Sunday, April 28, 2024

ಅಷ್ಟಾಕ್ಷರೀ​ - 57 ಏಕಂ ದುಃಖಂ ಸುಖಂ ಚ ನೌ (Astaksari 57 Ekam Duhkham Sukham Ca Nau)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)ತಾಳಿಕಟ್ಟಿದ ಮಾತ್ರಕ್ಕೆ ಅದನ್ನು ವಿವಾಹವೆಂದು ಪರಿಗಣಿಸಲಾಗದೆಂಬುದನ್ನು ಆಗಾಗ್ಗೆ ನ್ಯಾಯಾಲಯಗಳು ಸ್ಪಷ್ಟಪಡಿಸುತ್ತಿದ್ದರೂ ಜನಸಾಮಾನ್ಯರಲ್ಲಿ ಕೆಲವರಿಗದು ಮನವರಿಕೆಯಾಗುವುದೇ ಇಲ್ಲ. ಸಪ್ತಪದಿಯೆಂಬುದೇ ವಾಸ್ತವವಾಗಿ ನಿರ್ಣಾಯಕವಾಗುವಂತಹುದು: ವಿವಾಹವು ಅಗ್ನಿಸಾಕ್ಷಿಕವಾಗಿ ನೆರವೇರಬೇಕು; ವಧೂವರರು ಪಾಣಿಗ್ರಹಣದೊಂದಿಗೆ ಅಗ್ನಿಗೆ ಪ್ರದಕ್ಷಿಣವಾಗಿ ಬಂದ ಮೇಲೆಯೇ ವಿವಾಹವು ಸಂಪನ್ನವಾಯಿತೆಂಬ ಲೆಕ್ಕವು ಬರುವುದು. ಅದನ್ನು ಬಿಟ್ಟು ಉಳಿದೆಲ್ಲ ಕಲಾಪಗಳು ನಡೆದಿದ್ದರೂ ಅದು ವಿವಾಹವೆನಿಸಿಕೊಳ್ಳದು.

ಈ ಸಪ್ತಪದಿಯ ಕೊನೆಯಲ್ಲಿ ಬರುವ ಮಾತೇ "ಸಖಾ ಸಪ್ತಪದೀ ಭವ" ಎಂಬುದಾಗಿ. ಪತಿಪತ್ನಿಯರಲ್ಲಿ ಸ್ಥಾಯಿಯಾಗಿ ಉಳಿಯಬೇಕಾದ ಭಾವವೇ ಸಖ್ಯ. ಅಗ್ನಿಸಾಕ್ಷಿಯಾಗಿ ಘಟಿಸಬೇಕಾದುದು ಈ ಜೀವಸಖ್ಯ. ಸಾಕ್ಷಾತ್ತಾಗಿ ಕಾಣತಕ್ಕವನೇ ಸಾಕ್ಷಿಯೆನಿಸುತ್ತಾನೆ. ಸೂರ್ಯಚಂದ್ರರು ಲೋಕನೇತ್ರಗಳು,  ಸರ್ವಸಾಕ್ಷಿಗಳು. ಅಗ್ನಿಯಂತೂ ಮೂರನೆಯ ಕಣ್ಣಾಗಿ ವೀಕ್ಷಿಸತಕ್ಕವನೇ ಸರಿ. ಸೂರ್ಯಚಂದ್ರರಿಗಾದರೂ ಕಾಲನಿಬಂಧನಗಳುಂಟು; ಅಗ್ನಿಯು ಸರ್ವದಾ ಆವಾಹ್ಯನೇ ಸರಿ. ಪಂಚಭೂತಗಳಲ್ಲಿ ಮಧ್ಯಸ್ಥನಾದ ಈ ಅಗ್ನಿಯು ಇತ್ತ ದೇವದೂತನೂ ಹೌದು, ಅತ್ತ ದೇವನೂ ಹೌದು.

ವಿವಾಹಮಾತ್ರವನ್ನಲ್ಲದೆ, ಮಿತ್ರತ್ವವನ್ನೂ ಅಗ್ನಿಸಾಕ್ಷಿಕವಾಗಿ ಸ್ಥಾಪಿಸುವ ನಡೆಯೂ ಒಂದುಂಟು. ಅದನ್ನು ರಾಮಾಯಣದಲ್ಲಿ ನೋಡಬಹುದು.

