ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಜೀವನದಲ್ಲಿ ನಾನಾ ಬಗೆಯ ಸುಖಗಳ ಹಿಂದೆ ಓಡುವವರುಂಟು. ರುಚಿರುಚಿಯಾದ ಭಕ್ಷ್ಯಭೋಜ್ಯಗಳೆಂದರೆ ಯಾರಿಗೆ ತಾನೆ ಬಾಯಲ್ಲಿ ನೀರೂರದು? ಸುಂದರವಾದ ರೂಪವೋ ದೃಶ್ಯವೋ ಕಣ್ಣಿಗೆ ಹಬ್ಬವಾಗುವುದು. ಒಳ್ಳೆಯ ಸಂಗೀತವೆಂಬುದೂ ಅಷ್ಟೇ : ಕಿವಿಗಳಿಗೆ.
ಆದರೆ ಲೀಲಾಶುಕನ ಚಿಂತನೆಯ ಪರಿಯೇ ಬೇರೆ. ತನಗೆ ಕೃಷ್ಣನ ವಿಷಯದಲ್ಲಿ ಭಕ್ತಿಯು ಉಂಟಾಯಿತಲ್ಲಾ - ಅದಕ್ಕಿಂತಲೂ ಹಿರಿದಾದ ಸುಖ ಮತ್ತಿನ್ನೇನು? - ಎಂಬ ಭಾವನೆ ಆತನದು! ಅನೇಕಯಜ್ಞಗಳನ್ನು ಮಾಡಿದ್ದವರಿಗೇ ಈ ಭಕ್ತಿಯು ಉಂಟಾಗುವುದು! ಹೇರಳವಾಗಿ ದಾನ ಮಾಡಿದ್ದರೆ ಮಾತ್ರವೇ ಕೃಷ್ಣಭಕ್ತಿಯು ಜಾಗರವಾಗುವುದು. ಅದನ್ನೂ ಅಷ್ಟೇ, ಪಾತ್ರರಲ್ಲಿ, ಎಂದರೆ ಸತ್ಪಾತ್ರರಲ್ಲಿ ,ದಾನ ಮಾಡಿದ್ದರೆ ಮಾತ್ರವೇ. ಏಕೆ ಸತ್ಪಾತ್ರನಿಗೇ ದಾನ ಮಾಡಬೇಕು? ಏಕೆಂದರೆ ದಾನಕೊಟ್ಟ ಮಾತ್ರಕ್ಕೆ ಕೆಲಸವು ಮುಗಿದುಬಿಡುವುದೆಂದಲ್ಲ. ದಾನವೆಂಬುದು ಬಹಳ ಜವಾಬ್ದಾರಿಯ ಕೆಲಸ - ಎಂಬುದಾಗಿ ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಅದಕ್ಕೊಂದುದಾಹರಣೆ . ಗೋದಾನವು ಬಹಳ ಶ್ರೇಷ್ಠವಾದ ದಾನವೇ; ಅಲ್ಲವೆ? ಆದರೆ ಯಾರುಯಾರಿಗೋ ದಾನಕೊಡುವುದಾದರೆ ಅದು ದಾನಕೊಟ್ಟವನಿಗೇ ಕೆಡುಕನ್ನು ಉಂಟುಮಾಡುವುದು. ಅಷ್ಟೇ ಅಲ್ಲ, ದಾನವನ್ನು ಸ್ವೀಕರಿಸಿದವನಿಗೂ ಕೆಟ್ಟಪರಿಣಾಮವೇ ಆಗಬಹುದು.
