Monday, December 16, 2019

ಜಯ-ಪುಣ್ಯಗಳನ್ನು ಅನುಗ್ರಹಿಸುವ ಜಯನ್ತೀ (Jaya punyagalannu anugrahisuva jayanthi)

ಲೇಖಕರು: ವಿದ್ವಾನ್ ಎನ್.ಎನ್.ಚಂದ್ರಶೇಖರ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರತಿಯೊಬ್ಬರೂ ತಮ್ಮ ತಮ್ಮ ಹುಟ್ಟು ಹಬ್ಬವನ್ನು ಪ್ರತಿವರ್ಷವೂ ತಪ್ಪದೇ ಆಚರಿಸುವ ರೂಢಿ ಇದೆ. ಹುಟ್ಟು ಹಬ್ಬವನ್ನು “ವರ್ಧನ್ತೀ” ಎಂದು ಕರೆದರೆ ರಾಮಕೃಷ್ಣಾದಿಗಳ ಜನ್ಮ ದಿನಾಚರಣೆಯನ್ನು “ಜಯನ್ತೀ” ಎಂದು ಕರೆದಿದ್ದಾರೆ. ಶ್ರೀರಾಮನವಮಿ, ಶ್ರೀ ಕೃಷ್ಣಾಷ್ಟಮಿ ಆಚರಣೆಯನ್ನು ಭಾರತೀಯರು ಆಸೇತುಶೀತಾಚಲ ತಪ್ಪದೇ ಶ್ರದ್ಧೆಯಿಂದ ನಡೆಸುತ್ತಾರೆ. ದಿನ ಪೂರ್ತಿ ಉಪವಾಸ (ಭಗವಂತನ ಸನ್ನಿಧಿಯಲ್ಲಿ ವಾಸ) ವಿದ್ದು ಶ್ರೀ ರಾಮಭಜನೆ, ಶ್ರೀ ಕೃಷ್ಣನಿಗೆ ಚಂದ್ರೊದಯ ಕಾಲದಲ್ಲಿ ಅರ್ಘ್ಯಪ್ರದನಾದಿಗಳನ್ನು ಮಾಡುತ್ತಾರೆ. ದಿನವೆಲ್ಲಾ ತಮ್ಮ ಮನೋಬುದ್ಧೀನ್ದ್ರಿಯಗಳನ್ನು ಶ್ರೀ ರಾಮಮಯವಾಗಿ, ಶ್ರೀ ಕೃಷ್ಣಮಯವಾಗಿ ಮಾಡಿಕೊಂಡು ರಾತ್ರಿ ಸತ್ಕಥಾಶ್ರವಣದೊಂದಿಗೆ ಜಾಗರಣೆಯನ್ನು ಮಾಡಿ ಮಾರನೆಬೆಳಗ್ಗೆ ಪಾರಣೆ ಮಾಡುತ್ತಾರೆ. ಜೀವನದ ಪರಮಗುರಿಯನ್ನು ಅರಿತ ಭಾರತೀಯ ಋಷಿಮುನಿಗಳು ಸಕಲಭಾರತೀಯರ ಯೋಗಕ್ಷೇಮಕ್ಕಾಗಿ ಇಂತಹ ಮೇಲ್ಪಂಕ್ತಿಗಳನ್ನು ಹಾಕಿಕೊಟ್ಟು ಸಕಲರ ಉದ್ಧಾರದ ಕನಸನ್ನು ಕಂಡಿದ್ದಾರೆ. ಈ ಕುರಿತು ಶ್ರೀರಂಗಮಹಾಗುರುಗಳ ಅಮೃತವಾಣಿಯನ್ನು ಸ್ಮರಿಸಬೇಕು - “ಆತ್ಮಾರಾಮರ ಹೃದಯದಲ್ಲಿ ಪ್ರಭುವಾಗಿ, ಪ್ರಕೃತಿಯಲ್ಲಿ ಇಳಿದುಬಂದು, ತನ್ನ ಅಪ್ರಾಕೃತಭಾವಕ್ಕೆ ಕೊಂಡೊಯ್ಯುವ ನವರಸ ನಾಯಕನಾದ ಶ್ರೀರಾಮನ ಸ್ತುತಿಯನ್ನು ಆತನ ಜನ್ಮದಿನದಲ್ಲಿ ಮಾಡೋಣ. ಹೃದಯದ ಅಷ್ಟದಳಪದ್ಮದಲ್ಲಿ ಜ್ಞಾನಮುದ್ರೆಯಿಂದ ಕುಳಿತು ಭೋಗ ಮೋಕ್ಷಗಳನ್ನು ದಯಪಾಲಿಸುವ ಪ್ರಭುವನ್ನು ಸ್ತುತಿಸೋಣ.”

