Wednesday, October 30, 2019

ದೀಪಾವಳಿ (Deepavali)

ಲೇಖಕರು : ವಿದ್ವಾನ್ ಶ್ರೀಯುತ ನರಸಿಂಹ ಭಟ್ಟ
ಹಬ್ಬಕ್ಕೊಂದು ಹಿನ್ನೆಲೆ

ದೀಪಾವಳಿ ಹಬ್ಬವು ಹಬ್ಬಗಳಿಗೆಲ್ಲಾ ರಾಜ. ಎಲ್ಲರಲ್ಲೂ ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂತೋಷ, ಸಡಗರ, ಸಂಭ್ರಮ ಆವರಿಸುತ್ತದೆ. ಅದರಲ್ಲೂ ನೂತನ ದಂಪತಿಗಳಿಗೆ ಹೆಚ್ಚಿನ ಆದ್ಯತೆ. ಮದುವೆ ಮಾಡಿಕೊಟ್ಟ ಮಗಳನ್ನು ತಂದೆಯ ಮನೆಗೆ ಕರೆಸಿಕೊಳ್ಳುವ ರಸಮಯ ಕಾಲ. ಮಗಳಿಗೂ ಅಷ್ಟೇ. ತವರು ಮನೆಗೆ ಹೋಗಬೇಕು, ತಂದೆತಾಯಿ ಬಂಧುಬಾಂಧವರಿಂದ ಒಡಗೂಡಿ ಹಬ್ಬವನ್ನು ಆಚರಿಸಬೇಕು, ಮೈಗೆಲ್ಲ ಎಣ್ಣೆ ಅರಿಶಿನವನ್ನು ಹಚ್ಚಿಸಿಕೊಂಡು ಅಭ್ಯಂಗಸ್ನಾನ ಮಾಡಿಸಿಕೊಳ್ಳಬೇಕು. ಹಿರಿಯರಿಂದ ಆರತಿ ಎತ್ತಿಸಿಕೊಂಡು ಉಡುಗೊರೆಯನ್ನು ಪಡೆದು ಹೊಸ ವಸ್ತ್ರವನ್ನು ಧರಿಸಿ ಸಂಭ್ರಮಿಸಬೇಕು. ವಿವಿಧ ಬಗೆಯ ತಿಂಡಿತಿನಿಸುಗಳನ್ನು ತಿನ್ನಬೇಕು ಹೀಗೆಲ್ಲ ಹೊಸದಾಗಿ ವಿವಾಹಿತರಾದವರಿಗಂತೂ ಈ ಹಬ್ಬ ಬಂತೆಂದರೆ ಅದೆಷ್ಟು ಸಂತೋಷ.! ಇನ್ನು ಮಕ್ಕಳಿಗೂ ಅತಿ ಉತ್ಸಾಹವನ್ನು ಕೊಡುವ ಹಬ್ಬ. ಪಟಾಕಿ ಸುರಕಡ್ಡಿ ಸುದರ್ಶನಚಕ್ರ ಹೀಗೆ ಹತ್ತುಹಲವು ಬಗೆಯ ಶಬ್ದದ ವೈವಿಧ್ಯ ಹತ್ತುಹಲವು ಬಗೆಯ ಬೆಳಕಿನ ಕಿಡಿಯಾಟ. ದೀಪಾವಳಿ ಹಬ್ಬ ಯಾವಾಗ ಬರುತ್ತದೆ ಎಂದು ವರ್ಷದಿಂದ ಕಾಯುತ್ತಿರುವ ಮಕ್ಕಳಿಗೆ ದೀಪಾವಳಿ ಬಂದೇಬಿಟ್ಟಿತು ಎಂಬ ಸಂಭ್ರಮ. ಇನ್ನು ವಯಸ್ಸಾದ ಅಜ್ಜ ಅಜ್ಜಿಯಂದಿರಿಗೆ ಮನೆಯಲ್ಲಿ ನಡೆಯುವ ಈ ಗೌಜು ಗದ್ದಲ ಸಡಗರವನ್ನು ಕಣ್ತುಂಬಿಸಿಕೊಳ್ಳುವ ಆಸೆ. ಆದರೆ ಯಜಮಾನನಿಗೆ ಈ ಹಬ್ಬ ಬಂತೆಂದರೆ ಇಬ್ಬಗೆ. ಒಂದು ಕಡೆ ಮಕ್ಕಳ ಆಟೋಟ ಹಿರಿಯರ ಸಂತೋಷ ಸಿಹಿತಿಂಡಿಗನ್ನು ಸವಿಯುವ ಮನಸ್ಸು. ಇನ್ನೊಂದು ಕಡೆ ಆರ್ಥಿಕಮುಗ್ಗಟ್ಟು. ಹೊಸ ಬಟ್ಟೆ ಮಕ್ಕಳಿಗೆ ಪಟಾಕಿ ಮನೆಗೆ ಸಾಮಾನು ಹೀಗೆ ಮನೆಯನ್ನು ತುಂಬಿಸಿ ಜೇಬು ಖಾಲಿಯಾಯಿತಲ್ಲ! ಮುಂದಿನ ತಿಂಗಳಿನಲ್ಲಿ ಮನೆಯನ್ನು ಸರಿದೂಗಿಸುವುದು ಹೇಗೆಂಬ ಚಿಂತೆ ಇನ್ನೊಂದು ಕಡೆ. ಅದೇನೆ ಇರಲಿ ಇಂದು ನಾವು ಆಚರಿಸುವ ಹಬ್ಬವು ಕೇವಲ ಇಂದ್ರಿಯತೃಪ್ತಿಗಷ್ಟೇ ಸೀಮಿತವಾಗಿದೆ. ಆದರೆ ನಮ್ಮ ಋಷಿಪರಂಪರೆ ಕೊಟ್ಟ ಹಬ್ಬದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ಅಂತೆಯೆ ಆಚರಿಸಿದಾಗ ಅದು ಅತ್ಮಕ್ಕೂ ತೃಪ್ತಿಯನ್ನು ಕೊಡಬಲ್ಲದು. “ತನ್ನ ಕಾಲರೂಪವಾದ ಶರೀರದಲ್ಲಿ ಭಗವಂತನು ಗೊತ್ತಾದ ಸ್ಥಾನಗಳಲ್ಲಿ ಜೀವಿಗಳಿಗೆ ಅವುಗಳ ಉದ್ಧಾರಕ್ಕಾಗಿ ಒದಗಿಸಿರುವ ಸೌಲಭ್ಯಗಳು ಪರ್ವಗಳು. ಆನುಗ್ರಹದ ಉಪಯೋಗವನ್ನು ಕಳೆದುಕೊಳ್ಳಬಾರದು”  ಎಂದು ಶ್ರೀರಂಗಮಹಾಗುರುಗಳು ಅಪ್ಪಣೆ ಕೊಡಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಂಡು ಆ ಬಗ್ಗೆ ಗಮನ ಹರಿಸುವುದು ಅತ್ಯಂತ ಅವಶ್ಯವಾಗಿದೆ.