ಗೋವು ಬಹಳ ಶ್ರೇಷ್ಠವಾದ ಪ್ರಾಣಿ. ಗೋವಿನ ಮುಂದೆ ಮನುಷ್ಯನು ಸಹ ಏನೇನೂ ಇಲ್ಲ - ಎಂದು ತೋರಿಸಿಕೊಡುವ ಮಾತುಗಳಿವೆ. ಉದಾಹರಣೆಗೆ, ಪ್ರತಿಯೊಂದು ಪದ್ಯದ ಕೊನೆಯಲ್ಲಿಯೂ "ನೀನಾರಿಗಾದೆಯೋ ಎಲೆ ಮಾನವ?" ಎಂಬ ಪಲ್ಲವಿಯಿರುವ ಕೃತಿಯಿಲ್ಲವೆ? ಗೋವು ಪರಿತ್ಯಜಿಸುವ ಮಲ-ಮೂತ್ರಗಳು ಸಹ ನಾನಾಜೀವಿಗಳಿಗೆ ಉಪಯೋಗವಾಗುವುದುಂಟು! ಗೋಮೂತ್ರವನ್ನು ಪವಿತ್ರವೆಂದು ಸ್ವೀಕರಿಸುವುದುಂಟು. "ಪಂಚಗವ್ಯಪ್ರಾಶನ"ವು ಅನೇಕ ಶುಭಕಾರ್ಯ-ಪುಣ್ಯಕಾರ್ಯಗಳಲ್ಲಿ ಒಂದು ಅಂಗವಾಗುವುದು. ಗೋಮಲವು ಗಿಡಮರಗಳಿಗೆ ಗೊಬ್ಬರವಾಗದೆ?. ಅಂತೂ ಗೋವಿನಿಂದಾಗುವ ಉಪಯೋಗಗಳನ್ನೆಲ್ಲ ದೊಡ್ಡ ಪಟ್ಟಿಮಾಡಿ, ಅದನ್ನು ಹಾಡಾಗಿ ಕಟ್ಟಿ, ಒಂದೊಂದು ಪದ್ಯದ ಕೊನೆಯಲ್ಲೂ ಪಲ್ಲವಿಯಾಗಿ ಮನುಷ್ಯನನ್ನು ತಿವಿದು ಕೇಳುವ ಪದ್ಯಗುಚ್ಛವನ್ನು ಯಾರು ಕೇಳಿಲ್ಲ?. ಗೋದಾನವು ಮಹಾಪುಣ್ಯಕಾರ್ಯವೆಂದಾದರೂ, ಅದಕ್ಕೂ ಇತಿಮಿತಿಯುಂಟು. ಅದನ್ನೇ ಒಂದು ಬಗೆಯಾಗಿ ಮಾಡಿದರೆ ಪುಣ್ಯ; ಮತ್ತೊಂದು ಬಗೆಯಲ್ಲಿ ಮಾಡಿದರೆ ಮಹಾಪಾಪ!
ಹೇಗೆ? ಭಕ್ತಿಶ್ರದ್ಧೆಗಳಿಂದ ಗೋವನ್ನು ಒಬ್ಬ ಗೋಮಾಂಸಭಕ್ಷಕನಿಗೆ ಕೊಟ್ಟೆವೆನ್ನಿ. ಆಗಾಗುವುದೇನು? ಗೋವಧೆ. ಗೋವಧೆಯು ಮಹಾಪಾಪ. ಹೀಗಾಗಿ ಮಹಾಪುಣ್ಯಕಾರ್ಯವೆಂದು ಮಾಡಹೊರಟದ್ದು ಮಹಾಪಾಪವಾಗಿ ಪರಿಣಮಿಸಿತು! ಎಂದೇ ಲೀಲಾಶುಕನು "ಸತ್ಪಾತ್ರರಿಗೆ" ಎಂಬ ಪದವನ್ನು ಎಚ್ಚರಿಕೆಯಿಂದ ಸೇರಿಸಿರುವುದು – ಕೃಷ್ಣಭಕ್ತಿಯು ಹುಟ್ಟಲಿಕ್ಕೆ.
