ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಕುಣಿಯುವ ಪುಟ್ಟ ಕೃಷ್ಣ ಮನಸ್ಸನ್ನು ಬೇಗನೆ ಸೆಳೆಯುತ್ತಾನೆ. ಎಷ್ಟೋ ವೇಳೆ ಎಳೆಯ ಮಕ್ಕಳ ಮುಖವೋ ಮೈಯೋ ಸುಲಕ್ಷಣವಾಗಿಲ್ಲದಿದ್ದರೂ, ಆ ಎಳಸೆಂಬುದೇ ಅದೇನೋ ಒಂದು ಸೊಬಗನ್ನು ತಂದುಕೊಡುವುದು. ಇನ್ನು ಸೊಗಯಿಸುವ ಮೊಗವುಳ್ಳ ಕೂಸಾಗಿದ್ದರಂತೂ ಹೇಳಲೇಬೇಕಿಲ್ಲ. ಹಾಗಿರಲು, ಕಂಡವರೆಲ್ಲರ ಕಣ್ಮಣಿಯೆನಿಸುವ ಕೃಷ್ಣನ ಮುದ್ದಿಗೆ ಎಂದಾದರೂ ಎಲ್ಲಿಯಾದರೂ ಎಣೆಯಿದ್ದೀತೇ?
ಸಣ್ಣ ಮಕ್ಕಳಿಗೂ ಸೊಂಟಕ್ಕೆ ಡಾಬು, ಕೈಗಳಿಗೆ ಬಳೆಗಳು, ಕಾಲ್ಗೆ ಕಡಗಗಳನ್ನು ಹಾಕುವುದುಂಟಲ್ಲವೇ? ಇವುಗಳಿಂದ ಹೊಮ್ಮುವ ಧ್ವನಿಗಳಿಂದಾಗಿ ನಮ್ಮ ಕಿವಿಗಳಿಗೂ ಕಣ್ಗಳಿಗೂ ಹಬ್ಬವಾಗುತ್ತಾ ಬರುತ್ತಿರುವ ಪುಟ್ಟಕೃಷ್ಣನನ್ನು ಪ್ರಕೃತ-ಶ್ಲೋಕದಲ್ಲಿ ಚಿತ್ರಿಸಿದೆ. ಆತನಿಗೆ ವಂದನವನ್ನೂ ಹೇಳಿದೆ.
ಅಂಗಣ-ಭೂ ಎಂದರೂ ಒಂದೇ, ಅಂಗಳ-ಭೂಮಿ ಎಂದರೂ ಒಂದೇ. ಅಲ್ಲಿ ಅಟನ, ಎಂದರೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವುದು: ಅದೇ ಈ ಪುಟ್ಟ ಬಾಲಕನ ಪಟುವಾದ ಚಟುವಟಿಕೆ. ಸಂಸ್ಕೃತದ 'ಅಟ ಗತೌ' ಎಂಬ ಧಾತುವಿನಿಂದಲೇ ಕನ್ನಡದ ಆಟ-ಆಡುಗಳು ಬಂದಿರುವುದು. ಹೀಗೆ ಸದಾ ಅಟನ ಮಾಡುತ್ತಿರುವವ, ಈ ಎಳೆಯ.
ರಿಂಖಣ-ರಿಂಗಣ – ಎಂದರೆ ಅಂಬೆಗಾಲಿಡುವುದು. (ನಡೆಯುವಾಗ ಒಮ್ಮೊಮ್ಮೆ ಎಡವುವಿಕೆಗೂ ರಿಂಗಣವೆನ್ನುವುದುಂಟು; ಅದಿಲ್ಲಿ ಅನನ್ವಿತ). ಅಂತೂ ಅಂಗಳದಲ್ಲೆಲ್ಲಾ ಅಂಬೆಗಾಲಿಡುತ್ತ ಸದ್ದು ಮಾಡುತ್ತಿದ್ದಾನೆ, ಈ ಬಾಲ.
