Sunday, September 22, 2019

ಸಣ್ಣ ಸುಖಕ್ಕಾಗಿ ದೊಡ್ಡ ಸುಖವನ್ನು ತ್ಯಾಗಮಾಡದಿರೋಣ (Sanna sukhakkago dodda sukhavannu thyaagamaadadirona)

ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿಒಮ್ಮೆ ವಾರಣಾಸಿಯ ಗಂಗಾ ತೀರದಲ್ಲಿ ಒಬ್ಬರು ಸಾಧುಗಳು ಧ್ಯಾನಮಗ್ನರಾಗಿದ್ದರು. ಅನತಿ ದೂರದಲ್ಲಿ ಕುಳಿತಿದ್ದವನೊಬ್ಬ ಬಹಳ ಹೊತ್ತಿನಿಂದ ಅವರನ್ನೇ ಗಮನಿಸುತ್ತಿದ್ದ. ಬೆಳಿಗ್ಗೆ,ಸಂಜೆ, ರಾತ್ರಿಯಾದರೂ ಅವರು ಅಂತರ್ಮುಖರಾಗಿಯೇ ಇದ್ದರು. ಇದು ಕೆಲವು ದಿನಗಳೇ ನಡೆಯಿತು. ಇವರನ್ನು ಗಮನಿಸುತ್ತಿದ್ದ ವ್ಯಕ್ತಿಗೆ, ಅವರಿಗೆ ನಮಸ್ಕಾರ ಮಾಡಬೇಕು, ಆಶೀರ್ವಾದ ಪಡೆಯಬೇಕು ಎಂಬ ಹಂಬಲವಾಯಿತು. ಆ ಮಹಾತ್ಮರು ಬಹಿರ್ಮುಖವಾಗುವುದನ್ನೇ ಕಾದಿದ್ದು, ಒಡನೆಯೇ ಅವರ ಬಳಿಸಾಗಿ – ಬದ್ಧಾಂಜಲಿಯಾಗಿ ಹೀಗೆಂದನು - ಸ್ವಾಮೀ ತಾವೆಷ್ಟು ದೊಡ್ಡ ತ್ಯಾಗಿಗಳು! ದಿನಗಟ್ಟಲೆ ಹೀಗೆ ಅಂತರ್ಮುಖರಾಗಿದ್ದೀರಿ, ಎಲ್ಲ ಸುಖಗಳನ್ನೂ ತ್ಯಾಗ ಮಾಡಿದ್ದೀರಿ. ನಿಮ್ಮನ್ನು ದರ್ಶನ ಮಾಡಿ ನಾನು ಕೃತಕೃತ್ಯನಾದೆ. ಎಂದು ದೀರ್ಘದಂಡ ನಮಸ್ಕಾರ ಮಾಡಿದನು. ಆಗ ಆ ಸಾಧುಗಳು ಮುಗುಳ್ನಗುತ್ತಾ – “ಅಪ್ಪಾ, ನಾನೇನೂ ದೊಡ್ಡ ತ್ಯಾಗ ಮಾಡಿಲ್ಲವಪ್ಪಾ, ಅಷ್ಟು ದೊಡ್ಡ ಭಗವಂತನನ್ನು ಪಡೆಯಲು, ಈ ಚಿಕ್ಕ ಚಿಕ್ಕ ಇಂದ್ರಿಯ ಸುಖಗಳೆಲ್ಲವನ್ನು ಮಾತ್ರವೇ ಬಿಟ್ಟಿದ್ದೇನೆ. ಆದರೆ ನೀನು ಮಹಾ ತ್ಯಾಗಿ, ಇಷ್ಟು ಚಿಕ್ಕ ಇಂದ್ರಿಯ ಸುಖಗಳಿಗಾಗಿ ಅಷ್ಟು ದೊಡ್ಡ ಭಗವಂತನನ್ನೇ ತ್ಯಾಗ ಮಾಡಿದ್ದೀಯಲ್ಲ ! ಎಂದರು. ಎಷ್ಟು ಸತ್ಯವಾದ ಮಾತು!

