Sunday, December 9, 2018

ದೈವೀ ವೀಣೆಯ ಅನುಕೃತಿ-ಮಾನುಷೀ ವೀಣೆ (Daivee veeneya anukrti-manushi veene)

ಲೇಖಕರು: ತಾರೋಡಿ ಸುರೇಶ 


ವೀಣೆಯ ಪ್ರಸ್ತಾಪವು ವೇದಗಳಲ್ಲಿಯೂ ಕಂಡುಬರುತ್ತದೆ. ಹಾಗೆಯೇ ದಕ್ಷಿಣಾಮೂರ್ತಿ(ಶಿವ)ಶಾರದೆನಾರದರುತುಂಬುರರು ಇತ್ಯಾದಿ ಅನೇಕ ದೇವತೆಗಳೂ, ಋಷಿಗಳೂ ವೀಣಾಪಾಣಿಗಳಾಗಿದ್ದಾರೆ. ಕ್ರಮವಾಗಿ ಅವರ ವೀಣೆಗಳನ್ನು ರುದ್ರವೀಣೆಕಚ್ಛಪೀಮಹತೀಮತ್ತು ಕಲಾವತೀ ಎಂದು ಕರೆಯಲಾಗಿದೆ.

ಭಾರತೀಯರು ತಾವು ಬಳಸುತ್ತಿರುವ  ವೀಣೆ ಮುಂತಾದ ವಾದ್ಯಗಳನ್ನೇ ದೇವತೆಗಳಲ್ಲಿ ಕೈಯಲ್ಲಿ ಕೊಟ್ಟುಬಿಟ್ಟಿದ್ದಾರೆ ಎಂದು ಕೆಲವರ ಅಭಿಪ್ರಾಯವಿದೆ. ಆದರೆ ಇದು ಸರಿಯಲ್ಲ. ವಾಸ್ತವಿಕವಾಗಿ ದೇವತೆಗಳ ಹಸ್ತಗಳಲ್ಲಿ ಈ ವೀಣೆಗಳು ಶೋಭಿಸುತ್ತಿರುವುದನ್ನು ಮಹರ್ಷಿಗಳು ತಮ್ಮ ಅಂತರ್ದರ್ಶನದಲ್ಲಿ ಕಂಡರು. ಇಂತಹ ವಾದ್ಯಗಳನ್ನು ಅವರು ಪ್ರಸಾದರೂಪದಲ್ಲಿ ಸ್ವೀಕರಿಸಿದರು. ಅನುರೂಪವಾಗಿ ಈ ವಾದ್ಯಗಳನ್ನುದೈವೀತತ್ವಕ್ಕನುಗುಣವಾಗಿಯೂ, ಭೌತಿಕವಾಗಿಯೂ ತಕ್ಕ ವಿನ್ಯಾಸದಲ್ಲಿ ನಿರ್ಮಿಸಿದರು. ಆದ್ದರಿಂದಲೇ ಆರ್ಷಸಾಹಿತ್ಯಗಳಲ್ಲಿ ಯಾ ದೈವೀವೀಣಾ ತದನುಕೃತಿರಸೌ ಮಾನುಷೀ ವೀಣಾ” ಎಂಬ ಮಾತನ್ನು ನೋಡುತ್ತೇವೆ.
ವೀಣೆಯನ್ನು ಕೇವಲ ಒಂದು ವಾದ್ಯವನ್ನಾಗಿ ಮಾತ್ರ ನೋಡದೆ ಅದನ್ನೇ ಪರಬ್ರಹ್ಮಸ್ವರೂಪ ಎಂಬುದಾಗಿ ಜ್ಞಾನಿಗಳು ಸ್ತುತಿಸಿರುವುದುಂಟು. ಕಾರಣ ಅವು ಪರಬ್ರಹ್ಮನವರೆಗೂ ಯೋಗ್ಯ ಶ್ರಾವಕರನ್ನುಕರೆದೊಯ್ಯಬಲ್ಲುದು. ದೇವತೆಗಳ ಹಸ್ತಕಮಲಗಳಲ್ಲಿ ವಿರಾಜಮಾನವಾಗಿರುವ ವಾದ್ಯಗಳಿಗೆ ಕಾಲವನ್ನು ಹೇಳುವುದು ಸಮಂಜಸವಲ್ಲ. ಅದು ಸೂರ್ಯನ ಪ್ರಕಾಶಕ್ಕೆ ಕಾಲವನ್ನು ಹೇಳಿದಂತೆ ಹಾಸ್ಯಾಸ್ಪದ. ಅವುಗಳು ಚಿರಪುರಾತನವೂ, ನಿತ್ಯನೂತನವೂ ಆಗಿವೆ.