ದೀಪಾವಳಿ ಹಬ್ಬದ ಮಹತ್ತ್ವವೇನು?  

ಇದನ್ನು ಸಾಮಾನ್ಯವಾಗಿ ಚಾಂದ್ರಮಾನದ ಪ್ರಕಾರ ಆಚರಣೆ ಮಾಡುವ ಅಭ್ಯಾಸ ಬಂದಿದೆ. ಒಟ್ಟು ಆರು ಋತುಗಳಲ್ಲಿ ಒಂದಾದ ಶರದೃತುವಿನಲ್ಲಿ ಆಶ್ವಯುಜ ಮತ್ತು ಕಾರ್ತಿಕ ಎಂಬ ಎರಡು ಮಾಸಗಳು ಬರುತ್ತವೆ. ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಿಂದ ಪ್ರಾರಂಭಿಸಿ ಕಾರ್ತಿಕ ಮಾಸದ ಶುಕ್ಲ ಪ್ರತಿಪತ್ತಿನ ವರೆಗೆ ಮೂರುದಿನಗಳ ಕಾಲವನ್ನು ದೀಪಾವಳಿ ಎಂದು ಆಚರಿಸಲಾಗುತ್ತಿದೆ. ಇನ್ನು ಕೆಲವರು ಸೌರಮಾನದ ಪ್ರಕಾರ ‘ತುಲಾವೃಶ್ಚಿಕಯೋಃ ಶರತ್’ ಎಂಬ ವಾಕ್ಯದಂತೆ ತುಲಾಮಾಸದ ಶುಕ್ಲ ಪಾಡ್ಯದಿಂದ ದರ್ಶದವರೆಗಿನ(ಅಮಾವಾಸ್ಯೆ) ಕಾಲವನ್ನು ಒಂದು ಮಾಸ ಎಂದು ಪರಿಗಣಿಸಿ ಕೃಷ್ಣಪಕ್ಷದ ಚತುರ್ದಶಿಯಿಂದ ಮೂರು ದಿನಗಳನ್ನು  ದೀಪಾವಳಿಯ ಹಬ್ಬವಾಗಿ ಆಚರಿಸುವ ಪದ್ಧತಿ ಇದೆ. ಏನೇ ಇರಲಿ ತುಲಾಮಾಸ ಅಥವಾ ಕಾರ್ತಿಕ ಮಾಸದ ಸಮಯದಲ್ಲಿ ಆಚರಿಸುವ ಈ ಹಬ್ಬವು ಸತ್ಫಲವನ್ನು ಕೊಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಕಾರ್ತಿಕ ಮಾಸದಲ್ಲಿ ಆಚರಣೆ ಮಾಡಲು ಕಾರಣವೇನು? 

ಕಾಲದ ಪ್ರಭಾವ ಈ ಹಬ್ಬಗಳಲ್ಲಿ ಹೇಗೆಲ್ಲ ಇದೆ ಇತ್ಯಾದಿ ವಿಷಯಗಳ ಬಗ್ಗೆ ಶಾಸ್ತ್ರ ಮತ್ತು ಸಂಪ್ರದಾಯಸ್ಥರ ನೋಟವನ್ನು ಒಮ್ಮೆ ಅವಲೋಕಿಸೋಣ.