ಮೂರನೆಯ ಕಾರಣವೂ ಉಂಟು – ಆ ಭಕ್ತಿ ಬರಲು. ಅದೆಂದರೆ ವೃದ್ಧರನ್ನು ಸೇವಿಸಿರುವುದು. ವೃದ್ಧರೆಂದರೆ ಮುದುಕರು. ಮುದುಕರನ್ನು ಸೇವಿಸಿದರೇನು ಬಂತು? – ಎನ್ನಬಹುದು. ಅಷ್ಟೇ ಅಲ್ಲ ವೃದ್ಧರನ್ನು ಸೇವಿಸಿದವರಿಗೆಲ್ಲಾ ಕೃಷ್ಣಭಕ್ತಿಬಂದುಬಿಟ್ಟಿದೆಯೇ? - ಎಂದೂ ಕೇಳಬಹುದು. ಅವೆರಡಕ್ಕೂ ಉತ್ತರವುಂಟು.
ಇಂದಂತೂ ಇಂತಹ ಪ್ರಶ್ನೆಗಳಿಗೆ ಆಸ್ಪದ ಹೆಚ್ಚೇ. ಏಕೆಂದರೆ ವೃದ್ಧರನ್ನು ಸೇವಿಸುವುದೆಂದರೆ ಬಹಳ ಮಂದಿಗೆ ಅದು ಬೇಸರದ ವಿಷಯವೇ. ಎಷ್ಟಾದರೂ ವೃದ್ಧರೆಂದರೆ ಪರಾವಲಂಬಿಗಳೇ. ಅವರಿಗೆ ಒಂದೆರಡು ದಿನವೋ ಮೂರು ನಾಲ್ಕು ದಿನವೋ ಸೇವೆ ಮಾಡುವುದೆಂದರೆ ಅದು ಹೇಗೋ ನಡೆದೀತು. ಇನ್ನುಮೇಲೆ "ಸಾಕಪ್ಪಾ ಸಾಕು" ಎನಿಸಿದರೆ ಆಶ್ಚರ್ಯವೇ ಇಲ್ಲ.
ಹಾಗೆ ನೋಡಿದರೆ ಎಳೇ ಮಕ್ಕಳನ್ನು ಸಾಕುವುದೆಂದರೂ ಹಾಗೆಯೇ ಅಲ್ಲವೆ? ಅಲ್ಲೂ ಪರಾವಲಂಬನೆಯೇ ಸರಿ. ಆದರೂ ಮಕ್ಕಳೆಂದರೆ ಎಷ್ಟಾದರೂ ಮುದ್ದೇ. ಮಕ್ಕಳ ಮುಗುಳ್ನಗೆಯೊಂದೇ ಸಾಕು, ಅವುಗಳ ಸೇವೆಗೆ ಪ್ರತಿಫಲವಾಗಿ - ಎನ್ನಿಸಿಬಿಡುವ ಧನ್ಯಕ್ಷಣಗಳು ಎಲ್ಲರಿಗೂ ಅನುಭವಕ್ಕೆ ಬರುವಂತಹವೇ. ಆದರೆ ವೃದ್ಧರು? ಎಷ್ಟು ಸೇವೆ ಮಾಡಿದರೂ ಅವರ ಸಿಡುಕೋ ಅಸಮಾಧಾನವೋ ನಮ್ಮ ಉತ್ಸಾಹಕ್ಕೆ ಭಂಗತರುವಂತಹುದೇ.
