Saturday, September 7, 2019

ಪಾಪವಿನಾಶಿನಿ ಗಂಗಾ (Paapavinashini ganga)

ಲೇಖಕರು: ಮೈಥಿಲೀ ರಾಘವನ್


ಭಾರತದ ಪುರಾಣೇತಿಹಾಸಗಳು ಗಂಗಾನದಿಯ ಮಾಹಾತ್ಮ್ಯವನ್ನು ಅನೇಕ ರೀತಿಯಲ್ಲಿ ಕೊಂಡಾಡುತ್ತವೆ. ಗಂಗಾಸ್ನಾನ-ಪಾನಗಳು ಸಕಲ ಪಾಪಪರಿಹಾರಕ, ಮೋಕ್ಷಪ್ರದವೆಂಬ ಮಾತುಗಳು ಕಂಡುಬರುತ್ತವೆ. ಗಂಗಾಸ್ಮರಣೆಯೇ ಪಾಪನಿವಾರಕ ಎಂಬುದಾಗಿ ಗಂಗೆಯ ಮಹಿಮಾಗಾನವನ್ನು ಮಾಡುತ್ತಿವೆ. ಶಂಕರಭಗವತ್ಪಾದರು ‘ಗಂಗಾಜಲ ಪಾನವು ಯಮನನ್ನೇ ದೂರವಿಡುತ್ತದೆ’, ‘ಕಲ್ಮಷಗಳನ್ನೆಲ್ಲ ತೊಳೆದುಹಾಕುವ ಮಹಾತಾಯಿ’ ಎಂಬುದಾಗಿ ಆಕೆಯನ್ನು ಸ್ತೋತ್ರ ಮಾಡಿದ್ದಾರೆ.

ಮೈಯಲ್ಲಿನ ಕಲ್ಮಷನಾಶ:

ಹಿಮಾಲಯಪ್ರಾಂತ್ಯದಲ್ಲಿ ಹರಿದು ಬರುವ ಗಂಗೆಯು ಅಲ್ಲಿಯ ಭೂಗುಣವನ್ನೂ, ಓಷಧಿ-ವನಸ್ಪತಿಗಳ ಧರ್ಮವನ್ನೂ ಹೊತ್ತು ತರುವುದರಿಂದ ಸ್ವತಃ ಶುದ್ಧವಾದ ಆ ನೀರಿಗೆ ವ್ಯಾಧಿನಿವಾರಣಾ ಸಾಮರ್ಥ್ಯವಿರುವುದು ಸಹಜವಾಗಿಯೇ ಇದೆ. ಇದು ಆದುನಿಕ ವಿಜ್ಞಾನಿಗಳ ಪ್ರಯೋಗಗಳಿಂದಲೂ ಸಿದ್ಧವಾಗಿರುವ ವಿಷಯ. 

ಗಂಗಾನದಿಗೂ ಜ್ಞಾನಕ್ಕೂ ಇರುವ ಸಂಬಂಧ:

ಭಾರತ ಮಹರ್ಷಿಗಳು ತಮ್ಮ ತಪೋಭೂಮಿಯಲ್ಲಿ ಕಂಡು ನಲಿದ ಅನೇಕ ವಿಷಯಗಳ ಗುರುತುಗಳು ಭಾರತಭೂಪ್ರಾಂತ್ಯದ ನಾನಾ ಕಡೆಗಳಲ್ಲಿರುವುದನ್ನು ಗುರುತಿಸಿದರು. ಆ ಹೊರಗುರುತುಗಳ ಮೂಲಕವೇ ಲೋಕಕ್ಕೆ ಒಳಪ್ರಪಂಚವನ್ನು ಪರಿಚಯಿಸಿಕೊಡುವ ಮಹದಾಶಯದಿಂದ ಹೊರಗಡೆಯ ಗಿರಿ-ನದಿಗಳಿಗೆ ಅವು ಹೋಲುವ ಒಳ ಗಿರಿ-ನದಿಗಳ ಹೆಸರನ್ನಿಟ್ಟರು. ಅಂತಹದೊಂದು ಹೆಸರೇ ’ಗಂಗಾ.’ ’ಸದ್ಗತಿಂ ಗಮಯತೀತಿ ಗಂಗಾ’- ಸದ್ಗತಿಯನ್ನು ಹೊಂದಿಸುವುದೇ ಗಂಗಾ ಎಂಬರ್ಥವನ್ನೊಳಗೊಂಡಿದೆ. 

