Tuesday, December 3, 2019

ಆಹಾರದಲ್ಲಿ ವಿಭಾಗಗಳು (Aharaadalli vibhagagalu)

ಲೇಖಕರು:  ತಾರೋಡಿ ಸುರೇಶ 


ಇಂದು ವಿಶ್ವಾದ್ಯಂತ ಹಲವು ರೀತಿಯ ಆಹಾರದ ವರ್ಗೀಕರಣವನ್ನು ಕಾಣುತ್ತೇವೆ. ಉದಾಹರಣೆಗೆ ಶಾಕಾಹಾರ ಮಾಂಸಾಹಾರ, ದ್ರವ ಮತ್ತು ಘನ, ಬೇಯಿಸಿದ್ದು ಮತ್ತು ಬೇಯಿಸದ ಹಣ್ಣುಹಂಪಲು ಇತ್ಯಾದಿ. ಆದರೆ ಜ್ಞಾನಿಗಳ  ಸಮಗ್ರ ಪರಿಚಯಕ್ಕನುಗುಣವಾಗಿ ಇನ್ನೂ ಕೆಲವು ವಿಶೇಷ ವಿಭಾಗಗಳನ್ನು ಗಮನಿಸಬಹುದು. ಹವ್ಯ-ಕವ್ಯ: ಬೀಜರೂಪನಾದ ಪರಮಾತ್ಮನು ತಾನು ತನ್ನನ್ನು ವಿಸ್ತರಿಸಿಕೊಳ್ಳುವಾಗ ತನ್ನ ಆಶಯವನ್ನು ಮುಂದುವರೆಸಬಲ್ಲ ದೇವತಾಶಕ್ತಿಗಳನ್ನು ಸೃಷ್ಟಿಮಾಡಿಕೊಂಡ. ಆ ದೇವತೆಗಳಲ್ಲಿ ಪ್ರಧಾನವಾಗಿ ದೇವತೆಗಳು ಮತ್ತು ಪಿತೃದೇವತೆಗಳು ಎಂಬ ಎರಡು ಬಗೆಯ ಶಕ್ತಿಗಳುಂಟು. ಜೀವಿಯು ಸಂಸಾರದ ಬಂಧನಕ್ಕೆ ಸಿಗಬಾರದು ಎಂದರೆ ನಿರ್ದಿಷ್ಟಕ್ರಮದಲ್ಲಿ ದೇವತೆಗಳಿಗೆ ಸಮರ್ಪಿಸಲ್ಪಟ್ಟ, ಯಜ್ಞಶೇಷವಾಗಿ ಉಳಿಯುವ ಆಹಾರವು ಮಾತ್ರ ಭೋಜ್ಯವೆಂಬುದು ಜ್ಞಾನಿಗಳ ಸ್ಪಷ್ಟ ನಿರ್ಣಯ. ತಮಗೆ ಲಭ್ಯವಾದ ಆಹಾರವು ತಮ್ಮವರೆಗೂ ಬರಲು ನಿಸರ್ಗದಲ್ಲಿ ಸಹಕರಿಸುವ ಎಲ್ಲ ಶಕ್ತಿಗಳಿಗೂ ಸಮರ್ಪಿಸಿದ ನಂತರವೇ ತಾವು ಸೇವಿಸುವ ಆಹಾರವು ಶುದ್ಧವಾಗಿ, ಆನೃಣವಾಗುವುದೆಂಬುದೂ ಮಹರ್ಷಿಗಳ ಅನುಭವಾತ್ಮಕವಾದ ಸತ್ಯ. ಇಲ್ಲಿ ದೇವತೆಗಳಿಗೆ ಸಲ್ಲಿಸುವ ಹವಿಸ್ಸನ್ನು ಹವ್ಯವೆಂದೂ ಮತ್ತು ಪಿತೃದೇವತೆಗಳಿಗೆ ಅರ್ಪಿಸುವ ಅನ್ನವು ಕವ್ಯವೆಂದೂ ಕರೆಯಲ್ಪಟ್ಟಿದೆ.

ಆಧುನಿಕರು ಆಹಾರಕ್ಕೂ ಮನಸ್ಸಿಗೂ ಸಂಬಂಧವಿರುವುದನ್ನು ಈ ಮೊದಲು ಒಪ್ಪುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅವರೂ ಔಷಧದ ಜೊತೆಯಲ್ಲಿ ಆಹಾರದ ಬಗ್ಗೆಯೂ ಸಲಹೆ ನೀಡುತ್ತಿದ್ದಾರೆ. ಮನಸ್ಸಿನ ಸ್ವಭಾವದಲ್ಲಿ ಆಹಾರದ ಪಾತ್ರವನ್ನು ಉಪೇಕ್ಷಿಸುವಂತಿಲ್ಲ ಎಂಬ ಚಿಂತನೆ ಬೆಳೆಯುತ್ತಿದೆ.

