Saturday, December 22, 2018

ಭಕ್ತಿ: ಬಲವೋ ದೌರ್ಬಲ್ಯವೊ ? (Bhakti: Balavo daurbalyavo?)

ಲೇಖಕರು: ಡಾl ಮೋಹನ್ 

ಭಕ್ತಿ ಮತ್ತು ಭಕ್ತರ ಕಥೆಗಳು ಭಾರತೀಯರಿಗೆ ಚಿರಪರಿಚಿತ. ಕಬೀರ್, ಸೂರ್ದಾಸ್,ಮೀರಾ, ನಾಯನ್ಮಾರರು , ಆಳ್ವಾರರು, ಶಿವಶರಣರು, ಕನಕದಾಸರು, ಪುರಂದರದಾಸರೇ ಮೊದಲಾದ ಭಕ್ತ-ಭಕ್ತಿಸಾಹಿತ್ಯದ ಗುನುಗು ಮನೆಮನೆಯಲ್ಲಿ ಇಂದಿಗೂ ಕೇಳಿಸುತ್ತಿದೆ. ಆದರೆ ವಿಚಾರಪರತೆ ಹೆಚ್ಚುತ್ತಿದ್ದಂತೆ ಭಕ್ತಿ-ಭಾವದ ಬಗ್ಗೆ ಪ್ರಶ್ನೆಗಳು ಏಳುವುದೂ ಉಂಟು.  ಭಾವುಕರಾಗಿ ಸುಮ್ಮನೆ ಅತ್ತು ಕರೆದು ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ ಎಂದರೆ ಅವನು ಬರುವನೇ? ಸುಮ್ಮನೆ ಗೋಳಾಡುವುದರ ಬದಲಾಗಿ ಕಾಯಕವೇ ಕೈಲಾಸವೆಂದು ಕಾರ್ಯೋನ್ಮುಖರಾಗಬರದೇ? ಯೋಗ-ಪ್ರಾಣಾಯಾಮ-ಧ್ಯಾನಗಳಲ್ಲಿ ಇರುವ ಘನತೆ ಇಲ್ಲಿಲ್ಲ. ಭಾವುಕತೆ ದೌರ್ಬಲ್ಯದ ಸಂಕೇತ ಎಂಬುದು ಒಟ್ಟಾಭಿಪ್ರಾಯ.

ಭಕ್ತಿ ಎಂದರೇನು ?
  
ವಿಭಕ್ತಿ ಎಂದರೆ ಬೇರ್ಪಡಿಸುವುದು, ಬಿಡಿಸುವುದು.  ತದ್ವಿರುದ್ಧವಾಗಿ ಭಕ್ತಿ ಎಂದರೆ ಸೇರಿಸುವದು, ಒಂದುಗೂಡಿಸುವುದು. ಪ್ರಸ್ತುತ ಜೀವ ಮತ್ತು ಪರಮಾತ್ಮನನ್ನು ಒಂದುಗೂಡಿಸುವಿಕೆಯನ್ನು ತಿಳಿಸುತ್ತದೆ. ಮೂಲತಃ ಭಕ್ತಿ ಎಂಬುದೂ ಯೋಗಕ್ಕೆ ಪರ್ಯಾಯವಷ್ಟೇ. ಪಾರಿಭಾಷಿಕವಾಗಿ ಅದು ಯೋಗದ ಅನೇಕ ಮಾರ್ಗಗಳಲ್ಲಿ ಒಂದು.

ಮನಸ್ಸು ಮತ್ತು ಪ್ರಾಣ ಜಂಟಿ ವಾಹನಗಳಂತೆ. ಒಂದನ್ನೆಳೆದರೆ  ಮತ್ತೊಂದೂ ಬರುವುದು. ಪ್ರಾಣಗಳನ್ನು ನಿಯಂತ್ರಿಸಿ ತನ್ಮೂಲಕ ಯೋಗವನ್ನು ಸಾಧಿಸುವ ಕ್ರಮ ಒಂದು. ಮನಸ್ಸನ್ನು ಸೆಳೆದು ಯೋಗವನ್ನು ಸಾಧಿಸುವುದು ಮತ್ತೊಂದು. ಈ ಎರಡನೆಯದೇ ಭಕ್ತಿ.

