Sunday, December 23, 2018

ವಿದ್ಯಾಭ್ಯಾಸವೋ? ವಿದ್ಯಾಭಾಸವೋ? (Vidhya bhysova ? Vidhya bhasavo)

ಲೇಖಕರು: ನರಸಿಂಹ ಭಟ್ಟ

ಇಂದೇನು, ಹಿಂದೂ ಸಹ ನಮ್ಮ ದೇಶದಲ್ಲಿ ವಿದ್ಯಾಭ್ಯಾಸಕ್ಕೆ ಇನ್ನಿಲ್ಲದ ಪ್ರಾಶಸ್ತ್ಯವಿತ್ತು.  ಹಿಂದೆ ಯಾವ ವಿಷಯದಲ್ಲಿ ಈ ಗೌರವಾದರಗಳನ್ನು ಕಾಣುತ್ತಿದ್ದೆವೋ ಅದೇ ವಿಷಯದಲ್ಲಿ ಇಂದೂ ಕಾಣುತ್ತಿದ್ದೇವೆ ಎಂಬುದು ಭಾರತಕ್ಕಿರುವ ವಿಶ್ವಮಟ್ಟದ ಸ್ಥಾನವನ್ನು ತೋರಿಸುವುದು. ಇದನ್ನು ಉಳಿಸಿ ಬೆಳೆಸಿಕೊಂಡು ಬಂದ ನಮ್ಮೆಲ್ಲ ಪೂರ್ವಸೂರಿಗಳಿಗೆ ನತಮಸ್ತಕರಾಗಬೇಕು.  ಆದರೆ ವಿಷಯ ಹಾಗೆಯೇ ಉಳಿದಿದೆಯೇ? ಉಳಿಸಿದ್ದೇವೆಯೇ?  ಇಂದು ನಾವು ಮಾಡುವವಿದ್ಯಾಭ್ಯಾಸವು ವಿದ್ಯಾಭಾಸವಾಗುತ್ತಿದೆ ಎಂದರೆ ಆಭಾಸವಾಗಲಾರದು.

ಇದಕ್ಕೆ ಕಾರಣವಿಷ್ಟೇ- ಜೀವನ ಎಂದರೇನು? ಜೀವನದ ಗುರಿಯೇನು? ಎಂಬುದನ್ನು ಮಹರ್ಷಿಗಳು ಮನಗಂಡರು. ಆ ದೃಷ್ಟಿ ಮರೆಯಾಗಿರುವುದೇ ಈ ಅಭಾಸಕ್ಕೆಲ್ಲ ಕಾರಣ.
 ನಾವೆಲ್ಲರೂ ಒಂದಾನೊಂದು ಕಾಲದಲ್ಲಿ ಭಗವಂತನ ಭಾಗವೇ ಆಗಿದ್ದೆವು. ಅವನ ಸಂಕಲ್ಪದಂತೆ ಜೀವಭಾವ ತಾಳಿ ಅಲ್ಲಿಂದ ಬೇರ್ಪಟ್ಟು ಪ್ರಕೃತಿ ಕ್ಷೇತ್ರಕ್ಕೆ ಇಳಿದೆವು. ಅಂದಿನಿಂದ ನಮ್ಮ ಜೀವನಯಾತ್ರೆಯು ಆರಂಭವಾಯಿತು. ಅದು ಮುಂದುವರೆದು ಮತ್ತೆ ಆ ಯಾತ್ರೆಯು ಅಲ್ಲೇ ಪರ್ಯವಸಾನವಾಗಬೇಕು. ಇದನ್ನೇ ಜೀವನ ಎಂದರು. ಜೀವನದ ಗುರಿಯೂ ಅದೇ- ಎಲ್ಲಿಂದ ಜೀವನ ಆರಂಭವಾಯಿತೋ ಅಲ್ಲಿಗೇ ತಲುಪುವುದು. ಮಧ್ಯದಲ್ಲಿ ಪ್ರಕೃತಿಯ ರಮಣೀಯತೆಯನ್ನು ಸವಿಯುತ್ತಾ ಇಲ್ಲೇ ಇರದೆ ಮೂಲಕ್ಕೆ ಸಾಗಬೇಕು. ಅದಕ್ಕಾಗಿ ವಿದ್ಯಾಭ್ಯಾಸ ನಮಗೆ ಬೇಕು . ನಮ್ಮ ಮೂಲಕ್ಕೆ ಸಾಗುವಂತಿದ್ದರೆ ಅದು ವಿದ್ಯಾಭ್ಯಾಸ. ಅದಿಲ್ಲದಿದ್ದರೆ ವಿದ್ಯಾಭಾಸ. ಈ ನೇರದಲ್ಲಿ ಇಂದು ಜ್ಞಾನಾರ್ಜನೆಯು ಸಾಗುತ್ತಿದೆಯೇ?