ಮಹರ್ಷಿಗಳು ತಪೋಭೂಮಿಯಲ್ಲಿ ಒಂದು ಬಿಂದುವಿನಂತಹ ಸ್ಥಾನದಿಂದ ಕೆಳಕ್ಕೆ ಹರಿದು ಜೀವಿಯನ್ನು ಪಾವನಗೊಳಿಸುವ ಜ್ಞಾನಪ್ರವಾಹವೊಂದು ಮುಂದೆ ಏಳಾಗಿ ಕವಲೊಡೆದು ಹರಿಯುವುದನ್ನು ಕಂಡು, ಅದೇ ವಿನ್ಯಾಸವುಳ್ಳ ಹೊರಗಂಗಾಪ್ರವಾಹಕ್ಕೆ ಜ್ಞಾನಪ್ರವಾಹದ ನೆನೆಪನ್ನುಂಟುಮಾಡುವ ನಾಮಕರಣಮಾಡಿದ್ದಾರೆಂಬ ಸತ್ಯವನ್ನು ಶ್ರೀರಂಗಮಹಾಗುರುಗಳು ಸಾರಿದರು. ರಾಮಾಯಣ, ಭಾಗವತಾದಿಗ್ರಂಥಗಳು ಗಂಗೆಯು ಮೊದಲಿಗೆ ಬ್ರಹ್ಮದೇವರ ಕಮಂಡಲದಲ್ಲಿದ್ದು, ತ್ರಿವಿಕ್ರಮ-ವಿಷ್ಣುವಿನ ಪಾದವನ್ನು ತೊಳೆಯುವುದರ ಮೂಲಕ ಆತನ ಸಂಪರ್ಕವನ್ನು ಪಡೆದು, ಮುಂದೆ ಭಗೀರಥನ ಮಹಾಪ್ರಯತ್ನದಿಂದ ಶಿವನ ಜಟೆಯನ್ನು ಹೊಕ್ಕು, ನಂತರ ಜಹ್ನುಮಹರ್ಷಿಯ ಕಿವಿಯಿಂದ ಲೋಕಮಂಗಳಾರ್ಥವಾಗಿ ಹೊರಬಂದಳು ಎಂದು ಸಾರುತ್ತವೆ. ಕಥೆಯನ್ನು ತಾತ್ತ್ವಿಕವಾದ ಹಿನ್ನೆಲೆಯಿಂದಲೇ ಅರ್ಥಮಾಡಿಕೊಳ್ಳಬೇಕಾದ ವಿಷಯವಿದ್ದರೂ ಒಟ್ಟಾರೆ ಗಂಗೆಯು ಜ್ಞಾನಪ್ರದರಾದ, ಸೃಷ್ಟಿ-ಸ್ಥಿತಿ-ಲಯಕಾರಕರಾದ ತ್ರಿಮೂರ್ತಿಗಳ ಸಂಬಂಧವನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ.

ಪಾಪದ ಸ್ವರೂಪ, ಪರಿಣಾಮ

ಪಾಪನಿವಾರಣೆಯನ್ನು ತಿಳಿಯಲು ’ಪಾಪ’ದ ಪರಿಚಯ ಅಗತ್ಯ. ಜ್ಞಾನಿಶ್ರೇಷ್ಠರಾದ ಶ್ರೀರಂಗಮಹಾಗುರುಗಳು ಕೊಟ್ಟ ನೋಟದಂತೆ, ನಾವು ಕಾಯಾ-ವಾಚಾ-ಮನಸಾ ಮಾಡುವ ಕಾರ್ಯಗಳೆಲ್ಲವೂ ನಮ್ಮ ಮನಸ್ಸಿನಲ್ಲಿ ಗುರುತುಗಳನ್ನು ಮಾಡುತ್ತವೆ. ಇದು ವಿಸ್ತಾರವಾದ ವಿವೇಚನೆಯನ್ನಪೇಕ್ಷಿಸುವ ವಿಚಾರವಾದರೂ ದುಷ್ಕರ್ಮಗಳು ಮಾಡುವ ಗುರುತುಗಳೇ ಪಾಪ, ಕಷ್ಟಕಾರ್ಪಣ್ಯಗಳು ಅವುಗಳ ಫಲ; ಸತ್ಕರ್ಮಗಳ ಗುರುತುಗಳು ಪುಣ್ಯ, ಸುಖ-ಭೋಗಗಳೇ ಅವುಗಳ ಫಲ ಎಂಬುದಾಗಿ ಸಂಕ್ಷೇಪವಾಗಿ ಸ್ಮರಿಸಿಕೊಳ್ಳಬಹುದಾಗಿದೆ.

