Friday, December 28, 2018

ಕೀರ್ತಿ (Keerthi)
“ಕೀರ್ತಿಯ ಆಸೆಗೆ ಒಳಗಾಗಬೇಡಿ” ಎಂದುತಿಳಿದವರು ಎಚ್ಚರಿಸುವುದನ್ನು ಕೇಳಿದ್ದೇವೆ. “ಕೀರ್ತಿಶಾಲಿಯಾಗಿ ಬಾಳು” ಎಂದುಹಿರಿಯರು ಹರಸುವುದನ್ನೂ ನೋಡಿದ್ದೇವೆ. ದೇವರನ್ನು ಕುರಿತು ಪ್ರಾರ್ಥಿಸುವಾಗ “ನನಗೆಕೀರ್ತಿಯನ್ನು ಕೊಡು” ಎಂದು ಕೇಳುವಮಂತ್ರಗಳಿವೆ. (ಉದಾ: ಸ್ವಸ್ತಿ ಶ್ರದ್ಧಾಂ ಯಶಃ ಪ್ರಜ್ಞಾಮ್ …….ದೇಹಿ ಮೇ ಹವ್ಯವಾಹನ). ಹಾಗಾದರೆ ಕೀರ್ತಿಯು ಬೇಕೋ ಬೇಡವೋಎಂಬ ಪ್ರಶ್ನೆ ಬಾಧಿಸದಿರದು.

