Tuesday, October 22, 2019

ಕರ್ಮಗಳನ್ನು ಬಿಡುವುದು ಸಂನ್ಯಾಸವಲ್ಲ (Karmagalannu biduvudu sanyasavalla)

ಲೇಖಕರು:  ನಾಗರಾಜ್ ಗುಂಡಪ್ಪ



ಲೌಕಿಕ ಮತ್ತು ಪಾರಮಾರ್ಥಿಕ ಸುಖಗಳನ್ನೊಳಗೊಂಡ ಸಂಪೂರ್ಣ ಜೀವನದ ಕೊನೆಯ ಹಂತವೇ ಯೋಗವನ್ನಾಶ್ರಿಯಿಸಿ ಶರೀರ ತ್ಯಾಗ ಮಾಡುವುದು. ದೌರ್ಬಲ್ಯ, ರೋಗ, ವಿಪತ್ತು ಮುಂತಾದ ಕಾರಣಗಳಿಂದ ಮೃತ್ಯುವಿಗೆ  ಒಳಗಾಗಿ ಪುನರ್ಜನ್ಮವನ್ನು ತಾಳುವುದರ ಬದಲು ಯೋಗಬಲದಿಂದ ಶರೀರ ತ್ಯಾಗ ಮಾಡಿ ಮೋಕ್ಷವನ್ನು ಪಡೆಯುವ ವಿಧಾನ ಎಂತಹಾ ಅದ್ಭುತ! ರಘುವಂಶದ ರಾಜರಲ್ಲದೇ ಬಲರಾಮ, ಕೃಷ್ಣಾದಿ ಅವತಾರಪುರುಷರೂ ಹಾಗೂ ಇನ್ನೂ ಅನೇಕ ರಾಜರು, ಮಹಾತ್ಮರು, ಈ ರೀತಿಯ ಜೀವನಾಂತ್ಯಕ್ಕೆ ನಿದರ್ಶನರಾಗಿದ್ದಾರೆ. ಮಹಾತ್ಮನಾದ ಭೀಷ್ಮನು ಶರೀರ ತ್ಯಾಗಕ್ಕೆ ಮುನ್ನ ಜನರೊಡನೆ ಮಾತನಾಡಿ, ಮುಹೂರ್ತಕಾಲ ಮೌನವಾಗಿದ್ದು, ಕ್ರಮವಾಗಿ ಪಾದದಿಂದ ಶಿರದವರೆವಿಗೆ ಪ್ರಾಣಗಳನ್ನು ಬೇರೆ ಬೇರೆ ಸ್ಥಾನಗಳಲ್ಲಿ ಧರಿಸಿ, ಕೊನೆಯಲ್ಲಿ ನೆತ್ತಿಯ ಬ್ರಹ್ಮರಂಧ್ರದಿಂದ ಬೆಳಕಿನ ರೂಪದಲ್ಲಿ ಹೊರಬಂದು ತನ್ನ ಮೂಲಸ್ಥಾನವನ್ನು ಸೇರಿಕೊಂಡ ಎಂದು ಮಹಾಭಾರತವು ಹೇಳುತ್ತದೆ.

ನಿರ್ಯಾಣ ಹೊಂದಿದ ಸಾಧಕಶ್ರೇಷ್ಠರ ಸಹೋದರರೊಬ್ಬರು ಶ್ರೀರಂಗ ಮಹಾಗುರುಗಳ ಬಳಿ ದುಃಖ ಹೇಳಿಕೊಳ್ಳಲು ಬಂದಾಗ, ಗತಿಸಿ ಹೋದವರ ಸ್ಥಿತಿಯು ಸಹೋದರರ ಮನಸ್ಸಿಗೆ ಅರಿವಾಗಿ, ದುಃಖದ ಬದಲು ಆನಂದವನ್ನನುಭವಿಸಿದರು ಎಂದು ಕೇಳಿದ್ದೇವೆ. ಈ ಸಂಸ್ಕೃತಿಯ ಕಾರಣದಿಂದಲೇ ಗತಿಸಿ ಹೋದವರಿಗೆ ಗೌರವ ಸೂಚಕವಾಗಿ ಬ್ರಹ್ಮೈಕ್ಯರಾದರು, ಲಿಂಗೈಕ್ಯರಾದರು, ವೈಕುಂಠವನ್ನು ಸೇರಿದರು ಎಂದು ಹೇಳುತ್ತಾರೆ.

