Saturday, November 2, 2024

ಅಷ್ಟಾಕ್ಷರೀ 69 ಮಾ ನಿಷಾದ ಪ್ರತಿಷ್ಠಾಂ ತ್ವಂ (Astaksari 69 Ma Nishada Pratishtham Tvam)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಚಿಕ್ಕವಯಸ್ಸಿನಲ್ಲೇ ರಾಮಾಯಣದ ಕಥೆಯ ಬಗ್ಗೆ ಒಂದು ಸಣ್ಣ ಬೇಜಾರಿತ್ತು, ನನಗೆ. ದುಃಖದಿಂದ ಶುರುವಾಗಿ ದುಃಖದಿಂದಲೇ ಮುಗಿಯಿತಲ್ಲಾ, ಈ ಕಾವ್ಯ? - ಎಂದು. ಶೋಕ-ಕ್ರೋಧಗಳಿಂದಲಲ್ಲವೇ ವಾಲ್ಮೀಕಿಗಳು ಬೇಡನಿಗೆ ಶಾಪವಿತ್ತದ್ದು? ಕೊನೆಗೆ ಸೀತೆಯು ಭೂಮಿಯೊಳಗೊಂದಾದಾಗ  ರಾಮನಿಗೂ ಶೋಕ-ಕ್ರೋಧಗಳೇ ಉಂಟಾದುವಲ್ಲವೇ?

ಮಧ್ಯದಲ್ಲಿ ಮನನೊಂದರೂ, ಮೊದಲಿನಲ್ಲೂ ಮುಗಿತದಲ್ಲೂ ಮೋದವಿರಬೇಡವೇ ಮಹಿಮೆಯುಳ್ಳವರ ಮಹಾಜೀವನದಲ್ಲಿ?

ಕಥೆಯ ರೂಪರೇಖೆಯನ್ನಷ್ಟೇ ಅರಿಯುವ ಬದಲು ಮೂಲವನ್ನೇ ಹಿಡಿದೋದುವವರಿಗೆ ಸಮಸ್ಯೆಗಳು ಕಡಿಮೆ.

ರಾಮಾಯಣಾರಂಭವಿಂತು: ಸದ್ಗುಣ-ಭರಿತ, ವೀರ್ಯ-ಸಂಪನ್ನ, ಧರ್ಮಜ್ಞ – ಎಂದುಮುಂತಾಗೆನ್ನಿಸಿಕೊಳ್ಳುವ ನರನೊಬ್ಬನು ಈ ಲೋಕದಲ್ಲೀಗ ಉಂಟೇ? - ಎಂದು ತಪಸ್ವಿಗಳಾದ ವಾಲ್ಮೀಕಿಗಳು ನಾರದರನ್ನು ಕೇಳಿದರು. ಅಂತಹ ಬಹುಗುಣ-ಸಂಪನ್ನನೆಂದರೆ ಶ್ರೀರಾಮನೆಂದು ತಿಳಿಸಿ, ಆತನ ಜೀವನದ ಒಟ್ಟಾರೆ ಚಿತ್ರಣವೊಂದನ್ನಿತ್ತು ಹೊರಟುಬಂದರು, ನಾರದರು.

ಇತ್ತ ವಾಲ್ಮೀಕಿಗಳೂ ತಮಸಾ-ನದಿಯತ್ತ ಸ್ನಾನಾರ್ಥವಾಗಿ ಬರಲು, ತಮಸಾ-ತೀರ್ಥದ ಪ್ರಸನ್ನತೆ-ರಮಣೀಯತೆಗಳು ಅವರಿಗೆ ಮೆಚ್ಚುಗೆಯಾಗುತ್ತವೆ.

ಆ ವನದ ಸೌಂದರ್ಯ, ಕ್ರೌಂಚ-ಪಕ್ಷಿಗಳ ಒಂದು ಜೋಡಿಯ ಇಂಪಾದ ಧ್ವನಿ – ಇವನ್ನು ಅವರು ಆಸ್ವಾದಿಸುತ್ತಿರುವಾಗಲೇ ಬೇಡನೊಬ್ಬ ಬಾಣಬಿಟ್ಟ, ಗಂಡು-ಕ್ರೌಂಚಕ್ಕೆ. ರಕ್ತ-ಸಿಕ್ತವಾಗಿ ನೆಲದ ಮೇಲೆ ಬಿದ್ದು ಅದು ಸತ್ತಿತು. ಸಹಚರನ ಸಾವಿಗೆ ಗೋಳಿಟ್ಟ ಕ್ರೌಂಚಿಯ ಸ್ಥಿತಿ ಹೃದಯ-ವಿದ್ರಾವಕವಾಗಿತ್ತು.