 ಕಾರ್ತಿಕಸ್ನಾನ ಮತ್ತು ತುಲಾಸ್ನಾನ ಎಂಬ ಎರಡು ವಿಧಿಯೂ ಸಮಂಜಸವಾಗಿದೆ. ದೀಪಾವಳಿ ಎಂದು ದೀಪದ ಹಬ್ಬವನ್ನು ಕಾರ್ತಿಕ ಮಾಸದ ರೀತ್ಯಾ ಅಚರಿಸುವಲ್ಲಿ ಔಚಿತ್ಯವನ್ನು ಕಾಣಬಹುದು. ಯಾವ ಮಾಸದ ಪೂರ್ಣಿಮೆಯಂದು ಕೃತ್ತಿಕಾನಕ್ಷತ್ರವು ಘಟಿಸುವುದೋ ಆ ಮಾಸಕ್ಕೆ ಕಾರ್ತಿಕಮಾಸ ಎಂದು ಕರೆಯುತ್ತಾರೆ. “ಕೃತ್ತಿಕಾನಕ್ಷತ್ರಮಗ್ನಿರ್ದೇವತಾ” ಎಂದು ವೇದವು ಹೇಳುವಂತೆ ಕೃತ್ತಿಕಾನಕ್ಷತ್ರವನ್ನು ಅಗ್ನಿದೇವತಾತ್ಮಕವಾದ ನಕ್ಷತ್ರವೆಂದು ಕರೆಯಲಾಗಿದೆ. ಈ ಮಾಸದಲ್ಲಿ ಎಲ್ಲೆಡೆ ದೀಪವನ್ನು ಬೆಳಗಿಸುವುದು ಲಕ್ಷದೀಪೋತ್ಸವ, ವಿಷ್ಣುದೀಪೋತ್ಸವ, ಶಿವದೀಪೋತ್ಸವ ಎಂದೆಲ್ಲ ದೀಪವನ್ನೇ ಪ್ರಧಾನವಾಗಿ ಆರಾಧಿಸುವ ಕ್ರಮ ಬಂದಿರುವುದು ಇಲ್ಲಿನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಯಾವುದೇ ಬಗೆಯಲ್ಲಿ ದೀಪವನ್ನು ಆರಾಧಿಸಿದರೂ ಅದು ದೀಪರೂಪೀ ಪರಮಾತ್ಮನ ಆರಾಧನೆಯಾಗಿ ಪರ್ಯವಸಾನವಾಗುತ್ತದೆ.  
ದೀಪಾವಳಿಮಹೋತ್ಸವವು ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ಬಲಿಪಾಡ್ಯಮೀ, ನರಕಚತುರ್ದಶೀ, ವೀರಪ್ರತಿಪದಾ, ಭಗಿನಿದ್ವಿತೀಯಾ, ಸೋದರಬಿದಿಗೆ ಇತ್ಯಾದಿ ನಾಮಗಳಿಂದ ಪ್ರಸಿದ್ಧವಾಗಿದೆ. ಇದು ಕೇವಲ ವೈದಿಕಸಂಪ್ರದಾಯದಲ್ಲಿ ಮಾತ್ರವಲ್ಲ ಬೌದ್ಧ ಜೈನ ಸಂಪ್ರದಾಯದಲ್ಲೂ ಆಚರಿಸುವ ರೂಢಿಯಿದೆ. ಅಲ್ಲದೇ ಈ ಹಬ್ಬವೂ ಕೇವಲ ಕರ್ಣಾಟಕದಲ್ಲಿ ಮಾತ್ರವಲ್ಲ ತಮಿಳುನಾಡು ಆಂಧ್ರ, ಮಹಾರಾಷ್ಟ್ರ ಹೀಗೆ ಭಾರತದ ಪ್ರತಿಯೊಂದು ಭಾಗದಲ್ಲೂ ಅತ್ಯಂತ ವಿಜೃಂಭಣೆಯಿಂದ ಆಚರಿಸುವಂತಹದ್ದಾಗಿದೆ.

