ಲೇಖಕರು: ರಾಜಗೋಪಾಲನ್. ಕೆ. ಎಸ್.
ಒಂದು ವಿಶಾಲವಾದ ಕೆರೆ ಇತ್ತು. ಅದರ ಕೆಳಗೆ ಭತ್ತ ಬೆಳೆಯುವ ನೂರಾರು ಎಕರೆ ಗದ್ದೆಗಳು ಇದ್ದವು. ಅಲ್ಲಿ ಪ್ರತಿವರ್ಷ ಯಥೇಚ್ಛವಾಗಿ ಭತ್ತದ ಬೆಳೆಯನ್ನು ಬೆಳೆಯುತ್ತಿದ್ದರು. ಹೀಗೆಯೇ ಕಾಲ ಕಳೆದು ಮುಂದೊಂದು ಕಾಲಕ್ಕೆ ಆ ಕೆರೆಯಲ್ಲಿ ನೀರೇ ನಿಲ್ಲುತ್ತಿರಲಿಲ್ಲ. ಆದ್ದರಿಂದ ಬೆಳೆಯೂ ಇಲ್ಲದಂತಾಯಿತು. ಈಗ ಏನು ಮಾಡುವುದು ಎಂದು ಚಿಂತಿಸಲು ಊರ ಹಿರಿಯರು ಒಂದು ಕಡೆ ಸೇರಿದರು. ಈ ಹಿರಿಯರ ಮಧ್ಯದಲ್ಲಿ ಕೆಲವು ಪ್ರಭಾವಿಗಳು ತಮ್ಮ ಒಂದು ವಿಚಾರವನ್ನು ಹೀಗೆ ಮಂಡಿಸಿದರು-- “ಈ ಕೆರೆಯನ್ನು ತುಂಬ ತಿಳಿದವರಾದ ನಮ್ಮ ಹಿರಿಯರು ಕಟ್ಟಿಸಿದ್ದು. ಎಷ್ಟೋ ಕಾಲ ಈ ಕೆರೆಯಿಂದಾಗಿ ಬೆಳೆಯನ್ನೂ ಬೆಳೆದಿದ್ದೇವಷ್ಟೆ. ಈಗ ನಾವು ಈ ಕೆರೆ ಸರಿಯಿಲ್ಲ ಎನ್ನುವುದು ನಮ್ಮ ಹಿರಿಯರಿಗೆ ಮಾಡುವ ಅವಮಾನವಷ್ಟೆ”. ಇದನ್ನು ಕೇಳಿ ಎಲ್ಲರೂ ಹೌದೆಂದು ತಲೆಯಾಡಿಸಿ ಚರ್ಚೆಯನ್ನೇ ನಿಲ್ಲಿಸಿಬಿಟ್ಟರು. “ಶ್ರದ್ಧಾಜಾಡ್ಯ” ಎಂಬ ಪರಿಕಲ್ಪನೆ(concept)ಯನ್ನು ವಿವರಿಸಲು ಶ್ರೀರಂಗಮಹಾಗುರುಗಳು ಈ ಕಥೆಯನ್ನು ಹೇಳುತ್ತಿದ್ದರು.
“ಸಂಪ್ರದಾಯ” ಎಂದರೆ ಚೆನ್ನಾಗಿ ಕೊಡುವುದು ಎಂದೇ ಅರ್ಥ. ಋಷಿಗಳು ಭಾರತ ದೇಶದಲ್ಲಿ ತಂದದ್ದು ಮೌಲಿಕವಾಗಿ ಸಂಪ್ರದಾಯವೇ. ಆದರೆ ಋಷಿಗಳ ಮನೋಧರ್ಮವು ಇಂದು ಮರೆಯಾಗಿ ಕೆಲವು ಆಚರಣೆಗಳು ಮಾತ್ರ ಉಳಿದಿವೆ. ಆಧುನಿಕವಾದದ್ದೆಲ್ಲ ಶ್ರೇಷ್ಠ ಎಂದು ಮೊಂಡುವಾದ ಮಾಡುವವರಿದ್ದಂತೆ ಹಳೆಯದೆಲ್ಲವನ್ನೂ ಉತ್ಕೃಷ್ಟ ಎನ್ನುವವರಿದ್ದಾರೆ. ಶುಭ್ರವಾದ ಬಟ್ಟೆಯನ್ನು ಕೊಟ್ಟಿದ್ದರೂ ಆಗಾಗ ಧೂಳು ಹೊಡೆಯುವ ಕೆಲಸವನ್ನು ಮಾಡದಿದ್ದರೆ, ಬಟ್ಟೆ ಬಳಸಲಾಗದಷ್ಟು ಮಲಿನವಾದೀತು! ಆದ್ದರಿಂದಲೇ ಕಾಳಿದಾಸನೂ “ಪುರಾಣಮಿತ್ಯೇವ ನ ಸಾಧು ಸರ್ವಂ” ಹಳೆಯದೆಂಬ ಮಾತ್ರಕ್ಕೆ ಎಲ್ಲ ಒಳಿತಲ್ಲ ಎಂದು ಎಚ್ಚರಿಸುತ್ತಾನೆ.
ಸಂಪ್ರದಾಯದಲ್ಲಿ ಬಂದ ಆಚಾರ-ವ್ಯವಹಾರಗಳಲ್ಲಿ ಶುದ್ಧವಾದದ್ದು ಯಾವುದು, ಕಾಲಧರ್ಮದಿಂದ ಸೇರಿಕೊಂಡ ಸಲ್ಲದ ವಿಷಯಗಳಾವುವು ಎಂಬುದನ್ನು ವಿಚಾರಪೂರ್ವಕವಾಗಿ ಸಂಶೋಧಿಸಿ, ಒಳ್ಳೆಯದನ್ನು ಭಾರತವು ಉಳಿಸಿಕೊಂಡರೆ ಜಗತ್ತು ಭಾರತಕ್ಕೆ ಕೃತಜ್ಞವಾಗುವುದರಲ್ಲಿ ಅಚ್ಚರಿಯಿಲ್ಲ.