Tuesday, October 22, 2019

ಆಸ್ತಿಕರು-ನಾಸ್ತಿಕರು (Aasthikaru-naasthikaru)

ಲೇಖಕರು: ತಾರೋಡಿ ಸುರೇಶ


ಅಸ್ತಿ- ಇದೆ ಎನ್ನುವವರು ಆಸ್ತಿಕರು. ಇಲ್ಲ ಎನ್ನುವವರು ನಾಸ್ತಿಕರು. ಇವುಗಳು ರೂಢಿಯಲ್ಲಿರುವ ಪದಗಳಾಗಿವೆ. ಇವರುಗಳು ಯಾವುದನ್ನು ಇದೆ ಅಥವಾ ಇಲ್ಲ ಎನ್ನುತ್ತಿದ್ದಾರೆ?. ವಾಸ್ತವಿಕವಾಗಿ ದೇವರು ಎಂಬ ಪದಾರ್ಥವನ್ನು ಆಸ್ತಿಕರು ಇದೆ ಎಂಬುದಾಗಿಯೂ ಹೇಳಿದರೆ ದೇವರು ಇಲ್ಲ ಎಂದು ನಾಸ್ತಿಕರು ವಾದಿಸುತ್ತಾರೆ. ಯಾರ ಅಭಿಪ್ರಾಯ ಸರಿ? ದೇವರು ನಿಜವಾಗಿ ಇರುವನೇ ಅಥವಾ ಅದು ಕೇವಲ ನಮ್ಮ ಭ್ರಮೆಯೇ? ಎಂಬ ಪ್ರಶ್ನೆಗಳು ಸಹಜ. ಆಸ್ತಿಕರು ಬಹುಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಅವರ ಮಾತು ಸರಿ ಎಂದರೆ ಪ್ರಜಾಪ್ರಭುತ್ವ ಸಿದ್ಧಾಂತಗಳನ್ನು ಒಪ್ಪಿ ನಡೆದಂತಾಯಿತು. ಅದನ್ನು ಒಬ್ಬೊಬ್ಬರು ಒಂದೊಂದು ಹೆಸರಿನಿಂದ ಕರೆಯುತ್ತಿರಬಹುದು. ಯಾವುದೇ ಹೆಸರಿನಿಂದ ಕರೆದರೂ ಪದಾರ್ಥವಿದ್ದರೆ ಸರಿ. ಹೆಸರು ಅಷ್ಟು ಮುಖ್ಯವಲ್ಲ.

ಅದರ ಇರುವಿಕೆಯನ್ನು ನಿರ್ಣಯಿಸುವುದು ಹೇಗೆ?. ಇಂದ್ರಿಯಗಳಿಗೆ ಗೋಚರವಾಗದ ಅತೀಂದ್ರಿಯವಾದ ಪದಾರ್ಥವನ್ನು ಅದಿರುವ ಎಡೆಗೇ ಹೋಗಿ ತಿಳಿಯಬೇಕಷ್ಟೆ. ಅಂತಹ ದೃಷ್ಟಿಯನ್ನು ಪಡೆದವರು ಅದನ್ನು ಯೋಗದೃಷ್ಟಿ ಅಥವಾ ಅತೀಂದ್ರಿಯ ದೃಷ್ಟಿ ಎಂಬುದಾಗಿ ವಿವರಿಸಿದ್ದಾರೆ. ಆ ದೃಷ್ಟಿಯು ತಪಸ್ಸಿನಿಂದ, ಗುರೂಪದೇಶದಿಂದ ಲಭ್ಯವಾಗುವುದು. ಸೂಕ್ಷ್ಮದರ್ಶಕ ಯಂತ್ರದಿಂದ ನೋಡಿದಾಗ ಬರಿಗಣ್ಣಿಗೆ ಕಾಣದ್ದು ಕಾಣಿಸುವಂತೆ ಈ ಅತೀಂದ್ರಿಯದೃಷ್ಟಿಗೆ ಇಂದ್ರಿಯಗಳಿಗೆ ಅಗೋಚರವಾದದ್ದು ತೋರಬಲ್ಲುದು. ಅದೆಲ್ಲಾ ಭ್ರಮೆ. ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುವ ಮೂರ್ಖತನ. ಪದಾರ್ಥವಿದ್ದರೆ ಗೋಚರಿಸಬೇಕು.ಅನುಭವಕ್ಕೆ ಬರಬೇಕು. ಇಲ್ಲದಿರುವ ಯಾವುದೋ ಒಂದನ್ನು ಹುಡುಕುವುದೇ ಅಸಂಬದ್ಧ. ಅದಕ್ಕಾಗಿ ಜೀವನವನ್ನೆಲ್ಲಾ ವ್ಯಯಿಸಿ ನಂತರ ಅದಿಲ್ಲವೆಂದು ಖಚಿತವಾದರೆ ಗತಿಯೇನು? ನಮ್ಮ ಬಾಳೇ ವ್ಯರ್ಥವಾಗಿಬಿಡುವುದಿಲ್ಲವೇ? ಎಂದು ನಾಸ್ತಿಕರು ಹರಿಹಾಯುತ್ತಾರೆ. ಆದರೆ ಆಧುನಿಕ ವಿಜ್ಞಾನವೂ ಇಂತಹ ಏಕದೇಶದ ವಾದವನ್ನು ಒಪ್ಪುವುದಿಲ್ಲ. ಮತ್ತು ಅನ್ವೇಷಣೆಯೇ ನಿಷ್ಪ್ರಯೋಜಕ ಎಂಬ ವಾದವನ್ನು ಒಪ್ಪಿದರೆ ಇವತ್ತಿನ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ, ಅಲ್ಲವೆ?.