ರಾಮಸುಗ್ರೀವರ ಸಖ್ಯವು ಸಿದ್ಧವಾಗುವ ಸಂನಿವೇಶದಲ್ಲಿ ಇದು ಕಾಣಸಿಗುತ್ತದೆ. ಕಿಷ್ಕಿಂಧಾಕಾಂಡದಲ್ಲಿ ಮೊದಲು ರಾಮಲಕ್ಷ್ಮಣರೊಂದಿಗೆ ಹನುಮಂತನ ಭೇಟಿಯಾಗುತ್ತದೆ. ಹನುಮಂತನು ಅವರಿಬ್ಬರ ಲೋಕೋತ್ತರತ್ವವನ್ನು ಬಹುಬೇಗನೆ ಕಂಡುಕೊಳ್ಳುತ್ತಾನೆ. ಹನುಮಂತನಲ್ಲಿದ್ದ ದೌತ್ಯ-ಸಾಮರ್ಥ್ಯ (ಎಂದರೆ ದೂತನ ಕಾರ್ಯವನ್ನು ಚೆನ್ನಾಗಿ ನಿರ್ವಹಿಸುವಿಕೆ) ಮೊದಲಾದ ಅನೇಕಗುಣಗಳನ್ನು ರಾಮನೂ ಗುರುತಿಸಿಕೊಳ್ಳುತ್ತಾನೆ.

ಸುಗ್ರೀವ-ಸಖ್ಯವು ತಮಗೂ ಬೇಕಾಗಿರುವುದನ್ನು ಲಕ್ಷ್ಮಣನು ಹನುಮಂತನಿಗೆ ಹೇಳುತ್ತಾನೆ. ಹನುಮಂತನೂ ಸಹ, ಸುಗ್ರೀವನಿಗಾಗಿರುವ ರಾಜ್ಯಾಪಹಾರ-ಭಾರ್ಯಾಪಹಾರಗಳ ವಿಷಯಗಳನ್ನು ತಿಳಿಸಿ, ಅವರಿಬ್ಬರನ್ನೂ ಸುಗ್ರೀವನಲ್ಲಿಗೆ ಒಯ್ಯುತ್ತಾನೆ. ತನ್ನೊಂದಿಗೆ ಅವರ ಸ್ನೇಹಾಪೇಕ್ಷೆಯನ್ನರಿತುಕೊಂಡ ಸುಗ್ರೀವನು ತನ್ನ ಸ್ನೇಹ-ಹಸ್ತವನ್ನು ನೀಡುತ್ತಾನೆ.

ಆಗ ಹನುಮಂತನು ಎರಡು ಕಟ್ಟಿಗೆಗಳನ್ನು ಕಡೆದು ಅಗ್ನಿಯನ್ನು ಉತ್ಪತ್ತಿಮಾಡುತ್ತಾನೆ. ಜ್ವಲಿಸುವ ಅಗ್ನಿಗೆ ಪುಷ್ಪಾರ್ಚನೆಯಾಗುತ್ತದೆ. ರಾಮ-ಸುಗ್ರೀವರ ನಡುವೆ ಸ್ಥಾಪಿಸಲಾದ ಆ ಅಗ್ನಿಯನ್ನು ಅವರಿಬ್ಬರೂ ಪ್ರದಕ್ಷಿಣೆ ಮಾಡುತ್ತಾರೆ: ಇದರಿಂದಾಗಿ ಇವರಿಬ್ಬರ ಪರಸ್ಪರ-ಮಿತ್ರನಿಷ್ಠೆಯು ಸ್ಥಾಪಿತವಾಗುತ್ತದೆ.

ಅತ್ಯಂತ ಸಂತೋಷಗೊಂಡ ಆ ಹರಿ-ರಾಘವರು (ಎಂದರೆ, ಸುಗ್ರೀವ-ರಾಮಚಂದ್ರರು) ಪರಸ್ಪರ ಅಭಿವೀಕ್ಷಿಸುತ್ತಾರೆ (ಎಂದರೆ, ಸಂತೋಷದಿಂದ ದಿಟ್ಟಿಸಿ ನೋಡುತ್ತಾರೆ). ಎಷ್ಟು ಹೊತ್ತು ಹಾಗೆ ಅಭಿವೀಕ್ಷಿಸಿದರೂ ಅವರಿಗೆ ತೃಪ್ತಿಯೇ ಆಗದು!

ಆಗ ರಾಮನು ಹೇಳುತ್ತಾನೆ: ಇಗೋ ಈಗ ನೀನು ನನಗೆ ಹೃದ್ಯ-ವಯಸ್ಯನಾಗಿದ್ದೀಯೆ. (ಹೃದ್ಯನೆಂದರೆ ಹೃದಯಕ್ಕೆ ಪ್ರಿಯನಾದವನು, ಮನಸ್ಸಿಗೆ ಆಹ್ಲಾದವನ್ನುಂಟುಮಾಡುವವನು; ವಯಸ್ಯನೆಂದರೆ ಮಿತ್ರ.) ನಮ್ಮಿಬ್ಬರ ದುಃಖವೂ ಸುಖವೂ ಒಂದೇ (ಏಕಂ ದುಃಖಂ ಸುಖಂ ಚ ನೌ). ಇದು ಸಾರಭೂತವಾದ ಮಾತು.

