Sunday, December 22, 2019

ಪುಣ್ಯ - ಪಾಪ (Punya-paapa)

ಲೇಖಕರು:  ಶ್ರೀಮತಿ ಮೈಥಿಲೀ ರಾಘವನ್ 
   ಪ್ರತಿಕ್ರಿಯಿಸಿರಿ lekhana@ayvm.in


ಪುಣ್ಯ-ಪಾಪಗಳು virtue and Sin ಎಂಬುದರ ಪರ್ಯಾಯವಾಗಿ ಪರಿಗಣಿಸಲ್ಪಡುತ್ತಿದೆ. ಈ ಪದಗಳು ನೈತಿಕವಾದ ಹಾಗೂ ಅನೈತಿಕವಾದ ವರ್ತನೆಯನ್ನು ಸೂಚಿಸುತ್ತವೆ. ವಾಸ್ತವಿಕವಾಗಿ ಪುಣ್ಯ ಎಂಬುದಕ್ಕೆ ಪರ್ಯಾಯವಾದ ಪದವೇ ಆಂಗ್ಲ ಭಾಷೆಯಲ್ಲಿಲ್ಲ!

ಭಾರತದೇಶದಲ್ಲಿ ಈ ಪದಗಳನ್ನು ಬಾಲ್ಯದಿಂದಲೇ ಪರಿಚಯಮಾಡಿಸುವ ರೂಡಿ ಬೆಳೆದುಬಂದಿದೆ. “ತಪ್ಪು ಮಾಡಬೇಡ, ಪಾಪ ಬರುತ್ತೆ”, “ಒಳ್ಳೆಯ ಕಾರ್ಯಮಾಡು ಪುಣ್ಯ ಬರುತ್ತೆ” ಎಂದು ಸಣ್ಣಮಕ್ಕಳನ್ನು ಎಚ್ಚರಿಸುವುದುಂಟು. ಹಿಂದಿನ ಪೀಳಿಗೆಯವರು ಈ ಮಾತುಗಳನ್ನು ಗೌರವಿಸುತ್ತಿದ್ದಂತೆ ಇಂದಿನವರು ಒಪ್ಪುವರೆಂಬ ನಿಶ್ಚಯವಿಲ್ಲ. ಪಾಪ-ಪುಣ್ಯ ಎಂದರೆ ಏನು ಎಂಬ ಪ್ರಶ್ನೆಯೇ ಮೊದಲು ಎದ್ದು ನಿಲ್ಲುತ್ತದೆ. ಸರಿಯಾದ ಉತ್ತರವು ಸಿಗದಿದ್ದಾಗ ಇವೆಲ್ಲವೂ ಮೂಢನಂಬಿಕೆಯ ಕಂತೆಗಳಾಗಿ ಉಳಿಯುತ್ತವೆ. ಆದ್ದರಿಂದ ಈ ಪದಗಳು ಏನನ್ನು ಸೂಚಿಸುತ್ತಿವೆ ಎಂಬುದರ ನಿರ್ದಿಷ್ಟವಾದ ಅರಿವು ಅಗತ್ಯ. ಇದು ವಿಸ್ತಾರವಾದ ವಿಶ್ಲೇಷಣೆಗೆ ವಿಷಯವಾಗಿದ್ದರೂ ಇಲ್ಲಿ ಕೆಲವು ಅಂಶಗಳನ್ನು ಮಾತ್ರವೇ ಬರೆಯಲಾಗಿದೆ.