ಆದರೆ ಹಿರಿಯರಿಗೆ ಆಗಾಗ್ಗೆ ನಮಸ್ಕರಿಸಿ ಅವರ ಸೇವೆಮಾಡುತ್ತಿರುವವರಿಗೆ ನಾಲ್ಕು ಫಲಗಳು ದೊರೆಯುವುವಂತೆ. ಅವೆಂದರೆ ಆಯುಸ್ಸು, ವಿದ್ಯೆ, ಯಶಸ್ಸು, ಮತ್ತು ಬಲ. ಈ ನಾಲ್ಕು ದೊರೆಯತಕ್ಕವೆಂದು ಹೇಳಿರುವುದು ಮನುಸ್ಮೃತಿ.. ಆದರೆ ಈ ಪಟ್ಟಿಯಲ್ಲಿ ಕೃಷ್ಣಭಕ್ತಿಯೆಂಬುದು ಬಂದಿಲ್ಲವಲ್ಲ? - ಎನ್ನಿಸಬಹುದು. ಇದಕ್ಕೆ ಎರಡು ಉತ್ತರಗಳಿವೆ. ವಿದ್ಯೆಯೆಂದರೆ ಬರೀ ಇಂದಿನ ಡಿಗ್ರೀ ಸರ್ಟಿಫಿಕೇಟುಗಳಿಗಾಗಿನ ವಿದ್ಯೆಯಲ್ಲ; ಇವೆಲ್ಲಾ ಪಾಶ್ಚಾತ್ತ್ಯರು ನಮ್ಮ ಮೇಲೆ ಹೇರಿರುವ ಕ್ರಮಗಳು. ಬದಲಾಗಿ, ಮುಕ್ತಿಯತ್ತ ನಮ್ಮನ್ನು ಒಯ್ಯುವ ತಿಳಿವಳಿಕೆಯು ಯಾವುದೋ ಅದುವೇ ಸರಿಯಾದ ವಿದ್ಯೆ.
ಅಷ್ಟೇ ಅಲ್ಲದೆ ವೃದ್ಧರೆಂದರೆ ವಯೋವೃದ್ಧರೆಂದಷ್ಟೇ ಅಲ್ಲ. ಜ್ಞಾನವೃದ್ಧರು, ತಪೋವೃದ್ಧರು - ಇವರುಗಳೂ ಉಂಟು. ಯಾರು ನಮಗಿಂತಲೂ ಬಹಳ ವಿಶೇಷವಾದ ಜ್ಞಾನವನ್ನು ಹೊಂದಿರುವರೋ ಅವರು ಜ್ಞಾನವೃದ್ಧರು. ಯಾರು ತಪಸ್ಸಿನಲ್ಲಿ ಮುಂದುವರೆದಿರುವರೋ ಅಂತಹವರು ತಪೋವೃದ್ಧರು. ಅಂತಹವರ ಸೇವೆಗೆ ಸತ್ಫಲವೇ ಉಂಟು.
ಆತನು ಕೊಡುವ ನಾಲನೆಯ ಮತ್ತು ಕೊನೆಯದಾದ ಕಾರಣ ಇನ್ನೂ ಪ್ರಬಲವಾದದ್ದು. ಅದೆಂದರೆ ಬೇರೆಯಾವುದೋ ಜನ್ಮದಲ್ಲಿ ನಾವು ದುಶ್ಚರವಾದ ತಪಸ್ಸನ್ನೇ ಮಾಡಿರಬೇಕೆಂಬುದು. ಏನು ದುಶ್ಚರವೆಂದರೆ? ಯಾವುದನ್ನು ಮಾಡಲು ಮಹಾಕಷ್ಟವೋ ಅದು. ಉಗ್ರತಪಸ್ಸೇ ಅದು.
ಈ ನಾಲ್ಕು ಕಾರಣಗಳ ಯೋಗವಾಗಿ ಈ ಫಲ ದೊರೆತಿದೆ. ಏನದು? ಅನನ್ಯಸುಲಭವಾದ ಭಕ್ತಿ. ಅನ್ಯರಿಗೆ ಸುಲಭವಲ್ಲದ್ದು ಅನನ್ಯಸುಲಭ.