ಗೋಪೂಜಾ- ವಿಶೇಷತೆ

“ಪ್ರತಿಪದ್ದರ್ಶಸಂಯೋಗೇ ಕ್ರೀಡನಂ ತು ಗವಾಂ ಮತಮ್” (ನಿರ್ಣಯಾಮೃತ). ಈ ದಿನ ಗೋವುಗಳನ್ನು ಸ್ನಾನ ಮಾಡಿಸಿ ಅಲಂಕಾರ ಮಾಡಿ “ ಲಕ್ಷ್ಮೀರ್ಯಾ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ | ಘೃತಂ ವಹತಿ ಯಜ್ಞಾರ್ಥೇ ಮಮ ಪಾಪಂ ವ್ಯಪೋಹತು” ಎಂಬ ಮಂತ್ರದಿಂದ ಪೂಜಿಸಿ ಅವುಗಳಿಗೆ ತೃಪ್ತಿಯಾಗುವಷ್ಟು ಗ್ರಾಸವನ್ನು  ನೀಡಬೇಕು. ಗೋವರ್ಧನಪರ್ವತವನ್ನು “ಗೋವರ್ಧನ ಧರಾಧಾರ ಗೋಕುಲತ್ರಾಣಕಾರಣ | ಬಹುಬಾಹುಕೃತಚ್ಛಾಯ ಗವಾಂ ಕೋಟಿಪ್ರದೋ ಭವ” ಎಂಬ ಮಂತ್ರದಿಂದ ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಆರಾಧಿಸಬೇಕು. ಗೋವರ್ಧನಕ್ಕೆ ಹೋಗಲಾಗದಿದ್ದರೆ ಪರ್ವತದ ಚಿತ್ರವನ್ನಾಗಲಿ, ವಿಗ್ರಹವನ್ನಾಗಲಿ ಅಥವಾ ಸಗಣಿಯಿಂದಾಗಲಿ ಅನ್ನದಿಂದಾಗಲಿ ಪರ್ವತವನ್ನು ಮಾಡಿ ಪೂಜಿಸಿ ಅನ್ನಸಂತರ್ಪಣೆ ಮಾಡಬೇಕು. ಈ ದಿನ ಮಧ್ಯಾಹ್ನ ಹಸುಗಳನ್ನು ರಾಸುಗಳನ್ನು ಮೈದಾನಕ್ಕೆ ಕರೆದೊಯ್ದು ಅವುಗಳನ್ನು ಓಡಿಸಿ ಆಟವಾಡುವ ಪದ್ಧತಿಯಿದೆ. ಅಲ್ಲದೆ ರಾತ್ರಿಯಲ್ಲಿ ಅವುಗಳಿಗೆ ‘ಕಿಚ್ಚಾಯಿಸಿ’ ಅವುಗಳಿಗಿರುವ ದೃಷ್ಟಿದೋಷವನ್ನು ತೆಗೆಯುವ ಪದ್ಧತಿಯೂ ಇದೆ. ಈ ದಿನ ಗೋಪಾಲಕೃಷ್ಣನು ಗೋವರ್ಧನ ಪರ್ವತವನ್ನು ಕನಿಷ್ಠಾಗ್ರದಿಂದ ಎತ್ತಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಿ ಇಂದ್ರನ ಗರ್ವಭಂಗ ಮಾಡಿದ ಎಂಬ ಪುರಾಣ ಕಥೆ ಈ ಹಬ್ಬಕ್ಕಿದೆ. ಇದರ ನೆನಪಿಗಾಗಿ ಗೋವನ್ನೂ ಇಂದು ವಿಶೇಷವಾಗಿ ಪೂಜಿಸುವ ಸಂಪ್ರದಾಯ ಬಂದಿದೆ.

ದೀಪವನ್ನು ಆರಾಧಿಸುವ ವಿಶೇಷತೆ  

ನರಕ ಚತುರ್ದಶಿಯಿಂದ ಆರಂಭಿಸಿ ಕಾರ್ತಿಕಮಾಸದ ಪರ್ಯಂತ ಎಲ್ಲೆಲ್ಲೂ ದೀಪಗಳನ್ನು ಲಕ್ಶಲಕ್ಷಸಂಖ್ಯೆಯಲ್ಲಿ ಬೆಳಗಿಸುವುದು ಪದ್ಧತಿ. ದೀಪವು ಭಗವಂತನ ಪ್ರತೀಕ. ದೀಪದ ಜ್ವಾಲೆ ಭಗವಂತನ ವರ್ಣವನ್ನು ಹೋಲುತ್ತದೆ. ತಿಲತೈಲ ಅಥವಾ ತುಪ್ಪದ ದೀಪವನ್ನು ಬೆಳಗಿಸಬೇಕು. ಏಕೆಂದರೆ ಈ ದೀಪದಿಂದ ಬರುವ ಬೆಳಕು ಮಾತ್ರ ಭಗವಂತನ ಬಣ್ಣವನ್ನು ಬಹುವಾಗಿ ನೆನಪಿಸುವಂತಹದ್ದು. ವಿಷ್ಣುದೀಪೋತ್ಸವ, ಶಿವದೀಪೋತ್ಸವ, ಕಾರ್ತಿಕಸೋಮವಾರ, ಲಕ್ಷದೀಪೋತ್ಸವ, ಆಕಾಶದೀಪ ಹೀಗೆ ಪ್ರತಿನಿತ್ಯವೂ ದೀಪವನ್ನು ಆರಾಧಿಸುವ ವಿಶೇಷವಾದ ಹಬ್ಬವೇ ದೀಪಾವಳಿ.
ಹೀಗೆ ಭಗವಂತವನನ್ನು ಬೇರೆಬೇರೆ ರೂಪದಲ್ಲಿ ಆರಾಧಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ನಮ್ಮ ಆರ್ಯಭಾರತೀಯ ಮಹರ್ಷಿಗಳು ಕಂಡು ಅರುಹಿದ ಪವಿತ್ರ ಕಾಲ. ಇದನ್ನು ಸದುಪಯೋಗ ಪಡಿಸಿಕೊಂಡರೆ ನಾವು ಧನ್ಯರು. ಇಲ್ಲದಿದ್ದರೆ ನಮ್ಮಂತಹ ನತದೃಷ್ಟರು ಇರಲಾರರು.     