ಯಾವ ಯಾವ ಸದ್ದುಗಳು? ಡಾಬಿನ ಕಿಂಕಿಣಿಯ ಸದ್ದು, ಹೆಜ್ಜೆಯ ಸದ್ದು, ಹಸ್ತ-ಭೂಷಣದ ಸದ್ದು – ಇವುಗಳು. ಕಿಂಕಿಣಿಯೆಂದರೆ ಕ್ಷುದ್ರ-ಘಂಟಿಕಾ - ಅರ್ಥಾತ್ ಕಿರು-ಗಂಟೆ. ಪುಟ್ಟ-ಗಂಟೆಗಳು ಮಾಡುವ ಸದ್ದು ಕಿಣಿ-ಕಿಣಿ - ಎಂದು. ವಸ್ತುತಃ ಅವುಗಳಿಂದ ಹೊಮ್ಮುವ ಧ್ವನಿಯಿಂದಾಗಿಯೇ ಅವುಗಳಿಗೆ ಆ ಹೆಸರು ಬಂದಿರುವುದು: ಕಿಣಿ-ಕಿಣಿ - ಎನಿಸುವ ಸದ್ದುಗಳನ್ನು ಮಾಡುವಂತಹುದಾವುದೋ ಅದೇ ಕಿಂಕಿಣಿಯೆನಿಸುವುದು.
ಕ್ರಿಸ್ತಪೂರ್ವ ಆರನೆಯ ಶತಮಾನದ ಯಾಸ್ಕಮಹರ್ಷಿಗಳ ನಿರುಕ್ತವೆಂಬ ಗ್ರಂಥದಲ್ಲಿ ಈ ಬಗೆಯ ಪದ-ನಿರ್ಮಾಣವನ್ನು "ಶಬ್ದಾನುಕೃತಿ" ಎಂದು ಕರೆದಿದ್ದಾರೆ. ಹಾಗೆಂದರೆ, ಧ್ವನಿಯನ್ನು ಅನುಕರಿಸುವಂತೆಯೇ ಪದವಿರುವುದು. ಕಾಗೆಯು ಕಾ ಕಾ ಎಂದು ಕೂಗುವುದಷ್ಟೆ? ಅದಕ್ಕಾಗಿಯೇ ಅದಕ್ಕೆ ಕಾಕ - ಎಂದು ಹೆಸರಲ್ಲವೇ? ಹಾಗೆಯೇ, ಘಣ್ – ಎಂದು ಧ್ವನಿಗೈಯುವ ವಸ್ತುವೇ ಘಂಟೆ (ನ್ಯಾಯವಾಗಿ "ಘಣ್ಟೆ"). ಇರಲಿ.
ಆತನ ಕಟಿಪ್ರದೇಶಕ್ಕೆ (ಎಂದರೆ ಸೊಂಟಕ್ಕೆ) ಕಟ್ಟಿದ ಕಿರು ಉಡ್ಯಾಣದಿಂದ ಹೊಮ್ಮುವ ಧ್ವನಿ ಕಿಣಿ-ಕಿಣಿಯೆಂಬುದು. ಸರಸರನೆ ಅಂಬೆಗಾಲಿಡುವ ಚಟುವಟಿಕೆಯ ಶಿಶುವಾದ್ದರಿಂದ ಆ ಕಿಣಿಕಿಣಿ-ದನಿಗಳಲ್ಲೇ ಒಂದು ರಭಸ, ಒಂದು ವೇಗ, ತೋರಿಬರುತ್ತದೆ.
ಇದಲ್ಲದೆ ಆತನ ಎರಡು ಕೈಗಳಿಗೂ ಕಂಕಣಗಳನ್ನು ಕಟ್ಟಿದೆ. ಕಣ್-ಕಣ್ - ಎಂದು ಶಬ್ದ ಮಾಡತಕ್ಕವೇ ಮೂಲತಃ ಕಂಕಣಗಳು. ಸಂಸ್ಕೃತದ ಕಂಕಣವೇ ಹಿಂದಿಯ ಕಂಗನ್. ದನಿಗೈಯುವ ಕಂಕಣವನ್ನು ಕಟ್ಟುವ ಎಡೆಯಲ್ಲೇ ಕಟ್ಟುವ, ದನಿಮಾಡದ ಹಳದೀದಾರ-ಕರೀದಾರಗಳಿಗೂ ಕಂಕಣವೆಂಬ ಹೆಸರೇ ಸಂದಿದೆಯಷ್ಟೆ? ಸ್ಥಾನ-ಮಹಿಮೆಯಲ್ಲವೇ?