"ಆಹಾ! ಎಂತಹ ಅಧರ್ಮವಿದು!"  ಎಂದೆನಿಸಿತು ಧರ್ಮಾತ್ಮರಾದ ಋಷಿಗೆ. ಎಂದೇ ಶಾಪವುಕ್ಕಿತು: "ಏ ಬೇಡ! ಚಿರಕಾಲ ನಿನಗೆ ನೆಲೆ ದೊರೆಯದಿರಲಿ! ಕ್ರೌಂಚ-ಮಿಥುನದಲ್ಲಿ ಕಾಮ-ಮೋಹಿತವಾದದ್ದನ್ನು ನೀನು ಹೊಡೆದು ಸಾಯಿಸಿಬಿಟ್ಟೆಯೆಲ್ಲಾ!"

ಆ ಬಳಿಕ, "ಇದೇನು ನನ್ನ ಬಾಯಿಂದ ಇಂತಹ ಮಾತುಕ್ಕಿತು!" - ಎಂದು ಅವರೇ ಆಶ್ಚರ್ಯಪಡುವಂತಾಯಿತು. ಅದೇ ಗುಂಗಿನಲ್ಲಿರುವಲ್ಲೇ ಬ್ರಹ್ಮಾಗಮನವಾಯಿತು. ಬ್ರಹ್ಮನಿಗೆ ಸ್ವಾಗತ-ಸತ್ಕಾರಗಳನ್ನು ಮಾಡಿದ ಮೇಲೂ, ಆ ಕ್ರೌಂಚದ ಇಂಚರ, ನಿಷ್ಕರುಣನಿಂದ ಅದರ ನಿಷ್ಕಾರಣವಾದ ಹನನ, ಆಗ ಹೊಮ್ಮಿದ ತಮ್ಮ ಛಂದೋಬದ್ಧ-ವಾಣಿ – ಇವು ಅವರ ಚಿತ್ತವನ್ನಾವರಿಸಿದ್ದವು. ಅವನ್ನು ಗಮನಿಸಿದ ಬ್ರಹ್ಮನು, "ನನ್ನ ಸಂಕಲ್ಪದಿಂದಲೇ ನಿನ್ನ ವಾಕ್ಕು ಹೊಮ್ಮಿರುವುದು. ರಾಮ-ಚರಿತವನ್ನು ನೀನು ರಚಿಸು. ಅದು ಚಿರ-ಸ್ಥಾಯಿಯಾಗುವುದು" ಎಂದುಸುರಿ ಹೊರಟನು.

ಇಲ್ಲಿ ಕೆಲವು ಪ್ರಶ್ನೆಗಳಿವೆ. ಬೇಡರ ಕಸುಬೇ ಬೇಟೆ. ಪಶು-ಪ್ರಾಣಿಗಳನ್ನು ಕೊಂದೇ ಅವರ ಜೀವನ. ಎಲ್ಲರಿಗೂ ಬೇಕಾದುದು ಒಂದು ನೆಮ್ಮದಿಯ ಎಡೆ. ನಿನಗದು ದೊರೆಯದಿರಲಿ – ಎಂದು ಬೇಡನಿಗೆ ವಾಲ್ಮೀಕಿಗಳೆಂದುದು ಉಗ್ರ-ಶಾಪವಾಗಲಿಲ್ಲವೇ? ಪಕ್ಷಿಯೊಂದಕ್ಕೆ ಬಾಣ-ಪ್ರಯೋಗ ಮಾಡಿದವನ ಮೇಲೆ ಋಷಿಯೊಬ್ಬನ ಶಾಪ-ಪ್ರಯೋಗವಾದರೂ ಇಷ್ಟು ತೀಕ್ಷ್ಣವಾಗಬೇಕೇ?

ಈ ಪ್ರಶ್ನೆಗಳಿಗೆ ಶ್ರೀರಂಗಮಹಾಗುರುಗಳಿತ್ತ ಉತ್ತರ ದಿಕ್ಸೂಚಿಯಾಗಿದೆ. ಬೇಟೆಯೇ ತಪ್ಪೆಂದಲ್ಲ; ಅಧರ್ಮಮಯವಾದ ಬೇಟೆ ದಂಡನಾರ್ಹ. ಆ ಬೇಡನು ಮತ್ತಾವುದೇ ಪ್ರಾಣಿಯನ್ನೋ ಪಕ್ಷಿಯನ್ನೋ ಕೊಂದಿದ್ದರೆ ತಪ್ಪಿರುತ್ತಿರಲಿಲ್ಲ. ಆದರೆ ಕಾಮ-ಕೇಳಿಯಲ್ಲಿ ತೊಡಗಿರುವ ಹಕ್ಕಿಯನ್ನೇ ಹೊಡೆಯಬೇಕಿತ್ತೆ, ಆತ? ಪ್ರಾಣಿಗಳಿಗೆ ರತಿ-ಕ್ರೀಡೆಗಿಂತಲೂ ಹಿರಿದಾದ ಸುಖವುಂಟೇ? ಆ ನಲಿದಾಟಕ್ಕೆ ಭಂಗ ತಂದ ಬೇಡನಿಗೆ ನೆಲೆದಾಣವೂ ಬೇಡ! ಪರಸುಖ-ದ್ವೇಷಿಯಾಗಿ ಪಾಪಮಯನಾದವನು ಅಕಾರಣ-ವೈರಕ್ಕೆ ಎಡೆ. ಇಂತಹವನಿಗೀ ಶಾಪ ತಕ್ಕುದೇ ಸರಿ.