ಶ್ರೀರಂಗಮಹಾಗುರುಗಳು ಇವುಗಳನ್ನು ಇನ್ನೂ ನಾಲ್ಕು ಗುಂಪುಗಳಾಗಿ ವಿಂಗಡಿಸುತ್ತಿದ್ದರು. ಆಸ್ತಿಕ-ಆಸ್ತಿಕ, ಆಸ್ತಿಕ-ನಾಸ್ತಿಕ, ನಾಸ್ತಿಕ-ನಾಸ್ತಿಕ ಮತ್ತು ನಾಸ್ತಿಕ ಆಸ್ತಿಕ. ಎಂಬುದಾಗಿ. ಆಸ್ತಿಕ-ಆಸ್ತಿಕನು ತಾನು ದೇವರ ಅಸ್ತಿತ್ವವನ್ನು ನಂಬುವುದಲ್ಲದೆ ತನ್ನ ಜೀವನದಲ್ಲಿಯೂ ಬಹಿರಂತರಂಗಗಳಲ್ಲಿ ಅಳವಡಿಸಿಕೊಂಡಿರುತ್ತಾನೆ. ಅದರ ಅಸ್ತಿತ್ವನ್ನಾದರೋ ತಾನು ಸ್ವತಃ ಕಂಡು, ಸಾಕ್ಷಾತ್ಕರಿಸಿಕೊಂಡಿರುತ್ತಾನೆ. ಆಸ್ತಿಕ-ನಾಸ್ತಿಕನು ತನ್ನೊಳಗೆ ದೇವರ ಅಸ್ತಿತ್ವವನ್ನು ತಾನು ಒಪ್ಪಿದ್ದರೂ ಬಾಹ್ಯದಲ್ಲಿ ಅದು ಇಲ್ಲ ಎನ್ನುತ್ತಾನೆ. ಏಕೆಂದರೆ ಅನೇಕ ಭಾರಿ ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣನ್ನು ಮುಚ್ಚಿಕೊಂಡಿರಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲದಿದ್ದರೆ ಅಪಾಯ. ಒಂದು ಕಣ್ಣು ಇಲ್ಲದ ರಾಜ ಉಳಿದವರಿಗೂ ಹಾಗೆಯೇ ಒಂದೇ ಕಣ್ಣಿರಬೇಕೆಂದು ಬಯಸಿದರೆ ಆಶ್ಚರ್ಯಪಡಬೇಕಿಲ್ಲ. ನಾಸ್ತಿಕ-ನಾಸ್ತಿಕನು ತಾನು ದೇವರ ಅಸ್ತಿತ್ವವನ್ನು ಒಪ್ಪುವುದಿಲ್ಲ. ಬಾಹ್ಯದಲ್ಲಿಯೂ ಅದನ್ನು ಧಿಃಕರಿಸಿಯೇ ಬಾಳುತ್ತಾನೆ. ನುಡಿದಂತೆ ನಡೆಯುತ್ತಾನೆ. ಆದರೆ ನಾಸ್ತಿಕ-ನಾಸ್ತಿಕನು ಪ್ರಾಮಾಣಿಕನಾಗಿರುವುದರಿಂದ ಇವನಿಗೆ ಸತ್ಯವನ್ನು ಮನಗಾಣಿಸುವುದು ಸಾಧ್ಯತೆಯು ಉಂಟು. ಆದರೆ ಇನ್ನೊಂದು