ಪುಣ್ಯ ಎಂಬ ಪದವು ಏರುವಿಕೆಯನ್ನು ಸೂಚಿಸುವುದೆನ್ನಬಹುದು. ಪುಣ್ಯಕ್ಕೆ ವಿರುದ್ಧವಾದ ಪಾಪ ಎಂಬ ಪದವು ’ಪತನ’ವೆಂಬುದರ ಪರ್ಯಾಯವಾಗಿದೆ. ಪತನ- ಬೀಳುವುದು, ಎಂದಾಗ ಬೀಳುವುದು ಯಾವುದು? ಎಲ್ಲಿಂದ ಎಲ್ಲಿಗೆ ಬೀಳುತ್ತದೆ? ಪಾಪ ಬರುವುದೆಂದರೆ ಏನರ್ಥ? ಇತ್ಯಾದಿ ಪ್ರಶ್ನೆಗಳು ಏಳುತ್ತವೆ. ಆಹಾರ-ವಿಹಾರಗಳಲ್ಲಿ ಎಚ್ಚರಿಕೆ ತಪ್ಪಿ ವರ್ತಿಸಿದರೆ, ಮಿತಿಮೀರಿದ ಆಹಾರಸೇವನೆಯಾದರೆ, ಛಳಿಗಾಳಿ ಅಥವಾ ತೀವ್ರ ಬಿಸಿಲಿಗೆ ಮೈಯೊಡ್ಡಿದರೆ ಅದು ಆರೋಗ್ಯಕ್ಕೆ ಹಾನಿಕರ. ಇದನ್ನೇ ಆದರ್ಶವಾದ ಆರೋಗ್ಯಸ್ಥಿತಿಯಿಂದ ’ಜಾರುತ್ತೇವೆ,
ಬೀಳುತ್ತೇವೆ’ ಎಂದೂ ಹೇಳಬಹುದು. ಶರೀರದಂತೆಯೇ ಮನಸ್ಸು ತನ್ನ ಸುಸ್ಥಿತಿಯಿಂದ ಜಾರಿದಾಗ ಅದನ್ನೂ ಪತನ ಎಂದು ಕರೆಯಬಹುದು. ಮನುಷ್ಯನ ಜೀವನದಲ್ಲಿ ಮನಸ್ಸೆಂಬುದು ಅತಿಮುಖ್ಯಪಾತ್ರವನ್ನು ವಹಿಸುತ್ತದೆ. ಮನಸ್ಸು ಸದ್ಗುಣಗಳಿಂದ ಕೂಡಿದ್ದರೆ ನೈತಿಕವಾದ ಜೀವನವನ್ನು ನಡೆಸಿ ಎಲ್ಲರ ಪ್ರೀತಿ-ಆದರ-ಗೌರವಗಳನ್ನು ಗಳಿಸಿ ಲೋಕದಲ್ಲಿ ಪ್ರಶಂಸನೀಯನಾಗಿ ಬೆಳಗುತ್ತಾನೆ. ಮನಸ್ಸು ಕೆಟ್ಟಾಗ ಏರ್ಪಡುವ ಅನೈತಿಕವಾದ ನಡೆ ಸಮಾಜದ ಶಿಸ್ತನ್ನು ಕೆಡಿಸಿ ಸಮಾಜವನ್ನೇ ಹಾಳುಮಾಡುವುದರಿಂದ ಅದು ಖಂಡನೀಯವೆಂಬುದನ್ನು ಎಲ್ಲ ದೇಶದವರೂ ಒಪ್ಪುತ್ತಾರೆ. ಮನಸ್ಸನ್ನು ಶುದ್ಧವಾದ ಸ್ಥಿತಿಯಿಂದ ಪತನಗೊಳಿಸುವ ದುಷ್ಕೃತ್ಯಗಳನ್ನೇ ಪಾಪವೆಂದು ಹೆಸರಿಸಿದ್ದಾರೆ. ’ಪಾಪ ಬರುತ್ತೆ’ ಎನ್ನುವ ಮಾತು ಅದರ ಫಲವಾಗಿ ಒದಗಿಬರುವ ಕಷ್ಟಗಳನ್ನೇ ಸೂಚಿಸುತ್ತದೆ. ತದ್ವಿರುದ್ಧವಾಗಿ, ಮನಸ್ಸಿನ ಶುದ್ಧಸ್ಥಿತಿಗೆ ಪೋಷಕವಾದ ಕಾರ್ಯಗಳು ಪುಣ್ಯಕಾರ್ಯಗಳಾಗುತ್ತವೆ ಮತ್ತು ಅವುಗಳ ಫಲವಾದ ಸುಖ- ಸಂತೋಷಗಳೇ ಪುಣ್ಯವೆಂದೂ ವ್ಯವಹರಿಸಲ್ಪಡುತ್ತವೆ.