ಜ್ಞಾನಿಗಳು ಮನಸ್ಸನ್ನು ಪ್ರಧಾನವಾಗಿ ಸಾತ್ವಿಕ.ರಾಜಸಿಕ ಮತ್ತು ತಾಮಸಿಕ ಎಂಬು ಮೂರು ಗುಣವಿಶೇಷಗಳು ಪ್ರಭಾವಗೊಳಿಸುತ್ತವೆ ಎಂದು ತಿಳಿಸುತ್ತಾರೆ. ಆಯುಸ್ಸು, ಸತ್ವ, ಬಲ, ಆರೋಗ್ಯಸುಖ ಪ್ರೀತಿಗಳನ್ನು ವೃದ್ಧಿಗೊಳಿಸುವ, ರಸಭರಿತವಾದ, ಸ್ನಿಗ್ಧವಾದ, ಸ್ಥಿರತೆಯನ್ನು ಕೊಡುವ ಹೃದಯಪ್ರಿಯವಾದ ಆಹಾರಗಳು ಸತ್ವಗುಣಕ್ಕೆ ಪುಷ್ಟಿಕಾರಿ. ಆದ್ದರಿಂದ ಸಹಜವಾಗಿಯೇ ಇಂತಹ ಆಹಾರ ಸಾತ್ವಿಕನಿಗೆ ಇಷ್ಟವಾಗುತ್ತವೆ. ಕಾರ, ಹುಳಿ, ಉಪ್ಪು, ಅತಿಬಿಸಿ, ತೀಕ್ಷ್ಣವಾದ ಆಹಾರವು ದುಃಖ, ಶೋಕ ಮತ್ತು ರೋಗಗಳನ್ನುಂಟುಮಾಡುತ್ತವೆ. ಇವು ರಜೋಗುಣವನ್ನು ಬೆಳೆಸುತ್ತವೆ. ರಾಜಸಸ್ವಭಾವದ ವ್ಯಕ್ತಿಗೆ ಇವು ಸಹಜವಾಗಿಯೇ ಪ್ರಿಯವೆನಿಸುತ್ತವೆ. ತಂಗಳಾಗಿರುವ, ರುಚಿರಹಿತ, ದುರ್ಗಂಧಭರಿತ, ಎಂಜಲು, ಶುಚಿರಹಿತ, ಯಜ್ಞಕ್ಕೆ ಅನರ್ಹವಾದ-ಆಹಾರವು ತಮೋಗುಣಕ್ಕೆ ಪೋಷಕವಾದದ್ದು. ತಾಮಸರಿಗೆ ಇಷ್ಟವಾಗುವಂತಹದ್ದು.

ಪಂಚಭಕ್ಷ್ಯಗಳೆಂಬ ವಿಭಾಗವೂ ಇದೆ. ಭಕ್ಷ್ಯ-ಭೋಜ್ಯ-ಚೋಷ್ಯ-ಲೇಹ್ಯ-ಪಾನೀಯವೆಂಬುದಾಗಿ. ಅಗಿದು ತಿನ್ನಬೇಕಾದ ಚಕ್ಕುಲಿ, ಮೃದುವಾದ ಅನ್ನ ಮುಂತಾದವುಗಳು, ಕಬ್ಬಿನ ರಸದಂತಹವು, ನೆಕ್ಕಿ ಸೇವಿಸುವ ಗೊಜ್ಜಿನಂತಹವು , ಕುಡಿಯುವ ನೀರು, ಪಾನಕ ಇತ್ಯಾದಿಗಳು ಕ್ರಮವಾಗಿ ಪಂಚಭಕ್ಷ್ಯಗಳು.
ತಪೋಮಗ್ನವಾದ ಸ್ಥಿತಿಗಳಲ್ಲಿ, ಜೀರ್ಣಾಂಗಗಳ ವ್ಯಾಪಾರವು ಸ್ತಬ್ಧವಾಗುವುದರಿಂದ ಕೇವಲ ಗಾಳಿ(ವಾತಾಹಾರ) ಮತ್ತು ಪರ್ಣಾಹಾರಗಳನ್ನು ಋಷಿಗಳು ಸೇವಿಸುತ್ತಿದ್ದರು. ಹಾಗೆಯೇ ಆಯುರ್ವೇದದಲ್ಲಿ ಪಥ್ಯ ಮತ್ತು ಅಪಥ್ಯವೆಂಬ ವಿಭಾಗವೂ ಉಂಟು

ಇಡೀ ಜೀವನವು ಪುರುಷಾರ್ಥಮಯವಾಗಿದೆ.ಅದಕ್ಕನುಗುಣವಾಗಿ ಆಹಾರ, ಆಚಾರ, ವಿಚಾರ ವಿಹಾರಗಳೆಲ್ಲವೂ ಇರಲಿ ಎಂದು ಶ್ರೀರಂಗಮಹಾಗುರುಗಳು ಆಶಂಸಿಸುತ್ತಿದ್ದರು.    

ಸೂಚನೆ: 31/11/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.