ಒಂದರ್ಥದಲ್ಲಿ ರಾಜ-ಕರ್ತವ್ಯವೂ ಋಷಿ-ಕರ್ತವ್ಯವೂ ಒಂದೇ. ಅಧರ್ಮವು ಆಳವಾಗಿ ಬೇರೂರಿದ್ದಲ್ಲಿ ತೀಕ್ಷ್ಣವಾದ ದಂಡನೆಯೇ: ರಾಜನಾದರೆ ಶರ-ಪ್ರಯೋಗ;  ಋಷಿಯಾದರೆ ಶಾಪ-ಪ್ರಯೋಗ. ರಾಜನಿಂದಲೇ ಆಗುವುದಿದ್ದಲ್ಲಿ ಆತನಿಂದಲೇ ಅದಾಗಬೇಕು. ಶಾಪ-ಸಾಮರ್ಥ್ಯವಿದ್ದರೂ ರಾಮನ ಮೂಲಕವೇ ರಾಕ್ಷಸ-ಸಂಹಾರವನ್ನು ವಿಶ್ವಾಮಿತ್ರರು ಮಾಡಿಸಿದರಷ್ಟೆ?

ಅತ್ಯಧರ್ಮಕಾರ್ಯವು ಜರುಗಿದಾಗ, ಅದಕ್ಕೆ ಕಾರಣನಾದವನಿಗೆ ತಕ್ಕ ಶಾಸ್ತಿಯಾಗಲೇಬೇಕೆಂಬ ಪಾಠದೊಂದಿಗಾರಂಭವಾಗಿದೆ, ರಾಮಾಯಣ.  ಕೊನೆಗೂ ರಾವಣನಲ್ಲೂ ಅಧರ್ಮವೇ ಬಲಿಷ್ಠವಾಗಿತ್ತೆಂದೇ ಸಾವು ಸಲ್ಲಬೇಕಾಯಿತಲ್ಲವೇ?

ಮೈಥುನದಲ್ಲಿದ್ದ ಜಿಂಕೆಯ ಮರಣಕ್ಕೆ ಕಾರಣನಾದ ಪಾಂಡುವಿಗೆ ಮೈಥುನದಿಂದಲೇ ಸಾವೆಂಬ ಶಾಪವು ತಟ್ಟಲಿಲ್ಲವೇ?

ಇನ್ನು ರಾಮಾಯಣದ ಅಂತ. ಅದು ಪಾತ್ರಧಾರಿಗಳೆಲ್ಲರೂ ಸ್ವ-ಸ್ವ-ಸ್ಥಾನಗಳನ್ನು ಸೇರಿಕೊಳ್ಳುವ ಸಮಯ. ಭೂಮಿ-ಜಾತೆಯಾಗಿ ಬಂದ ಸೀತೆಯು ಭೂಮಿಯಲ್ಲೇ ಸೇರಿಕೊಂಡಳು. ದೇವ-ಲೋಕದಿಂದ ಇಳಿದು ಬಂದ ರಾಮನೂ ತನ್ನ ಉಳಿದ ಪರಿವಾರದೊಂದಿಗೆ ತನ್ನ ಮೂಲ-ಸ್ಥಾನವನ್ನೇ ಸೇರಿಕೊಂಡ.

ಅದಕ್ಕೆ ಕೊಂಚ ಮುಂಚಿನ ರಾಮನ ಶೋಕ-ಕ್ರೋಧಗಳೂ ಸಹಜವೇ. ಬ್ರಹ್ಮನು ರಾಮನ ಪೂರ್ವ-ರೂಪದ ತಿಳಿವಳಿಕೆಯಿತ್ತಮೇಲೆ ರಾಮನ ಮನಸ್ಸೂ ಎಷ್ಟೋ ಪರಿವರ್ತಿತವಾಯಿತು; ಮತ್ತೊಬ್ಬಳನ್ನು ವರಿಸದೆ, ಕಾಂಚನ-ಜಾನಕಿಯೊಂದಿಗೇ ಯಜ್ಞಗಳನ್ನಾತ ನಡೆಸಿದನು; ಕಾಲಪುರುಷನ ಆಗಮನವಾಗಲು, ಕಾಲಾತೀತವಾದ ತನ್ನ ಮೂಲಸ್ಥಾನವನ್ನು ರಾಮನು ಸೇರಿದನು.

