ಲೇಖಕರು: ತಾರೋಡಿ ಸುರೇಶ
ಸಿಂಹವು ಕಾಡಿಗೇ ರಾಜ. ಅದರಲ್ಲಿಯೂ ನಿಸರ್ಗಸಹಜವಾಗಿ ಒದಗಿಬಂದ ಪ್ರಭುತ್ವ. ‘ಸ್ವಯಮೇವ ಮೃಗೇಂದ್ರತಾ’ ಎಂಬ ಬಿರುದಾಂಕಿತನು. ಯಾರೂ ಅದಕ್ಕೆ ನೀನು ಕಾಡಿನ ರಾಜ ಎಂದು ಪಟ್ಟಾಭಿಷೇಕ ಮಾಡಬೇಕಿಲ್ಲ. ಜನ್ಮಜಾತವಾದ ಭಾಗ್ಯ. ಇಂತಹ ಸಿಂಹದಲ್ಲಿ ಒಂದು ವಿಶೇಷವಾದ ನಡೆಯನ್ನು ನಾವು ಗಮನಿಸಬಹುದು. ಅದು ತಾನು ನಡೆಯುತ್ತಿರುವಾಗ ಒಂದಿಷ್ಟು ದೂರ ಸಾಗಿದ ಮೇಲೆ ನಿಂತು ಒಮ್ಮೆ ಹಿಂದೆ ತಿರುಗಿ ತಾನು ನಡೆದುಬಂದ ದಾರಿಯನ್ನು ಗಮನಿಸುತ್ತದೆ. ಕ್ಷಣಕಾಲ ನಿಂತು ಪುನಃ ಮುಂದೆ ಸಾಗುತ್ತದೆ. ಹಾಗೆಯೇ ಪುನಃ ಮುಂದೆ ಕೆಲವು ಹೆಜ್ಜೆ ಸಾಗಿ ಮತ್ತೆ ಹಿಂದಿರುಗಿ ನೋಡುತ್ತದೆ. ಈ ಕ್ರಮವು ಅದು ಗಮ್ಯಸ್ಥಾನವನ್ನು ಸೇರುವವರೆಗೂ ಇರುತ್ತದೆ. ಹೀಗೆ ಸಿಂಹವು ಮಾಡುವ ಅವಲೋಕನವನ್ನು ಸಿಂಹಾವಲೋಕನ ಎಂಬುದಾಗಿ ಕರೆಯುತ್ತಾರೆ.
ಅನೇಕರು ಇದನ್ನು ನಿತ್ಯವೂ ಮಾಡುತ್ತಾರೆ. ಅದನ್ನು ಆತ್ಮಾವಲೋಕನ ಎಂದೋ ಆತ್ಮವಿಮರ್ಶೆ ಎಂದೋ ಕರೆಯುತ್ತಾರೆ. ಅಂದಿನ ದಿನದ ಅಥವಾ ವರ್ಷದ ಆಗುಹೋಗುಗಳು, ತಮ್ಮ ವ್ಯಕ್ತಿಗತವಾದ ತಪ್ಪು ಒಪ್ಪುಗಳು, ಹಾಗೆಯೇ ಮುಂದಿನ ಗುರಿ, ಅದಕ್ಕಾಗಿ ನಡೆಸಬೇಕಾದ ಪ್ರಯತ್ನಗಳು ಇವೆಲ್ಲವನ್ನೂ ಯೋಚಿಸಿ ಯೋಜಿಸಿಕೊಳ್ಳುತ್ತಾರೆ. ಆದರೆ ಇದು ಇಂದ್ರಿಯಜೀವನಕ್ಕಷ್ಟೇ ಸೀಮಿತವಾಗಿರುತ್ತದೆ. ಇದನ್ನೇ ಒಂದು ರೀತಿಯಲ್ಲಿ ಸಿಂಹಾವಲೋಕನ ಎಂದು ಅವರು ಕರೆದುಕೊಳ್ಳುತ್ತಾರೆ.
‘ಮನ್ ಅವಬೋಧನೇ’ ಎಂಬ ಮೂಲಧಾತುವಿನಿಂದ ಮಾನವ ಎಂಬ ಶಬ್ಧವು ವಿಕಾಸಗೊಂಡಿದೆ. ಒಂದು ಪರಿಪೂರ್ಣವಾದ ನೋಟವುಳ್ಳವನು ಎಂದು ಇದರ ಅರ್ಥ. ಮಾನವನ ಜೀವನವು ಕೇವಲ ಇಂದ್ರಿಯಕ್ಷೇತ್ರದ ಸ್ಥೂಲ ಜೀವನ ಮಾತ್ರವಲ್ಲ. ಜೀವವು ಇಂದ್ರಿಯಕ್ಷೇತ್ರದಲ್ಲಿ ಆಡಿದಂತೆಯೇ ಆಧಿದೈವಿಕ, ಆಧ್ಯಾತ್ಮಿಕ ಎಂಬುದಾಗಿ ಇನ್ನೆರಡು ಕ್ಷೇತ್ರಗಳಲ್ಲಿಯೂ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಅಲ್ಲಿ ದೊರೆಯುವ ಆನಂದ ಇಂದ್ರಿಯಗಳಿಂದ ದೊರೆಯುವ ಸುಖಕ್ಕಿಂತ ಕೋಟಿಕೋಟಿ ಪಾಲು ದೊಡ್ಡದು. ದಿವ್ಯದೃಷ್ಟಿಯನ್ನು ಪಡೆದ ಋಷಿಮುನಿಗಳು, ಜೀವನದ ಪರಿಪೂರ್ಣ ವ್ಯಾಪ್ತಿಯನ್ನು ಅರಿತು ಆಡಿದ ಮಾತುಗಳು ಇವು. ಶ್ರೀ ಶಂಕರ ಭಗವತ್ಪಾದರು ಈ ಹಿನ್ನೆಲೆಯಲ್ಲಿಯೇ ‘ಸ್ವದೇಶೋ ಭುವನತ್ರಯಮ್’- ಮೂರು ಲೋಕಗಳೂ ನನ್ನ ದೇಶವೇ
ಆಗಿದೆ ಎಂದು ಹಾಡಿದರು.
