ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ತಾರ್ಕಿಕವಾಗಿ ಮಾತನಾಡುವಾಗ, ಆಡುವ ಮಾತಿನಲ್ಲಿ ಒಂದು ಕ್ರಮಬದ್ಧತೆಯಿರಬೇಕೆನ್ನುತ್ತದೆ, ತರ್ಕಶಾಸ್ತ್ರ. ಏನದು? ವಾಕ್ಯದಲ್ಲಿ ಐದು ಅವಯವಗಳಿರಬೇಕೆಂಬ ಕ್ರಮ.
ಆ ಐದು ಇವು: "ನಾನು ಹೇಳುವುದಿದು" – ಎಂಬ ಮಾತಿಗೆ ಪ್ರತಿಜ್ಞೆಯೆಂಬ ಹೆಸರಿದೆ. ಅದಕ್ಕೆ ಸಮ್ಮತಿ ಬರುವಂತೆ ಕೊಡತಕ್ಕ ಕಾರಣವೇ ಹೇತು. ಅದನ್ನು ಸಮರ್ಥಿಸಿಕೊಳ್ಳಲು ಕೊಡುವ ನಿದರ್ಶನವೇ ಉದಾಹರಣ. ಕಾರ್ಯ-ಕಾರಣ-ಸಂಬಂಧವನ್ನು ಹೇಳುವ ಮಾತೇ ವ್ಯಾಪ್ತಿ. ಉಪಸಂಹಾರದ ನುಡಿಯೇ ನಿಗಮನ. ಈ ಐದೇ, ಎಂದರೆ ಪ್ರತಿಜ್ಞಾ-ಹೇತು-ಉದಾಹರಣ-ನಿಗಮನಗಳೇ, ಪಂಚಾವಯವಗಳು.
ಈ ರೀತಿಯ ಪಂಚಾವಯವ-ವಾಕ್ಯಗಳಲ್ಲಿಯ ಗುಣ-ದೋಷಗಳನ್ನು ಬಲ್ಲವರು, ನಾರದರು. ಅಲ್ಲದೆ, ಬೃಹಸ್ಪತಿಯೇ ಮಾತನಾಡುತ್ತಿದ್ದರೂ ಉತ್ತರೋತ್ತರ ಮಾತನಾಡಬಲ್ಲವರು (ಎಂದರೆ ಅವರ ಉಕ್ತಿಗಳಿಗೂ ಪ್ರತ್ಯುಕ್ತಿಗಳನ್ನು ಹೇಳಲು ಸಮರ್ಥರು), ಅವರು.
ಇಷ್ಟೇ ಅಲ್ಲದೆ, ಧರ್ಮ-ಅರ್ಥ-ಕಾಮ-ಮೋಕ್ಷ - ಇವುಗಳ ಬಗ್ಗೆ ಯಥಾವತ್ತಾಗಿ ನಿರ್ಣಯಗಳಿಗೆ ಬಂದಿರುವವರು. ಈ ಭುವನಕೋಶವನ್ನೆಲ್ಲಾ ಪ್ರತ್ಯಕ್ಷವಾಗಿ ಕಂಡರಿತ ಮಹಾಮತಿಗಳು; ಅಡ್ಡಡ್ಡಲಾಗಿಯೂ ಮೇಲ್ಕೆಳಗೂ ಇರುವ ಲೋಕಗಳ ಪ್ರತ್ಯಕ್ಷದರ್ಶಿಗಳು. ಸಾಂಖ್ಯ-ಯೋಗಗಳ ವಿಭಾಗವನ್ನು ಅರಿತವರು. ಸುರರಲ್ಲಿಯೂ ಅಸುರರಲ್ಲಿಯೂ ನಿರ್ವೇದವನ್ನು- ಎಂದರೆ ವೈರಾಗ್ಯವನ್ನು- ಉಂಟುಮಾಡಲಪೇಕ್ಷಿಸುವವರು
ಸಂಧಿ-ವಿಗ್ರಹಗಳ ತತ್ತ್ವವನ್ನು ಬಲ್ಲವರು. (ಇಬ್ಬರು ರಾಜರಲ್ಲಿ ವಿಮತಿಯುಂಟಾದಾಗ ಯುದ್ಧಮಾಡುವುದು ವಿಗ್ರಹ. ರಾಜಿಮಾಡಿಕೊಳ್ಳುವುದು ಸಂಧಿ. ಇವೆರಡರಲ್ಲೂ ನುರಿತವರವರು). ಅನುಮಾನದ ವಿಭಾಗಗಳನ್ನು ಅರಿತವರು. (ಅನುಮಾನವೆಂದರೆ ಸಂಶಯವೆಂಬ ಅರ್ಥ ಕನ್ನಡದಲ್ಲಿ ಪ್ರಚುರ. ಆದರೆ ಭಾರತೀಯರ ನ್ಯಾಯ-ವೈಶೇಷಿಕಗಳಲ್ಲಿ ತರ್ಕಬದ್ಧವಾಗಿ ನಿರ್ಣಯ ಮಾಡುವುದೆಂಬ ಅರ್ಥವೇ ಪ್ರಸಿದ್ಧವಾದದ್ದು. ಇಲ್ಲಿಯೂ ಅದೇ ಅರ್ಥವೇ.)