ಹೀಗೆ ವಾಲ್ಮೀಕಿಯೇ ಆಗಲಿ, ರಾಮನೇ ಆಗಲಿ, "ಹೆಪ್ಪುಗಟ್ಟಿದ ಅಧರ್ಮದಿಂದ ತಪ್ಪು ಹೆಜ್ಜೆಯನ್ನಿಡುವವರಿಗೆ, ಒಪ್ಪುವ ದಂಡನೆಯನ್ನಿತ್ತಲ್ಲಿಯೇ ಧರ್ಮಸ್ಥಾಪನೆಯು ಸಾಧಿತವಾಗುವುದು" - ಎಂಬ ಮುಖ್ಯ-ಬೋಧವನ್ನುಂಟುಮಾಡಿರುವರು. 

ಇದನ್ನಿಂದು ಮರೆತಿದ್ದೇವಲ್ಲವೇ?

ಸೂಚನೆ: 2/11/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 37 (Krishakarnamrta 37)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಧೇನುಪಾಲಕನು ಲೋಕಪಾಲಕನೇ!

ಕೃಷ್ಣನ ಸ್ವರೂಪವೆಂತಹುದು? ನಾವು ಹೇಳಲಾರೆವು - ಎನ್ನಿಸಿಬಿಟ್ಟಿದೆ, ಕವಿಗೆ. ಏಕೆ? ಆತನನ್ನು ಹತ್ತಿರದಿಂದಲೇ ನೋಡಿದವರುಂಟಲ್ಲವೇ? ಅವನೊಂದಿಗೋಡಾಡಿದವರೂ ಉಂಟಲ್ಲವೇ? ಅವರನ್ನೇ ಕೇಳಿದರಾಯಿತು. ಅವರಿಗೆ ಗೊತ್ತಿರುತ್ತದೆ, ಹೌದೇ. ಆದರೂ ಆತನನ್ನು ತಿಳಿದೂ ತಿಳಿಯೆವು! - ಎನ್ನುತ್ತಾನೆ, ಲೀಲಾಶುಕ. ಏಕೆ ಹಾಗೆ?

ಗೋಕುಲದಲ್ಲಲ್ಲವೆ ಕೃಷ್ಣನು ಇದ್ದದ್ದು? ಗೊಲ್ಲರೊಂದಿಗೆ ಆಡಿಕೊಂಡು ಬೆಳೆದ ಕೃಷ್ಣನು ಅವರು ಮಾಡುತ್ತಿದ್ದುದನ್ನೇ ಮಾಡುತ್ತಿದ್ದವನು. ಅವರು ದನ ಕಾಯುವವರು; ಈತನೂ ದನಗಳನ್ನು ಕಾಯ್ದವನೇ. ಎಂದೇ ಈತನು ಧೇನುಪಾಲಿ. ಧೇನುವೆಂದರೆ ಗೋವು, ಅವುಗಳ ಪಾಲಕ. ಹೀಗೆ ಕೃಷ್ಣನು ಗೋಪಾಲಕ, ಧೇನುಪಾಲಕ. 

ಕೃಷ್ಣನೊಬ್ಬ ಗೊಲ್ಲ - ಎಂದಷ್ಟೇ ಭಾವಿಸಿದೆವೋ, ಕೆಟ್ಟೆವು. ಏಕೆ? ಇತ್ತ ಗೋ-ಪಾಲಕನಾದರೂ ಅತ್ತ ಲೋಕ-ಪಾಲಕನೂ ಹೌದು, ಆತ. ಆದರೆ ಆತನ ಪೂರ್ವ-ಸಂಕಲ್ಪವೊಂದುಂಟೆಲ್ಲ? ಅದರಂತೆ, ತನ್ನ ಪೂರ್ಣ-ಸ್ವರೂಪವನ್ನು ತೋರಿಸಿಕೊಂಡವನೇ ಅಲ್ಲ, ಯಾರಿಗೂ; ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಸುಕೃತಿಗಷ್ಟೆ ಅವನನ್ನರಿಯುವ ಭಾಗ್ಯ. ಮುಂದೆ ಬರುವ ಅರ್ಜುನನಿಗೂ ಬಹಳ ಕಾಲ ಜೊತೆಯಲ್ಲಿದ್ದರೂ ತಿಳಿಯಲೇ ಇಲ್ಲ, ಕೃಷ್ಣನಾರೆಂಬುದಾಗಿ.