ಯಾರಲ್ಲಿ ಭಕ್ತಿ ಸುಲಭವಲ್ಲ? ಮತ್ತಾರು, ನಮ್ಮ ಕೃಷ್ಣನಲ್ಲಿ. ಆತನಾದರೂ ಎಂತಹವನು? ಆತನ ವಿಶಿಷ್ಟತೆಯನ್ನು ನಾಲ್ಕು ವಿಶೇಷಣಗಳು ಹೇಳುತ್ತವೆ. ಆತನು ಚಾಣೂರನ ಸಂಹಾರಕ. ಒಂದರ್ಥದಲ್ಲಿ ನಮ್ಮಲ್ಲಿಯ ದುಷ್ಟಾಂಶಗಳೇ ಕಂಸ-ಚಾಣೂರರು. ದುಷ್ಟರನ್ನು ಧ್ವಂಸಮಾಡುವವನು ಆತ.
ಎರಡನೆಯದಾಗಿ, ಆತನು ಭಕ್ತರ ಕಲ್ಮಷಗಳನ್ನು ಹೋಗಲಾಡಿಸುವವನು. ನಮ್ಮೊಳಗಿರುವ ರಾಗದ್ವೇಷಾದಿದುರ್ಗುಣಗಳೇ ಕಲ್ಮಷಗಳು. ಮೂರನೆಯದಾಗಿ, ನಮ್ಮ ಶ್ರೇಯಸ್ಸನ್ನು ಪೋಷಿಸತಕ್ಕವನು. ಕೊನೆಯದಾಗಿ ಲಕ್ಷ್ಮಿಯೊಂದಿಗಿರುವವನು. ನಮ್ಮಲ್ಲಿಯ ಎಲ್ಲ ದಾರಿದ್ರ್ಯಗಳಿಗೂ ಪ್ರತಿಯಾಗಿರತಕ್ಕವಳು ಲಕ್ಷ್ಮಿ. ಶ್ರೀರಂಗಮಹಾಗುರುಗಳು ಹೇಳುವಂತೆ ಭಗವಂತನ ಲಕ್ಷ್ಮವನ್ನು, ಎಂದರೆ ಲಕ್ಷಣವನ್ನು, ಹೊತ್ತಿರುವವಳು ಆಕೆ.
ಈ ನಾಲ್ಕೂ ಲಕ್ಷಣಗಳನ್ನೂ ಹೊಂದಿರುವ ಭಗವಂತನಲ್ಲಿಯ ಭಕ್ತಿಯು ಭವದ್ವೇಷಿಣಿಯಾಗಿರುವುದು. ಅಂದರೆ ಭವದ ಬವಣೆಯಲ್ಲೇ ಆಗೊಮ್ಮೆ ಈಗೊಮ್ಮೆಯಷ್ಟೇ ಸಿಕ್ಕುವ ಅಲ್ಪವಾದ ಸುಖವನ್ನೇ ದೊಡ್ಡದೆಂದು ಭಾವಿಸಿಬಿಡುವಂತೆ ಆಗದಿರುವುದು.
ಹೀಗೆ ಹಿರಿದಾದ ಸುಖಕ್ಕೆ ದಾರಿ ಶ್ರೀಕೃಷ್ಣಭಕ್ತಿ.
ಈಗ ಈ ಶ್ಲೋಕವನ್ನು ಆಸ್ವಾದಿಸಿ:
ಯಜ್ಞೈರೀಜಿಮಹೇ, ಧನಂ ದದಿಮಹೇ ಪಾತ್ರೇಷು ನೂನಂ ವಯಂ, /
ವೃದ್ಧಾನ್ ಭೇಜಿಮಹೇ, ತಪಶ್ಚಕೃಮಹೇ ಜನ್ಮಾಂತರೇ ದುಶ್ಚರಮ್, |
ಯೇನಾಸ್ಮಾಕಮ್ ಅಭೂದ್ ಅನನ್ಯಸುಲಭಾ ಭಕ್ತಿರ್ಭವದ್ವೇಷಿಣೀ /
ಚಾಣೂರದ್ವಿಷಿ ಭಕ್ತಕಲ್ಮಷಮುಷಿ ಶ್ರೇಯಃಪುಷಿ ಶ್ರೀಜುಷಿ ||