ಹಾಗೆಯೇ ಅವರು ಷಾಡ್ಗುಣ್ಯ-ವಿಧಿಯ ಪ್ರಯೋಗದಲ್ಲಿ ಸಮರ್ಥರು. (ರಾಜ್ಯ-ರಕ್ಷಣೆಗೆ ಷಾಡ್ಗುಣ್ಯವು ಬೇಕಾಗುತ್ತದೆ. ಸಂಧಿ-ವಿಗ್ರಹಗಳು ಬಹುಮುಖ್ಯವೆಂದು ಅವನ್ನೇ ಮೊದಲು ಹೇಳಿದ್ದಾಗಿದೆ. ಅವೆರಡಲ್ಲದೆ, ಯಾನ-ಆಸನ-ದ್ವೈಧೀಭಾವ-ಸಮಾಶ್ರಯಗಳೆಂಬ ನಾಲ್ಕು ಸೇರಿದರೆ ಷಾಡ್ಗುಣ್ಯ. ರಾಜನೀತ್ಯ ಪಾರಿಭಾಷಿಕ-ಪದಗಳು ಇವು). ಅವರು ಸರ್ವ-ಶಾಸ್ತ್ರ-ವಿಶಾರದರು. ಯುದ್ಧದ ವಿಷಯವಾಗಲಿ, ಗಾಂಧರ್ವದ – ಎಂದರೆ ಸಂಗೀತಶಾಸ್ತ್ರದ – ವಿಷಯವಾಗಲಿ, ಅವುಗಳಲ್ಲಿ ಸಮುತ್ಸುಕರೂ ಎಲ್ಲೆಡೆ ಅಪ್ರತಿಹತವಾದ ಸಂಚಾರವುಳ್ಳವರೂ ಆಗಿರತಕ್ಕವರು. ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಗುಣಗಣಗಳಿಂದಲೇ ಅವರು ಕೂಡಿರತಕ್ಕವರು, ನಾರದರು.
ಹಾಗಿರುವ ನಾರದರು ನಾನಾಲೋಕಗಳನ್ನು ಸಂಚಾರಮಾಡುತ್ತಾ, ಯುಧಿಷ್ಠಿರನ ಆ ಸಭೆಗೂ ಈಗ ಬಂದರು. ಮಹಾತೇಜಸ್ವಿಗಳಾದ ಆ ದೇವರ್ಷಿ ನಾರದರು ಅಲ್ಲಿಯ ಋಷಿಗಳೊಂದಿಗೆ ಸೇರಲೆಂದು ಅಲ್ಲಿಗೆ ಆಗಮಿಸಿದರು. ಧೀಮಂತನಾದ ಸೌಮ್ಯನೆಂಬ ಋಷಿ, ಹಾಗೆಯೇ ಸುಮುಖ, ಪಾರಿಜಾತರೆಂಬ ಋಷಿಗಳು, ಇನ್ನೂ ಹಲವು ಋಷಿಗಳೆಲ್ಲ ಇದ್ದರೆಂಬ ಕಾರಣಕ್ಕೆ, ಮಹಾದ್ಯುತಿಗಳಾದ ನಾರದರು ಅಲ್ಲಿಗೆ ಬಂದದ್ದು. ಮನೋವೇಗದಲ್ಲಿ ಚಲಿಸುವ ಆ ನಾರದರು ಸಭೆಯಲ್ಲಿದ್ದ ಪಾಂಡವರನ್ನು ಕಾಣಲೆಂದೇ ಆಗಮಿಸಿದುದು.
ಬಂದವರೇ, ಜಯವನ್ನು ಅನುಗ್ರಹಿಸುವ ಆಶೀರ್ವಾದ ಮಂತ್ರಗಳೊಂದಿಗೆ ಧರ್ಮರಾಜನನ್ನು ಅನುಗ್ರಹಿಸಿದರು.
ಬಂದ ನಾರದ ಮಹರ್ಷಿಗಳನ್ನು ಕಂಡ ಧರ್ಮಜ್ಞನಾದ ಯುಧಿಷ್ಠಿರನಾದರೂ, ತನ್ನ ತಮ್ಮಂದಿರೊಡಗೂಡಿ ಅವರನ್ನು ಎದುರ್ಗೊಂಡನು. ವಿನಯದಿಂದ ಬಗ್ಗಿದವನಾಗಿ ಪ್ರೀತಿಯಿಂದ ಅವರಿಗೆ ಅಭಿವಾದನವನ್ನು ಮಾಡಿದನು. ಆ ನಾರದರಿಗೆ ವಿಧ್ಯನುಸಾರ ಯೋಗ್ಯವಾದ ಆಸನವನ್ನಿತ್ತನು. ಗೋವನ್ನೂ ಮಧುಪರ್ಕವನ್ನೂ ಸಲ್ಲಿಸಿದನು. ಅರ್ಘ್ಯವನ್ನಿತ್ತು ರತ್ನಗಳೊಂದಿಗೆ ಅವರನ್ನು ಆದರಿಸಿದನು. ಅವರ ಎಲ್ಲ ಅಪೇಕ್ಷೆಗಳನ್ನೂ ಪೂರೈಸಿದನು.
ಸೂಚನೆ : 20/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.