Saturday, December 1, 2018

ತೀರ್ಥ-ಪ್ರಸಾದ (Tirtha-Prasada)

 ಲೇಖಕರು:  ತಾರೋಡಿ ಸುರೇಶ

ತೀರ್ಥವೆಂದರೆ ದೇವರ ಅಭಿಷೇಕದ ಪೂಜಾತೀರ್ಥವೆಂದೋ, ದೇವರತೀರ್ಥವೆಂದೋ ಸಹಜವಾಗಿ ಭಾವಿಸುತ್ತೇವೆ.  ಗಂಗಾ ಇತ್ಯಾದಿ ನದಿಗಳನ್ನೂ ಪುಣ್ಯತೀರ್ಥ ಎಂದು ಸೇವಿಸುವುದುಂಟು.  ಹಾಗೆಯೇ ನೈವೇದ್ಯವನ್ನು ಪ್ರಸಾದ ಎನ್ನುತ್ತೇವೆ. 


ಉದಾಹರಣೆಗೆ ಕೊಬ್ಬರಿಸಕ್ಕರೆ, ತೆಂಗಿನಕಾಯಿ, ಅನ್ನ ಇತ್ಯಾದಿಗಳು ದೇವರಿಗೆ ನಿವೇದನವಾದ ನಂತರ ಪ್ರಸಾದ ಎನ್ನಿಸಿಕೊಳ್ಳುತ್ತದೆ.  ಅರ್ಚನೆಯಲ್ಲಿ ಸಮರ್ಪಿಸಿದ ಪುಷ್ಪವೂ ಪ್ರಸಾದವೇ.  ಒಂದು ದಶಕದ ಹಿಂದೆ ಗುರುಹಿರಿಯರಿಗೆ ಪತ್ರ ಬರೆಯುವಾಗಲೂ “ತೀರ್ಥರೂಪರಾದ” ಎಂದು ಸಂಬೋಧಿಸಲಾಗುತ್ತಿತ್ತು.

ಸ್ವಾರಸ್ಯವೆಂದರೆ ಅಂಗಡಿಯಲ್ಲಿ ಕೊಳ್ಳುವಾಗ ತೆಂಗಿನಕಾಯಿ ಎನ್ನುತ್ತೇವೆ.  ಆದರೆ ಪೂಜೆಯಾದ ನಂತರ ನೈವೇದ್ಯವಾಗಿಬಿಡುತ್ತದೆ.  ಮೊದಲು ಕೇವಲ ನೀರು.  ಪೂಜಾನಂತರ ತೀರ್ಥ.  ಆದರೆ ರಸಾಯನ ಶಾಸ್ತ್ರದ ಭಾಷೆಯಲ್ಲಿ ಮೊದಲೂ H2O  ಆಮೇಲೂ H2O.  ಅದೇ ರೀತಿ ನಮಗೆ ಮೊದಲಿಗೂ ನಂತರದ್ದಕ್ಕೂ ಯಾವ ವ್ಯತ್ಯಾಸವೂ ತಿಳಿಯದು.

ತೀರ್ಥ ಎನ್ನುವುದು ಸಂಸ್ಕೃತ ಭಾಷೆಯ ಪದ.  ‘ತೃ’ ಎಂಬ ಧಾತುವಿನಿಂದ ಇದು ವಿಕಾಸಗೊಂಡಿದೆ.  ತರಣ, ತರತಿ- ದಾಟುವುದು, ದಾಟಿಸುವುದು ಎಂಬರ್ಥಗಳನ್ನು ಕೊಡುತ್ತದೆ.  ಒಂದೆಡೆಯಿಂದ ಇನ್ನೊಂದೆಡೆಗೆ ಯಾವುದು ದಾಟಿಸುವುದೋ ಅದು ತೀರ್ಥ.