ಪ್ರಾತಃಸ್ನಾನ – ಅಭ್ಯಂಗದ ಮಹತ್ತ್ವ

ಕಾರ್ತಿಕ ಮಾಸದ ಪ್ರಾತಃಕಾಲದಲ್ಲಿ  ಮಾಡುವ ಅಭ್ಯಂಗಸ್ನಾನ ಅತ್ಯಂತ ಶ್ರೇಷ್ಠ ಎನ್ನಲಾಗಿದೆ. ಅಥವಾ ತುಲಾಸ್ನಾನ ಎಂದೇ ಪ್ರಸಿದ್ಧವಾದ ನದಿಸಮುದ್ರಗಳಲ್ಲಿ ಮಾಡುವ ಸ್ನಾನವೂ ಮಹಾಪಾತಕನಾಶ ಮಾಡುತ್ತದೆ ಎಂದು ಅದರ ಮಹತ್ತ್ವವನ್ನು ಸಾರಲಾಗಿದೆ. ಆಶ್ವಯುಜ ಮಾಸದ ಶುಕ್ಲಪಕ್ಷದ ಏಕಾದಶಿಯಿಂದ ಪ್ರಾರಂಭಿಸಿ ಕಾರ್ತಿಕಮಾಸದ ಪೂರ್ತಿ ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗವು ವಿಶೇಷಫಲದಾಯಕವಾಗಿದೆ ಎಂದು ಭಾರ್ಗವವಚನವಿದೆ. “ ಕಾರ್ತಿಕೇಽಹಂ ಕರಿಷ್ಯಾಮಿ ಪ್ರಾತಃಸ್ನಾನಂ ಜನಾರ್ದನ!| ಪ್ರೀತ್ಯರ್ಥಂ ತವ ದೇವೇಶ! ದಾಮೋದರ! ಮಯಾ ಸಹ”” ಎಂದು ಹೇಳುತ್ತಾ ಸ್ನಾನವನ್ನು ಮಾಡಬೇಕು. ಹತ್ತುಸಾವಿರ ಗೋವುಗಳ ದಾನದಿಂದ ಬರುವಷ್ಟು ಫಲ ಈ ಸ್ನಾನಕ್ಕೆ. ಯಾರು ಜಿತೇಂದ್ರಿಯನಾಗಿ ಪ್ರತಿನಿತ್ಯ ಅಭ್ಯಂಗ ಅಥವಾ ತೀರ್ಥಸ್ನಾನಮಾಡುತ್ತಾರೋ ಮತ್ತು ಶಾಂತನಾಗಿ ಜಪಧ್ಯಾನಗಳಲ್ಲಿ ಮುಳುಗಿ ಯಜ್ಞಪ್ರಸಾದರೂಪವಾದ ಹವಿಷ್ಯಾನ್ನವನ್ನು ಸ್ವೀಕರಿಸುತ್ತಾರೋ ಅಂತವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ಮಾತೂ ಇದೆ. ಈ ಕಾಲದಲ್ಲಿ ಕುರುಕ್ಷೇತ್ರ, ಗಂಗಾನದೀ, ಪುಷ್ಕರ, ದ್ವಾರವತೀ, ಮಥುರಾ ಹೀಗೆ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಸ್ನಾನವು ಬೇಡಿದ ಫಲವನ್ನು ನೀಡುತ್ತದೆ ಎಂಬಷ್ಟರ ಮಟ್ಟಿಗೆ ಪುರಸ್ಕರಿಸಲಾಗಿದೆ. ಇದನ್ನು ಸನ್ಯಾಸಿಗಳೂ ಮಾಡಬೇಕು ಎನ್ನಲಾಗಿದೆ.