ಆದರೆ ಇಂದ್ರಿಯಗಳ ವ್ಯಾಪ್ತಿಯಲ್ಲಿ ಮಾತ್ರವೇ ಬಾಳಿ ಅಭ್ಯಾಸವಾಗಿರುವ ನಮಗೆ ಸ್ಥೂಲವಾದ ದೇಹದ ಹಿಂದಿರುವ ಸೂಕ್ಷ್ಮವಾದ ತತ್ವಗಳ ಮತ್ತು ಆ ತತ್ವಗಳಿಗೂ ಹಿಂದೆ ಇದ್ದು ಬೆಳಗುತ್ತಿರುವ ಪರಂಜ್ಯೋತಿಯವರೆಗೆ ನಮ್ಮ ದೃಷ್ಟಿಯನ್ನು ಹಾಯಿಸಲು ಸಾಮರ್ಥ್ಯವಿಲ್ಲದಾಗಿದೆ. ಇದಕ್ಕೆ ತಪಸ್ಸಿಲ್ಲದಿರುವುದು ಒಂದು ಕಾರಣವಾದರೆ ನಮ್ಮ ಜೀವನದ ಹಿಂಬದಿಯತ್ತ ನೋಡುವ ಪ್ರಯತ್ನವೇ ಇಲ್ಲದಿರುವುದು ಇನ್ನೊಂದು ಕಾರಣ. ಸಿಂಹದ ಸಿಂಹಾವಲೋಕನವು ಇಲ್ಲಿ ನಮಗೊಂದು ಪಾಠವಾಗಿದೆ.
ಶ್ರೀರಂಗಮಹಾಗುರುಗಳು ಅವತಾರಪುರುಷ ಮತ್ತು ಸಾಧಾರಣ ಮನುಷ್ಯ ಇವರ ನಡುವಣ ಒಂದು ಪ್ರಮುಖ ವ್ಯತ್ಯಾಸವನ್ನು ಹೀಗೆ ವಿವರಿಸಿದ್ದರು. “ಅವತಾರವೆಂದರೆ ಇಳಿದುಬರುವುದು ಎಂದರ್ಥ.ಅವತಾರಪುರುಷರಿಗೆ
ತಮ್ಮ ಅವತಾರದ ಉದ್ಧೇಶ, ಮತ್ತು ತಾವು ಇಳಿದುಬಂದಿರುವ ತತ್ವಸೋಪಾನ ಮತ್ತು ಪುನಃ ಆ ತತ್ವಸೋಪಾನವನ್ನೇ ಏರಿ ಮೂಲವನ್ನು ಸೇರುವುದು ಇಷ್ಟೂ ತಿಳಿದಿರುತ್ತದೆ. ಮಹಡಿಯಿಂದ ಮೆಟ್ಟಲಿಳಿದು ಬಂದಂತೆ ಅವರ ಅಭಿವ್ಯಕ್ತಿ. ಆದರೆ ಸಾಧಾರಣರ ಜನ್ಮ ಮಹಡಿಯಿಂದ ಕೆಳಗೆ ಬಿದ್ದುಬಿಟ್ಟಂತೆ ಇರುತ್ತದೆ”. ಆ ತತ್ವಸೋಪಾನಗಳ ಪರಿಚಯಕ್ಕೆ ಬೇಕಾದ ಹಿನ್ನೋಟವನ್ನು ಪಡೆಯಲು ಸಿಂಹಾವಲೋಕನವು ಸ್ಪೂರ್ತಿಯನ್ನು ಕೊಡುತ್ತದೆ. ಜ್ಞಾನಿಗಳು ಪರಂಜ್ಯೋತಿಯವರೆಗೂ ತಮ್ಮ ದೃಷ್ಟಿಯನ್ನು ಹರಿಸುತ್ತಾರೆ.ಆದರೆ ಸಾಮಾನ್ಯ ಮಾನವನು ಅವರ ಮಾರ್ಗದರ್ಶನದಲ್ಲಿ ಹಾಗೆ ಅವಲೋಕನ ಮಾಡುವುದನ್ನು ಕಲಿಯಬೇಕಾಗುವುದು. ತಾನು ದೇವನಿಂದ ವಿಕಾಸಗೊಂಡು ಜೀವಭಾವವನ್ನು ಪಡೆದು ಬಾಳ್ವೆಯನ್ನು
ನಡೆಸುತ್ತಿರುವಾಗ ತಾನು ನಡೆದು ಬಂದ ಹಾದಿಯನ್ನು ಗಮನಿಸಿ. ಪುನಃ ಸೇರಬೇಕಾದ ಗಮ್ಯಸ್ಥಾನವನ್ನು ನೆನಪಿಸಿಕೊಂಡು ಸಾಗಲು ಸಿಂಹವು ಸಾರ್ಥಕವಾದ, ಸಾರಭೂತವಾದ ಸಂದೇಶವನ್ನು ನೀಡುತ್ತಿದೆ.