Saturday, September 7, 2019

ನಮ್ಮ ಮನದ ಮೇಲೆ ನರ್ತಿಸಲಿ ನಟರಾಜ (Namma manada mele narthisali nataraja)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಒಮ್ಮೆ ದಾರುಕಾವನದಲ್ಲಿ ಋಷಿಗಳೆಲ್ಲ ಒಂದು ಯಜ್ಞವನ್ನು ಆಯೋಜಿಸಿದರು. ಯಜ್ಞದ ಪರಮ ಪ್ರಯೋಜನ ಭಗವಂತನ ಸಾಕ್ಷಾತ್ಕಾರ ಎಂಬ ಚಿಂತನೆ ಮನಸ್ಸಿನಿಂದ ಜಾರಿಹೊಗಿತ್ತು. ಕರ್ಮ ಆಚರಿಸುವುದೇ ಧರ್ಮದ ಕೆಲಸ. ಉದ್ದೇಶ ಕೇವಲ ಕರ್ಮದ ಆಚರಣೆ ಅಷ್ಟೇ. ಈಗ ನಾವೆಲ್ಲಾ ನಮ್ಮ ಮನೆಗಳಲ್ಲಿ ಕರ್ಮಗಳನ್ನು ಆಚರಿಸುತ್ತಿಲ್ಲವೇ ಹಾಗೆಯೇ ಎಂದಿಟ್ಟುಕೊಳ್ಳೋಣ. ಸರಿ ಭಗವಂತನಾದ ಮಹಾದೇವನಿಗೆ ಇವರಿಗೆ ಬುದ್ಧಿಕಲಿಸಬೇಕೆನಿಸಿತು. ಅವನು ಸುಂದರನಾದ ಯುವಕನ ರೂಪದಿಂದ ಆ ದಾರುಕಾ ವನವನ್ನು ಪ್ರವೇಶಿಸಿದ. ನಿಷ್ಕಲ್ಮಶ ಹೃದಯದವರಾದ ಋಷಿ ಪತ್ನಿಯರೆಲ್ಲ ಈ ಹುಡುಗನ ಸೌಂದರ್ಯಕ್ಕೆ ಮಾರುಹೋಗಿ ಅವನನ್ನೇ ನೋಡುತ್ತಾ ಅವನ ಸುತ್ತಲೂ ಮೈಮರೆತು ನಿಂತರು. ಸಾಕ್ಷಾತ್ ಪರಶಿವನೇ ಹುಡುಗನಾಗಿ ಬಂದಿದ್ದಾನೆ ಎಂಬ ಅರಿವು ಅವರಿಗಿಲ್ಲವಾದರೂ ಅವನ ಸಾನ್ನಿಧ್ಯ ಶುದ್ಧಹೃದಯಿಗಳಾದ ಅವರನ್ನು ಹಾಗೆ ಮೈ ಮರೆಯುವಂತೆ ಮಾಡಿತು.

ಇವರು ಸಂಕಲ್ಪಿಸಿದ ಯಜ್ಞಕಾರ್ಯಕ್ಕೆ ಸಹಾಯಕರಾಗಿ ಬಂದ ಇವರ ಪತ್ನಿಯರೆಲ್ಲ ಈ ಹುಡುಗನ ಸುತ್ತ ನಿಂತಿರುವುದು ಅವರಿಗೆ ಬಹಳ ಕೋಪವನ್ನು ತರಿಸಿತು. ತಮ್ಮ ಯಜ್ಞವನ್ನು ಕೆಡಿಸಲು ಬಂದ ಆ ಹುಡುಗನನ್ನು ದಂಡಿಸಲು ವಿಧವಿಧವಾದ ಪ್ರಾಣಿಗಳನ್ನು ತಮ್ಮ ತಪಸ್ಸಿನ ಬಲದ ಮೇಲೆ ಸೃಷ್ಟಿಸಿದರು. ಆದರೆ ಯಾವುದೂ ಪ್ರಯೋಜನವಾಗಲಿಲ್ಲ.ಅವರು ಸೃಷ್ಟಿಸಿದ ಹುಲಿಯನ್ನು ಕೊಂದು ಅದರ ಚರ್ಮವನ್ನು ತಾನೇ ಉಟ್ಟನು. ನಂತರ ಒಬ್ಬ ಭಯಂಕರನಾದ “ ಅಪಸ್ಮಾರ” ನೆಂಬ ಅಸುರನನ್ನು ಸೃಷ್ಟಿಸಿ ಅವನ ಮೇಲೆ ಯುದ್ಧಮಾಡಲು ಕಳುಹಿಸಿದರು.  ಏನಾಶ್ಚರ್ಯ! ಆ ಭಯಂಕರನಾದ ಅಸುರನನ್ನು ತನ್ನ ಬಲ ಪಾದದಿಂದ ಮೆಟ್ಟಿ ನರ್ತಿಸ ತೊಡಗಿದನು. ಆಗ ಋಷಿಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಸಾಕ್ಷಾತ್ ಪರಶಿವನೇ ನಟರಾಜನಾಗಿ ಜೀವನದ ಪರಮ ಲಕ್ಷ್ಯವನ್ನು ಅವರಿಗೆ ನೆನಪಿಸಲು ಬಂದಿದ್ದಾನೆ ಎಂಬ ಜ್ಞಾನೋದಯವಾದೊಡನೆಯೇ ಅವರಿಗೆಲ್ಲ ತಮ್ಮ ಸ್ವಸ್ವರೂಪದ ಅರಿವಾಗಿ ಆ ಸ್ವಾಮಿಯ ನರ್ತನದಲ್ಲಿ ಎಲ್ಲರೂ ತಲ್ಲೀನರಾದರು. ಮಾತ್ರವಲ್ಲ ಕೆಳಗೆ ಬಿದ್ದ ಅಪಸ್ಮಾರ ರಾಕ್ಷಸನೂ ಸಹ ಆನಂದದಿಂದ ತಲೆ ಎತ್ತಿ ನಟರಾಜನ ದರ್ಶನದ ಸುಖವನ್ನು ಅನುಭವಿಸತೊಡಗಿದನು.