ಹಾಗಾದರೆ ಆತನ ವಾಸ್ತವ-ಸ್ವರೂಪವೇನು? ಆತನು ಸಾಕ್ಷಾದ್ ಭಗವಂತನೆಂಬುದೇ. ಭಗವಂತನು ಮಾಡುವ ಕೆಲಸವೇನು? ಅರ್ಥಾತ್, ಆತನೊಬ್ಬನೇ ಮಾಡುವ ಕೆಲಸಗಳೇನು? ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳು. ಜಗತ್-ಸೃಷ್ಟಿಯೂ ಜಗತ್-ಸಂಹಾರವೂ ಬಹಳ ಹಿಂದೆ ಅಥವಾ ಬಹಳ ಮುಂದೆ - ಎಂಬ ಸುದೂರ-ಕಾಲದಲ್ಲಿ ಆಗತಕ್ಕವು. ಆದರೆ ಇವೆರಡರ ನಡುವಣ ಇರುವ ಸ್ಥಿತಿಯೆಂಬುದೇ ಆತನ ಕಾರ್ಯ. ಸ್ಥಿತಿಯೆಂದರೆ ನಾಶವಾಗದಂತೆ ಕಾಪಾಡುವುದು. ಹಾಳಾಗದಂತೆ ರಕ್ಷಿಸುವುದನ್ನೇ ಪಾಲಿಸುವುದೆನ್ನುವುದು. ಸ್ಥಿತಿಯು ವಿಷ್ಣುಕಾರ್ಯ. ಹೀಗೆ ಲೋಕ-ಪಾಲಿಯಾದವನು ಭಗವಂತ.

ಹೀಗೆ, ಯಾವಾತನನ್ನು ಕೇವಲ ಧೇನು-ಪಾಲಕನೆಂದುಕೊಂಡುಬಿಡುವೆವೋ ಆತನು ವಾಸ್ತವವಾಗಿ ಲೋಕ-ಪಾಲಕನೇ ಹೌದು. ಮೊದಲನೆಯದು ಬರಿಗಣ್ಣಿಗೇ ಕಾಣಬಹುದಾದ ಅಂಶ. ಎರಡನೆಯದು ಯೋಗಿಗಳಿಗೂ ಸು(ಲಭ)ವೇದ್ಯವಾಗದ ಅಂಶ. ಇದುವೇ ಭಗವಂತನ ಮಾಯೆ!

ಹಾಗೆಯೇ ಆತನು ರಾಧೆಯ ಸಂಗಡಿಗ. ರಾಧೆಯೆಂಬುದು ಅಸಾಧಾರಣವಾದ ಜೀವ. ಕೃಷ್ಣನಿಗಾಗಿ ಪ್ರಾಣವನ್ನೇ ಪಣವಿಟ್ಟ ಜೀವ. ಭಗವತ್ಪ್ರೀತಿಕರವಾದ ಗುಣಗಳನ್ನೆಲ್ಲ ಸಂಪಾದಿಸಿಕೊಂಡಿರುವ ಜೀವ. ರಾಧಾ-ತತ್ತ್ವವೆಂದರೇನೆಂಬುದನ್ನು ಶ್ರೀರಂಗಮಹಾಗುರುಗಳು  ಬಿಡಿಸಿ ತೋರಿಸಿದ್ದರು: "ಯಾರ ಮನೋಧಾರೆಯು ಸದಾ ಭಗವಂತನತ್ತಲೇ ಹರಿಯುತ್ತಿರುವುದೋ ಅವಳೇ ರಾಧೆ. ಅರ್ಥಾತ್, ಧಾರಾ ಎನ್ನುವುದನ್ನೇ ರಾಧಾ ಎಂದಿರುವುದು."

ಯಾರು ಮನಸ್ಸನ್ನು ಸರ್ವದಾ ತಮ್ಮ ಲಕ್ಷ್ಯದತ್ತಲೇ ಹರಿಸುವರೋ, ಅವರು ತಮ್ಮ ಲಕ್ಷ್ಯವನ್ನು ಸಾಧಿಸಿಯೇ ಸಾಧಿಸುವುದರರೆಂಬುದರಲ್ಲಿ ಸಂಶಯವೇ ಇಲ್ಲ. ರಾಧಿಸುವುದೆಂದರೂ ಸಾಧಿಸುವುದೆಂದರೂ ಒಂದೇ. ರಾಧ್, ಸಾಧ್ - ಎಂಬೀ ಧಾತುಗಳಿಂದ ಬಂದವು. ಹೀಗಾಗಿ ಗುರಿಸಾಧಿಸತಕ್ಕವಳೇ ರಾಧೆ. ಅವಳ ಗುರಿಯಾದರೂ ಉನ್ನತ, ಉದಾತ್ತ.

