸ್ತ ಜ್ಞಾನೇಂದ್ರಿಯಗಳೂ ಸ್ತಬ್ಧವಾಗಿರುತ್ತವೆ. ಇದು ಪೂರ್ಣ ನಿರಾಹಾರದ ಸ್ಥಿತಿಯೇ ಆಗಿರುವುದು. ಒಳಗಿನ ಉಪವಾಸವು ಸಹಜವಾಗಿ ಏರ್ಪಟ್ಟಿರುತ್ತದೆ. ಅದರ ಒಂದು ಬಾಹ್ಯ ಗುರುತಾಗಿ ನಿರಾಹಾರವನ್ನೂ ಉಪವಾಸ ಎಂದೇ ಕರೆಯಲಾಯಿತು.
ಇಲ್ಲಿ ಬರುವ ಇನ್ನೊಂದು ಪ್ರಶ್ನೆಯೆಂದರೆ ಬಾಹ್ಯವಾದ ಉಪವಾಸವನ್ನು ಏಕೆ ಮಾಡಬೇಕು? ಲಂಘನಂ ಪರಮೌಷಧಂ ಎಂದು ಆಯುರ್ವೇದವು ಹೇಳುತ್ತದೆ. ಉಪವಾಸದಿಂದ ದೇಹವು ನೀರೋಗಿಯಾಗುತ್ತದೆ. ಆರೋಗ್ಯವೂ ಆತ್ಮಸಾಧನೆಗೆ ಆವಶ್ಯಕವೇ.
ಉದರದಲ್ಲಿ ಆಹಾರವಿರುವಾಗ ಇಂದ್ರಿಯ, ಮನಸ್ಸು ಹಾಗೂ ಅನ್ಯ ಅಂಗಾಂಗಗಳು ಆಹಾರವನ್ನು ಪಚನಮಾಡಿ ಸುಧೃಡಗೊಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ. ಆಗ ಅವುಗಳು ದಾಮೋದರನ ಸಮೀಪ ಸಾಗುವ(ಧ್ಯಾನೈಕಾಗ್ರತೆಯ) ನಮ್ಮ ಪ್ರಯತ್ನದಲ್ಲಿ ಯೋಗ್ಯವಾಗಿ ಸಹಕರಿಸವುದಿಲ್ಲ. ಬಲವಂತ ಮಾಡುವುದರಿಂದ ಪ್ರವೃತ್ತಿ-ನಿವೃತ್ತಿಗಳೆರಡಕ್ಕೂ ತೊಂದರೆಯಾಗುವುದು. ಆದ್ದರಿಂದ ಆಗ ಅವುಗಳಿಗೆ ವಿರಾಮವನ್ನು ಕೊಡಬೇಕಾಗುತ್ತದೆ ಮತ್ತು ಅದು ಸಾಧನೆಗೆ ಪೋಷಕವಾಗುವುದು.
ಒಂದೊಂದು ಇಂದ್ರಿಯಕ್ಕೂ ತನತನಗೆ ಬೇಕಾದ ವಿಷಯಗಳಿರುತ್ತವೆ. ಅವುಗಳಿಗೆ ಬೇಕಾದ ವಿಷಯಗಳನ್ನೂ ಕೊಟ್ಟು ಜೊತೆಯಲ್ಲಿ ಭಗವಂತನನ್ನೂ ಸೇರಿಸಿಕೊಡುವುದರಿಂದ ಭಗವಂತನ ಸಮೀಪದಲ್ಲಿಯೇ ವಾಸಮಾಡಿದಂತೆ ಆಗುತ್ತದೆ. ಉದಾಹರಣೆಗೆ ಕಿವಿಗೆ ಶಬ್ಧವು ವಿಷಯ(ಆಹಾರ). ಅದಕ್ಕೆ ಭಗವಂತನ ಕೀರ್ತನೆಯನ್ನು ಶ್ರವಣಮಾಡಿಸಬಹುದು.
ಆದರೆ ನಿರ್ಗತಿಕರು ಅನಿವಾರ್ಯವಾಗಿ ಮಾಡುವ ಉಪವಾಸವು ಪರಮಾತ್ಮನ ಸಮೀಪದಲ್ಲಿರುವ ಉದ್ದೇಶವಿಲ್ಲದಿರುವುದರಿಂದ ನಿಜವಾದ ಅರ್ಥದಲ್ಲಿ ಉಪವಾಸವಾಗುವುದಿಲ್ಲ.
ಯಾವುದೂ ಅತಿಯಾಗಬಾರದು. ಬಾಹ್ಯಉಪವಾಸವು ಒಂದು ಸಾಧನವೇ ಹೊರತು ಅದೇ ಗುರಿಯಲ್ಲ. ಯೋಗ್ಯ ಮಾರ್ಗದರ್ಶನದಲ್ಲಿ ಅದನ್ನು ನಾವು ಅಂತರಂಗದ ಉಪವಾಸಕ್ಕೆ ಏಣಿಯನ್ನಾಗಿ ಬಳಸಿಕೊಳ್ಳಬೇಕು. ಹಾಗೆ ಆಚರಿಸಿದಾಗ ಅದು ನಿಜಕ್ಕೂ ಮೋಕ್ಷವನ್ನು ದೊರಕಿಸಿಕೊಡುವುದರಲ್ಲಿ ಸಮರ್ಥವಾಗಿದೆ.