ಆ ಬಳಿಕ ಎಲ್ಲರೂ ಕುಳಿತು ಮಾತನಾಡುತ್ತಾರೆ. ಆನಂದಬಾಷ್ಪಭರಿತನಾಗಿ ಸುಗ್ರೀವನು ಸಂಭಾಷಣೆಯನ್ನು ರಾಮನೊಂದಿಗೆ ಆರಂಭಿಸುತ್ತಾನೆ: ತನ್ನ ಕ್ಲಿಷ್ಟ-ಪರಿಸ್ಥಿತಿಯನ್ನು ನಿವೇದಿಸಿಕೊಳ್ಳುತ್ತಾನೆ; ಅಭಯವನ್ನು ಯಾಚಿಸುತ್ತಾನೆ. ರಾಮನೂ ಅಭಯವಿತ್ತು ಧೈರ್ಯತುಂಬುತ್ತಾನೆ. ಆಮೇಲಿನ ವಾಲಿಸಂಹಾರದಲ್ಲಿ ರಾಮನ ಪಾತ್ರ, ಹಾಗೂ ರಾವಣಸಂಹಾರದಲ್ಲಿ ಸುಗ್ರೀವನ ಪಾತ್ರ – ಇವುಗಳಲ್ಲಿ ಮೇಲಿನ ಸಾರಭೂತವಾದ ಮಾತಿನ ಸತ್ಯತ್ವವು ಸಾಧಿತವಾಗುತ್ತದಲ್ಲವೇ?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಮ-ಸುಗ್ರೀವರ ಸಖ್ಯವೂ ಅಗ್ನಿ-ಸಾಕ್ಷಿಕವಾದ ಪಾಣಿ-ಗ್ರಹಣ ಹಾಗೂ ಅಗ್ನಿ-ಪ್ರದಕ್ಷಿಣಗಳೊಂದಿಗೆ ನೆರವೇರುವುದು; ಬಳಿಕ, ಒಬ್ಬರ ದುಃಖವನ್ನು ಮತ್ತೊಬ್ಬರು ಪರಿಭಾವಿಸುವುದು, ಯುಕ್ತ-ಸಹಾಯವೊದಗಿಸುವುದು; ಒಬ್ಬರ ಸಂತೋಷವು ಮತ್ತೊಬ್ಬರ ಹರ್ಷಕ್ಕೆ ಕಾರಣವಾಗುವುದು - ಎಂಬುದು.

ವಾಸ್ತವವಾಗಿ ಇವೆಲ್ಲವೂ ಒಂದರ್ಥದಲ್ಲಿ ಸುದಾಂಪತ್ಯದ ಲಕ್ಷಣಗಳೇ. ಕಳ್ಳಕಾಕರಲ್ಲೂ ಸ್ನೇಹಬೆಳೆದರೂ ಅಲ್ಲಿ ಧರ್ಮಬುದ್ಧಿಯು ನೆಲೆಸಿರುವುದಿಲ್ಲ; ಎಂದೇ ಕೆಲಕಾಲದಲ್ಲೇ ಅದು ಮುರಿದುಬೀಳುವುದೂ. ಸುಗ್ರೀವ-ರಾಮಚಂದ್ರರಿಗೆ ಒದಗಿದ್ದ ಕ್ಲೇಶಗಳಿಗೆ ವಾಲಿ-ರಾವಣರ ಅಧರ್ಮದ ನಡೆಯೇ ಕಾರಣವಾಗಿತ್ತು. "ಧರ್ಮವುಳಿಯಬೇಕಾದರೆ ಅದರ ವಿರೋಧಿಗಳು ಅಳಿಯಲೇಬೇಕು: ಬೆಳೆಯುಳಿಯಬೇಕಾದರೆ ಕಳೆಯಳಿಯಲೇಬೇಕಲ್ಲವೇ?" ಎಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಹೀಗೆ ಅಧರ್ಮದ ಉತ್ಪಾಟನವೇ (ಎಂದರೆ ಕಿತ್ತುಹಾಕುವಿಕೆಯೇ) ಇಬ್ಬರಿಗೂ ಸಮಾನಧ್ಯೇಯವಾಗಿತ್ತು. ಎಂದೇ ಈ ಮೈತ್ರಿಯು ಉಳಿಯಿತು, ಬೆಳೆಯಿತು, ಲೋಕೋಪಕಾರಿಯಾಯಿತು.

ಏಕಂ ದುಃಖಂ ಸುಖಂ ಚ ನೌ – ಎಂಬ ಮಾತನ್ನು ಸುಗ್ರೀವನೇ ರಾಮನಿಗೆ ಹೇಳಿದನೆಂದು ರಾಮಾಯಣದ ಕೆಲವು ಪ್ರತಿಗಳಲ್ಲಿದೆ. ಹಾಗೂ ಸೊಗಸೇ ಅಲ್ಲವೇ? ಮಿತ್ರತ್ವವು ಎಷ್ಟಾದರೂ ಪಾರಸ್ಪರಿಕವೇ ಸರಿ.

ಸೂಚನೆ: 27/04/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.