ಮನಸ್ಸಿನ ಸಹಜ ಸ್ವಭಾವವೇ ಅಂಟಿಕೊಳ್ಳುವುದು

ನನ್ನ ಸ್ವತ್ತು. ನನ್ನ ಮನೆ. ನನ್ನ ತಾಯಿ. ಹೆಂಡತಿ, ಮಕ್ಕಳು, ಸ್ನೇಹಿತರು ಎಂಬ ನಾನಾ ಅಂಟುಗಳು. ಇದು ಮುಗಿಯದ ಪಟ್ಟಿ.ಈ ಅಂಟು ಚಟವಾಗಿಯೂ ಪರಿವರ್ತಿಸುವುದುಂಟು. ಇಷ್ಟರ ಗುಣ ನಮ್ಮಲ್ಲಿ ಸಂಕ್ರಮಿಸುತ್ತದೆ. ಕೋಪಿಷ್ಠರು, ನೀಚರ ಸಂಗದಿಂದ  ಕೋಪವು ಪೌರುಷವೆಂದು ತೋರುವುದು, ಸಡಿಲವಾದ ಮಾತು ಹಾಸ್ಯದ ಮುಖವಾಡ ಧರಿಸುವುದು. ಎಲೆ ಮನವೇ, ಈ ಅಂಟುಗಳನ್ನೆಲ್ಲಾ ಬಿಡು, ಎಂದರೆ ಬಿಡದು. ಧ್ಯಾನದಲ್ಲಿ ಮುಳುಗು ಎಂದರೆ ಅಸಾಧ್ಯ. ಎಷ್ಟು ಸಲ ಬಲಾತ್ ಬಿಡಿಸಿದರೂ ಮತ್ತಿನ್ನಾವುದಕ್ಕೋ ಅಂಟಿಕೊಳ್ಳುತ್ತದೆ. ಇದು ಜನಸಾಮಾನ್ಯರ ಸ್ಥಿತಿ.

ಮದಿಸಿದ ಆನೆಗೆ ಪಳಗಿದ ಆನೆಯೇ ಉತ್ತರ  
 

ಚಪಲತೆಯ ಮೂರ್ತಿಯಾಗಿರುವ ಮನಸ್ಸಿಗೆ ಚಾಪಲ್ಯವೇ ಸರಿಯೆಂದರು  ಋಷಿಗಳು. ಅಂಟನ್ನು ಬಿಡು ಎನ್ನುವಬದಲಾಗಿ ಅಂಟಿಕೊಳ್ಳುವುದಕ್ಕೆ ಪಳಗಿದ ಆನೆಯಂತಿರುವ ಉತ್ಕೃಷ್ಟ  ವ್ಯಕ್ತಿ/ವಿಷಯಗಳನ್ನು ಕೊಟ್ಟರು. ಮಕ್ಕಳಲ್ಲಿ ಅಂಟಿದ್ದವರಿಗೆ ಬಾಲಕೃಷ್ಣನ ಕಥಾಮೃತವನ್ನು ಉಣಿಸಿದರು. ತರುಣಿಯರಿಗೆ ಗೋಪೀಲೋಲಕೃಷ್ಣನ ರಾಸಲೀಲೆಗಳು. ಹೀಗೆ ಮನಸ್ಸಿನ ಅಪೇಕ್ಷಿತಭಾವಕ್ಕೆ ಸರಿಯಾಗಿ ಒಂದು ವ್ಯಕ್ತಿತ್ವವನ್ನು ನೀಡಿದರು. ಸಖನಾಗಿ, ಸ್ವಾಮಿಯಾಗಿ, ಪ್ರಿಯೆಯತಮನಾಗಿ, ಪತಿಯಾಗಿ  ಕೃಷ್ಣನನ್ನೂ, ರಾಮನನ್ನೂ ಶಿವನನ್ನೂ ಪ್ರೀತಿಸುವ ದಾರಿಯನ್ನು ಕಲ್ಪಿಸಿದರು. ಮಾತಿನ ಪ್ರವೃತ್ತಿಯಿದ್ದರೆ ಸ್ತೋತ್ರ, ಕಥೆಕೇಳುವ ಹಂಬಲವಿದ್ದಲ್ಲಿ ಕಥಾಶ್ರವಣ. ಹೀಗೆ ನವವಿಧ ಭಕ್ತಿಭಾವಗಳು. ಲೌಕಿಕ ಸಂಬಂಧಗಳಂತೆ ಇಲ್ಲೂ ಮಾತನಾಡುವುದು, ಕೋಪಿಸಿಕೊಳ್ಳುವುದು, ಅಳುವುದುಂಟು. ಮನುಷ್ಯಸಹಜವಾದ ಎಲ್ಲಾ ಭಾವಗಳೂ ವ್ಯಕ್ತವಾಗುವುದುಂಟು. ಮತ್ತಿಲ್ಲೇನು ಸಾಧಿಸಿದಂತಾಯಿತು ?            