ನರಕಚತುರ್ದಶೀ  ವಿಶೇಷತೆ  

ಈ ದಿನ ಬೆಳಗಿನ ಜಾವ ಎದ್ದು  ತಿಲತೈಲದಿಂದ ಅಭ್ಯಂಗಸ್ನಾನ ಮಾಡಬೇಕು. ಇದು ನರಕಭೀತಿಯನ್ನು ದೂರಮಾಡುತ್ತದೆ. ತೈಲದಲ್ಲಿ ಲಕ್ಷ್ಮಿಯು, ಜಲದಲ್ಲಿ ಗಂಗೆಯು ಈ ದಿನ ವಿಶೇಷಸಾನ್ನಿಧ್ಯವನ್ನು ವಹಿಸುವುದರಿಂದ ಈ ದಿನದಲ್ಲಿ ಮಾಡುವ ಸ್ನಾನದಿಂದ ಯಮಲೋಕದ ದರ್ಶನವೂ ಉಂಟಾಗದು ಎಂದು ಪದ್ಮಪುರಾಣದಲ್ಲಿ ಉಲ್ಲೇಖವಿದೆ. ಇದಕ್ಕೊಂದು ಪುರಾಣಕಥೆಯನ್ನೂ ಹೇಳುವುದುಂಟು. ನರಕಾಸುರನು ಹದಿನಾರುಸಾವಿರ ಸ್ತ್ರೀಯರನ್ನು ಬಲಾತ್ಕಾರವಾಗಿ ತನ್ನ  ಸೆರೆಮನೆಯಲ್ಲಿ ಇರಿಸಿಕೊಂಡ. ಈತನ ಉಪಟಳ ಹೆಚ್ಚಾಗಿತ್ತು. ಶ್ರೀಕೃಷ್ಣನು ಅಸುರನನ್ನು ಸಂಹಾರ ಮಾಡಿ ಬಂಧಿತರಾದ ಆ ಸ್ತ್ರೀಯರನ್ನು ಬಿಡುಗಡೆಗೊಳಿಸಿ ಅವರಲ್ಲಿ ಆತ್ಮರತಿಯನ್ನು ಉಂಟುಮಾಡುವಂತೆ ಮಾಡಿದ. ನರಕಾಸುರನ ತಾಯಿಯ ಪ್ರಾರ್ಥನೆಯನ್ನು ಒಪ್ಪಿ ಅಂದಿನಿಂದ ಈ ದಿನವನ್ನು ನರಕಚತುರ್ದಶಿಯೆಂದು ಆಚರಿಸಲಾಗುವುದು ಎಂದು ಭಗವಂತ ಲೋಕಕ್ಕೆ ಅನುಗ್ರಹಿಸಿದ ಪರ್ವಕಾಲ. ಪುರಾಣಕಥೆ ಏನೇ ಇರಲಿ. ಇಲ್ಲೊಂದು ತಾತ್ತ್ವಿಕವಾದ ಅಂಶವೊಂದಿದೆ. ಶ್ರೀಶ್ರೀರಂಗಪ್ರಿಯಸ್ವಾಮಿಗಳು ತಮ್ಮ ‘ಭಾರತೀಯರ ಹಬ್ಬಹರಿದಿನಗಳು’ ಎಂಬ ಪುಸ್ತಕದಲ್ಲಿ ಹೀಗೆ ವಿವರಿಸಿದ್ದಾರೆ. “ಶ್ರೀಕೃಷ್ಣನು ಪ್ರತ್ಯಕ್ ಜ್ಯೋತಿಯಾದ ಭಗವಂತ. ನರಕಾಸುರನು ಹೊರಗಿನ ಬೆಳಕಿನ ಪ್ರತಿರೂಪವಾದ ಪ್ರಾಗ್ಜ್ಯೋತಿಷಪುರದ ರಾಜ. ಹದಿನಾರುಸಾವಿರ ನಾರಿ ಅಂದರೆ ನಾಡಿಗಳು. ಪ್ರಣವಪಕ್ಷಿಯಾದ ಗರುಡನನ್ನು ಏರಿ ವಿಷ್ಣುವು ಪಂಚಭೂತಾತ್ಮಕನಾದ ಆಸುರೀ ಶಕ್ತಿಯನ್ನು ಸಂಹರಿಸಿದ. ಹದಿನಾರುಸಾವಿರನಾಡಿಗಳಲ್ಲಿ ತನ್ನ ಶಕ್ತಿಯನ್ನು ಹರಿಸಿ ಆ ಜೀವವನ್ನು ಉದ್ಧರಿಸಿದ ಎಂಬ ತಾತ್ತ್ವಿಕ ಹಿನ್ನೆಲೆ ಇದಕ್ಕಿದೆ.

ಲಕ್ಷ್ಮೀಪೂಜೆಯ  ವಿಶೇಷತೆ

ಆಶ್ವಯುಜಮಾಸದ ಅಮಾಮಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ಅಂದೂ ಕೂಡಾ ಬೆಳಿಗ್ಗೆ ಅಭ್ಯಂಗಸ್ನಾನ ಮಾಡಬೇಕು. ಲಕ್ಷ್ಮೀದೇವಿಯನ್ನು ವಿಗ್ರಹದಲ್ಲೋ, ಕಲಶದಲ್ಲೋ ಆವಾಹನೆ ಮಾಡಿ ಪೂಜಿಸಬೇಕು. ಲಕ್ಷ್ಮೀಪೂಜೆಗೆ ಪ್ರದೋಷ ಅತ್ಯಂತಶ್ರೇಷ್ಠವಾದ ಕಾಲ. ಪ್ರದೋಷಕಾಲದಿಂದ ಆರಂಭಿಸಿ ಅರ್ಧರಾತ್ರಿಯವರೆಗೂ ಪೂಜೆ ಮಾಡಬಹುದು. ಇದರ ಜೊತೆ ಧನಪತಿಯಾದ ಕುಬೇರನನ್ನೂ ಆರಾಧಿಸುವ ಅಭ್ಯಾಸವಿದೆ. ಈ ದಿನ ಹಗಲು ಬಾಲಕರು, ರೋಗಿಗಳನ್ನು ಬಿಟ್ಟು ಯಾರೂ ಊಟ ಮಾಡಬಾರದು. ದೀಪವೃಕ್ಷಗಳನ್ನು ದಾನ ಮಾಡಬೇಕು. ವಿಶೇಷವಾಗಿ ವ್ಯಾಪಾರಿಗಳು ಸಾಯಂಕಾಲ ಅಂಗಡಿಯಲ್ಲಿ ತಾವು ಸಂಪಾದಿಸಿದ ಧನವನ್ನೇ ಲಕ್ಷ್ಮಿಯೆಂದು ಭಾವಿಸಿ ಅದು ಇನ್ನಷ್ಟು ವೃದ್ಧಿಯಾಗಲಿ ಎಂದು ಸಂಕಲ್ಪ ಮಾಡಿ ಪೂಜಿಸಿ ಬಂಧುಬಾಂಧವರು ಇಷ್ಟಮಿತ್ರರಿಗೆ ಸಿಹಿ ವಿತರಿಸಿ ಸಂಭ್ರಮಿಸುತ್ತಾರೆ.  