“ಶ್ರೀಕೃಷ್ಣನು ಮಕ್ಕಳೊಡನೆ ಮಗುವಾಗಿ, ಜ್ಞಾನಿಗಳೊಡನೆ ಜ್ಞಾನಿಯಾಗಿ, ಗೋವಳರೊಡನೆ ಗೋಪಾಲನಾಗಿ, ಯುದ್ಧರಂಗದಲ್ಲಿ ರಾಜನೀತಿಜ್ಞನಾಗಿ, ಸ್ತ್ರೀಯರೊಡನೆ ಜೀವೋದ್ಧಾರಕನಾಗಿ ಸರ್ವವಿಧದಿಂದಲೂ ಸುಂದರ ಜೀವನವನ್ನು ನಡೆಸಿದ. ಎಂತಹ ಅವತಾರ!! ಅವನ ಅವತಾರದ ದಿನ ಸಂಪೂರ್ಣ ಕಲೆಗಳು ತುಂಬಿ ತುಳುಕಾಡುತ್ತವೆ.”

ಜಯನ್ತೀ ಶಬ್ದದ ನಿರ್ವಚನೆ ಏನು?


“ಜಯಂ ಪುಣ್ಯಂ ಚ ತನುತೇ ಜಯನ್ತೀಂ ತೇನ ತಾಂ ವಿದುಃ”|

ಜಯವನ್ನೂ, ಪುಣ್ಯವನ್ನೂ ಯಾವುದು ವಿಸ್ತರಿಸುವುದೋ ಅದು ‘ಜಯನ್ತೀ’. ಜಯ=ಆತ್ಮಜಯ, ಇಂದ್ರಿಯಮನೋಜಯ. ಇಂದ್ರಿಯ- ಮನಸ್ಸುಗಳನ್ನು ಸಂಯಮ ಮಾಡಿ ಅಂದರೆ ಅವುಗಳನ್ನು ಅವುಗಳ ಹಾರಾಟಕ್ಕೆ ಬಿಡದೇ ಗೆದ್ದು ಆತ್ಮನೆಡೆಗೆ-ಪರಮಾತ್ಮನೆಡೆಗೆ ಹರಿಯುವಂತೆ ಮಾಡಿ ಅವುಗಳನ್ನು ಗೆಲ್ಲುವುದು ‘ಜಯ’.

ಇನ್ನು ಪುಣ್ಯದ ಬಗ್ಗೆ ಮಹಾಕವಿ ಕಾಳಿದಾಸನ ಉಕ್ತಿ-
“ಲೋಕಾಂತರಸುಖಂ ಪುಣ್ಯಂ ತಪೋದಾನಸಮುದ್ಭವಮ್”|
ತಾನು ತ್ರಿಕರಣಪೂರ್ವಕವಾಗಿ ಮಾಡುವ ತಪಸ್ಸು ದಾನ ಇತ್ಯಾದಿಗಳಿಂದ ಒದಗಿಬರುವ ಯಾವ ಲೋಕಾಂತರಸುಖವಿದೆಯೋ ಅದು. ಈ ಜಯ ಮತ್ತು ಪುಣ್ಯಗಳನ್ನು ಬೆಳೆಸಿಕೊಂಡರೆ ಆಗ ಜಯನ್ತೀ ಆಚರಣೆ ಸಫಲ-ಸಾರ್ಥಕ.

ಶ್ರೀರಂಗಮಹಾಗುರುಗಳ ವಾಣಿಯನ್ನು ‘ಜಯನ್ತೀ’ ಶಬ್ದದ ನಿರ್ವಚನೆಯನ್ನೂ ಜೊತೆಜೊತೆಯಾಗಿ ನಮ್ಮ ಬುದ್ಧಿಭೂಮಿಗೆ ತಂದುಕೊಂಡಾಗ ‘ಜಯನ್ತೀ’ ಆಚರಣೆಯ ಮಹತ್ತ್ವ, ಹಿರಿಮೆ ಮನದಟ್ಟಾಗುತ್ತದೆ.
  " ಈ ದೃಷ್ಟಿಯಿಂದ ಈ ಶ್ರೇಷ್ಠ ಪದ ಮತ್ತು ಆಚರಣೆಯನ್ನು ತಥಾಕಥಿತ ಬುದ್ಧಿಜೀವಿಗಳು ಸತ್ಯದೂರವಾಗಿ ವಿಮರ್ಶೆ ಮಾಡುತ್ತಿರುವುದು ಶೋಚನೀಯ"
ಸಾಮಾನ್ಯ ಜನರಲ್ಲಿ ಮತ್ತು ಇವತ್ತಿನ ನಾಯಕ ವರ್ಗದಲ್ಲಿ  ತಮ್ಮ ತಾತ್ಕಾಲಿಕ ಲಾಭಕ್ಕಾಗಿ ತಲೆದೋರುವ ಇಂತಹ ಪ್ರವೃತ್ತಿಗಳು ಕೊನೆಗೊಂಡು ಇರುವ ನಿಜವನ್ನು ಅರಿಯುವ ಮನೋಭಾವವು ಬೆಳೆಯಲಿ ಎಂದು ಹಾರೈಸೋಣ.  


ಸೂಚನೆ:  16/12/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.