ವೀಣೆಗಳಿಗೆ ಬೇರೆಬೇರೆ ಹೆಸರುಗಳು ಏಕೆಅವುಗಳು ಆಕಾರವ್ಯಾಪ್ತಿಗಳಲ್ಲಿ ಭಿನ್ನವಾಗಿದ್ದುನಮ್ಮ ದೇಹದ ವಿಭಿನ್ನ ದೈವೀಕೇಂದ್ರಗಳ ಮೇಲೆ ಬೇರೆ ಬೇರೆ ರೀತಿಯ ಪ್ರಭಾವಗಳನ್ನು ಬೀರುತ್ತವೆ. ಉದಾಹರಣೆಗೆ ತಾಯಿಯಾದ ಸರಸ್ವತಿಯು ಪ್ರಕೃತಿಮಾತೆ. ಅವಳು ಪರಾಪ್ರಕೃತಿ. ಆಕೆಯದೇ ಇನ್ನೊಂದು ರೂಪವಾಗಿ ಅವಳ ಕರಕಮಲದಲ್ಲಿರುವ ವೀಣೆಯಿದೆ. ಸಾಂಖ್ಯಶಾಸ್ತ್ರದ ಪ್ರಕಾರ ಪ್ರಕೃತಿಮಾತೆಯು 24 ತತ್ವಗಳಿಂದ ಕೂಡಿದ್ದಾಳೆ. ಅದರ ಅನುಕೃತಿಯಾಗಿರುವ ವೀಣೆಯಲ್ಲೂ 24 ಮೆಟ್ಟಿಲುಗಳಿವೆ. ಆಕೆಯ ವೀಣಾವಾದನವನ್ನು ಅಂತರಂಗದಲ್ಲಿ ಆಸ್ವಾದಿಸಿದ ಶ್ರಾವಕನ ಇಂದ್ರಿಯ ಮನೋಬುದ್ಧಿಗಳು ಆಮೆಯಂತೆ(ಕಚ್ಚಪ) ಒಳಮುಖವಾಗಿ ಉಪಸಂಹರಿಸಿಕೊಳ್ಳುತ್ತವೆ. ಹೊರವೀಣೆಯಿಂದಲೂ ಒಳನಾದದ ಧರ್ಮವನ್ನು ಹೊಂದಿರುವ ವೀಣಾನಾದವನ್ನು ಕೇಳಿ ಇಂದ್ರಿಯಕ್ಷೇತ್ರದಲ್ಲಿಯೂ ಆಸ್ವಾದಿಸುತ್ತಾನೆ. ಅತೀಂದ್ರಿಯ ಕ್ಷೇತ್ರಕ್ಕೂ ಹಾರುತ್ತಾನೆ. ಇಲ್ಲಿ ಫಲವು ಯೋಗಭೋಗಗಳೆರಡೂ ಆಗಿದೆ.
 ಅದೇ ರುದ್ರವೀಣೆಯ ನಾದವು ಕೇವಲ ಒಳಮುಖವಾಗಿ ಕರೆದೊಯ್ದು ಯೋಗಸಮಾಧಿಯಲ್ಲಿ ಲೀನಗೊಳಿಸಿ ಮತ್ತೆ ಕೆಳಗೆ ಇಳಿಯದಂತೆ ಕಾಪಾಡಿಕೊಳ್ಳುತ್ತದೆ. ಇಲ್ಲಿ ಫಲವು ಮುಖ್ಯವಾಗಿ ಮೂಲವನ್ನು ಸೇರುವಯೋಗರೂಪವಾದದ್ದು.