ಮನುಷ್ಯನಿಗೆ, ತಾನು-ತನ್ನದು ಎಂಬ ಅಭಿಮಾನ ಕೊನೆಯುಸಿರು ಇರುವವರೆವಿಗೂ ತಪ್ಪಿದ್ದಲ್ಲ. ಇದು ಕೆಲವೊಮ್ಮೆ ಒಳ್ಳೆಯದಕ್ಕೂ ಬೇಕು. ತನ್ನನ್ನುತಾನು ರಕ್ಷಿಸಿಕೊಳ್ಳಬೇಕೆಂದರೆ, “ತಾನು” ಎಂಬ ಅಭಿಮಾನವಿದ್ದರೆ ತಾನೆ ಸಾಧ್ಯ!  ಕೆಲವೊಮ್ಮೆ, ಇತರರು ತನ್ನನ್ನು ಮೆಚ್ಚಲಿ ಎಂಬ ಮನಃಸ್ಥಿತಿ ಕಾಡುವುದುಂಟು. ಆಗಸಮಸ್ಯೆಯ ಆರಂಭ. ಇತರರ ಕಣ್ಣಿನಲ್ಲಿ  ತಾನೊಬ್ಬ ಮಹಾನ್ ವ್ಯಕ್ತಿಯಾಗಿ ಕಾಣಿಸಬೇಕೆಂದು ಹಗಲಿರುಳು ದುಡಿಯುವವರಿದ್ದಾರೆ. ಇಂತಹ ಆಸೆಯಿಂದ ಇತರರಿಗೇನೂ ತೊಂದರೆಯಾಗದಿದ್ದರೆ ಸರಿ. ವೈಯಕ್ತಿಕವಾಗಿ ಸಮಯ, ಶಕ್ತಿಗಳ ವ್ಯಯವಾಗುತ್ತದೆಯಷ್ಟೆ. ಆದರೆ ಕೀರ್ತಿಯಾಸೆಯಿಂದಾಗಿ ಸಮಾಜಘಾತುಕ ಕೆಲಸಗಳಿಗೆ ಕೈ ಹಾಕುವ ಮಟ್ಟಕ್ಕಿಳಿಯುವಂತಾದರೆ ಕಷ್ಟ. ನಮ್ಮಲ್ಲಿರುವ ಯಾವ ಆಸೆಯ ಬೀಜವಾದರೂ ಸರಿ, ಸಣ್ಣ ಗಿಡವಾಗಿ ಉಳಿಯುವುದಿಲ್ಲ. ಹಾಗೆಯೇ, ಕೀರ್ತಿಯಾಸೆಯೂ ಸರಿಯಾದ ಸಂದರ್ಭಒದಗಿದಾಗ ಮಹಾವೃಕ್ಷವಾಗಿ ಬೆಳೆಯುವುದು ಶತಃಸಿದ್ಧ. ಆದ್ದರಿಂದ ಕೀರ್ತಿಯನ್ನು ಅಪೇಕ್ಷಿಸುವಾಗ ಎಚ್ಚರಿಕೆ ಅಗತ್ಯ. ಹೇಗೆ ಧನದಾಹ ಬಂದ ವ್ಯಕ್ತಿಯು, “ಇನ್ನಷ್ಟು ಬೇಕು, ಮತ್ತಷ್ಟು ಬೇಕು” ಎಂದು ಹಂಬಲಿಸುತ್ತಲೇ ಇರುತ್ತಾನೆಯೋ,  ಹಾಗೆಯೇ, ಕೀರ್ತಿಯಾಸೆ ಬಂದ ವ್ಯಕ್ತಿಯು ಚಡಪಡಿಸುತ್ತಿರುತ್ತಾನೆ. ಸಮಾಧಾನವಾಗಿ ಒಂದೆಡೆ ಕುಳಿತುಕೊಳ್ಳುವುದು ಅವನಿಗೆ ದೂರದಮಾತೇ ಸರಿ! ತಮ್ಮ ಅಂತಃಸತ್ತ್ವದ ಮೇಲೆವಿಶ್ವಾಸವಿರುವವರು ಇತರರ ಪ್ರಶಸ್ತಿಪತ್ರಕ್ಕಾಗಿ(certificate) ಕಾಯಬೇಕಾಗಿರುವುದಿಲ್ಲ. ಅವರು ಕೀರ್ತಿಯ ಹಿಂದೆ ಬೀಳುವುದಿಲ್ಲ. ಎಷ್ಟೋ ಜನ ಮಹಾನ್ ಸಾಧಕರು ಎಲೆಮರೆಯ ಕಾಯಿಯಂತೆ ಜೀವನ ಮಾಡಿದ್ದಿದೆ. ವಿಶೇಷವಾಗಿ ನಮ್ಮ ದೇಶದಲ್ಲಿ  ಆಧ್ಯಾತ್ಮಸಾಧಕರನೇಕರು  ಹೀಗೆಜೀವನವನ್ನು ಮಾಡಿದ್ದಾರೆ. ನಮ್ಮ ದೇಶದಲ್ಲಿ ಅತ್ಯಂತ ಅದ್ಭುತವಾದ ಕಾವ್ಯರಚನೆ ಮಾಡಿದ ಎಷ್ಟೋ ಮಹಾಕವಿಗಳು ತಮ್ಮ ಬಗ್ಗೆ ಏನನ್ನೂ ಹೇಳಿಕೊಂಡೇ ಇಲ್ಲ. ಈಗಲೂ ಅಂತಹವರ ವಂಶ, ದೇಶ, ಕಾಲ-ಇತ್ಯಾದಿಗಳಬಗ್ಗೆ ನಿಖರವಾದ ಮಾಹಿತಿಯೇ ಇಲ್ಲ. ಒಳ್ಳೆಯ ವಿಷಯ ಜನಗಳಿಗೆ ತಲುಪಿದರೆ ಸಾಕು ಎಂಬುದಷ್ಟೇ ಅವರ ಉದಾತ್ತವಾದ ಆಶಯವಾಗಿದ್ದಿತು. 