ಬಲಿಪಾಡ್ಯಮೀ - ವಿಶೇಷಪೂಜೆ 

ಕಾರ್ತಿಕ ಮಾಸದ ಮೊದಲದಿನವೇ ಬಲಿಪಾಡ್ಯಮೀ. ಹೇಸರೇ ಹೇಳುವಂತೆ ಈ ದಿನ ಬಲಿಗೆ ವಿಶೇಷಪೂಜೆ ಸಲ್ಲುತ್ತದೆ. ರಾತ್ರಿ ರಾಜನಾದವನು ದೈತ್ಯಪತಿಯಾದ ಬಲಿಯನ್ನು ಪೂಜಿಸಬೇಕು. ಐದು ಬಗೆಯ ಬಣ್ಣಗಳಿಂದ ಬಲಿಯನ್ನು ಭೂಮಿಯ ಮೇಲೆ ಚಿತ್ರಿಸಿ ಮನೆಯೊಳಗೆ ಬಲಿಯನ್ನು ಕಲಶದಲ್ಲಿ ಆವಾಹಿಸಿ ಅರ್ಚಿಸಬೇಕು. ಸಾಮಾನ್ಯರು ಮಂಚದ ಮೇಲೆ ಬಿಳಿಯ ಅಕ್ಕಿಯಲ್ಲಿ  ಬಲಿಯನ್ನು ಆವಾಹಿಸಿ ಫಲ ಪುಷ್ಪಗಳಿಂದ ಅರ್ಚಿಸಬೇಕು. “ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ | ಇಂದ್ರಶರೋಽಮರಾರಾತೇ ವಿಷ್ಣುಸಾನ್ನಿಧ್ಯದೋ ಭವ” ಎಂಬ ಮಂತ್ರದಿಂದ ಪೂಜಿಸಬೇಕು.
“ಪೂಜಾಂ ಕುರ್ಯಾತ್ ನೃಪಃ ಸಾಕ್ಷಾತ್ ಭೂಮೌ ಮಂಡಲಕೇ ಶುಭೇ |
ಬಲಿಮಾಲಿಖ್ಯ ದೈತ್ಯೇಂದ್ರಂ ವರ್ಣಕೈಃ ಪಂಚರಂಗಕೈಃ |
ಲೋಕಶ್ಚಾಪಿ ಗೃಹಸ್ಯಾಂತಃ ಶಯ್ಯಾಯಾಂ ಶುಕ್ಲತಂಡುಲೈಃ |
ಸಂಸ್ಥಾಪ್ಯ ಬಲಿರಾಜಾನಂ ಫಲೈಃ ಪುಷ್ಪೈಃ ತು ಪೂಜಯೇತ್ ||-(ಹೇಮಾದ್ರಿ)
ಕೆಲವು ಕಡೆ ನರಕಚತುರ್ದಶಿಯಂದೇ ಬಲಿಯನ್ನು ಆವಾಹಿಸಿ ಪಾಡ್ಯದಂದು ವಿಸರ್ಜಿಸುವ ಪದ್ಧತಿಯೂ ಇದೆ. ಬಲಿಮಹಾರಾಜನು ದಾನಕ್ಕೆ ಪ್ರಸಿದ್ಧನು. ಅದಕ್ಕೇ ಆ ದಿನ ಮಾಡುವ ದಾನಕ್ಕೆ ವಿಶೇಷಫಲವನ್ನು ಶಾಸ್ತ್ರವು ಹೇಳಿದೆ. ಅಮಾಯುಕ್ತವಾದ ಪಾಡ್ಯದಂದು ಉಪವಾಸವಿದ್ದು ಬಲಿಯನ್ನು ಪೂಜಿಸಿ ಗೋವನ್ನೂ ಯಾರು ಪೂಜಿಸುತ್ತಾರೋ ಅಂತಹ ರಾಜ್ಯದಲ್ಲಿ ಪ್ರಜೆಗಳು, ಗೋವುಗಳು ಮತ್ತು ರಾಜರು ಅಭಿವೃದ್ಧಿಯನ್ನು ಹೊಂದುವರು ಎಂಬ ಮಾತಿದೆ.

ಈ ಉತ್ಸವಕ್ಕೆ ಒಂದು ಪುರಾಣ ಮತ್ತು ತಾತ್ತ್ವಿಕವಾದ ಹಿನ್ನೆಲೆಯಿದೆ. ವಿಷ್ಣುವು ವಾಮನನ ರೂಪದಲ್ಲಿ ಅವತರಿಸಿ ಇಂದ್ರನ ರಾಜ್ಯವನ್ನು ಅಪಹರಿಸಿ ಅಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ ಬಲಿಯ ದರ್ಪವನ್ನು ಅಡಗಿಸಿ ಪಾತಾಲಲೋಕಕ್ಕೆ ತಳ್ಳಿ ಇಂದ್ರನ ರಾಜ್ಯವನ್ನು ಮರಳಿಸಿದ ಎಂಬುದು ಪುರಾಣಕಥೆ. ಬಲಿಯ ತಲೆಯ ಮೇಲೆ ತನ್ನ ದಿವ್ಯಪಾದನ್ನು ಇಟ್ಟು ಬಲಿಯಲ್ಲಿದ್ದ ಆಸುರಭಾವವನ್ನು ದೂರಮಾಡಿದ ಭಗವಂತ. ಅವನನ್ನು ಪುನೀತನನ್ನಾಗಿ ಮಾಡಿ ಉದ್ಧರಿಸಿದ ವಿಧಾನವಿದು. ಇದರಿಂದ  ಬಲಿಯು ಚಿರಜೀವಿಪಟ್ಟವನ್ನು ಪಡೆದ. ಭಗವಂತನ ಅನುಗ್ರಹವೆಂದು ತಿಳಿದ ಪರಮಭಾಗವತನೀತ. ಹಾಗಾಗಿ ಭಾಗವತರನ್ನು ಪೂಜಿಸುವುದು ಭಗವಂತನನ್ನು ಪೂಜಿಸಿದಷ್ಟೇ ಫಲ.