ಆ ವ್ಯಕ್ತಿಯನ್ನು ನಿಮಿತ್ತ ಮಾಡಿಕೊಂಡು ನಮ್ಮೆಲ್ಲರಿಗೆ ಹೇಳಿದ ಮಾತಾಗಿದೆಯಲ್ಲವೇ ಇದು? ನಮ್ಮ ಜೀವನದಲ್ಲಿ ಪಡೆಯಬೇಕಾದ ಅಂತರಂಗದ ಆನಂದ, ಸಂತೋಷ, ನೆಮ್ಮದಿ ಇವುಗಳಿಗಾಗಿ ಸಣ್ಣ ಸಣ್ಣ ಇಂದ್ರಿಯಾಪೇಕ್ಷೆಗಳನ್ನು ನಾವು ತ್ಯಾಗ ಮಾಡುವುದಿಲ್ಲ. ಈ ಅಪೇಕ್ಷೆಗಳನ್ನು ಈಡೇರಿಸುತ್ತಾ ಬದುಕಿನ ಪರಮೋನ್ನತ ಧ್ಯೇಯವನ್ನೇ ತ್ಯಾಗ ಮಾಡುತ್ತೇವೆ. ನಮ್ಮ ಹಿರಿಯರೊಬ್ಬರು ಹೇಳುತ್ತಿದ್ದರು- ಸಣ್ಣ ಸಣ್ಣ ಸಂಗತಿಗಳನ್ನು ತುಂಬಾ ಹತ್ತಿರ ಮಾಡಿಕೊಂಡರೆ ಅದು ದೊಡ್ಡದನ್ನು ಮರೆಯಿಸಿಬಿಡುತ್ತದೆ, ಬೆರಳನ್ನು ಕಣ್ಣಿಗೆ ಹತ್ತಿರವಾಗಿಟ್ಟುಕೊಂಡರೆ ಅದು ಅನಂತ ಆಕಾಶವನ್ನೇ ಮರೆ ಮಾಡಿಬಿಡುತ್ತದೆ, ಎದುರಿಗಿನ ಮಹಾ ಪರ್ವತವನ್ನೇ ಮರೆಮಾಡುತ್ತದೆ. ಬೆಟ್ಟು, ಬೆಟ್ಟವನ್ನೇ ಮರೆಮಾಡುತ್ತದೆ. ಹೀಗೆಯೇ ನಮ್ಮ ಇಂದ್ರಿಯಗಳೂ ಸಹ. ಅವನ್ನು, ಅವುಗಳ ಅಪೇಕ್ಷೆಗಳನ್ನು ಬಹಳ ಹತ್ತಿರ ಮಾಡಿಕೊಂಡರೆ ಅವುಗಳ ಹಿಂಬದಿಯಲ್ಲಿ ಬೆಳಗುತ್ತಿರುವ ಮಹಾ ಚೈತನ್ಯವನ್ನೇ ಮರೆಮಾಡಿಬಿಡುತ್ತದೆ.ಹಾಗೆಂದು ಇಂದ್ರಿಯ ಸುಖಗಳನ್ನು ಕಡೆಗಣಿಸ ಬೇಕೆಂದಲ್ಲ. ಆದರೆ ಅದಕ್ಕೊಂದು ಕಡಿವಾಣ ಬೇಕು. ರುಚಿ ರುಚಿಯಾದ ತಿಂಡಿಯನ್ನು ತಿನ್ನಬೇಕು. ಆದರೆ ಅದನ್ನು ಮಿತಿಮೀರಿ ತಿಂದರೆ ಅಜೀರ್ಣವಾಗಿ ತಿನ್ನುವ ಪ್ರವೃತ್ತಿಯೇ ನಷ್ಟವಾಗುವಂತೆ ಆಗಬಾರದಲ್ಲವೇ?

ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-“ಹೆಂಡತಿ, ಮಕ್ಕಳು, ಒಡವೆ, ಹಣ ಇವೆಲ್ಲಕ್ಕಾಗಿ ಅಳುವುದನ್ನು ಕಲಿತಿದ್ದೇವಪ್ಪಾ, ಹಾಗೆಯೇ ನಮ್ಮ ಜೀವನದ ಮೂಲನಾದ ಭಗವಂತನಿಗಾಗಿ ಅಳುವುದನ್ನೂ ಕಲಿಯಬೇಕಪ್ಪಾ” ಎಂದು. ನಮ್ಮ ದೇಶದ ಮಹರ್ಷಿಗಳು ಹೊರಗಿನ ಇಂದ್ರಿಯ ಸುಖ ಒಳಗಿನ ಆತ್ಮ ಸುಖ ಇವೆರಡನ್ನೂ ಒಂದು ಸಮತೋಲನದಲ್ಲಿಟ್ಟುಕೊಳ್ಳುವ ಜೀವನ ವಿಧಾನವನ್ನು ಈ ನಾಡಿನಲ್ಲಿ ತಂದುಕೊಟ್ಟರು. ಅಂತಹ ಜೀವನವಿಧಾನದ ಫಲವಾಗಿ ಸಮೃದ್ಧವಾದ ಒಳ ಹೊರ ಜೀವನಗಳೆರಡನ್ನೂ ಅನುಭವಿಸಿದ ಬಾಳಾಟ ಎಷ್ಟು ಆನಂದಮಯವಾಗಿತ್ತು ಎಂಬುದಕ್ಕೆ ಪ್ರಾಚೀನ ಭಾರತದ ವೈಭವದ ಇತಿಹಾಸವೇ ಸಾಕ್ಷಿಯಾಗಿದೆ.

ಇವತ್ತಿಗೂ ನಮ್ಮ ಜೀವನಗಳು ಅವರು ನೀಡಿದ ಜ್ಞಾನದ ಬೆಳಕಿನಲ್ಲಿ ಅರಳುವಂತಾದರೆ ಎಲ್ಲರೂ ನೆಮ್ಮದಿಯ ಬದುಕನ್ನು ನಡೆಸಬಹುದಲ್ಲವೇ?


ಸೂಚನೆ:  21/09/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.