ಶ್ರೀ ರಂಗಮಹಾಗುರುಗಳ ದೃಷ್ಟಿಯಿಂದ ಇದೊಂದು ತತ್ತ್ವಮಯವಾದ ಕಥೆ. ಜ್ಞಾನಕ್ಕಾಗಿಯೇ ಎಲ್ಲ ಕರ್ಮಗಳೂ ಬಂದಿರುವುದು. ಭಗವಂತನ ಅನುಭವವೇ ಜ್ಞಾನ. ಅದರ ವಿಸ್ಮರಣೆಯಾಗಿ ಕೇವಲ ಶುಷ್ಕವಾದ ಕರ್ಮಗಳನ್ನು ಮಾಡಿದರೆ ಪ್ರಯೋಜನವಿರದು. ಅದನ್ನು ತಿಳಿಸಲು ಸಾಕ್ಷಾತ್ ಭಗವಂತನೇ ನಟರಾಜನಾಗಿ ಬಂದನು. ಭಗವಂತನೇ ಬಂದರೂ ನಮ್ಮ ಅಹಂಕಾರದ ಗೋಡೆ ಅವನನ್ನು ಗುರುತಿಸದಂತೆ ಮಾಡುತ್ತದೆ. ಹಾಗೆಯೇ ಆ ಋಷಿಗಳಿಗೂ ಆಯಿತು. ಆದರೆ ನಿಷ್ಕಲ್ಮಶ ಹೃದಯಿಗಳಾದ ಋಷಿಪತ್ನಿಯರಿಗೆ ಅವನಲ್ಲಿ ಸಹಜವಾದ ಆಕರ್ಷಣೆ ಉಂಟಾಯಿತು. ಆ ಮಹಾ ಶಕ್ತಿಯ ಎದುರು ಯಾವ ಪಾಶವೀ ಶಕ್ತಿಯ, ಆಸುರೀ ಶಕ್ತಿಯ ಆಟವೂ ನಡೆಯದು.ಎಂದೇ ನಟರಾಜನು ಎಲ್ಲವನ್ನೂ ನಿಗ್ರಹಿಸಿದನು. ಅಸುರನ ಹೆಸರು “ ಅಪಸ್ಮಾರ” ಎಂದರೆ “ಮರೆತವನು” ವಿಸ್ಮೃತ ಎಂದರ್ಥ. ಮರೆವಿನ ರೋಗಕ್ಕೂ ಆಪಸ್ಮಾರ ರೋಗ ಎನ್ನುವುದಿದೆ. ಯಾರು ತಮ್ಮೊಳಗೆ ಬೆಳಗುತ್ತಿರುವ ಪರಶಿವಜ್ಯೋತಿಯನ್ನು ಮರೆತಿದ್ದಾರೋ ಅವರೆಲ್ಲ ಆಪಸ್ಮಾರರೇ. ಮೂಲಾಧಾರದಿಂದ ಕತ್ತಿನ ವರೆಗಿನ ನಮ್ಮ ಶರೀರದ ಭಾಗ ಪ್ರಕೃತಿಯ ಭಾಗ. ವಿಸ್ಮರಣೆಯ ಎಡೆ. ನಟರಾಜನು ಮೆಟ್ಟಿರುವುದು ಅಸುರನ ಶರೀರದ ಈ ಭಾಗವನ್ನೇ. ಅವನ ವಿಸ್ಮರಣೆಯನ್ನು ಮೆಟ್ಟಿದಾಗ ಅವನಿಗೆ ತನ್ನ ಸ್ವರೂಪದ ಸ್ಮರಣೆಯುಂಟಾಗಿ ಆನಂದದಿಂದ ನಟರಾಜನನ್ನು ನೋಡುತ್ತಿದ್ದಾನೆ.

ಇದು ನಮ್ಮೆಲ್ಲರ ಕಥೆ. ನಮ್ಮೆಲ್ಲರಿಗೂ ಒಳಬೆಳಕಿನ ವಿಸ್ಮರಣೆಯಾಗಿದೆ. ಆ ಋಷಿಗಳಂತೆ, ಆ ಅಸುರನಂತೆ. ನಾವೂ ಅವನನ್ನು ಮರೆತು ಶುಷ್ಕವಾಗಿ ಕರ್ಮಗಳನ್ನು ಆಚರಿಸುತ್ತಿದ್ದೇವೆ. ನಮ್ಮ ವಿಸ್ಮರಣೆಯನ್ನೂ ನಟರಾಜನು ತುಳಿದು ನಮಗೆ ಅವನ ಸ್ಮರಣೆ ಉಂಟಾಗುವಂತೆ ಮಾಡಲಿ ಎಂದು ಆ ಪರಮ ಕರುಣಾಮಯನನ್ನು ಪ್ರಾರ್ಥಿಸೋಣ. 

ಸೂಚನೆ:  07/09/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.