ಅನೇಕ ಜೀವಗಳು ಭಗವಂತನಿಗೆ ಪ್ರಿಯವಾಗುವುದುಂಟು. ಅವುಗಳಲ್ಲೆಲ್ಲಾ ಪ್ರಿಯತಮವಾದ ಜೀವವೇ ರಾಧೆ. ಭಗವಂತನೊಬ್ಬನೇ ಪುರುಷನೆನ್ನುವಾಗ, ಜೀವಗಳಿಗೆ ಆತನನ್ನು ಕುರಿತಾಗಿ ಸ್ತ್ರೀ-ಭಾವವುಂಟಾಗುವುದರಲ್ಲಿ ಆಶ್ಚರ್ಯವಿಲ್ಲ. ಸ್ತ್ರೀ-ದೇಹವನ್ನು ಧರಿಸಿರುವ ಜೀವವು ತನ್ನ ಮೈಮನಸ್ಸುಗಳನ್ನು ಸಹಜವಾಗಿಯೇ ಭಗವಂತನಿಗೇ ಕೊಟ್ಟುಕೊಳ್ಳಬಲ್ಲದು.

ಭಗವಂತನೂ ತನಗೆ ಪ್ರಿಯವಾದ ಜೀವವು ಹಂಬಲಿಸುವ ಬಗ್ಗೆ ಹಾಗೆಯೇ ಸ್ಪಂದಿಸುವುದೂ ಉಂಟು: ಭಗವಂತನ ಅಂಗ-ಸಂಗಕ್ಕೇ ಹಂಬಲಿಸಿದ ಜೀವಗಳಿಗೆ ಅದನ್ನೇ ದಯಪಾಲಿಸುವನು. ಹೀಗಾಗಿ ರಾಧೆಯು ಆಶಿಸುವ ದೈಹಿಕ-ಸಂಪರ್ಕವನ್ನು ಅವಳಿಗಿಲ್ಲವೆನ್ನಲಾಗದು. ಅದನ್ನೇ ಇಲ್ಲಿ ರಾಧೆಯ ವಕ್ಷಸ್ಸಿನೆಡೆಯಲ್ಲಿ ಮಲಗುವವನವನೆಂದು ಕೃಷ್ಣನನ್ನು ಕುರಿತು ಹೇಳಿದೆ. ಅದು ಮೇಲ್ನೋಟಕ್ಕಷ್ಟೇ ದೈಹಿಕ-ಸುಖ.

ಆತನ ಅವತಾರಗಳಲ್ಲಿಯ ಲೀಲೆಯು ಬಗೆಬಗೆಯಾದುದು; ಆದರೆ ಆತನು ಸ್ವರೂಪತಃ ಶೇಷ-ಶಾಯಿ. ಆದಿಶೇಷನ ಮೇಲೆ ಪವಡಿಸುವ ಸಾಕ್ಷಾನ್ಮಹಾವಿಷ್ಣುವೇ.

ಹೀಗಾಗಿ ಮೇಲ್ನೋಟಕ್ಕೆ ರಾಧಾ-ಸಂಗದಲ್ಲಿ ಶಯಿಸುವವನಾದರೂ ವಾಸ್ತವವಾಗಿ ಶೇಷನ ಮೇಲೇ ಶಯಿಸುವವ.

ಹೀಗೆ ಹೊರನೋಟದಿಂದ ನೋಡಿದ ವರ್ತನೆಯು ಲೋಕಸಾಧಾರಣವೆಂಬಂತೆ ಕಂಡರೂ, ಒಳನೋಟದಿಂದ ಕಂಡದ್ದು ಲೋಕೋತ್ತರತೆಯನ್ನು ತೋರಿಸಿಕೊಡುವುದು. ಎಂದೇ, ಮೂಲತಃ ಆತನು ಜ್ಯೋತಿಃಸ್ವರೂಪನೆಂಬುದನ್ನು ಆರಂಭದಲ್ಲೇ ಜ್ಞಾಪಿಸುತ್ತಾ "ತೇಜಸ್ಸಿಗೆ ನಮಸ್ಕಾರ" ಎನ್ನುತ್ತಾನೆ.

