ಲೇಖಕರು: ಡಾ.ಆರ್. ಮೋಹನ.
ಜೀವನದ ಪ್ರತಿಯೊಂದು ಹಂತವೂ ವಿಶೇಷವೇ. ಬಾಲ್ಯದಲ್ಲಿ ಆಟ ಪಾಠಗಳ ಸಡಗರ; ಯೌವನದ ಸೊಬಗು ಎಲ್ಲರಿಗೂ ಚಿರಸ್ಮರಣೀಯವೆ; ಮುಪ್ಪು ಬೇಡವೆಂದರೂ ಬಂದೆ ಬಿಡುತ್ತೆ. ಹಳೆಯ ಸ್ಮರಣೆಗಳು, ಖಾಯಲೆಗಳ ಚಿಕಿತ್ಸೆಯಷ್ಟೇ ಉಳಿಯುವುದು. ಮೃತ್ಯು ಜೀವನದ ಕೊನೆಯ ಸತ್ಯ. ಆದರೂ ಈ ಸತ್ಯವನ್ನು ಎದುರಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಬೇಡ-ಬೇಡವೆಂದರೂ ಬಲವಂತವಾಗಿ ಶಾಲೆಗ ಮಕ್ಕಳನ್ನು ಎಳೆದೊಯ್ಯುವ ಹಾಗೆ ಮೃತ್ಯುವೂ ನಮ್ಮನ್ನು ಕೊಂಡೊಯ್ಯುತ್ತದೆ. ಆ ಸತ್ಯವನ್ನು ಎದುರಿಸುವ ಧೈರ್ಯ ಇಲ್ಲದ ಕಾರಣ ಮುಪ್ಪು ಕಹಿಯೆಂದನ್ನಿಸುತ್ತದೆ. ಮಕ್ಕಳ-ಮೊಮ್ಮಕ್ಕಳ ಬಾಲ್ಯ-ತಾರುಣ್ಯಗಳನ್ನು ನೋಡುತ್ತ ಈ ಕಹಿಯನ್ನು ಕೊಂಚ ಮರೆಯುವ ಪ್ರಯತ್ನವೂ ಮಾಡುತ್ತಾರೆ. ಪಾರಿವಾರಿಕ ಸಂಬಂಧಗಳು ಸಡಿಲವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ಮುಪ್ಪಿನ ಕಹಿಗೆ ಬೆಲ್ಲ ನೀಡಲು ಮಕ್ಕಳು-ಮರಿಮಕ್ಕಳು ಇರುವುದಿಲ್ಲ. ಹಾಗಾಗಿ ‘ನಾವು ಮನಸ್ಸಿನಿಂದ ಯಾವಾಗಲೂ ಯುವಕರೇ - ಕೊನೆಯ ಘಳಿಗೆಯವರೆಗೂ ಮೋಜು ಮಾಡಿ - ಮುಪ್ಪನ್ನು ಸ್ವೀಕರಿಸಬೇಡಿ’ ಎಂಬ ಸಿದ್ಧಾಂತ.
ಭಾರತೀಯರು ಮುಪ್ಪನ್ನು ಎದುರಿಸುತ್ತಿದ ಬಗೆ ರೋಮಾಂಚಕಾರಿಯಾಗಿದೆ. ಮಹಾಕವಿ ಕಾಳಿದಾಸ ಹೇಳುತ್ತಾನೆ “ ಬಾಲ್ಯದಲ್ಲಿ ವಿದ್ಯೆಗಳನ್ನು ಕಲಿತು, ಯೌವನದಲ್ಲಿ ವಿಷಯಸುಖವ ಭೋಗಿಸಿ, ಮುಪ್ಪಿನಲ್ಲಿ ಮುನಿಯಂತಿದ್ದು, ಕೊನೆಯಲ್ಲಿ ಯೋಗಬಲದಿಂದ ಶರೀರವನ್ನು ಕಳಚಿ ಹಾಕುವರು” ಎಂದು. ಮುಪ್ಪಿನಲ್ಲಿ ಮುನಿಯಂತೆ ಶಾಂತವಾಗಿದ್ದರು; ಹಳೆಯ ಬಟ್ಟೆ ಕಳಚಿದಂತೆ ಅನಾಯಾಸವಾಗಿ ಶರೀರತ್ಯಾಗ ಮಾಡುತ್ತಿದ್ದರು. ವಿಚಿತ್ರವಾಗಿ ಕಂಡರೂ ಇದು ಸತ್ಯವಾಗಿತ್ತು. ಅದರ ಗುಟ್ಟು ಭಾರತೀಯರು ಕಲ್ಪಿಸಿಕೊಂಡಿದ್ದ ಬ್ರಹ್ಮಚರ್ಯ- ಗೃಹಸ್ಥ- ವಾನಪ್ರಸ್ಥ - ಸನ್ಯಾಸ ಎಂಬ ನಾಲ್ಕು ಹಂತಗಳ ಜೀವನ ವ್ಯವಸ್ಥೆಯಲ್ಲಿ ಅಡಗಿದೆ ಎಂದು ಹೇಳುತ್ತಿದ್ದರು ಶ್ರೀರಂಗ ಮಹಾಗುರುಗಳು. ಮುಪ್ಪಿನಲ್ಲೂ ಮುನಿಯ ಮನಸ್ಥೈರ್ಯ ಇರಬೇಕಾದರೆ ಬಾಲ್ಯದಿಂದಲೇ ತಕ್ಕ ತರಭೇತಿ ಕೊಡುವ ವ್ಯವಸ್ಥೆಯಾಗಬೇಕು. ಬಟ್ಟೆಯಂತೆ ಶರೀರತ್ಯಾಗ ಮಾಡಲು, ಶರೀರವನ್ನು ಧರಿಸಿದವನು ಯಾರೆಂದು ಕಂಡಿರಬೇಕು. ಇದರ ಕಲಿಕೆ ಬ್ರಹ್ಮಚರ್ಯದಲ್ಲಿ. ಆ ಕಲಿಕೆಯನ್ನು ಮರೆಯದ ರೀತಿಯಲ್ಲಿ ಸಂಸಾರದ ಸುಖ ಭೋಗಿಸುವ ಕೌಶಲ್ಯ ಗೃಹಸ್ಥ ಜೀವನದಲ್ಲಿರಬೇಕು. ಹಾಗಾದರೆ ಮೃತ್ಯುಭಯವಿಲ್ಲ. ಮುನಿಯಂತೆ ಮೌನ, ಶಾಂತಿ, ನೆಮ್ಮದಿ ಉಂಟು.
To know more about Astanga Yoga Vijnana Mandiram (AYVM) please visit our Official Website, Facebook and Twitter pages