ಮಾನ್ಯ ಡಿ.ವಿ.ಜಿ ಯವರು ತಮ್ಮ“ವನಸುಮದೊಳೆನ್ನ ಜೀವನವುವಿಕಸಿಸುವಂತೆ……”ಎಂಬ ಪದ್ಯದಲ್ಲಿ - ಕಾಡುಹೂವು ಎಲ್ಲೋ ಮರೆಯಾಗಿ ತನ್ನಷ್ಟಕ್ಕೆತಾನು ಸುಗಂಧವನ್ನು ಸೂಸುತ್ತಾ ಇದ್ದುಬಿಡುವಂತೆ ನಮ್ಮ ಮನಃಸ್ಥಿತಿಯೂ ಇರಲಿ ಎಂಬುದನ್ನು ಅತ್ಯಂತ ಹೃದ್ಯವಾಗಿಸೂಚಿಸಿದ್ದಾರೆ.ಧರ್ಮಕಾರ್ಯಗಳನ್ನು ಚೆನ್ನಾಗಿ ಮಾಡಿದಾಗಲೂ ಕೀರ್ತಿಯು ನಮ್ಮನ್ನು ಹಿಂಬಾಲಿಸಬಹುದು. ಕೀರ್ತಿಯು ಬೇಡವೆಂಬುದಕ್ಕಾಗಿ ಧರ್ಮಕಾರ್ಯವನ್ನೂ ಮಾಡಬಾರದು- ಎಂದು ಹೇಳಲಾಗುವುದಿಲ್ಲವಷ್ಟೆ. ಆದ್ದರಿಂದಲೇಹಿರಿಯರು “ಯಶೋವಂತನಾಗು” ಎಂದು ಹರಸುವ ಹಿಂಬದಿಯ ಆಶಯ- ಒಳ್ಳೆಯ ಕೀರ್ತಿಯನ್ನು ಒಬ್ಬ ಹೊಂದುತ್ತಾನೆಂದರೆ ಆತ ಒಳ್ಳೆಯ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾನೆ ಎಂದೇ. ಆದ್ದರಿಂದ, ಒಳ್ಳೆಯ ಕೆಲಸವನ್ನು ಮಾಡುವವನಾಗು ಎಂದೇ ಅರ್ಥ. ವಿಷ್ಣುಸಹಸ್ರನಾಮವು ಭಗವಂತನನ್ನು “ಸತ್ಕೀರ್ತಿಃ” ಎಂದೇ ಕೊಂಡಾಡುತ್ತದೆ.  

ನಮ್ಮ ದೇಶದಲ್ಲಿ ಯಾವುದೇ ಒಳ್ಳೆಯ ಕೆಲಸಮಾಡುವ ಆರಂಭದಲ್ಲಿ “ಈ ಕೆಲಸವು ಭಗವತ್ಪ್ರೀತಿಗಾಗಲಿ” ಎಂದು ಸಂಕಲ್ಪಮಾಡುವ ರೂಢಿಯಿದೆ. ನಮ್ಮ ಕೆಲಸ ಮನುಷ್ಯರನ್ನು  ಮೆಚ್ಚಿಸುವುದಕ್ಕಲ್ಲ; ದೇವರಪ್ರೀತಿಗಾಗಿ ಎಂಬುದು ನಮ್ಮ ಪರಂಪರೆ. ನಮ್ಮ ಕೀರ್ತಿಗಾಗಿ ಹಂಬಲಿಸದೆ, ನಮ್ಮತನವನ್ನು ಬಿಟ್ಟು, ಭಗವಂತನ ಕೆಲಸವನ್ನು ನಾವು ಮಾಡುವಂತಾಗಬೇಕು.

ಆನುಷಂಗಿಕವಾಗಿ ಕೀರ್ತಿ ಬಂದರೆ ಬರಲಿ.ಅದನ್ನೂ ಭಗವಂತನಿಗೊಪ್ಪಿಸಿ ಹಗುರವಾಗಿರುವುದನ್ನು ಅಭ್ಯಾಸಮಾಡೋಣ. ನಿಸ್ವಾರ್ಥವಾಗಿ ಜೀವನನಡೆಸಿದ ಋಷಿಮುನಿಗಳ ಸಂತತಿಯವರೆಂಬ ಕೀರ್ತಿಗೆ ನಾವು ಭಾಜನರಾಗೋಣ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.