ಯಾವ ತೇಜಸ್ಸಿನ ಮುಂದೆ ಸೂರ್ಯನ ತೇಜಸ್ಸೂ ಮಂಕಾಗುವುದೋ ಯಾವನನ್ನು "ಕೋಟಿಸೂರ್ಯ-ಸಮಪ್ರಭ"ನೆನ್ನಲಾಗುವುದೋ ಅವನನ್ನು ಮನಸ್ಸಿನಿಂದ ಅರಿಯುವವರಾರು, ಮಾತಿನಿಂದ ಬಣ್ಣಿಸುವವರಾರು?

ಈ ಶ್ಲೋಕದಲ್ಲಿ ಪಾಲಿನೇ-ಪಾಲಿನೇ, ಶಾಯಿನೇ-ಶಾಯಿನೇಗಳು ಎರಡೆರಡು ಬಾರಿ ಬಂದಿವೆ - ಶ್ಲೋಕದ ಪೂರ್ವಾರ್ಧ-ಉತ್ತರಾರ್ಧಗಳಲ್ಲಿ. ಇವುಗಳಲ್ಲಿ ಮೊದಲನೆಯ "ಪಾಲಿನೇ"ಯು ಲೌಕಿಕವನ್ನೂ ಎರಡನೆಯ "ಪಾಲಿನೇ"ಯು ಪಾರಮಾರ್ಥಿಕವನ್ನೂ ಹೇಳುತ್ತವೆ. ಹಾಗೆಯೇ ಮೊದಲನೆಯ "ಶಾಯಿನೇ"ಯು ಲೌಕಿಕವನ್ನೂ ಎರಡನೆಯ "ಶಾಯಿನೇ"ಯು ಪಾರಮಾರ್ಥಿಕವನ್ನೂ ಹೇಳುತ್ತವೆ.

ಭಗವಂತನು ಕೃಷ್ಣನಾಗಿ ಇಹಕ್ಕೆ ಅವತರಿಸಿ ಬಂದಾಗ ತೋರಿಕೊಂಡ ಬಗೆಯೇನು, ಸ್ವಸ್ಥಾನದಲ್ಲಿ ಸ್ಥಿತನಾಗಿದ್ದಾಗ ಇದ್ದಿರುವ ಬಗೆಯೇನು? - ಎಂಬುದನ್ನು ಚಿಕ್ಕಶ್ಲೋಕದಲ್ಲಿ ಚೊಕ್ಕದಾಗಿ ನಿರೂಪಿಸಿದ್ದಾನೆ, ಲೀಲಾಶುಕ!

ಶ್ಲೋಕ ಹೀಗಿದೆ:

ತೇಜಸೇಽಸ್ತು ನಮೋ ಧೇನು-ಪಾಲಿನೇ ಲೋಕ-ಪಾಲಿನೇ |

ರಾಧಾ-ಪಯೋಧರೋತ್ಸಂಗ-ಶಾಯಿನೇ ಶೇಷ-ಶಾಯಿನೇ ||

ಮತ್ತೊಂದು ಪದ್ಯ. ಈ ಶ್ಲೋಕದ ಪ್ರತಿಪಾದವೂ ಧೇಯಂ ಎಂದೇ ಕೊನೆಗೊಳ್ಳುತ್ತದೆ. ಕೊನೆಯ ಪಾದದಲ್ಲಿ "ನನಗೆ ಅನುಸಂಧೇಯವಾದದ್ದು ಇದು" ಎಂಬುದನ್ನು ಸೂಚಿಸಿದೆ.

ಏನು ಅನುಸಂಧೇಯವೆಂದರೆ? ಯಾವುದು ಅನುಸಂಧಾನಕ್ಕೆ ಯೋಗ್ಯವೋ ಅದುವೇ ಅನುಸಂಧೇಯ. ಒಂದು ಉತ್ಕೃಷ್ಟ-ವಿಷಯಕ್ಕೆ ಮನಸ್ಸನ್ನು ಪದೇ ಪದೇ ಕೊಟ್ಟುಕೊಳ್ಳುವುದು, ಅದನ್ನೇ ಮತ್ತೆ ಮತ್ತೆ ಭಾವಿಸುವುದು. ಅನುಸಂಧಾನವೆನಿಸುತ್ತದೆ. ನಾಲ್ಕು ವಿಶೇಷಣಗಳಿಂದ ಅನುಸಂಧೇಯವನ್ನು ಹೇಳುತ್ತಾನೆ, ಕವಿ.

ಮೊದಲನೆಯದಾಗಿ ಅದರ ಹೆಸರು. ಅದು  "ನರಹರಿ"ಯೆಂಬುದಾಗಿ. ನರಹರಿಯೆಂದರೆ ನರಸಿಂಹ. ಅದುವೇ ಅದರ ಅಭಿಧಾನ. ಅಭಿಧಾನದಿಂದ ಗೊತ್ತಾಗಬೇಕಾದದ್ದು ಅಭಿಧೇಯ. ಅಭಿಧಾನವು ಪದ; ಅಭಿಧೇಯವು ಅರ್ಥ. ಹೀಗೆ ಅದು ನರಹರಿ-ಪದ-ಅಭಿಧೇಯ.