ನಮ್ಮ ಬೆನ್ನುಮೂಳೆಯ ಒಳಭಾಗದಲ್ಲಿರುವ ಸುಷುಮ್ನೆಯು ಎಲ್ಲ ಯೋಗರಹಸ್ಯಗಳ ಮೂಲ ನೆಲೆ. ಆ ಸುಷುಮ್ನೆಯನ್ನೇ ಬ್ರಹ್ಮನಾಡಿ, ಜ್ಞಾನನಾಡಿಪೃಷ್ಠವಂಶ ಎಂದೆಲ್ಲ ಕರೆದಿದ್ದಾರೆ. ‘ವೀಣಾದಂಡವೆಂಬ ಹೆಸರೂ ಉಂಟು. ಈ ವೀಣಾದಂಡದ ಒಳಕ್ರಿಯೆಗಳು ಮತ್ತು ಹೊರರಚನೆಗಳನ್ನು ವೀಣೆಯೆಂಬ ವಾದ್ಯದಲ್ಲಿಯೂ ಗಮನಿಸಬಹುದು. ಶಿರಸ್ಸಿನಿಂದ ಕಟಿಯವರೆಗೂ ನಮ್ಮ ದೇಹದ - ವೀಣಾದಂಡದ ರಚನೆಯನ್ನೇ ಹೊರವೀಣೆಯು ಹೋಲುತ್ತದೆ. ಒಳಗಿನ ಏಳು ಯೌಗಿಕ ಚಕ್ರಗಳನ್ನು ವೀಣೆಯಲ್ಲಿನ ಏಳು ತಂತಿಗಳು ಪ್ರತಿನಿದಿಸುತ್ತವೆ. ಇವುಗಳಿಂದಲೇ ನಾದವು ಆವರ್ಭವಿಸುವುದು. ಕುಂಡಲಿನೀ ಶಕ್ತಿಯ ನಿಯಂತ್ರಣದಲ್ಲಿರುವ ಮನಸ್ಸಿನ ಸೂಚಕವಾಗಿ ವೀಣಾದಂಡದಲ್ಲಿ ಒಂದು ನಾಗಪಾಶವಿದೆ. ಹೊರವೀಣಾವಾದ್ಯದಲ್ಲಿಯೂ ತಂತಿಗಳು ಸೇರಿಸಿ ಕಟ್ಟಲ್ಪಟ್ಟಿದ್ದು  ಆ ಗಂಟನ್ನು ನಾಗಪಾಶ’ ಎಂದೇ ಕರೆದಿದ್ದಾರೆ. ಒಳವೀಣಾದಂಡದಲ್ಲಿಆಸೀನಳಾಗಿ ಪರಬ್ರಹ್ಮದ ಆಶಯಕ್ಕೆ ತಕ್ಕಂತೆ ಸೃಷ್ಟಿ-ಸ್ಥಿತಿ-ಲಯಗಳ ದೈವೀನಾದಗಳನ್ನು ತಾಯಿ ಸರಸ್ವತಿಯು ಹೊಮ್ಮಿಸುತ್ತಾಳೆ. ಅದೇ ಸಂವಿಧಾನವು ವೀಣಾವಾದ್ಯದಲ್ಲಿಯೂ ಇದೆ.
ವಾದನ ಮಾಡಲು ಹೆಚ್ಚಿನ ಪರಿಣಿತಿ ಇರಬೇಕಾದ ಇನ್ನೊಂದು ವಾದ್ಯವೆಂದರೆ ಗೋಟುವಾದ್ಯ’. ವಾಸ್ತವಿಕವಾಗಿ ಇದೂ ಒಂದು ವೀಣೆಯ ನಮೂನೆಯೇ. ಆದರೆ ಇದರಲ್ಲಿ ಮೆಟ್ಟಿಲುಗಳಿರುವುದಿಲ್ಲ. ಇದನ್ನು ಧನುರ್ವೀಣಾ ಎಂಬುದಾಗಿಯೂ ಕರೆಯುತ್ತಾರೆ.
ಭಾರತೀಯ ಸಂಗೀತವಿದ್ಯೆಯ ಪ್ರಧಾನ ಉದ್ದೇಶ ಪರಬ್ರಹ್ಮಸಾಕ್ಷಾತ್ಕಾರವೇ ಆಗಿದೆ. ಸಂಗೀತದ ಅಂಗಗಳೇ ಆಗಿರುವ ಗೀತ,ನೃತ್ಯ ಮತ್ತು ವಾದ್ಯಗಳೂ ಅತ್ತಲೇ ಕೈದೋರುತ್ತಿವೆ.  ನಮಃ ಪರಮಋಷಿಭ್ಯಃ

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.