Sunday, April 7, 2024

ವ್ಯಾಸ ವೀಕ್ಷಿತ - 82 ವಿದುರನ ಹಿತವಚನ (Vyaasa Vikshita - 82 Vidurana Hitavachana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಭೀಷ್ಮ-ದ್ರೋಣರು ತಮ್ಮ ಸಲಹೆಯನ್ನಿತ್ತ ತರುವಾಯ ವಿದುರನ ಮಾತು ಮುಂದುವರೆಯುತ್ತಿದೆ.

ಪ್ರಿಯವೂ ಹಿತವೂ ಆದಂತಹ ವಾಕ್ಯವನ್ನು ಕುರುಶ್ರೇಷ್ಠನಾದ ಭೀಷ್ಮನು ಹೇಳಿದ್ದಾನೆ; ಆದರೆ ನೀನದನ್ನು ಸ್ವೀಕರಿಸುತ್ತಿಲ್ಲ. ಹಾಗೆಯೇ ದ್ರೋಣನ ಮಾತೂ; ಹಿತವಾದ ಮತ್ತು ಉತ್ತಮವಾದ ಮಾತನ್ನು ಬಹುಪ್ರಕಾರವಾಗಿ ಆತನು ಹೇಳಿದ್ದಾನೆ. ಆದರೆ ರಾಧಾಪುತ್ರನಾದ ಕರ್ಣನು ನಿನಗೆ ಅದು ಹಿತವೆಂದು ಪರಿಗಣಿಸುವುದಿಲ್ಲ.

ರಾಜನೇ, ಎಷ್ಟು ಯೋಚಿಸಿದರೂ ನನಗೆ ಹೊಳೆಯುತ್ತಿಲ್ಲ - ನಿನಗೆ ಪರಮಮಿತ್ರನೆನಿಸುವವನು ಯಾರೆಂದು ನಾ ಕಾಣಲಾರೆ; ಈ ಇಬ್ಬರು ನರಶ್ರೇಷ್ಠರಿಗಿಂತಲೂ ಪ್ರಜ್ಞೆಯಲ್ಲಿ ಅಧಿಕರಾದವರು ಯಾರಿದ್ದಾರೆಂದೂ ಕಾಣಲಾರೆ. ಇವರಿಬ್ಬರೂ ವಯಸ್ಸಿನಿಂದಲೂ ಪ್ರಜ್ಞೆಯಿಂದಲೂ ಶ್ರುತದಿಂದಲೂ (ಎಂದರೆ ವಿದ್ಯೆಯಿಂದಲೂ) ವೃದ್ಧರಾದವರು (ಎಂದರೆ ಹಿರಿಯರು). ರಾಜನೇ, ನಿನ್ನ ವಿಷಯದಲ್ಲೂ ಪಾಂಡುಪುತ್ರರ ವಿಷಯದಲ್ಲೂ ಸಮನಾಗಿರತಕ್ಕವರು. ಧರ್ಮದ ವಿಷಯವೇ ಆಗಿರಲಿ, ಸತ್ಯವಚನದಲ್ಲೇ ಆಗಲಿ ಇವರಿಬ್ಬರೂ ದಾಶರಥಿರಾಮನಿಗೂ ಗಯ(ನೆಂಬ ರಾಜ)ನಿಗೂ ಸಮನಾದವರೇ. ಆ ಬಗ್ಗೆ ಸಂಶಯವಿಲ್ಲ ಈ ಮೊದಲೂ ಎಂದೂ ಅಶ್ರೇಯಸ್ಸಾದುದನ್ನು ಹೇಳಿದವರಲ್ಲ. ಇವರಿಬ್ಬರ ವಿಷಯದಲ್ಲಿ ನೀನೇನಾದರೂ ಅಪಚಾರವೆಸಗಿರುವೆಯೆಂಬುದು ಕಿಂಚಿತ್ತೂ ಕಂಡುಬರುವುದಿಲ್ಲ. ಅವರ ವಿಷಯದಲ್ಲಿ ಯಾವ ಅಪರಾಧವನ್ನೂ ನೀ ಮಾಡಿಲ್ಲದಿರಲು ಆ ಇಬ್ಬರು ನರಶ್ರೇಷ್ಠರು ಸತ್ಯಪರಾಕ್ರಮರಾಗಿದ್ದೂ ನಿನಗೆ ಶ್ರೇಯಸ್ಸಾಗಬಾರದೆಂಬಂತೆ ಅದೆಂತು ಮಂತ್ರಾಲೋಚನೆ ಮಾಡಿಯಾರು? ಈ ಲೋಕದಲ್ಲಿಯ ಪ್ರಜ್ಞಾಸಂಪನ್ನರೂ ನರಪುಂಗವರೂ ಆದ ಇವರಿಬ್ಬರು ನಿನ್ನನ್ನು ಕುರಿತು ಅದಾವ ಕುಟಿಲವಾದ ಮಾತನ್ನೂ ಆಡರು, ರಾಜನೇ.