ಹಿಂದಿನ ಕಾಲದಲ್ಲಿನ ಜೀವನವಿಧಾನ ಹೇಗಿತ್ತು ಎಂಬುದನ್ನು ರಾಷ್ಟ್ರಕವಿ ಕಾಳಿದಾಸ ರಘುವಂಶದ ಮಹಾರಾಜರನ್ನು ವರ್ಣಿಸುವಾಗ ಹೀಗೆ ಹೇಳುತ್ತಾನೆ-“ ಶೈಶವೇ ಅಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಂ | ವಾರ್ಧಕೇ ಮುನಿವೃತ್ತೀನಾಂ ಯೋಗೇನ ಅಂತೇ ತನುತ್ಯಜಾಮ್ ||” –ಬಾಲ್ಯದಲ್ಲಿ ಚೆನ್ನಾಗಿ ವಿದ್ಯೆಯನ್ನು ಗಳಿಸಿ, ಅದರ ಚೌಕಟ್ಟಿನಲ್ಲಿ ಸುಖಭೋಗವನ್ನು ಅನುಭವಿಸಿ, ಮುಪ್ಪಿನಲ್ಲಿ ಜೀವನದ ತೃಪ್ತಭಾವದಿಂದ ಮೌನವಾಗಿ,ಯೋಗಸಮಾಧಿಯಿಂದ ತಮ್ಮ ದೇಹತ್ಯಾಗವನ್ನು ಮಾಡುತ್ತಿದ್ದರು. ತಮ್ಮ ಒಂದು ಜನ್ಮದ ಜೀವಿತಾವಧಿಯಲ್ಲೇ ಜೀವನದ ಹಲವು ಮಜಲುಗಳನ್ನು ಪೂರೈಸಿ ಪರಮಲಕ್ಷ್ಯವನ್ನೂ ಹೊಂದುತ್ತಿದ್ದರು. ಇದೇ ಜೀವನ. ಇದಕ್ಕಾಗಿಯೇ ವಿದ್ಯಾಭ್ಯಾಸ. ಆದರೆ ಇಂದು ಬಾಲ್ಯದಲ್ಲಿ ಗಳಿಸಬೇಕಾದ ವಿದ್ಯೆಯನ್ನು ಗಳಿಸದೇ, ವಿದ್ಯೆಯ ಬಲವಿಲ್ಲದ್ದರಿಂದ ಧನಾರ್ಜನೆಯನ್ನೂ ಸರಿಯಾಗಿಮಾಡದೇ , ಯಾವುದೇ ಐಹಿಕ ವಿಷಯಲಾಲಸೆಯನ್ನು ಪೂರೈಸದೇ, ಮೂರನೇ ಅವಸ್ಥೆಯಲ್ಲಿ ತಪಸ್ಸನ್ನೂ ಮಾಡದಿದ್ದರೆ, ನಾಲ್ಕನೇ ಅವಸ್ಥೆಯಲ್ಲಿ ಇನ್ನೇನು ಮಾಡಲು ಸಾಧ್ಯ!! ಜೀವನದ ಯಾವುದೇ ಅವಸ್ಥೆಯಲ್ಲೂ ಸುಖವನ್ನು ಅನುಭವಿಸದೇ ಕೊನೆಗೆ ದುಃಖದಿಂದ ಉಸಿರನ್ನು ಬಿಡುವ ಸಂದರ್ಭ ಇಂದು ನಮ್ಮ ಪಾಲಿನದ್ದಾಗಿದೆ.