ಅಪಾಯಕಾರಿಯಾದ ವರ್ಗವಿದೆ. ಅದೇ ನಾಸ್ತಿಕ-ಆಸ್ತಿಕರು. ಅವರು ಒಳಗೆ ನಾಸ್ತಿಕರಾಗಿರುತ್ತಾರೆ. ಆದರೆ ಹೊರಗೆ ಆಸ್ತಿಕರಂತೆ ತೋರಿಸಿಕೊಳ್ಳುತ್ತಾರೆ. ಎಲ್ಲೆಡೆಯಲ್ಲಿಯೂ ಆಸ್ತಿಕತ್ತ್ವದ ಪ್ರದರ್ಶನ ಮಾತ್ರವಿರುತ್ತದೆ. ಆದರೆ ಅಂತರಂಗದಲ್ಲಿ ಅತೀಂದ್ರಿಯಕ್ಷೇತ್ರಗಳ ಅನುಭವವಗಳಾಗಲೀ.ಆಸ್ವಾದನೆಯಾಗಲೀ ಯಾವುದೂ ಇರುವುದಿಲ್ಲ. ಇಂಥಹವರಿಗೆ ಆಸ್ತಿಕಮಹಾಶಯ ಎಂಬ ಪಟ್ಟಬೇಕು. ಆದರೆ ಅದಕ್ಕಾಗಿ ಶ್ರಮಿಸುವ ಮನೋಧರ್ಮವಾಗಲೀ, ಕೊನೆಯಪಕ್ಷ ಬೌದ್ಧಿಕವಾದ ಪ್ರಾಮಾಣಿಕತೆಯಾಗಲೀ ಇರದೆ ಢಾಂಬಿಕರಾಗಿರುತ್ತಾರೆ. ಅನೇಕ ನಾಸ್ತಿಕ-ಆಸ್ತಿಕರಿಗೆ ಆಸ್ತಿಕತೆಯ ಅಭಿನಯವು ಹೊಟ್ಟೆಪಾಡಿನ ವಿಷಯವಾಗಿರುತ್ತದೆ. ತಿಳಿದೋ ತಿಳಿಯದೆಯೋ ಸಮಾಜದಲ್ಲಿ ಕಾಪಟ್ಯವನ್ನು ಬೆಳೆಸಿ ವ್ಯವಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಾರೆ.

ಆದ್ದರಿಂದ ಸದಾ ನಾಸ್ತಿಕ-ಆಸ್ತಿಕರ ಬಗ್ಗೆ ಎಚ್ಚರಿಕೆ ಬೇಕು.ಸಜ್ಜನರು ನುಡಿದಂತೆ ನಡೆಯುತ್ತಾರೆ. ಬಾಳುತ್ತಾರೆ. ಅವರ ಉಪದೇಶಗಳು ಸತ್ಯದತ್ತ ಜೀವಿಗಳನ್ನು ನಯನಮಾಡುತ್ತವೆ. ಅಂತಹ ಪ್ರಾಮಾಣಿಕರಾದ ಆಸ್ತಿಕ-ಆಸ್ತಿಕರಿಗೂ, ಆಸ್ತಿಕ-ನಾಸ್ತಿಕರಿಗೂ, ನಾಸ್ತಿಕ-ನಾಸ್ತಿಕರಿಗೂ ಅಭಿನಂದನೆಗಳನ್ನು ಅರ್ಪಿಸಲೇಬೇಕು. 



ಸೂಚನೆ:  19/10/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.