ಪಾಪನಿವಾರಣೆ

ದುಷ್ಕರ್ಮದ ಗುರುತುಗಳು ಹೊರಗೆ ಕಾಣಿಸದಿದ್ದರೂ ಮನಸ್ಸಿನ ಒಳಪದರದಲ್ಲಿ ಏರುಪೇರುಗಳನ್ನುಂಟುಮಾಡುತ್ತವೆ. ಇವುಗಳನ್ನು ಸರಿಪಡಿಸಿ ಪೂರ್ವಸ್ಥಿತಿಗೆ ತರುವುದೇ ಪಾಪನಿವಾರಣೆಯೆನ್ನಿಸಿಕೊಳ್ಳುತ್ತದೆ.

ಕೆಲವು ಪಾಪಗಳ ಫಲವು ವ್ಯಾಧಿಯ ರೂಪದಲ್ಲಿ ಹೊರಬೀಳುತ್ತವೆನ್ನುವುದನ್ನು ಶಾಸ್ತ್ರಗಳು ಪ್ರಮಾಣಿಸುತ್ತವೆ. ಗಂಗಾಜಲವು ವ್ಯಾಧಿನಿವಾರಣೆಯ ಮೂಲಕ ಇಂತಹ ಪಾಪಗಳನ್ನು ತೊಲಗಿಸುತ್ತದೆ.

ಪುರಾತನಕಾಲದಿಂದಲೂ ವಾಲ್ಮೀಕಿ-ವ್ಯಾಸರೇ ಮುಂತಾದ ಅನೇಕಾನೇಕ ಋಷಿಮಹರ್ಷಿಗಳೂ, ಸಾಧುಸಂತರೂ ಗಂಗೆಯಲ್ಲಿ ಭಗವಂತನ ಪವಿತ್ರಸ್ಮರಣೆಯಿಂದ ಪೂತವಾದ ಮನಸ್ಸಿನೊಡನೆ ಅವಗಾಹನ ಮಾಡಿರುವರು. ಜ್ಞಾನಿಗಳು ತಮ್ಮ ಸಂಪರ್ಕದಿಂದಲೂ, ಕೆಲವೊಮ್ಮೆ ಸಂಕಲ್ಪಪೂರ್ವಕವಾಗಿಯೂ ತಮ್ಮ ಅನುಗ್ರಹಧಾರೆಯನ್ನು ಹರಿಸಿ ನದಿಯ ಪಾವಿತ್ರ್ಯವನ್ನು ವೃದ್ಧಿಗೊಳಿಸುತ್ತಾರೆಂಬುದನ್ನು ಶಾಸ್ತ್ರವಾಕ್ಯಗಳು ಸ್ಪಷ್ಟಪಡಿಸುತ್ತವೆ: ’ತೀರ್ಥೀಕುರ್ವಂತಿ ತೀರ್ಥಾನಿ ತೀರ್ಥಭೂತಾಹಿ ಸಾಧವಃ’

ಆದ್ದರಿಂದ ಈ ಅಂಶವನ್ನೂ, ಮೇಲೆ ಹೇಳಿದ ಜ್ಞಾನಗಂಗೆಯ ಹಾಗೂ ತ್ರಿಮೂರ್ತಿಸಂಬಂಧವನ್ನೂ ಸ್ಮರಿಸಿ, ಭಾವಿಸಿ ಗಂಗಾಸ್ನಾನವನ್ನು ಮಾಡಿದಾಗ ಮನಸ್ಸು ತಿಳಿಯಾಗಿ ಪಾಪದಗುರುತುಗಳು ಅಳಿಸಿಹೋಗುತ್ತವೆಯೆಂಬುದು ಜ್ಞಾನಿಗಳ ಸಂದೇಶ. ಒಟ್ಟಾರೆ ಹೇಳುವುದಾದರೆ, ಗಂಗೆಯಲ್ಲಿ ಹೊರಮೈಸ್ನಾನಮಾತ್ರವಾದರೆ ವ್ಯಾಧಿಹರ. ಭಕ್ತಿಭಾವದೊಡಗೂಡಿ ಅವಗಾಹನವಾದರೆ ಪಾಪಹರ, ಪುಣ್ಯಕರ. ಮನಸ್ಸು ಭಗವಂತನಲ್ಲಿ ಎಷ್ಟು ಆರ್ಧ್ರವಾಗಿ ಮುಳುಗಿದ್ದರೆ ಅಷ್ಟು ಪಾಪನಿವಾರಣೆ. ಪರಿಪೂರ್‍ಣ ಭಕ್ತಿಯಿಂದಾದರೋ ಮೋಕ್ಷವು ಕಟ್ಟಿಟ್ಟ ಬುತ್ತಿ.  

ಸೂಚನೆ:  07/09/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.