ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಈಗಾಗಲೇ ಎಂಭತ್ತಾರು ರಾಜರುಗಳನ್ನು ಆತನು ಕೈದಿಗಳನ್ನಾಗಿ ಮಾಡಿಕೊಂಡಿರುವನು. ಇನ್ನು ಹದಿನಾಲ್ಕು ಮಂದಿಯನ್ನು ಸೇರಿಸಬೇಕಾದುದಷ್ಟೇ ಉಳಿದಿರುವುದು. ಅವರನ್ನು ಬಂದಿಗಳನ್ನಾಗಿಸಿ ಆತನು ತನ್ನ ಕ್ರೂರಕರ್ಮದಲ್ಲಿ ತೊಡಗುತ್ತಾನೆ. (ಸೆರೆಯಾಳುಗಳನ್ನು "ಬಂದಿ"ಯೆನ್ನಬೇಕು, "ಬಂಧಿ"ಯೆಂದಲ್ಲ: ಅಲ್ಲಿರುವುದು ಅಲ್ಪಪ್ರಾಣ, ಮಹಾಪ್ರಾಣವಲ್ಲ. ಅದು ಸಂಸ್ಕೃತಪದ.)
ಜರಾಸಂಧನು ಮಾಡುತ್ತಿರುವ ಈ ಕುಕೃತ್ಯಕ್ಕೆ ಯಾರು ಅಡ್ಡಿಯನ್ನೊಡ್ಡುವರೋ ಅಂತಹವರಿಗೆ ಉಜ್ಜ್ವಲವಾದ ಯಶಸ್ಸು ಪ್ರಾಪ್ತವಾಗುವುದು: ಯಾವನು ಜರಾಸಂಧನನ್ನು ಜಯಿಸುವನೋ ಆತನು ನಿಶ್ಚಯವಾಗಿಯೂ ಸಮ್ರಾಟ್ ಆಗುವುದರಲ್ಲಿ ಸಂಶಯವಿಲ್ಲ" - ಹೀಗೆಂಬುದಾಗಿ ಶ್ರೀಕೃಷ್ಣನು ನುಡಿದನು.
ಆಗ ಯುಧಿಷ್ಠಿರನು ಹೇಳಿದನು:
"ಸಮ್ರಾಟನ ಗುಣವನ್ನು ಹೊಂದುವ ಬಯಕೆ ನನಗುಂಟು; ಹಾಗಿದ್ದು, ಸ್ವಾರ್ಥ-ಪರಾಯಣನಾಗಿ, ಅದು ಹೇಗೆ ತಾನೆ ನಾನು ಜರಾಸಂಧನತ್ತ ನಿಮ್ಮೆಲ್ಲರನ್ನೂ ಕಳುಹಿಸಲಿ? ಅದು ಕೇವಲ ಸಾಹಸವಲ್ಲವೇ? - ಎಂದರೆ ಅವಿವೇಕಿಯ ದುಡುಕಿನಂತಾಗುವುದಿಲ್ಲವೇ?
ಭೀಮ ಮತ್ತು ಅರ್ಜುನ - ಇವರಿಬ್ಬರೂ ನನ್ನ ಕಣ್ಣುಗಳ ಹಾಗೆ; ಜನಾರ್ದನನಂತೂ ನನ್ನ ಮನಸ್ಸೇ ಸರಿ. ಮನಸ್ಸನ್ನೂ ಕಣ್ಣುಗಳನ್ನೂ ಕಳೆದುಕೊಂಡವನ ಜೀವನವಾದರೂ ಹೇಗೆ ತಾನೆ ಆದೀತು?
ಜರಾಸಂಧನ ಸೈನ್ಯವು ದುಷ್ಪಾರ, ಎಂದರೆ ಅದರ ಆಚೆಯ ದಡವನ್ನು ಕಾಣುವುದೇ ಅಸಾಧ್ಯ- ಅಷ್ಟು ದೊಡ್ಡದು. ಹಾಗೂ ಅದು ಭಯಂಕರವಾದ ಪರಾಕ್ರಮವನ್ನು ಹೊಂದಿರುವಂತಹುದು. ಆತನನ್ನು, ಮತ್ತು ಆತನ ಸೇನೆಯನ್ನು, ಯುದ್ಧದಲ್ಲಿ ಯಮನು ಸಹ ಜಯಿಸಲಾರನು. ಇನ್ನು ತಮ್ಮಗಳ ಪ್ರಯತ್ನವು ಅಲ್ಲೇನು ಸಂದೀತು?
ದೊಡ್ಡದಾದ ಈ ಅರ್ಥವನ್ನೇನೋ ಸಾಧಿಸಹೋಗಿ, ಅನರ್ಥಕ್ಕೆ ಈಡುಮಾಡಿಕೊಂಡಂತೆ ಆಗುತ್ತದೆ. ಅದುದರಿಂದ ಈ ಕಾರ್ಯಕ್ಕೆ ಕೈಹಾಕುವುದೇ ಯುಕ್ತವಲ್ಲವೆಂಬುದೇ ನನ್ನ ಮತವಾಗಿದೆ.