ಸಂನ್ಯಾಸವು ಇಂತಹಾ ಅಂತ್ಯಕ್ಕೆ ಪೋಷಕವಾದ, ಪರಮ ಆದರ್ಶವಾದ ಮನಸ್ಸಿನ ಸ್ಥಿತಿ. ನ್ಯಾಸವೆಂದರೆ ಇಡುವುದು, ಸಂನ್ಯಾಸವೆಂದರೆ ಚೆನ್ನಾಗಿ ಇಡುವುದೆಂದರ್ಥ. ಮನಸ್ಸು ಪ್ರಾಣಗಳನ್ನು ಪರಮಾತ್ಮನಲ್ಲಿ ಇರಿಸುವುದನ್ನು ಸಂನ್ಯಾಸವೆನ್ನುತ್ತಾರೆ. ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ, ಕರ್ಮಗಳನ್ನು ಬಿಡುವುದು ಮಾತ್ರವೇ ಸಂನ್ಯಾಸವಲ್ಲಾ, ಕರ್ಮಗಳ ನಡುವೆಯೂ ಸಹಾ, ವಿರಕ್ತಿಯಿಂದ ನಿರ್ಲಿಪ್ತರಾಗಿದ್ದು ಎಲ್ಲವನ್ನೂ ಭಗವದರ್ಪಣ ಮಾಡುವುದೇ ನಿಜವಾದ ಸಂನ್ಯಾಸ ಎಂದು ಘೋಷಿಸಿದ್ದಾನೆ. ಸಂನ್ಯಾಸಕ್ಕೂ ಸಂನ್ಯಾಸಾಶ್ರಮಕ್ಕೂ ವೆತ್ಯಾಸವಿದೆ. ಸಂನ್ಯಾಸವನ್ನೇ ವಿಶೇಷ ಸಾಧನವಾಗಿಟ್ಟುಕೊಂಡು, ಸರ್ವಸಂಗ ಪರಿತ್ಯಾಗಿಯಾಗಿ, ಖಾವಿ ವಸ್ತ್ರ, ತ್ರಿದಂಡಗಳನ್ನು ಧರಿಸಿ, ಮೂರು ಹೊತ್ತು ಸ್ನಾನ-ಪೂಜೆಗಳ ಆಚರಣೆ, ಭಿಕ್ಷಾಟನೆ ಮೊದಲಾದ ಕಠೋರ ನಿಯಮಗಳೊಂದಿಗೆ ಜೀವಿಸುವ ಕ್ರಮವನ್ನು ಸಂನ್ಯಾಸಾಶ್ರಮ ಎನ್ನುತ್ತಾರೆ. ಸಂನ್ಯಾಸವು ಎಲ್ಲರಿಗೂ ಸೂಕ್ತ; ಆದರೆ   ಸಂನ್ಯಾಸಾಶ್ರಮವು ಕೆಲವು ಅರ್ಹರಿಗೇ ಹೊರತೂ ಎಲ್ಲರಿಗೂ ಹೇಳಿ ಮಾಡಿಸಿದ್ದಲ್ಲಾ.

ಹೀಗೆ ಭಗವದ್ಗೀತೆ ಮತ್ತು ಯೋಗಸೂತ್ರಗಳಲ್ಲಿ ಶ್ಲಾಘಿಸಲ್ಪಟ್ಟಿರುವ ಅಭ್ಯಾಸ ಮತ್ತು ವೈರಾಗ್ಯಗಳ ಮೂಲಕ ರೂಢಿಸಿಕೊಳ್ಳಬಹುದಾದ ಸಂನ್ಯಾಸ ಮನೋಧರ್ಮವು ನಾಲ್ಕೂ ಆಶ್ರಮಿಗಳಿಗೂ ಪೂರ್ಣಜೀವನಕ್ಕೆ ಸಾರ್ಥಕ ಅಂತ್ಯವನ್ನು ತಂದುಕೊಡಬಲ್ಲಂತಹಾ ಪರಮಾದರ್ಶವಾಗಿದೆ

ಸೂಚನೆ: 19/10/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.