ಆದರೆ ನಾವು ಹೋಗಬೇಕಾದ ಎಡೆಯಾದರೂ ಯಾವುದು?  ಇದಕ್ಕೆ ಅಜ್ಞಾನದಿಂದ ಜ್ಞಾನದೆಡೆಗೂ, ಕತ್ತಲೆಯಿಂದ ಬೆಳಕಿನೆಡೆಗೂ ಎಲ್ಲ ಜೀವಿಗಳೂ ಸಾಗಬೇಕು ಎಂದು ಜ್ಞಾನಿಗಳು ಉತ್ತರಿಸುತ್ತಾರ.  ಲೋಕದ ಸುಖದಲ್ಲಿಯೇ ನಿಲ್ಲದೆ ಪರಮಾತ್ಮನೆಂಬ ಜ್ಞಾನದ ಬೆಳಕಿನ ಸುಖವನ್ನೂ ಪಡೆಯಬೇಕು.  ಏಕೆಂದರೆ ಅತೀಂದ್ರಿಯ ಕ್ಷೇತ್ರದ ಸುಖವು ಇಂದ್ರಿಯಕ್ಷೇತ್ರದ ಸುಖಕ್ಕಿಂತ ಕೋಟಿ ಕೋಟಿ ಪಾಲು ದೊಡ್ಡದು ಎಂದು ಅನುಭವಿಸಿದ ಮಹಾತ್ಮರು ಸಾರಿದ್ದಾರೆ.  ಅದಕ್ಕನುಗುಣವಾಗಿ ಅಜ್ಞಾನದ, ಇಂದ್ರಿಯಗಳ ಕ್ಷೇತ್ರದಿಂದ ನಮ್ಮನ್ನು ಜ್ಞಾನದೆಡೆಗೆ ಯಾವುದು ದಾಟಿಸುತ್ತದೆಯೋ ಅದೇ ತೀರ್ಥ.

ತೀರ್ಥದಲ್ಲಿರುವ ತೀರ್ಥತ್ವ ನಮಗೇಕೆ ತಿಳಿಯುತ್ತಿಲ್ಲ?  ಎನ್ನುವ ಪ್ರಶ್ನೆಯೂ ಸಹಜವೇ.  ಅದಕ್ಕೊಂದು ತರಬೇತಿ ಬೇಕು.  ಸೂಕ್ಷ್ಮತೆ ಬೇಕು.  ನಮ್ಮ ದೇಹಯಂತ್ರವು ಸುಟಿಯಾಗಿರಬೇಕು.  ಶೀತವಾಗಿದ್ದರೆ ಮೂಗು ವಾಸನೆಯನ್ನು ಗ್ರಹಿಸಲಾರದು.  ಜ್ವರ ಬಂದರೆ ನಾಲಗೆ ಸರಿಯಾದ ರುಚಿಯನ್ನು ಗ್ರಹಿಸದು.  ಹಾಗೆಯೇ ನಮ್ಮಲ್ಲಿರುವ ದುಷ್ಟಸಂಸ್ಕಾರಗಳು ಜ್ಞಾನಕ್ಕೆ ಸಂಬಂಧಪಟ್ಟ ಕೇಂದ್ರಗಳನ್ನು ಮುಚ್ಚಿಬಿಟ್ಟಿದ್ದರೆ ನೀರನ್ನು ತೀರ್ಥವನ್ನಾಗಿ ಪರಿವರ್ತಿಸಿದ ಧರ್ಮವನ್ನು ಅರಿಯಲಾರೆವು.  ಅದಕ್ಕೆ ಬೇಕಾದ ತಕ್ಕ ಚಿಕಿತ್ಸೆಯನ್ನು ಪಡೆದಾಗ ನಾವೂ ಅರಿಯಬಹುದು.  