ಲೌಕಿಕಜೀವನ ಮಾತ್ರವಲ್ಲದೆ ಪಾರಮಾರ್ಥಿಕವನ್ನೂ ಅರಿತಿದ್ದ ಭಾರತೀಯ ಮಹರ್ಷಿಗಳು ಈ ವಿಚಾರದಲ್ಲಿ ಕಂಡ ವಿಶೇಷಾಂಶವನ್ನು ಶ್ರೀರಂಗಮಹಾಗುರುಗಳು ಎತ್ತಿತೋರಿಸಿದ್ದಾರೆ. ಶುದ್ಧವಾದ ಮನಸ್ಸಿನಲ್ಲಿ ಅರಳುವ ಸದ್ಗುಣಗಳು ಆತ್ಮಗುಣಗಳಾಗಿ ಪರಿಣಮಿಸಿದಾಗ ಮನಸ್ಸು ತನ್ನೊಳಗೆ ಬೆಳಗುವ ಪರಮಾತ್ಮನನ್ನೇ ತೋರಿಸಲು ಸಮರ್ಥವಾಗುವುದು. ಆ ರೀತಿಯಲ್ಲಿ ಮನಸ್ಸಿನ ಸುಸ್ಥಿತಿಯನ್ನು ಕಾಪಿಡಲು ತಂದ ವಿಧಿ-ನಿಷೇಧಗಳನ್ನು ಅವರು ಪುಣ್ಯ-ಪಾಪಗಳ ಹೆಸರಿನಲ್ಲಿಯೂ ಇಟ್ಟಿರುವುದುಂಟು. ಆದ್ದರಿಂದ ಲೌಕಿಕವಾದ ಏಳಿಗೆಗೆ ಮಾತ್ರವಲ್ಲದೆ, ಪಾರಮಾರ್ಥಿಕವಾದ ಶ್ರೇಯಸ್ಸಿಗಾಗಿಯೂ ಸಹ ಪಾಪಗಳಿಂದ ನಮ್ಮನ್ನು ದೂರಮಾಡಿ ಪುಣ್ಯಕೃತ್ಯಗಳನ್ನು ಕೈಗೊಳ್ಳಬೇಕೆನ್ನುವುದು ಸಿದ್ಧವಾಗುತ್ತದೆ. ಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂದೆ ಸಾಗಿ ಪಾಪಗಳನ್ನು ವರ್ಜಿಸುವುದು ಮಾತ್ರವಲ್ಲದೆ ಪುಣ್ಯಗಳನ್ನೂ ತ್ಯಜಿಸ ಬೇಕೆನ್ನುತ್ತಾರೆ!
ಶಂಕರಭಗವತ್ಪಾದರು ರಥ್ಯಾಕರ್ಪಟ ವಿರಚಿತ ಕಂತಃ ಪುಣ್ಯಾಪುಣ್ಯ ವಿವರ್ಜಿತ ಪಂಥಃ.. ಯೋಗಿಯಾದವನು ಪುಣ್ಯ-ಪಾಪಗಳೆರಡರಿಂದಲೂ ದೂರನಾಗಿ ಯೋಗಮಾರ್ಗದಲ್ಲಿ ಸಾಗಿ ತನ್ನೊಳಗೆ ಬೆಳಗುವ ಜ್ಯೋತಿಯಲ್ಲಿ ರಮಿಸಿ ಆನಂದಿಸುತ್ತಾನೆ ಎಂದು ಹಾಡಿದ್ದಾರೆ. ಪಾಪಗಳನ್ನು ಬಿಟ್ಟು ಪುಣ್ಯಕರ್ಮಗಳನ್ನು ಮಾತ್ರವೇ ಆಚರಿಸಬೇಕು. ಕ್ರಮೇಣ ಪುಣ್ಯಕರ್ಮಗಳನ್ನೂ ಭಗವತ್ಪ್ರೀತ್ಯರ್ಥವಾಗಿ ಮಾತ್ರವೇ ಆಚರಿಸಿ ತನ್ಮೂಲಕ ಪುಣ್ಯಫಲದ ಅಂಟಿನಿಂದಲೂ ವಿಮುಕ್ತರಾಗಬೇಕು. ಆಗ ಯೋಗಮಾರ್ಗದ ಹಾದಿ ಸುಗಮ, ತದನಂತರ ಆನಂದದಿಂದ ನಲಿಯುವುದೂ ಸುನಿಶ್ಚಿತ. ಇದನ್ನೇ ’ಮುರಾರಿ ನಿನ್ನದೇ ಮೂರನೆ ದಾರಿ’ ಎಂಬುದಾಗಿ ಕೊಂಡಾಡಿದ್ದಾರೆ. ಅಂತಹ ಮೂರನೇ ದಾರಿಯನ್ನು ಹಿಡಿಯಲು ಪ್ರಯತ್ನಿಸುವುದು ಜಾಣತನವಲ್ಲವೇ.

ಸೂಚನೆ:  19/12/2019 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.