ಹಾಗೆಯೇ, ಕಾಲಿಗೆ ಕಟ್ಟಿದ ಗೆಜ್ಜೆಯಿಂದ ಕುಂಕುಣು-ಕುಣು-ಧ್ವನಿ ಹೊಮ್ಮುತ್ತದೆ. ಅಂತೂ ಕಿಂಕಿಣಿ-ಕುಂಕುಣು - ಮುಂತಾದ ಶಬ್ದಗಳನ್ನು ಮಾಡುತ್ತಾ ನಂದ-ಗೋಕುಲದ ಮಂದಿಯ ಮನೆಗಳಂಗಳಗಳಲ್ಲೆಲ್ಲಾ ಸದ್ದು ಮಾಡುತ್ತಿರುವ ಕಿರಿಯ ಕೃಷ್ಣನು ನಂದ್ಯನೂ ಹೌದು, ವಂದ್ಯನೂ ಹೌದು.
ಯಾರ ಬಗ್ಗೆ ಸಂತೋಷಪಡಬೇಕೋ ಅವನು ನಂದ್ಯ; ಯಾರಿಗೆ ವಂದಿಸತಕ್ಕದ್ದೋ ಆತನು ವಂದ್ಯ.
ಶ್ಲೋಕದಲ್ಲಿ ದ್ವಿತೀಯಾಕ್ಷರಪ್ರಾಸ ಸ್ಪಷ್ಟವಾಗಿದೆ. (ಅನುಪ್ರಾಸಾಲಂಕಾರದಲ್ಲಿ ಕಕಾರ-ಗಕಾರಗಳಲ್ಲಿ ಭೇದವೆಣಿಸಬೇಕಿಲ್ಲವೆಂಬ ಲೆಕ್ಕವಿದೆಯಷ್ಟೆ?)
ಕಿಂಕಿಣಿ-ಕಿಣಿ-ಕಿಣಿ-ರಭಸೈರ್
ಅಂಗಣಭುವಿ ರಿಂಗಣೈಃ ಸದಾಟಂತಂ|
ಕುಂಕುಣು-ಕುಣು-ಪದ-ಯುಗಳಂ
ಕಂಕಣ-ಕರ-ಭೂಷಣಂ ಹರಿಂ ವಂದೇ ||
**********
ಇದೊಂದಿದ್ದರೆ ಮತ್ತೇನೂ ಬೇಡ
ಕೃಷ್ಣನೇ, ನನ್ನ ವಿಷಯದಲ್ಲಿ ನೀನು ಪ್ರಸನ್ನನಾಗು - ಎಂದು ಪ್ರಾರ್ಥಿಸುತ್ತಾನೆ, ಲೀಲಾಶುಕ. ಪ್ರಸನ್ನನಾಗುವುದೆಂದರೆ ಹೇಗೆ? ಆತನು ತನ್ನ ಕಟಾಕ್ಷಗಳನ್ನಿತ್ತ ಬೀರಿದರಾಯಿತು.
ಆತನ ಕಟಾಕ್ಷಗಳು ಮಧುರವಾದವು. ಏನು ಮಧುರವೆಂದರೆ? ಪ್ರಸಿದ್ಧಾರ್ಥವು ಎಲ್ಲರಿಗೂ ಗೊತ್ತಿರುವುದೇ. ಆದರೆ ಅದಕ್ಕೆ ವಿಶೇಷಾರ್ಥವೂ ಒಂದಿದೆ.
ಯಾವುದು ಮಧುವನ್ನು ಸ್ರವಿಸುವುದೋ ಅದು ಮಧುರ. ಮಧುವೆಂದರೆ ಜೇನು ತಾನೆ? ಅದಕ್ಕೆ ಬೇರೆ ತಾತ್ಪರ್ಯವೂ ಉಂಟು. ಮಧುವು ಮತ್ತನ್ನು ಬರಿಸುವುದಲ್ಲವೇ? ಆದುದರಿಂದ ಮಧುವೆಂದರೆ ಮಾದಕವಾದದ್ದು. ಮಾದಕವೆಂದರೆ ಎಷ್ಟು ಮಾದಕ? ಬೇರೆ ರಸಗಳನ್ನು ಮರೆಸಿಬಿಡುವಂತಹುದು.