ಇಂದು ಎಲ್ಲೆಲ್ಲೂ ಶಿಕ್ಷಣವು ಒಂದು ವೃತ್ತಿಯನ್ನು ಗುರಿಯಾಗಿಸಿಕೊಂಡಿದೆ. ವೃತ್ತಿಯು ಕೇವಲ ಧನಸಂಪಾದನೆಯ ಸಾಧನವಾಗಿದೆ.  ಪ್ರಸ್ತುತಕಾಲದಲ್ಲಿಪೂರ್ಣಜೀವನದ ಶಿಕ್ಷಣಕ್ಕೆ ಅಷ್ಟಾಗಿ ಬೆಂಬಲವಾಗಲೀ, ಪ್ರೋತ್ಸಾಹವಾಗಲಿ ಸಿಗುತ್ತಿಲ್ಲ. ಪ್ರಾಚೀನ ಶಿಕ್ಷಣದಲ್ಲಿ ಯಾವೆಲ್ಲ ಮೌಲ್ಯಗಳು ಪಾಠ್ಯಕ್ರಮದಲ್ಲಿ ಹಾಸುಹೊಕ್ಕಾಗಿ ಇತ್ತೋ ಅದನ್ನು ಇಂದು ಪಠ್ಯೇತರ ಶಿಕ್ಷಣವಾಗಿ ಮಕ್ಕಳಿಗೆ ಬೋಧಿಸುವ ಕಾರ್ಯ ವಿರಳವಾಗಿ ಕಾಣುವಂತಾಗಿರುವುದು ವಿಪರ್ಯಾಸವೇ ಸರಿ.

'ಜ್ಞಾನ' ವೆಂಬುದು ಪುಸ್ತಕದ ರಟನವಲ್ಲ. ಜ್ಞಾನದ ಸ್ವರೂಪವೇ ಬೇರೆ. ಪುಸ್ತಕದ ವರ್ಣಮಾಲೆಯನ್ನು ರಟನಮಾಡುವುದೇ ವಿದ್ಯಾಭ್ಯಾಸವಾಗಿದ್ದರೆ ಎಲ್ಲರೂ ಜ್ಞಾನಿಗಳಾಗುತ್ತಿದ್ದರು. ಇಂದು ಶಿಕ್ಷಣಕ್ಕಾಗಿ ವಿಶೇಷ ಶ್ರಮ ವಹಿಸುತ್ತಿದ್ದರೂ, ಋಷಿಗಳ ಮಟ್ಟಕ್ಕೇರಿ ವಿದ್ಯಾಸ್ವರೂಪವನ್ನು ಅರ್ಥಮಾಡಿಕೊಂಡಾಗ ಇದು ನೆಮ್ಮದಿಯ ಜೀವನಕ್ಕೆ ಬೇಕಾದ  ವಿದ್ಯೆಯಲ್ಲ ಎಂಬುದು ಅರಿವಾಗುತ್ತದೆ. ‘ವಿದ್ ಜ್ಞಾನೇ, ಯಾ ಪ್ರಾಪಣೇ’ ಯಾವುದು ಜ್ಞಾನರೂಪೀ ಭಗವಂತನಸಾಕ್ಷಾತ್ಕಾರಕ್ಕೆ ಸಾಧನವಾಗುವುದೋ ಅದೇ ವಿದ್ಯೆ.ಅದರ ಅಧ್ಯಯನವೇ ನಿಜವಾದ ವಿದ್ಯಾಭ್ಯಾಸ, ಉಳಿದದ್ದು ವಿದ್ಯಾಭಾಸವೇ ಸರಿ.


ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.