ಭಕ್ತಿ ರಹಸ್ಯ

ಶ್ರೀರಂಗ ಮಹಾಗುರುಗಳು ವಿವರಿಸುವಂತೆ ಭಕ್ತಿಯೋಗದಲ್ಲಿ ಋಷಿಗಳು ಅಂಟಿಗಾಗಿ ಕೊಡುವ ವಸ್ತುಗಳು ಶುಧ್ಧ ಸತ್ತ್ವ ಮೂರ್ತಿಗಳು. ರಾಗವನ್ನು ತೊರೆದ ವ್ಯಕ್ತಿತ್ತ್ವಗಳನ್ನು ಅನುರಾಗಕ್ಕೆ ವಿಷಯವಾಗಿ ನೀಡಿದರು. ವೀತರಾಗರ ಸಂಗದಿಂದ ನಮ್ಮಲ್ಲೂ ವೈರಾಗ್ಯ ಸಂಕ್ರಮಿಸುತ್ತದೆ. ಸಾತ್ವಿಕರನ್ನು ಯಾವುದಾದರೊಂದು  ಭಾವದಿಂದ ಅನವರತ ಭಾವಿಸಿದರೆ ನಮ್ಮ ಮನಸ್ಸಲ್ಲೂ ಸತ್ತ್ವಗುಣದ ವೃದ್ಧಿಯಾಗುವುದು. ಮನಸ್ಸಿನ ಜೊತೆ ಪ್ರಾಣವೂ ತಿಳಿಯದೇನೆಯೇ ಯೋಗ ಮಾರ್ಗವನ್ನು ಪ್ರವೇಶಿಸುವುದು. ಭಕ್ತಿಮಾರ್ಗದಲ್ಲಿ ಮುಂದುವರಿಯುತ್ತಾ ಧ್ಯಾನವಾಗಿ ಪರಿಣಮಿಸುತ್ತದೆ. ಪ್ರಾಣಾಯಾಮ-ಪ್ರತ್ಯಾಹಾರ-ಧ್ಯಾನ ಮುಂತಾದ ಅಷ್ಟಾಂಗ ಯೋಗದಿಂದ ಸಿಗುವ ಸಮಾಧಿಫಲವೇ ಭಕ್ತಿಯ ಫಲವೂ ಹೌದು. ಶ್ರೀಮದ್ಭಾಗವತದಲ್ಲಿ ವರ್ಣಿಸಿರುವ ಗೋಪಿಕೆಗಳ ವೃತ್ತಾಂತ ಭಕ್ತಿಮಾರ್ಗಕ್ಕೆ ಉತ್ತಮವಾದ ಕೈಪಿಡಿ. ಅವರ ಅನುಭವ-ದರ್ಶನಗಳು ಯೋಗಿಗಳಿಗೂ ದುರ್ಲಭವಾದ ಸಮಾಧಿಸಾಮ್ರಾಜ್ಯದ ಫಲವಾಗಿದೆ. ದೌರ್ಬಲ್ಯವನ್ನೇ  ಬಲವಾಗಿಸಿಕೊಂಡು ಯೋಗಮಾರ್ಗದ ಬಾಗಿಲನು ತೆರೆದು, ಮಾಯೆಯ ತೆರೆಯನು ತೊರೆದು ಒಳಗೊಳಗೇ ಹರಿ-ಹರನ ದರ್ಶನ ಭಕ್ತಿಯಿಂದ ಖಂಡಿತವೂ ಸಾಧ್ಯ ಎಂಬುದು
 

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದ.