Monday, April 22, 2024

ಕೃಷ್ಣಕರ್ಣಾಮೃತ - 11 ವಂದನ-ವಿಧಾನ – ವೇಣುವಾದನ-ವೈಖರಿ ( Krsnakarnamrta - 11 Vandana-Vidhana – Venuvadana-Vaikhari)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಲೀಲಾಶುಕನಿಗೆ ಶ್ರೀಕೃಷ್ಣನಲ್ಲಿ ಅಚಲವಾದ ಭಕ್ತಿ. ಭಗವಂತನಲ್ಲಿ ಭಕ್ತಿಯೆಂಬುದು ಸುಲಭವಾಗಿ ಬಂದುಬಿಡುವುದೂ ಅಲ್ಲ; ಬಂದದ್ದು ತಾನಾಗಿಯೇ ಸ್ಥಿರವಾಗಿ ನಿಂತುಬಿಡುವುದೆಂಬುದೂ ಅಲ್ಲ.

ಕೆಲವಂಶಗಳಲ್ಲಿ ಮನುಷ್ಯರಲ್ಲಿಯ ಪರಸ್ಪರ ಪ್ರೀತಿಯ ಪರಿಯೆಂತೋ ಅಂತೆಯೇ ಭಗವದ್ಭಕ್ತಿಯೂ. ಮಕ್ಕಳ ವಿಷಯವನ್ನೇ ತೆಗೆದುಕೊಳ್ಳಿ. ಒಂದು ಮಗುವಿನೊಡನೆ ಚೆನ್ನಾಗಿ ಆಟವಾಡುವ ಸಂನಿವೇಶವು ಒದಗಿತೆನ್ನಿ. ಚೆನ್ನಾಗಿ ಆಡಿಸುವವರೊಂದಿಗೆ ಮಗುವಿನ ಪ್ರೀತಿಯೂ ಗಾಢವಾಗುವುದೇ ಸರಿ. ಅದರೆ ಒಮ್ಮೆ ಮಗುವಿಗೆ ಅಷ್ಟು ಇಷ್ಟವಾಗುವಂತೆ ಆಡಿ(ಸಿ), ಆಮೇಲೆ ಬಹಳಕಾಲ ಮಗುವಿನೊಂದಿಗೆ ಆಡಲೇ ಇಲ್ಲವೆನ್ನಿ. ಆಮೇಲೆ ಅದೇ ಮಗುವು ಎದುರಿಗೆ ಬಂದರೂ ಹಿಂದೆ ಉಕ್ಕಿದ್ದ ಭಾವವು ಅಷ್ಟೇ ತೀವ್ರವಾಗಿ ಉಳಿದಿರುವುದಿಲ್ಲ. ಭಕ್ತಿಯ ಬಗೆಯೂ ಹೀಗೆಯೇ: ಒಮ್ಮೆ ಉಕ್ಕಿದ ಉತ್ಕಟ ಭಾವ ಮತ್ತೊಮ್ಮೆ ಅಥವಾ ಮರುದಿನವೇ ಕೂಡ ಅಷ್ಟೇ ತೀವ್ರವಾಗಿ ಇಲ್ಲದಿರುವುದೂ ಉಂಟು!

ಎಂದೇ ಕೃಷ್ಣನಲ್ಲಿ ಭಕ್ತಿಯು ನನಗುಂಟಾಗಲಿ - ಎಂಬುದು ಲೀಲಾಶುಕನ ಕೋರಿಕೆಯಾಗಿದೆ. ಅದೆಷ್ಟು ತೀವ್ರವಾದ ಕೋರಿಕೆಯೆಂದರೆ ಆ ಬಗ್ಗೆ ದೇವತೆಗಳನ್ನು ಬೇಡಲೂ ಸಿದ್ಧ, ಲೀಲಾಶುಕ. ಬರೀ ದೇವತೆಗಳೇನು? ದೇವೇಂದ್ರ-ನಿಕರಗಳನ್ನೇ - ಎಂದರೆ ಶ್ರೇಷ್ಠದೇವ-ಸಮೂಹಗಳನ್ನೇ - ಬೇಡಿಕೊಳ್ಳುತ್ತಾನೆ. ಅದೂ ಸುಮ್ಮನೆ ಕೇಳಿಕೊಳ್ಳುವುದಲ್ಲ: ಅವರೆಲ್ಲರಿಗೂ ಸಾಷ್ಟಾಂಗ-ನಮಸ್ಕಾರವನ್ನು ಮಾಡಿ ಕೇಳಿಕೊಳ್ಳುವುದು; ಸರ್ವ-ಭಾವಗಳಿಂದಲೂ ಸಮಸ್ತ-ಪ್ರಕಾರಗಳಿಂದಲೂ ಕೇಳಿಕೊಳ್ಳುವುದು.

ಏನು ಸಾಷ್ಟಾಂಗ-ನಮಸ್ಕಾರವೆಂದರೆ? ಎಂಟು ಅಂಗಗಳಿಂದ ಮಾಡುವ ನಮಸ್ಕಾರ. ಯಾವ ಎಂಟು? ಇವು: ತೋಳುಗಳು, ಪಾದಗಳು, ಜಾನು(ಮಂಡಿ)ಗಳು, ಉರಸ್ಸು ಮತ್ತು ಶಿರಸ್ಸು (ಎಂದರೆ ಎದೆ, ತಲೆ), ನೇತ್ರಗಳು, ಮನಸ್ಸು ಮತ್ತು ವಚಸ್ಸು (ಎಂದರೆ ಚಿತ್ತ, ಮತ್ತು ವಾಕ್ಕು; ವಾಕ್ಕೆಂದರೆ ಮಾತು). (ಕೆಲವರು "ಶಿರಸಾಷ್ಟಾಂಗ ನಮಸ್ಕಾರ" ಎನ್ನುತ್ತಾರೆ; ಅದು ತಪ್ಪಾದ ಬಳಕೆ. ಅಷ್ಟಾಂಗ-ನಮಸ್ಕಾರದೊಳಗೇ ಶಿರಸ್ಸೂ ಸೇರಿದೆಯಲ್ಲವೇ? ಅದನ್ನು ಬೇರೆ ಹೇಳುವುದೇನು? ಬರೀ "ಶಿರಸಾ" ಹೇಳುವುದು ಬೇರೆ). ಅಲ್ಲದೆ, ಸಾಷ್ಟಾಂಗ-ಪಾತ, ಸಾಷ್ಟಾಂಗ-ಪ್ರಣಿಪಾತ ಎಂದರೂ ಸಾಷ್ಟಾಂಗ-ಪ್ರಣಾಮವೆಂದೇ. ಪ್ರಕೃತ-ಶ್ಲೋಕದಲ್ಲಿ ಮೊದಲನೆಯ ಪದವನ್ನು ಬಳಸಿದೆ.

ಕೃಷ್ಣನಲ್ಲಿ ನನಗೆ ಭಕ್ತಿ ಬರಲಿ - ಎಂದೇ ಕೇಳಿಕೊಳ್ಳುವುದಾದರೂ, ಬರೀ "ಕೃಷ್ಣನಲ್ಲಿ" ಎಂದುಬಿಟ್ಟರೆ ಸಾಕೇ? ಎಂತಹ ಕೃಷ್ಣ ಆತ? ಎರಡು ಮುಖ್ಯ-ವಿಶೇಷಣಗಳು ಲೀಲಾಶುಕನಿಗೆ ತೋರಿವೆ. ಒಂದು ರೂಪವನ್ನೂ ಮತ್ತೊಂದು ಸ್ವರೂಪವನ್ನೂ ಹೇಳುವಂತಹುದು.

ಮೊದಲನೆಯದು, ತನ್ನ ಕಣ್ಣ ಮುಂದೆ ತೋರುವ ಚೆಲುವ ಮೊಗದ ಕೃಷ್ಣ. ಆತನ ಆನನ (ಎಂದರೆ ಮುಖವು) ಚಂದ್ರ-ಬಿಂಬವನ್ನು ಹೋಲುವಂತಹುದು: ದುಂಡನೆಯ ಮೊಗ, ಚಂದ್ರನಂತೆ ಕಾಂತಿ-ಭರಿತವಾದದ್ದು. ಜೊತೆಗೆ ಮಧುರವಾದ ವದನವದು. ಅದರ ಮಧುರತೆಯು ಬಂದಿರುವುದಾದರೂ ಹೇಗೆ? ಮೊಗದ ಮೇಲೆ ಮೂಡುವ ಮುಗುಳ್ನಗೆ (ಅಥವಾ ಮಂದ-ಸ್ಮಿತ) ಏನುಂಟೋ ಅದರಿಂದಾಗಿ ಬಂದುದದು: ಹೀಗೆ ಸರಸವಾಗಿರುವುದು ಶ್ರೀಕೃಷ್ಣನ ಮುಖ.

ಎರಡನೆಯ ವಿಶೇಷಣವೆಂದರೆ ಕೃಷ್ಣನು ನಂದಗೋಪನ ಪುಣ್ಯರಾಶಿಯೆಂಬುದು. ವಾಸ್ತವವಾಗಿ ಶ್ರೀಕೃಷ್ಣನೇ ಪುಣ್ಯವಲ್ಲ; ಆತ ಪುಣ್ಯದ ಫಲ. ಇನ್ನೂ ಸರಿಯಾಗಿ ಹೇಳುವುದೆಂದರೆ "ಪುಣ್ಯರಾಶಿಯ ಫಲ". ಆದರೆ ಪುಣ್ಯರಾಶಿಯ ಫಲ - ಎಂಬುದಾಗಿ ಅಷ್ಟುದ್ದವಾಗಿ ಹೇಳುವುದು ಲೀಲಾಶುಕನಿಗೆ ಬೇಕಿಲ್ಲ. ಪುಣ್ಯಪುಂಜವೆಂದರೇ ಶ್ರೀಕೃಷ್ಣ; ಶ್ರೀಕೃಷ್ಣನೆಂದರೆ ಪುಣ್ಯರಾಶಿಯೆಂದೇ.

ಇಲ್ಲೊಂದು ಕಾರ್ಯ-ಕಾರಣ-ವ್ಯವಸ್ಥೆಯಿದೆ. ನಂದನ ಪುಣ್ಯವೆಂಬುದು ಕಾರಣ. ಆ ಪುಣ್ಯದ ಫಲವು ಕೃಷ್ಣ. ತರ್ಕದ ಭಾಷೆಯಲ್ಲಿ ಹೇಳುವಾಗ/ಕೇಳುವಾಗ, "ಇಲ್ಲಿ ಕಾರಣ ಯಾವುದು, ಕಾರ್ಯ ಯಾವುದು?" - ಎಂದು ಕೇಳುತ್ತಾರೆ, ಅಲ್ಲವೇ? ಎರಡನ್ನೂ ಬಿಡಿಸಿ ಹೇಳುವುದು ಸಹಜ.

ಆದರೆ ಕೆಲವೊಮ್ಮೆ ಕಾರಣ-ಕಾರ್ಯಗಳನ್ನು ಒಂದೇ ಎಂಬಂತೆ ಮಾಡಿಬಿಡುತ್ತೇವೆ: ಇದನ್ನು "ಕಾರ್ಯ-ಕಾರಣಗಳ ಅಭೇದೋಪಚಾರ" - ಎನ್ನುತ್ತಾರೆ. ಭೇದವಿದೆಯೆಂದು ಗೊತ್ತು; ಆದರೆ ಅದನ್ನು ಹೇಳುವುದು ಬೇಕಿಲ್ಲ. ಎರಡನ್ನು ಒಂದಾಗಿ ಹೇಳಲಾಗುತ್ತಿದೆ.

ಕಾವ್ಯದಲ್ಲಿರಲಿ, ಲೋಕರೂಢಿಯಲ್ಲೇ ಉಂಟು - ಈ ಬಗೆಯ ವ್ಯವಹಾರ. ನಮ್ಮ ಪ್ರೀತಿಯ ಮಗುವನ್ನು "ನನ್ನ ಚಿನ್ನ" ಎನ್ನುತ್ತೇವೆ. ಮಗುವೇನು ಚಿನ್ನವೇ? ಇಲ್ಲಾಗಿರುವುದೂ ಅಭೇದೋಪಚಾರ: ಎಂದರೆ, ಎರಡಾಗಿರುವುದನ್ನು ಒಂದೇ ಎಂಬಂತೆ ಹೇಳುವುದು. ಭೇದವಿದ್ದರೂ ಇಲ್ಲವೆಂಬಂತೆ ಹೇಳುವುದು. ನಾರಿಯನ್ನು ಸುಂದರಿ ಎನ್ನುವ ಬದಲು, "ಸೌಂದರ್ಯವೆಂದರೆ ಅವಳೇ" ಎಂದುಬಿಡುವಂತೆ. ಅವಳಲ್ಲಿ ಸೌಂದರ್ಯವಿರುವುದೇ ವಿನಾ ಅವಳೇ ಸೌಂದರ್ಯವೇ? ಆದರೂ ಸೌಂದರ್ಯವು ಅತಿಶಯವಾಗಿದ್ದರೆ ಹಾಗೆಂದುಬಿಡೋಣವೆನ್ನಿಸಿಬಿಡುತ್ತದೆ ಅಲ್ಲವೇ? ಇದೂ ಅಭೇದೋಪಚಾರವೇ.

ಅಂತೂ ನಂದನ ಪುಣ್ಯಸ್ತೋಮ(ದ ಫಲ)ವೇ ಈ ಮೋಹಕ ಶ್ರೀಕೃಷ್ಣ. ಒಟ್ಟಿನಲ್ಲಿ, ಮಹಾಪುಣ್ಯ-ಮಹಾಮಾಧುರ್ಯಗಳ ಮಧುರ-ಮಿಲನವೇ ಮುದ್ದುಕೃಷ್ಣ. ಅಂತಹ ಅದ್ಭುತದೈವದಲ್ಲಿ ನನ್ನ ಭಕ್ತಿಯಿರಲೆಂದು (ಆಶೀರ್ವದಿಸಿರೆಂದು) ಎಲ್ಲ(ದೇವ)ರಲ್ಲಿಯೂ ಸವಿನಯ-ಪ್ರಾರ್ಥನೆಯನ್ನು ಮಾಡುತ್ತಾನೆ, ಲೀಲಾಶುಕ.

ಈಗ ಈ ಭಾವದ ಶ್ಲೋಕವನ್ನು ಆಸ್ವಾದಿಸಿ:

ಸಾಷ್ಟಾಂಗ-ಪಾತಮ್ ಅಭಿವಂದ್ಯ ಸಮಸ್ತಭಾವೈಃ /

ಸರ್ವಾನ್ ಸುರೇಂದ್ರ-ನಿಕರಾನ್ ಇದಮ್ ಏವ ಯಾಚೇ |

ಮಂದಸ್ಮಿತಾರ್ದ್ರ-ಮಧುರಾನನ-ಚಂದ್ರಬಿಂಬೇ /

ನಂದಸ್ಯ ಪುಣ್ಯನಿಚಯೇ ಮಮ ಭಕ್ತಿರಸ್ತು ||

ಮಾಧವನ ಮಧುರವೇಣುಗಾನವನ್ನು ಚಿತ್ರಿಸುವ ಮತ್ತೊಂದು ಶ್ಲೋಕವನ್ನು ಗಮನಿಸಬಹುದು. ಕೊಳಲಿಗೆ ವಂಶ-ವಂಶೀ-ವೇಣು-ಮುರಲೀ-ವಂಶನಾಳ - ಎಂದೆಲ್ಲಾ ಪದಗಳುಂಟು. ವಂಶನಾಳವನ್ನು ತನ್ನ ಅಧರದ ಮೇಲೆ ಇಟ್ಟುಕೊಂಡಿದ್ದಾನೆ, ಶ್ರೀಕೃಷ್ಣ.

ಕೊಳಲನ್ನೂದುವುದೆಂದರೇನು? ಸುಮ್ಮನೆ ಗಾಳಿಯನ್ನು ತುಂಬಿದರಾಯಿತೇ? ಸಪ್ತಸ್ವರಗಳನ್ನು ಹೊಮ್ಮಿಸಿ ತಾನೇ ಅದು ಗಾನವಾಗುವುದು? ತಾನು ನುಡಿಸಬೇಕಾದ ಗಾನದ ಭಾವಗಳೇನು? ಅದಕ್ಕೆ ಒಪ್ಪುವ ರಾಗ-ತಾಳಗಳೇನು? - ಇವೂ ಚಿಂತನೀಯವಾದವೇ, ಯೋಜನೀಯವಾದವೇ.

ಅವುಗಳಿಗನುಗುಣವಾಗಿ ನಾನಾವಿವರ(ರಂಧ್ರ)ಗಳ ಮೇಲೆ ಬೆರಳಾಡಿಸಬೇಕು: ಅವುಗಳನ್ನು ಆಗಾಗ ಸ್ವಲ್ಪವಾಗಿಯೋ ಪೂರ್ಣವಾಗಿಯೋ ತೆರೆಯಬೇಕು, ಮುಚ್ಚಬೇಕು. ಚೆನ್ನಾಗಿ ಪಳಗಿದ ವಾದಕನಾದರೆ ಅಂಗುಲಿಗಳ (ಎಂದರೆ ಬೆರಳುಗಳ) ಚಲನದಲ್ಲಿ ಒಂದು ಅನಾಯಾಸತೆಯೂ ಲಾಲಿತ್ಯವೂ ಗೋಚರವಾಗುತ್ತವೆ: ಲೀಲಾಜಾಲವಾಗಿ ನುಡಿಸುತ್ತಿದ್ದರೂ ಮಾಧುರ್ಯಕ್ಕೆ ಭಂಗಬರದಿರುವುದು ಪಳಗಿದ ಕೈಯನ್ನು ಸೂಚಿಸುತ್ತದೆ. ದಿವ್ಯವಾದ ಗಾನವು ಹೊಮ್ಮುವಾಗ ಕಿವಿಗೆ ರಸಾಯನವಾಗುವುದಲ್ಲದೆ ಮನಸ್ಸಿಗೆ ತಂಪೂ ಸಹಜವಾಗಿ ಹರಿದು ಬರುತ್ತದೆ. ಮತ್ತು ಕಿವಿ-ಮನಸ್ಸುಗಳಿಗಾಗುವ ಮುದವನ್ನು ಮೀರಿದ ಒಂದು ಆತ್ಮೋನ್ನತಿಯೂ ಉಂಟಾಗುತ್ತದೆ.

ಅಂತೂ ವನಾಂತದಲ್ಲಿ, ಎಂದರೆ ಕಾಡಿನ ನಡುವೆ - ಪ್ರಕೃತದಲ್ಲಂತೂ ವೃಂದಾವನಾಂತದಲ್ಲಿ - ಮಧುರವಾಗಿ ವೇಣುವನ್ನು ನುಡಿಸುವ ಶ್ರೀಕೃಷ್ಣನ ಗಾನದ ಪರಿ ಹೃದ್ಯವಾದದ್ದೇ ಸರಿ. ಇದನ್ನು ಚಿತ್ರಿಸುವ ಶ್ಲೋಕ ಹೀಗಿದೆ:

ಅಧರೇ ವಿನಿವೇಶ್ಯ ವಂಶನಾಲಂ /

ವಿವರಾಣ್ಯಸ್ಯ ಸಲೀಲಮ್ ಅಂಗುಲೀಭಿಃ |

ಮುಹುರ್ ಅಂತರಯನ್ ಮುಹುರ್ ವಿವೃಣ್ವನ್ /

ಮಧುರಂ ಗಾಯತಿ ಮಾಧವೋ ವನಾಂತೇ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 14/4/2024 ರಂದು ಪ್ರಕವಾಗಿದೆ.