ನನ್ನ ನಿಶ್ಚಿತವಾದ ಬುದ್ಧಿಯು ಹೀಗಿರುವುದು, ಕುರುರಾಜನೇ!: ಅರ್ಥಕ್ಕಾಗಿ (ಎಂದರೆ ಸಂಪತ್ತಿಗಾಗಿ, ಅರ್ಥಾತ್ ನೀ ಕೊಡಬಹುದಾದ ಸಂಭಾವನೆಗಾಗಿ) ಈ ಧರ್ಮಜ್ಞರು ಈ ಎರಡು ಪಕ್ಷಗಳಲ್ಲಿ ಒಂದಕ್ಕೇ ಅನುಕೂಲಿಸುವಂತಹುದನ್ನು ಹೇಳಲಾರರು.

ರಾಜನೇ, ನಿನಗಿದುವೇ ಪರಮಶ್ರೇಯಸ್ಸೆಂಬುದಾಗಿ ನಾನು ಭಾವಿಸುತ್ತೇನೆ. ದುರ್ಯೋಧನಾದಿಗಳು ಹೇಗೆ ನಿನಗೆ ಮಕ್ಕಳೋ, ಅದೇ ರೀತಿಯಲ್ಲೇ ಪಾಂಡವರೂ ಸಹ - ಇದರಲ್ಲಿ ಸಂಶಯವಿಲ್ಲ. ಇದನ್ನರಿಯದ ಮಂತ್ರಿಗಳು ಅವರ ವಿಷಯದಲ್ಲಿ ಅಹಿತವಾದದ್ದನ್ನೇನಾದರೂ ಚಿಂತಿಸಿದ್ದಲ್ಲಿ, ಅವರು ಶ್ರೇಯಸ್ಸೇನು ಎಂಬುದನ್ನು ವಿಶೇಷವಾಗಿ ಕಾಣರು. ಇನ್ನು ನಿನ್ನ ಅಂತರಂಗದಲ್ಲಿ ಹುದುಗಿರುವ ಭಾವವನ್ನು ಎದುರಿಗೆ ಬಿಡಿಸಿ ತೋರಿಸುವ ಮಂದಿಯು ನಿಶ್ಚಯವಾಗಿಯೂ ನಿನಗೆ ಶ್ರೇಯಸ್ಸನ್ನು ಮಾಡರೇ ಸರಿ. ಆ ಕಾರಣಕ್ಕಾಗಿಯೇ, ಓ ರಾಜನೇ, ಮಹಾತೇಜಶ್ಶಾಲಿಗಳಾದ ಈ ಮಹಾತ್ಮರಿಬ್ಬರೂ ಸ್ವಲ್ಪ ಬಿಡಿಸಿ ಹೇಳದಾದರು; ನೀನಂತೂ ಅವರ ಮಾತನ್ನು ಒಪ್ಪೆ.

ಪಾಂಡವರನ್ನು ಜಯಿಸಲಾಗದು - ಎಂಬುದನ್ನು ಆ ನರಪುಂಗವರು ಹೇಳಿದರಲ್ಲವೇ? – ವಸ್ತುಸ್ಥಿತಿಯಾದರೂ ಹಾಗೇ ಇರುವುದು. ರಾಜನೇ, ನಿನಗೆ ಶುಭವಾಗಲಿ!

ಧನಂಜಯನು (ಎಂದರೆ ಅರ್ಜುನನು) ಸವ್ಯಸಾಚಿ (ಎಂದರೆ ಬಲಗೈಯಿಂದ ಹೇಗೋ ಹಾಗೆಯೇ ಎಡಗೈಯಿಂದಲೂ ಬಾಣಪ್ರಯೋಗ ಮಾಡಬಲ್ಲವನು). ಇಂದ್ರನಿಂದ ಕೂಡ ಆತನನ್ನು ಗೆಲ್ಲಲಾದೀತೇ? ಇನ್ನು ಭೀಮಸೇನ. ಆ ಮಹಾಬಾಹು ಸಾವಿರ ಆನೆಗಳ ಬಲವುಳ್ಳವನು. ಯುದ್ಧದಲ್ಲಿ ಅವನನ್ನು ಸೋಲಿಸಲು ದೇವತೆಗಳಿಂದಲೂ ಸಾಧ್ಯವಾದೀತೇ? ಹಾಗೆಯೇ ಯಮಳರಾದ (ಎಂದರೆ ಅವಳಿ-ಜವಳಿಗಳಾದ) ನಕುಲ-ಸಹದೇವರು. ಅವರಂತೂ ಯಮನ ಪುತ್ರರ ಹಾಗಿರುವವರು. ಬದುಕಲು ಬಯಸುವ ಯಾವನಾದರೂ ಅವರನ್ನು ರಣದಲ್ಲಿ ಸೋಲಿಸಬಲ್ಲನೇ?

ಸೂಚನೆ : 7
/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.