ಹೀಗೆ ಅನ್ಯ-ರಸ-ವಿಸ್ಮಾರಕವಾದ ರಸವಾವುದು? ಅದುವೇ ಪ್ರೇಮ-ರಸ. ಹೀಗಾಗಿ ಮಧುರ-ಕಟಾಕ್ಷಗಳೆಂದರೆ ಪ್ರೇಮ-ರಸ-ಭರಿತವಾದಂತಹವು. ಅಂತಹ ಕಟಾಕ್ಷಗಳನ್ನು ಕೃಷ್ಣನು ಬೀರುವುದಾದರೆ, ಅದಕ್ಕಿಂತಲೂ ಇಲ್ಲಿ ಸುಖವಿನ್ನೇನು, ಜೀವನಕ್ಕೆ ಧನ್ಯತೆಯಿನ್ನೇನು?
ಆ ಕಟಾಕ್ಷಗಳ ಮಾಧುರ್ಯಕ್ಕೆ ಕಳೆಕಟ್ಟಲೂ ಆಸ್ಪದವಿದೆ. ಹೇಗೆ? ತಾನೇ ನುಡಿಸುವ ಕೊಳಲಿನ ನಾದವನ್ನು ಅನುಸರಿಸಿ ಅವು ಬಂದಾಗ. ನಾದವೆಂದರೂ ನಿನಾದವೆಂದರೂ ಒಂದೇ; ವಂಶವೆಂದರೂ ವಂಶೀ ಎಂದರೂ ಒಂದೇ (ಕೊಳಲೇ). ಕಟಾಕ್ಷಗಳು ವಂಶೀ-ನಿನಾದವನ್ನು ಅನುಸರಿಸಿ ಬಂದರೆ ಅದೀಗ ಸೊಗಸು.
ಇದಕ್ಕೆ ವಿರುದ್ಧವಾದರೂ ಸೊಗಸೇ. ಹೇಗೆ? ಕಟಾಕ್ಷಗಳನ್ನನುಸರಿಸಿ ವೇಣು-ನಿನಾದಗಳು ಬಂದರೂ, ಅದೂ ಚೆನ್ನೇ. (ವ್ಯಾಕರಣರೀತ್ಯಾ, ಎರಡು ಬಗೆಯಲ್ಲೂ ವಿಗ್ರಹ-ವಾಕ್ಯವನ್ನು ಮಾಡಬಹುದು).
ಪ್ರಭುವಿನ ಪ್ರಸನ್ನತೆಯನ್ನೇ ಕವಿಯು ಕೇಳಿಕೊಳ್ಳುತ್ತಿರುವುದೇಕೆ? ಅದೊಂದೇ ಸಾಕೇ? ಹೌದೆನ್ನುತ್ತಾನೆ, ಲೀಲಾಶುಕ. ಅದೊಂದಿದ್ದರೆ ಇಲ್ಲಿ ಬೇರೇನೂ ಬೇಡವೆನ್ನುತ್ತಾನೆ! ಬೇರೆಲ್ಲ ಇದ್ದರೂ ಭಗವತ್-ಪ್ರಸನ್ನತೆಯೊಂದಿಲ್ಲದಿದ್ದರೆ, ಏನೆಲ್ಲ ಇದ್ದೂ ಪ್ರಯೋಜನವಿಲ್ಲ.
ಜೀವನಕ್ಕೇ ಕೇಂದ್ರ-ಭೂತವಾದದ್ದು ಮುಖ್ಯವಾಗಿ ಇರಬೇಕು. ಅದುವೇ ಮೊಟ್ಟಮೊದಲು, ಅಥವಾ ಮುಖ್ಯವಾಗಿ ಇರಬೇಕಾದದ್ದು. ಅದೊಂದಿದ್ದರೆ ಮಿಕ್ಕದ್ದೆಲ್ಲವೂ ಇದ್ದಂತೆಯೇ; ಅಥವಾ ಅದೊಂದಿದ್ದರೆ ಮಿಕ್ಕವೂ ದಕ್ಕತಕ್ಕವೇ. ಆದರೆ ಅದೇ ಇಲ್ಲವೋ, ಬೇರೆಲ್ಲವೂ ಇದ್ದರೂ ಪ್ರಯೋಜನವಿಲ್ಲ.