ಪಗಡೆಯಾಟದ ಹಿನ್ನೆಲೆ

ಈ ದಿನ ಬೆಳಿಗ್ಗೆ ಪಗಡೆಯಾಟವನ್ನು ಆಡುವ ರೂಢಿಯಿದೆ. ಪಾರ್ವತೀಪರಮೇಶ್ವರರು ಸೃಷ್ಟಿಯ ವಿನೋದಕ್ಕಾಗಿ ಪಗಡೆಯಾಡಿದರು ಎಂಬ ಪುರಾಣಕಥೆಯ ಹಿನ್ನೆಲೆಯಲ್ಲಿ ಪಗಡೆಯಾಟ ಬಂದಿದೆ. ಈ ಪಗಡೆಯಾಟದಲ್ಲಿ ತಾತ್ತ್ವಿಕವಾದ ಆಶಯವೂ ಅಡಗಿದೆ ಎಂಬುದಾಗಿ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ವಿವರಿಸಿದ್ದರು “ಇದು ಸೃಷ್ಟಿಯಲ್ಲಿ ಬರುವ ತ್ರಿಗುಣಗಳ ಆಟ. ಜೀವಿಗಳು ಇಲ್ಲಿ ಪಗಡೆಕಾಯಿಗಳು. ಪುಣ್ಯಪಾಪರೂಪವಾದ ಜೀವಿಗಳ ಕರ್ಮಗಳು ದಾಳ. ಕೆಲವು ಕಾಯಿಗಳು ಹೊಡೆಯಲ್ಪಡುತ್ತವೆ. ಇನ್ನು ಕೆಲವು ಕಾಯಿಗಳು ಹಣ್ಣಾಗುತ್ತವೆ. ಹೊಡೆಯಲ್ಪಡುವ ಕಾಯಿಗಳು (ಜೀವಿಗಳು) ತಮ್ಮ ಕರ್ಮಾನುಗುಣವಾಗಿ ಪುನರ್ಜನ್ಮವನ್ನು ಪಡೆಯುತ್ತವೆ. ಹಣ್ಣಾದ ಕಾಯಿಗಳು ಮೋಕ್ಷವನ್ನು ಪಡೆಯುತ್ತವೆ. ಕೊನೆಗೊಮ್ಮೆ ಎಲ್ಲಾ ಕಾಯಿಗಳೂ ಹಣ್ಣಾಗುವಂತೆ ಎಲ್ಲಾ ಜೀವಿಗಳೂ ಮೋಕ್ಷವನ್ನು ಪಡೆಯಬೇಕು” ಎಂದು. ಇಂತಹ ಜಗನ್ಮಾತಾಪಿತೃಗಳನ್ನು ಸ್ಮರಿಸಿಕೊಂಡು ಆಡುವ ಆಟವಿದು.

ಭಗಿನೀದ್ವಿತೀಯಾ/ ಯಮದ್ವಿತೀಯಾ

ಕಾರ್ತಿಕಶುಕ್ಲಪಕ್ಷದ ಎರಡನೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಯಮನು ತನ್ನ ಸೋದರಿ ಯಮುನೆಯ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ ಎಂಬ ನಂಬಿಕೆಯಿದೆ. ಇದನ್ನೇ ಹಿನ್ನೆಲೆಯಾಗಿಸಿಕೊಂಡು ಅಂದು ಸೋದರಿಯರ ಮನೆಗೆ ಹೋಗಿ ಅವಳಿಂದ ಭೋಜನಸ್ವೀಕರಿಸಬೇಕು. ಮತ್ತು ಸೋದರಿಗೆ ಉಡುಗೊರೆ ಕೊಟ್ಟು ಗೌರವಿಸುವ ಪದ್ಧತಿಯಿದೆ.  ಈ ದಿನ ಬೆಳಿಗ್ಗೆ ಯಮುನಾನದಿಯಲ್ಲಿ ಸ್ನಾನ ಮಾಡಿದರೆ ಯಮಲೋಕವನ್ನು ನೋಡುವುದಿಲ್ಲ ಎಂಬ ಮಾತಿದೆ. ಮತ್ತು ಯಮ, ಚಿತ್ರಗುಪ್ತ ಮತ್ತು ಯಮದೂತರಿಗೆ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಬೇಕು. ಯಾವ ನಾರಿಯು ಈ ದಿನ ಅಣ್ಣನನ್ನು ಫಲತಾಂಬೂಲಾದಿಗಳಿಂದ ಸತ್ಕರಿಸುವಳೋ ಅವಳು ವೈಧವ್ಯವನ್ನು ಹೊಂದಲಾರಳು ಎಂಬ ಶಾಸ್ತ್ರವಚನವಿದೆ. ಈ ಎಲ್ಲಾ ಕಾರಣದಿಂದ ಈ ದಿನಕ್ಕೆ ಅಷ್ಟೊಂದು ವಿಶೇಷತೆ.