ಈ ವಿಷಯದಲ್ಲಿ ಒಂಟಿಯಾಗಿ ವಿಮರ್ಶೆ ಮಾಡಿರುವುದನ್ನು ಹೇಳುವೆ, ಕೇಳು ಜನಾರ್ದನ. ಈ ಕಾರ್ಯದ ಸಂನ್ಯಾಸವನ್ನೇ, ಎಂದರೆ ತೊರೆಯುವಿಕೆಯನ್ನೇ, ನಾನು ಇಷ್ಟಪಡುವೆ. ರಾಜಸೂಯವೆಂಬುದು ದುರಾಹರ, ಎಂದರೆ ಸಾಧಿಸಿತಂದುಕೊಳ್ಳಲು ಮಹಾಕಷ್ಟವಾಗತಕ್ಕದ್ದು. ಆದುದರಿಂದ ಇದು ನನ್ನ ಮನಸ್ಸಿಗೆ ಪ್ರತಿಘಾತವನ್ನೇ ಮಾಡುತ್ತಿದೆ." ಎಂದನು.
ಯುಧಿಷ್ಠಿರನ ಮಾತು ಮುಗಿಯುತ್ತಿದ್ದಂತೆಯೇ, ಅರ್ಜುನನು ಮಾತನಾಡಿದನು. ಆತನೋ, ಶ್ರೇಷ್ಠವಾದ ಬಿಲ್ಲನ್ನೂ, ಎಂದರೆ ಗಾಂಡೀವವನ್ನೂ, ಅಕ್ಷಯವಾದ ತೂಣೀರ(ಬತ್ತಳಿಕೆ)ವನ್ನೂ, ದಿವ್ಯವಾದ ರಥ-ಧ್ವಜ-ಸಭೆಗಳನ್ನೂ ಹೊಂದಿದ್ದವನು. ಅಂತಹವನು ಯುಧಿಷ್ಠಿರನನ್ನು ಕುರಿತು ಹೀಗೆ ನುಡಿದನು.
ಅರ್ಜುನನು ಹೇಳಿದನು:
"(ಗಾಂಡೀವ)ಧನುಸ್ಸು, ವಿಶೇಷವಾದ ಶಸ್ತ್ರ-ಬಾಣಗಳು, ಜೊತೆಗಾರರಾದ ಅರಸರು, ಭೂಮಿ, ಯಶಸ್ಸು ಹಾಗೂ ಬಲ - ಇವೆಲ್ಲವೂ ಅಭೀಪ್ಸಿತವಾದವು, ಎಂದರೆ ಬಯಸುವಂತಹವು, ಆದರೆ ಅವು ದುಷ್ಪ್ರಾಪ, ಎಂದರೆ ಹೊಂದಲು ಸುಲಭವಾದವುಗಳಲ್ಲ. ಆದರೆ ಅವೆಲ್ಲವನ್ನೂ ನಾನು ಸಂಪಾದಿಸಿದ್ದೇನೆ.
ಅನುಭವಸಂಪನ್ನರಾದ ವಿದ್ವಾಂಸರು ಸತ್ಕುಲದಲ್ಲಿ ಜನಿಸುವುದನ್ನು ಪ್ರಶಂಸಿಸುತ್ತಾರೆ. ಆದರೆ ಬಲಕ್ಕೆ ಸಮಾನವಾದುದು ಯಾವುದೂ ಇಲ್ಲ. ನನಗೆ ಮೆಚ್ಚುಗೆಯಾಗುವುದು ಪರಾಕ್ರಮವೇ. ಕೃತವೀರ್ಯರಾಜನ ವಂಶದಲ್ಲಿ ಹುಟ್ಟಿಯೂ ಯಾವನು ಬಲಹೀನನೋ ಅಂತಹವನು ಏನನ್ನು ತಾನೆ ಸಾಧಿಸಿಯಾನು? ನಿರ್ವೀರ್ಯವಾದ ಕುಲದಲ್ಲಿ ಜನಿಸಿಯೂ ಯಾವನು ಪರಾಕ್ರಮಿಯಾಗಿರುತ್ತಾನೋ, ಅವನಲ್ಲೇ ವಿಶೇಷವಿರುವುದು.
ಶತ್ರುಜಯದಲ್ಲಿ ಯಾವನಿಗೆ ಸಹಜಪ್ರವೃತ್ತಿಯಿರುವುದೋ ಆತನೇ ಸರ್ವರೀತಿಯಲ್ಲೂ ಕ್ಷತ್ರಿಯನೆನಿಸುವುದು. ಬೇರೆ ಗುಣಗಳು ಯಾವುದೇ ಇಲ್ಲದಿದ್ದರೂ ಪರಾಕ್ರಮಶಾಲಿಯೇ ರಿಪುಗಳನ್ನು ದಮಿಸಲು ಸಮರ್ಥನಾಗುತ್ತಾನೆ. ಸರ್ವಗುಣಗಳಿಂದಲೂ ಕೂಡಿದವನಾಗಿದ್ದರೂ ಪರಾಕ್ರಮರಹಿತನು ಏನನ್ನು ತಾನೆ ಮಾಡಿಯಾನು? ಎಲ್ಲ ಗುಣಗಳೂ ಪರಾಕ್ರಮಕ್ಕೆ ಗುಣಭೂತವಾಗಿ, ಎಂದರೆ ಗೌಣವಾಗಿ, ನಿಲ್ಲತಕ್ಕವು" - ಎಂದನು.