ಆದರೆ ಋಷಿಗಳಿಗೆ ಆ ಸೂಕ್ಷ್ಮತೆಯಿದ್ದುದರಿಂದ ಅವರು ಶೋಧಿಸಿ ತಿಳಿಯುತ್ತಿದ್ದರು.  ಹಾಗೆಯೇ ತೀರ್ಥತ್ವವಿರುವ ಅನೇಕ ಪದಾರ್ಥಗಳನ್ನೂ ಶೋಧಿಸಿ ಅವುಗಳನ್ನೂ ತೀರ್ಥವೆಂದೇ ಕರೆದಿದ್ದಾರೆ.  ಅನೇಕ ನದೀನದಗಳು, ವೃಕ್ಷವನಸ್ಪತಿಗಳು, ಸಾಲಿಗ್ರಾಮಗಳೂ ತೀರ್ಥಗಳೇ.  ವಿಶೇಷವಾಗಿ ಜ್ಞಾನಸಂಪನ್ನರಾದ ಗುರುಹಿರಿಯರೂ ತೀರ್ಥಸ್ವರೂಪರೇ. ಪದಾರ್ಥಗಳಿಗೆ ತೀರ್ಥತ್ವವು ಬರುವುದು ಜ್ಞಾನಿಗಳ ಸಂಕಲ್ಪ, ಸ್ಪರ್ಶ, ದೃಷ್ಟಿಗಳಿಂದಲೇ.  ಇವರು ತಾವೂ ಅನುಭವಿಸಿ ಇತರರನ್ನೂ ದಾಟಿಸುತ್ತಾರೆ.  ಆದ್ದರಿಂದಲೇ “ತೀರ್ಥೀ ಕುರ್ವಂತಿ ತೀರ್ಥಾನಿ”- ಜ್ಞಾನಿಗಳೇ ತೀರ್ಥವನ್ನಾಗಿ ಮಾಡುತ್ತಾರೆ-ಎಂಬ ಮಾತು ಬರಲು ಕಾರಣ.
ವಾಸ್ತವಿಕವಾಗಿ “ಆತ್ಮೈವ ಸರ್ವ ತೀರ್ಥಾನಿ...,” ಎಂಬುದಾಗಿ ಭಗವಂತನೇ ಮೊಟ್ಟಮೊದಲ ತೀರ್ಥ.  ಅವನ ಧರ್ಮ ಎಷ್ಟೆಷ್ಟು ತುಂಬಿದೆಯೋ ಅಷ್ಟರ ಮಟ್ಟಿಗೆ ಉಳಿದವರೂ ತೀರ್ಥಸ್ವರೂಪರಾಗುತ್ತಾರೆ.

ಪದಾರ್ಥಗಳನ್ನು ಭಗವಂತನಿಗೆ ನಿವೇದಿಸುವಾಗ ಜ್ಞಾನಿಗಳು ಭಗವದ್ಭಾವಕ್ಕೆ ಏರಿ ಅವನ ಪ್ರಸನ್ನತೆಯನ್ನು ತಾವು ತುಂಬಿಕೊಂಡು ಅದನ್ನು ಪದಾರ್ಥಗಳ ಮೇಲೆ ಹರಿಸುತ್ತಾರೆ.  ಆಗ ಪದಾರ್ಥವು ಪ್ರಸಾದವಾಗುತ್ತದೆ.  ಅವು ಸೇವಿಸಿದ ಭಕ್ತರಲ್ಲಿಯೂ ಭಗವಂತನೆಡೆಗೆ ಸಾಗಲು ಬೇಕಾದ ಸಂಸ್ಕಾರವನ್ನೂ, ಯೋಗ್ಯತೆಯನ್ನೂ ಕ್ರಮೇಣ ಉಂಟುಮಾಡುತ್ತವೆ.  ಇನ್ನು ಕೆಲವು ಪದಾರ್ಥಗಳಲ್ಲಿಯೇ ಸ್ವತಃ ಆ ಧರ್ಮವಿರುತ್ತದೆ.  ಉದಾಹರಣೆಗೆ ಸಾಲಿಗ್ರಾಮ, ತುಳಸಿ, ದೂರ್ವೆ ಇತ್ಯಾದಿ.  ತೀರ್ಥಪ್ರಸಾದಗಳೆರಡೂ ನಮ್ಮ ದೇಹ, ಮನಸ್ಸು, ಇಂದ್ರಿಯಗಳನ್ನು ಶುದ್ಧಗೊಳಿಸಿ ತಾರಣ ಮಾಡುತ್ತವೆ.

ಈ ವಿಜ್ಞಾನವನ್ನು ಶ್ರದ್ಧೆ, ಭಕ್ತಿಗಳಿಂದ ಯೋಜಿಸಿಕೊಂಡಾಗ, ಬಳಸಿಕೊಂಡಾಗ ತೀರ್ಥಪ್ರಸಾದಗಳು ನಮ್ಮನ್ನು ಮೂಲ ತೀರ್ಥವಾದ ಭಗವಂತನ ಮಡಿಲಿನವರೆಗೂ ದಾಟಿಸುತ್ತವೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.