ನರಸಿಂಹನ ಹೆಸರು ಹೇಳುತ್ತಲೇ ಆತನ ಅನುಗ್ರಹಕ್ಕೆ  ಪಾತ್ರನಾದ ಪ್ರಹ್ಲಾದನ ಸ್ಮರಣೆಯುಕ್ಕುವುದಲ್ಲವೇ? ತಂದೆಯಿಂದಲೇ ಅದೆಷ್ಟೆಷ್ಟು ಕಷ್ಟಗಳಿಗೆ ತುತ್ತಾದರೂ ಪ್ರಹ್ಲಾದನ ಭಾಗ್ಯವೆಂದರೆ ಸಾಕ್ಷಾನ್ನರಸಿಂಹನೇ. ಮಹಾಭಾಗ್ಯಕ್ಕಾಗಿ ಮಹಾಕ್ಲೇಶವೂ ಸಹ್ಯವೇ. ಭಾಗ್ಯವೇ  ಭಾಗಧೇಯವಾದ್ದರಿಂದ ನೃಸಿಂಹನು ಪ್ರಹ್ಲಾದ-ಭಾಗಧೇಯನೇ ಸರಿ.

ಈತನನ್ನು ಹುಡುಕುವುದೆಲ್ಲಿ? ಸಿಂಹಗಳು ಗುಹೆಯಲ್ಲಿ ವಾಸಿಸುತ್ತವೆಯಲ್ಲವೇ? ಈ ನರಸಿಂಹನು ಗೋಚರನಾಗುವುದು ಮಹಾಗುಹೆಯಲ್ಲಿ. ಯಾವುದದು? ನಿಗಮಾಂತ ಎಂಬುದು. ನಿಗಮವೆಂದರೆ ವೇದಗಳು. ನಿಗಮಾಂತವೆಂದರೆ ವೇದಾಂತ. ವೇದಗಳ ಕೊನೆಯಲ್ಲಿ ಬರತಕ್ಕ ಭಾಗವೇ ವೇದಾಂತ, ಅರ್ಥಾತ್ ಉಪನಿಷತ್ತು. ವೇದಗಳು ಪ್ರಧಾನವಾಗಿ ಕರ್ಮಕಾಂಡವೆನಿಸಿದರೆ, ಉಪನಿಷತ್ತುಗಳು ಜ್ಞಾನಕಾಂಡ. ಜ್ಞಾನಸ್ವರೂಪನಾದವನನ್ನು ಜ್ಞಾನಕಾಂಡದಲ್ಲಿ ತಾನೆ ಹುಡುಕುವುದು?  ಉಪನಿಷತ್ತುಗಳ ಒಳಗೇ ಪ್ರತಿಪಾದ್ಯನಾದವನನ್ನು ಅಂತರಾಧೇಯವೆಂದಿದೆ (ಅಂತರ್-ಆಧೇಯ).

ಕೊನೆಯದಾಗಿ, ಇದು ವಿಬುಧ-ವಿಧೇಯ. ಎಂದರೆ ದೇವತೆಗಳು ಇದಕ್ಕೆ ವಿಧೇಯರಾಗಿರುವರು, ಅರ್ಥಾತ್ ತಗ್ಗಿಬಗ್ಗಿ ಇರುವರು. ವಿಬುಧರೆಂದರೆ ವಿದ್ವಾಂಸರೂ ಹೌದು: ಇಬ್ಬರೂ ವಿಶೇಷವಾದ ಅರಿವುಳ್ಳವರಲ್ಲವೇ? ವಿದ್ವಾಂಸರೆನಿಸಿಕೊಂಡವರಿಗೂ ಇದು ವಿಧೇಯ, ಎಂದರೆ ವಿಹಿತವಾದದ್ದು.

ಇಂತಹ ಮಹಾತತ್ತ್ವವೇ ತನಗೆ ಅನುಸಂಧೇಯವಾಗಿದೆಯೆನ್ನುತ್ತಾನೆ, ಕವಿ.

ಪ್ರಹ್ಲಾದ-ಭಾಗಧೇಯಂ

ನಿಗಮಾಂತ-ಮಹಾ-ಗುಹಾಂತರಾಧೇಯಂ |

ನರಹರಿ-ಪದಾಭಿಧೇಯಂ

ವಿಬುಧ-ವಿಧೇಯಂ ಮಮಾನುಸಂಧೇಯಂ ||

ಸೂಚನೆ : 2/11/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.