ಕೇಂದ್ರ-ಭೂತವಾದದ್ದೊಂದು ಸಿದ್ಧವಾದರೆ ಮಿಕ್ಕೆಲ್ಲವೂ ಹೇಗೋ ಅಣಿಗೊಳ್ಳುವುವೇ ಸರಿ. ಇದಕ್ಕೆ ಉದಾಹರಣೆಯೊಂದನ್ನು ಕೊಡಬಹುದು. ಕಲ್ಯಾಣಮಂಟಪ, ಒಳ್ಳೆಯ ಮುಹೂರ್ತದ ದಿನ, ಪುರೋಹಿತರು - ಎಲ್ಲವೂ ನಿಶ್ಚಿತವಾಗಿದೆ, ವಿವಾಹವಾಗಲು ಕನ್ಯೆಯು ಮಾತ್ರ ಇನ್ನೂ ಸಿಕ್ಕಿಲ್ಲ- ಎಂದು ಒಬ್ಬ ಹೇಳಿದನಂತೆ!
ಇದರ ಬದಲು, ಮೊಟ್ಟಮೊದಲು ಆಗಬೇಕಾದದ್ದು ಕನ್ಯಾ-ನಿಶ್ಚಯ. ಅದೊಂದು ಸಿದ್ಧವಾಯಿತೋ, ಮಿಕ್ಕೆಲ್ಲ ಕೆಲಸಗಳು ತಂತಾನೆ ಘಟಿಸುತ್ತವೆ. ಕೇಂದ್ರ-ಭೂತವಾದದ್ದೇ ಘಟಿಸದೆ, ಮಿಕ್ಕೆಲ್ಲ ಸಿದ್ಧತೆಗಳಿಗಾಗಿ ಎಷ್ಟು ಓಡಾಡಿದರೇನು ಬಂತು?
ಎಂದೇ, ಕೃಷ್ಣನಿಲ್ಲದೆ ರಾಧೆಗೆ ಮನೆಯೂ ಕಾಡಿನಂತಾಯಿತು, ಸಖೀ-ಸಮೂಹವೂ ಜಾಲದಂತೆ (ಬೇಡರ ಬಲೆಯಂತೆ) ಆಯಿತು - ಎಂದು ಚಿತ್ರಿಸುವ ಮುದ್ದಾದ ಶ್ಲೋಕವೊಂದು ಗೀತಗೋವಿಂದದಲ್ಲಿದೆ.
ಲೋಕದಲ್ಲಿ ಸಾಮಾನ್ಯವಾಗಿ ಗರ್ವವೂ ದೈನ್ಯವೂ ಒಟ್ಟಿಗೇ ಇರವು; ಆದರೆ ಇಲ್ಲಿವೆ! ನಿನ್ನ ಪ್ರಸನ್ನತೆಯೊಂದಿದ್ದರೆ ಮಿಕ್ಕವುಗಳಿದ್ದೇನು? - ಎನ್ನುವಾಗ ಗರ್ವವೂ; ನಿನ್ನ ಪ್ರಸನ್ನತೆಯೊಂದಿಲ್ಲದಿದ್ದರೆ ಮಿಕ್ಕ ಸಾಧನಗಳೇನಿದ್ದರೂ ಏನು ಬಂತು? - ಎನ್ನುವಾಗ ದೈನ್ಯವೂ - ಈ ಭಕ್ತಾಗ್ರೇಸರನ ಮನಸ್ಸಿನಲ್ಲಿ ಸಮಕಾಲದಲ್ಲಿ ಉದಿಸಿವೆ!
ಜೀವನದಲ್ಲಿ ಮುಖ್ಯಾಮುಖ್ಯ-ವಿವೇಚನೆಯನ್ನು ಚೆನ್ನಾಗಿ ಮಾಡಿಕೊಂಡವರ ಪರಿಯೇ ಹೀಗಲ್ಲವೇ?
ಮಯಿ ಪ್ರಸಾದಂ ಮಧುರೈಃ ಕಟಾಕ್ಷೈಃ /
ವಂಶೀ-ನಿನಾದಾನುಚರೈಃ ವಿಧೇಹಿ |
ತ್ವಯಿ ಪ್ರಸನ್ನೇ ಕಿಮಿಹಾಪರೈರ್ ನಃ?/
ತ್ವಯ್ಯಪ್ರಸನ್ನೇ ಕಿಮಿಹಾಪರೈರ್ ನಃ? ||
ಸೂಚನೆ : 9/11/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.